೬೫. ಆರಂಭವಾದ ಸೀತಾನ್ವೇಷಣೆ

ಸುಗ್ರೀವ ಹನುಮಂತನನ್ನು ಕರೆದು, "ಭೂಮಿಯ ಮೇಲಿನ ಎಲ್ಲ ವಾನರಗಳನ್ನು ಇನ್ನು ೧೦ ದಿನದಲ್ಲಿ ಇಲ್ಲಿಗೆ ಬರಲು ಹೇಳು. ಮಲಯ, ಹಿಮಾಲಯ, ಮಹೇಂದ್ರ, ವಿಂಧ್ಯ ಮೊದಲಾದ ಪರ್ವತದ ಮೇಲಿರುವ ಕಪ್ಪು, ಬಿಳಿ, ಬಂಗಾರದ ಬಣ್ಣದ, ನೆಲದ ಮೇಲೆ ನಡೆಯುವ, ನೀರಿನಲ್ಲಿ ಚಲಿಸಬಲ್ಲ, ಪರ್ವತ, ಮರಗಳ ಮೇಲಿರುವ, ಆನೆ ಬಲಗಳಿರುವ ಎಲ್ಲ ಕಪಿಗಳೂ ಬರಬೇಕು" ಎಂದು ಆಜ್ಞೆ ಮಾಡಿದ. ಸುಗ್ರೀವನ ಮಂತ್ರಿಗಳು ವಿವಿಧ ಪ್ರಾಂತಗಳಿಗೆ ಹೋಗಿ ವಾನರರನ್ನು ಸಂದರ್ಶಿಸಿ ಅವರನ್ನು ಕರೆದುಕೊಂಡು ಕಿಷ್ಕಿಂಧೆಯ ಕಡೆ ಹೊರಟರು.

ಸುಗ್ರೀವ ಲಕ್ಷ್ಮಣನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಪ್ರಸ್ರವಣ ಪರ್ವತದ ಕಡೆ ಹೊರಟ. ರಾಮನಿಗೆ ಶಿರಸ್ಸು ಬಾಗಿಸಿ ಕಾಲಿಗೆ ನಮಸ್ಕಾರ ಮಾಡಿದ. ರಾಮ ಸುಗ್ರೀವನನ್ನು ತಬ್ಬಿಕೊಂಡು, "ಧರ್ಮ, ಅರ್ಥ, ಕಾಮ ಎಲ್ಲದರಲ್ಲಿಯೂ ಸಮನಾಗಿ ಕಾಲ ಕಳೆಯುವುದು ಪ್ರಾಜ್ಞರ ಲಕ್ಷಣ. ಕೇವಲ ಕಾಮದಲ್ಲೇ ಜೀವನ ಮಾಡುವುದು ಮರದ ಕೊನೆಯ ಕೊಂಬೆಯ ಮೇಲೆ ನಿದ್ದೆ ಹೋದಂತೆ" ಎಂದ.
ಸುಗ್ರೀವ, "ರಾಮ ನೀನು ಕೊಟ್ಟಿದ್ದೇ ಈ ರಾಜ್ಯ, ಭೋಗ ಎಲ್ಲ. ಆದರೆ ನಾನು ಕೃತಘ್ನನಲ್ಲ. ಕೆಲವು ಕೋಟಿ ವಾನರ, ಭಲ್ಲೂಕಗಳನ್ನು ಇಲ್ಲಿಗೆ ಬರಲು ಆದೇಶಿಸಿದ್ದೇನೆ. ಮುಂದೆ ಏನು ಮಾಡಬೇಕೋ ನೀನೆ ತಿಳಿಸು" ಎಂದ.
"ನಿನ್ನಂತಹ ಸ್ನೇಹಿತನನ್ನು ಪಡೆದ ನಾನು ಅದೃಷ್ಟವಂತ. ಮೊದಲು ಸೀತೆಯೆಲ್ಲಿದ್ದಾಳೆ? ಬದುಕಿದ್ದಾಳಾ ಇಲ್ಲವಾ? ಅವಳು ಈಗ ಯಾವ ಪರಿಸ್ಥಿಯಲ್ಲಿದ್ದಾಳೆ ಎನ್ನುವುದನ್ನು ಕಂಡುಹಿಡಿಯಬೇಕು. ಆದ್ದರಿಂದ ಮೊದಲು ವಾನರರನ್ನು ಎಲ್ಲ ದಿಕ್ಕುಗಳಿಗೂ ಕಳಿಸಿ ಹುಡುಕಿಸು."

ಅಷ್ಟರಲ್ಲೇ ಕೋಟಿ ಕೋಟಿ ವಾನರಗಳು ಕಿಷ್ಕಿಂಧೆಗೆ ಬಂದು ಸೇರಿದವು. ಆ ಪ್ರದೇಶವೆಲ್ಲ ಧೂಳಿನಿಂದ ತುಂಬಿ ಹೋಯಿತು. ವಾನರರು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರು, ಕೆಲವರು ನಮಸ್ಕಾರ ಮಾಡುತ್ತಿದ್ದರು, ಕೆಲವರು ನೀರಿನಲ್ಲಿದ್ದರು, ಕೆಲವರು ಮರದ ಮೇಲೆ, ಕೆಲವರು ಬೆಟ್ಟದ ಮೇಲೆ... ಹೀಗೆ ಕಿಷ್ಕಿಂಧೆಯೆಲ್ಲ ವಾನರರಿಂದ ತುಂಬಿಹೋಯಿತು. ವಾನರ ರಾಜ ಸುಗ್ರೀವ ಎಲ್ಲರನ್ನೂ ಒಂದು ಕಡೆ ನಿಲ್ಲಲು ಹೇಳಿದಾಗ ಅವರೆಲ್ಲರೂ ತಮ್ಮ ತಮ್ಮ ನಾಯಕನ ಹಿಂದೆ ನಿಂತರು. ಸುಗ್ರೀವ ತನ್ನ ಮಂತ್ರಿಗಳಿಗೆ, "ಯಾರು ಯಾರು ಎಷ್ಟು ವಾನರರನ್ನು ಕರೆತಂದಿದ್ದೀರೋ ನನಗೆ ಹೇಳಿ" ಎಂದು ಆದೇಶಿಸಿದ.

"ಸೂರ್ಯಾಸ್ತಮಯ ಪರ್ವತದಿಂದ 10 ಕೋಟಿ ವಾನರರು ಬಂದಿದ್ದಾರೆ. ಶತಬಲಿ ಎನ್ನುವ ವಾನರ ೧೦ ಸಾವಿರ ಕೋಟಿ ವಾನರರ ಜೊತೆ ಬಂದಿದ್ದಾನೆ. ಸುಷೇಣನ ಸೈನ್ಯ ಲೆಕ್ಕವಿಲ್ಲದಷ್ಟು ಇದೆ. ರುಮೆಯ ತಂದೆ ಮತ್ತು ಹನುಮಂತನ ತಂದೆ (ಕೇಸರಿ) ಕೆಲವು ಸಾವಿರ ಕೋಟಿ ವಾನರರ ಜೊತೆ ಬಂದಿದ್ದಾರೆ. ಧ್ರೂಮ ೨ ಸಾವಿರ ಮತ್ತು ಜಾಂಬವಂತ ೧೦ ಕೋಟಿ ಭಲ್ಲೂಕಗಳ ಜೊತೆ ಬಂದಿದ್ದಾರೆ. ಪನಾಸ ೩ ಕೋಟಿ, ನೀಲ ೧೦ ಕೋಟಿ, ಗವಯ ೫ ಕೋಟಿ, ದರಿಮುಖ ೧೦೦೦ ಕೋಟಿ, ಮೈಂದ-ದ್ವಿವಿದರು ೧೦೦೦ ಕೋಟಿ, ಗಜ ೩ ಕೋಟಿ, ರೂಮನ ೧೦೦ ಕೋಟಿ, ಗಂಧಮಾದನ ೧೦ ಸಾವಿರ ಕೋಟಿ, ತಾರ ೫ ಕೋಟಿ, ಇಂದ್ರಜಾನು ೧೧ ಕೋಟಿ, ದುರ್ಮುಖ ೨ ಕೋಟಿ, ನಲ ೧೦೦ ಕೋಟಿ, ದಧಿಮುಖ ೧೦ ಕೋಟಿ ವಾನರರನ್ನು ತಂದಿದ್ದಾರೆ. ಅಂಗದ ಸಾವಿರ ಪದ್ಮ ವಾನರರನ್ನು, ೨೦೦ ಶಂಕು ವಾನರರನ್ನು ತಂದಿದ್ದಾನೆ. ಹನುಮಂತ ಕೈಲಾಸ ಶಿಖರದಂತೆ ಎತ್ತರವಾಗಿರುವ ಸಾವಿರ ಕೋಟಿ ವಾನರರ ಜೊತೆ ಬಂದಿದ್ದಾನೆ. 
ಹತ್ತು ಸಾವಿರ ಕೋಟಿಯಾದರೆ ಒಂದು ಆಯತವಾಗುತ್ತದೆ. ಲಕ್ಷ ಕೋಟಿ ಒಂದು ಶಂಕುವಾಗುತ್ತದೆ. ಸಾವಿರ ಶಂಕುಗಳು ಒಂದು ಅಧ್ಭುಧಿ, ೧೦ ಅಧ್ಭುಧಿಗಳು ಒಂದು ಮಧ್ಯ, ೧೦ ಮಧ್ಯಗಳು ಒಂದು ಅಂತ್ಯ, ೨೦ ಅಂತ್ಯಗಳು ಒಂದು ಸಮುದ್ರ, ೩೦ ಸಮುದ್ರಗಳು ಒಂದು ಪರಾರ್ಧ. ಇಲ್ಲಿ ಅಂತಹ ಪರಾರ್ಧಗಳು ಕೆಲವು ಸಾವಿರ ಇವೆ”

ಆ ಉತ್ತರವನ್ನು ಕೇಳಿ ಹರ್ಷಗೊಂಡ ಸುಗ್ರೀವ, ವಿನೀತನೆಂಬುವವನನ್ನು ಕರೆದು, “ವನೀತ ನೀನು ಲಕ್ಷ ವಾನರರ ಜೊತೆ ಪೂರ್ವಕ್ಕೆ ಹೋಗು. ನಿನಗೆ ಒಂದು ತಿಂಗಳ ಸಮಯ ಕೊಡುತ್ತೇನೆ. ಅಷ್ಟರಲ್ಲಿ ಸೀತೆಯನ್ನು ಹುಡುಕಬೇಕು. ನೀವು ಪೂರ್ವಕ್ಕೆ ಹೊರಟು, ಗಂಗ, ಯಮುನ, ಸರಯೂ, ಕೌಶಿಕಿ, ಸರಸ್ವತಿ, ಸಿಂಧು ಮೊದಲಾದ ನದಿಗಳನ್ನು, ಅವುಗಳ ತೀರದಲ್ಲಿರುವ ಪ್ರಾಂತಗಳನ್ನು ಹುಡುಕಿ. ಬ್ರಹ್ಮಮೂಲ, ವಿದೇಹ, ಮಾಲವ, ಕಾಶಿ, ಕೋಸಲ, ಮಾಗಧ, ಪುಂಡ್ರ, ಅಂಗ ದೇಶಗಳಲ್ಲಿರುವ ಪ್ರತಿಯೊಂದು ಪಟ್ಟಣವನ್ನೂ ಬಿಡದೆ ಹುಡುಕಬೇಕು. ಬೆಳ್ಳಿಯ ಗಣಿಗಳು ಅಲ್ಲಿವೆ. ಅಲ್ಲಿಯೂ ಹುಡುಕಿ. ಸಮುದ್ರಗಳಲ್ಲಿರುವ ಪರ್ವತಗಳು, ಅದರ ಮಧ್ಯದಲ್ಲಿನ ದ್ವೀಪಗಳು, ಅಲ್ಲಿರುವ ಹಳ್ಳಿಗಳು ಯಾವುದನ್ನೂ ಬಿಡಬೇಡಿ. ಮಂದರಾಚಲ ಪರ್ವತದ ಮೇಲಿರುವ ಗ್ರಾಮಗಳಲ್ಲಿ ವಾಸಿಸುವ ಜನರಲ್ಲಿ ಕೆಲವರಿಗೆ ಕಿವಿ ಕೇಳಿಸುವುದಿಲ್ಲ, ಕೆಲವರ ತುಟಿಗಳು ಕಿವಿಯವರೆಗೂ ವ್ಯಾಪಿಸಿರುತ್ತದೆ. ಅವರು ಭಯಂಕರವಾದ ನರಭಕ್ಷಕರು. ಅಲ್ಲಿ ಹುಷಾರು. ನೀವು ಇನ್ನೂ ದೂರ ಹೋದರೆ ಯವದ್ವೀಪ ಕಾಣಿಸುತ್ತದೆ. ಅದು ರತ್ನಗಳಿಂದ ತುಂಬಿರುತ್ತದೆ. ಅಲ್ಲಿಂದ ಸುವರ್ಣ ದ್ವೀಪ, ರೂಪ್ಯಕ ದ್ವೀಪ, ಶಿಶಿರ ಪರ್ವತಗಳಿಗೆ ಹೋಗಿ ಹುಡುಕಿ. ಅಲ್ಲಿಂದ ಮುಂದೆ ಹೋದರೆ ನಿಮಗೆ ಶೋಣಾನದಿ ಕಾಣಿಸುತ್ತದೆ. ಅದು ತುಂಬಾ ಆಳವಾಗಿ, ಕೆಂಪು ನೀರಿನಿಂದ ತುಂಬಿದೆ. ಅಲ್ಲಿ ಸಿದ್ಧರು, ಚಾರರು ಇರುತ್ತಾರೆ. ಅಲ್ಲಿರುವ ಆಶ್ರಮ, ತಪೋವನಗಳಲ್ಲಿ ಹುಡುಕಿ. ನಂತರ ಇಕ್ಷು ಸಮುದ್ರ. ಅಲ್ಲಿ ಮಹಾಕಾಯರಾದ ಅಸುರರಿದ್ದಾರೆ. ಅವರು ಪ್ರಾಣಿಗಳ ನೆರಳನ್ನು ಹಿಡಿದು ಅವನ್ನು ಕೊಲ್ಲುತ್ತಾರೆ. ಇಕ್ಷು ಸಮುದ್ರವನ್ನು ದಾಟಿದ ಮೇಲೆ ಮಧುಸಮುದ್ರ. ಅದರ ತೀರದಲ್ಲಿ ನೆಲತೆಂಗು ಮರಗಳು ಸಾಕಷ್ಟಿವೆ. ಆದ್ದರಿಂದ ಅದನ್ನು ಶಾಲ್ಮಲೀ ದ್ವೀಪವೆಂದು ಕರೆಯುತ್ತಾರೆ. ಅಲ್ಲಿರುವ ಬೆಟ್ಟಗಳಲ್ಲಿ ಮಂದೇಹರೆಂಬ ರಾಕ್ಷಸರು ತಲೆಕೆಳಗಾಗಿ ತೂಗಾಡುತ್ತಿರುತ್ತಾರೆ. ಅವರು ಸೂರ್ಯನು ಹುಟ್ಟುವ ಮೊದಲೇ ಅವನನ್ನು ನಿಗ್ರಹಿಸಲು ಪ್ರಯತ್ನಿಸುತ್ತಿರುತ್ತಾರೆ. ಅಲ್ಲಿನ ಬ್ರಾಹ್ಮಣರು ಸಂಧ್ಯಾವಂದನೆ ಮಾಡಿ ಅರ್ಘ್ಯ ಬಿಟ್ಟ ಮೇಲೆ, ಆ ಜಲದ ಮತ್ತು ಸೂರ್ಯನ ಶಕ್ತಿಯಿಂದ ಆ ರಾಕ್ಷಸರು ಸಮುದ್ರಕ್ಕೆ ಬೀಳುತ್ತಾರೆ. ಮತ್ತೆ ಎದ್ದು ಆ ಪರ್ವತಕ್ಕೆ ಜೋತಾಡುತ್ತಾರೆ. ಸಮುದ್ರ ಮಧ್ಯದಲ್ಲಿ ಋಷಭವೆಂಬ ದೊಡ್ದ ಪರ್ವತವಿದೆ. ಅದರ ಮೇಲೆ ಸುದರ್ಶನವೆಂಬ ದೊಡ್ಡ ಸರೋವರವಿದೆ. ಅದನ್ನು ದಾಟಿದರೆ ಕ್ಷೀರ ಸಮುದ್ರ, ಮಹಾಸಮುದ್ರಗಳು ಸಿಗುತ್ತವೆ. ಅಲ್ಲಿ ಔರ್ವನೆಂಬ ಮಹಾಮುನಿಯ ಕೋಪ ಜ್ವಾಲಾಮುಖಿಯಾಗಿ ಸಮುದ್ರವನ್ನು ಪ್ರವೇಶಿಸಿತು. ಅದಕ್ಕೆ ಹಯಮುಖವೆಂದು ಹೆಸರು. ಅಲ್ಲಿಂದ ೧೩ ಯೋಜನಗಳ ದೂರದಲ್ಲಿ ಒಂದು ಬಂಗಾರದ ಪರ್ವತವಿದೆ. ಅದಕ್ಕೆ ಜಾತರೂಪಶಿಲೆಯೆಂದು ಹೆಸರು. ಅದರ ಮೇಲೆ ಸರ್ಪಾಕೃತಿಯಲ್ಲಿ ಆದಿಶೇಷ ಕಪ್ಪು ಬಟ್ಟೆಗಳನ್ನು ಧರಿಸಿ ಕುಳಿತಿರುತ್ತಾನೆ. ಅವನ ಪಕ್ಕ ತಾಳೆ ಮರದ ಆಕಾರದಲ್ಲಿ ಧ್ವಜ ಮತ್ತು ದೇವತೆಗಳು ನಿರ್ಮಿಸಿದ ಒಂದು ವೇದಿಕೆಯಿದೆ. ಆದಿಶೇಷನನ್ನು ದರ್ಶಿಸಿ ಮುಂದೆ ಹೋದರೆ ಉದಯಾದ್ರಿ ಕಾಣಿಸುತ್ತದೆ. ಅದು ೧೦೦ ಯೋಜನಗಳವರೆಗೂ ವಿಸ್ತರಿಸಿ ಆಕಾಶವನ್ನು ತಾಕಿದಂತಿದೆ. ಅದನ್ನು ದಾಟಿದರೆ ಸೋಮನಸವೆಂಬ ಧೃಢವಾದ ಬಂಗಾರದ ಶಿಖರ ಸಿಗುತ್ತದೆ. ಅಲ್ಲಿಯೇ ಬ್ರಹ್ಮದೇವರು ಭೂಮಿಗೆ ದ್ವಾರವನ್ನು ನಿರ್ಮಿಸಿದರು. ಮೊಟ್ಟಮೊದಲಾಗಿ ಭೂಮಿಯ ಮೇಲೆ ಸೂರ್ಯನ ಕಿರಣ ಬೀಳುವುದು ಅಲ್ಲಿಯೇ. ಅದರ ಮುಂದೆಲ್ಲಾ ಕಗ್ಗತ್ತಲು. ಅಲ್ಲಿಯವರೆಗೂ ನೀವು ಎಲ್ಲಕಡೆಯಲ್ಲಿಯೂ ಸೀತೆಯನ್ನು ಹುಡುಕಬೇಕು” ಎಂದು ಆದೇಶಿಸಿದ.

“ನೀಲ, ಹನುಮಂತ, ಜಾಂಬವಂತ, ಸುಹೋತ, ಶರಾರಿ, ಶರಗುಲ್ಮ, ಗಜ, ಗವಾಕ್ಷ, ಗವಯ, ಮೈಂದ-ದ್ವಿವಿಂದ, ಗಂಧಮಾದನ, ಉಲ್ಕಮುಖ, ಅನಂಗ, ಹುತಾಶರ ಮೊದಲಾದವರು ಯುವರಾಜ ಅಂಗದನ ನಾಯಕತ್ವದಲ್ಲಿ ದಕ್ಷಿಣಕ್ಕೆ ಹೊರಡಿ. ಸಾವಿರ ಶಿಖರಗಳಿರುವ ವಿಂಧ್ಯ ಪರ್ವತ, ಗೋದಾವರಿ ನದಿ, ಕೃಷ್ಣವೇಣಿ ನದಿ, ವರದಾ ನದಿ, ಮೇಖಲ-ಉತ್ಕಲ ದೇಶಗಳು, ದಶಾರ್ಣ, ಅಬ್ರವಂತಿ, ಅವಂತಿ ನಗರಗಳನ್ನು ಹುಡುಕಿ.
ನದೀಂ ಗೋದಾವರೀಂ ಚೈವ ಸರ್ವಂ ಏವ ಅನುಪಶ್ಯತ 
ತಥೈವ ಆಂಧ್ರಾನ್ ಚ ಪುಂಡ್ರಾನ್ ಚ ಚೋಳಾನ್ ಪಾಂಡ್ಯಾನ್ ಕೇರಳಾನ್
ವಿದರ್ಭ, ಋಷ್ಟಿಕ, ಮಹಿ, ಕಳಿಂಗ, ಕೌಶಿಕ, ಆಂಧ್ರ, ಪುಂಡ್ರ, ಚೋಳ, ಪಾಂಡ್ಯ, ಕೇರಳ ರಾಜ್ಯಗಳನ್ನು ಹುಡುಕಿ. ಕಾವೇರಿಯನ್ನು ದಾಟಿ ಮಲಯ ಪರ್ವತ ಶಿಖರಕ್ಕೆ ಹೋದರೆ ಅಲ್ಲಿ ವಿಶ್ವಕರ್ಮ ಅಗಸ್ತ್ಯರಿಗಾಗಿ ನಿರ್ಮಿಸಿದ ಗೃಹ ಕಾಣಿಸುತ್ತದೆ. ನಂತರ ಮೊಸಳೆಗಳಿಂದ ಕೂಡಿದ ತಾಮ್ರವರ್ಣಿ ನದಿಯಿದೆ. ಆ ಪ್ರದೇಶಗಳನ್ನು ಹುಡುಕಿ. ಅದರ ಮುಂದೆ ಒಂದು ಸಮುದ್ರ ಕಾಣಿಸುತ್ತದೆ. ಆ ಸಮುದ್ರದಲ್ಲಿ ಮುಳುಗಿರುವ ಶಿಖರಗಳ ಮಹೇಂದ್ರಗಿರಿ ಪರ್ವತ ಕಾಣಿಸುತ್ತದೆ. ಸಮುದ್ರಕ್ಕೆ ನೂರು ಯೋಜನಗಳ ದೂರದಲ್ಲಿ ಒಂದು ದ್ವೀಪವಿದೆ. ಅದನ್ನು ಕಾಂಚನಲಂಕೆಯೆಂದು ಕರೆಯುತ್ತಾರೆ. ಅದರ ರಾಜ ರಾವಣನೆಂಬ ೧೦ ತಲೆಯ ರಾಕ್ಷಸ. ಅಲ್ಲಿ ನೀವು ತುಂಬಾ ಹುಷಾರಾಗಿ ಹುಡುಕಬೇಕು. ನಂತರ ಮತ್ತೆ ಸಮುದ್ರವನ್ನು ದಾಟಿದರೆ ಪುಷ್ಟಿತವೆಂಬ ಪರ್ವತವಿದೆ. ಇನ್ನೂ ಮುಂದೆ ಸೂರ್ಯವತ್, ವೈದ್ಯುತಗಳೆಂಬ ಪರ್ವತಗಳಿವೆ. ಆ ಪರ್ವತಗಳ ಮೇಲಿರುವ ಮರಗಳ ಹಣ್ಣುಗಳು ತುಂಬಾ ರುಚಿಯಾಗಿರುತ್ತವೆ. ನಂತರ ಕುಂಜರ ಪರ್ವತ ಸಿಗುತ್ತದೆ. ಅದರ ಮೇಲೆ ವಿಶ್ವಕರ್ಮ ಅಗಸ್ತ್ಯರಿಗಾಗಿ ಅದ್ಭುತವಾದ ಭವನ ನಿರ್ಮಿಸಿದ್ದಾನೆ. ಮುಂದೆ ಭೋಗವತಿ ನಗರ. ಅದರಲ್ಲಿ ವಿಷಸರ್ಪಗಳಿವೆ. ಅಲ್ಲೇ ಸರ್ಪಗಳ ರಾಜನಾದ ವಾಸುಕಿಯಿದ್ದಾನೆ. ಇನ್ನೂ ಮುಂದೆ ಹೋದರೆ ಎತ್ತಿನ ಆಕಾರದಲ್ಲಿರುವ ವೃಷಭ ಪರ್ವತವಿದೆ. ಅದರ ಮೇಲೆ ಗೋಶೀರ್ಷಕ, ಪದ್ಮಕ, ಹರಿಶ್ಯಾಮಗಳೆಂಬ ಮೂರು ರೀತಿಯ ಚಂದನಗಳ ಜೊತೆ ಅಗ್ನಿತುಲ್ಯವೆಂಬ ಚಂದನವಿದೆ. ಯಾವುದೇ ಕಾರಣಕ್ಕೂ ಆ ಚಂದನಗಳನ್ನು ಮುಟ್ಟಬೇಡಿ. ಅಲ್ಲಿ ಶೈಲೂಷ, ಗ್ರಾಮಣಿ, ಶಿಕ್ಷ, ಶಕ, ಬಭ್ರುಗಳೆಂಬ ೫ ಗಂಧರ್ವ ರಾಕ್ಷಸರು ಪಾಲನೆ ಮಾಡುತ್ತಿರುತ್ತಾರೆ. ಅವರಿಗೆ ನಮಸ್ಕಾರ ಮಾಡಿ ಮುಂದೆ ಹೋದರೆ ಭೂಮಿಯ ಕೊನೆಯಲ್ಲಿ ಪುಣ್ಯ ಮಾಡಿದವರು, ಸ್ವರ್ಗಕ್ಕೆ ಹೋಗುವವರು ಕಾಣಿಸುತ್ತಾರೆ. ಅದನ್ನೂ ದಾಟಿದರೆ ಪಿತೃಲೋಕ ಸಿಗುತ್ತದೆ. ಅಲ್ಲಿಂದ ಮುಂದೆ ಯಮನ ಸಾಮ್ರಜ್ಯವಿದೆ. ಅಲ್ಲಿ ಪಾಪಿಗಳಿರುತ್ತಾರೆ. ಅಲ್ಲಿಂದ ಮುಂದೆ ನೀವು ಹೋಗಲಾರಿರಿ. ದಕ್ಷಿಣದಲ್ಲಿ ಅಲ್ಲಿಯವರೆಗೂ ನೀವು ಹುಡುಕಿ”

ನಂತರ ಸುಗ್ರೀವ ಸುಷೇಣನನ್ನು ಕರೆದು ಅವನಿಗೆ ನಮಸ್ಕರಿಸಿ ಹೇಳಿದ: “ನಿಮ್ಮ ಜೊತೆ ಮರೀಚಿ ಮಹರ್ಷಿಯ ಕುಮಾರನಾದ ಅರ್ಚಿಷ್ಮಂತ, ಅರ್ಚಿರ್ಮಾಲ್ಯ ಮುಂತಾದ ವಾನರರನ್ನು ಕರೆದುಕೊಂಡು ಪಶ್ಚಿಮಕ್ಕೆ ಹೋಗಿ. ಸೌರಾಷ್ಟ್ರ, ಬಾಹ್ಲಿಕ, ಚಂದ್ರ, ಚಿತ್ರ, ಕುರು, ಪಾಂಚಾಲ, ಅಂಗ, ಅವಂತಿ, ಗಾಂಧಾರ, ಕಾಂಭೋಜ ರಾಜ್ಯಗಳು, ಪಟ್ಟಣಗಳು, ಗ್ರಾಮಗಳನ್ನು ಹುಡುಕಿ. ನಿಮಗೆ ಮುರಚಿಪುರ, ಜಟಾಪುರಗಳು ಕಾಣಿಸುತ್ತವೆ. ಅಲ್ಲಿಯೂ ಹುಡುಕಿ. ಸಿಂಧು-ಸಾಗರ ಸಂಗಮದಲ್ಲಿ ೧೦೦ ಶಿಖರಗಳ ಸೋಮಗಿರಿಯೆಂಬ ಪರ್ವತ ಕಾಣಿಸುತ್ತದೆ. ಅದರ ಮೇಲೆ ರೆಕ್ಕೆಗಳಿರುವ ಸಿಂಹಗಳಿವೆ. ಅವು ಆನೆಗಳನ್ನು, ತಿಮಿಂಗಲಗಳನ್ನು ತಮ್ಮ ರೆಕ್ಕೆಗಳಲ್ಲಿ ಹೊತ್ತುಕೊಂಡು ಹೋಗುತ್ತವೆ. ಸಮುದ್ರದಲ್ಲಿ ೧೦೦ ಯೋಜನ ವಿಸ್ತಾರವಾದ ಪಾರಿಯಾತ್ರವೆಂಬ ಪರ್ವತವಿದೆ. ಅಲ್ಲಿ ೨೪ ಕೋಟಿ ಗಂಧರ್ವರಿದ್ದಾರೆ. ಅವರಿಗೆ ಸಮಸ್ಕರಿಸಿ ಮುಂದೆ ಹೋಗಿ. ನಿಮಗೆ ೧೦೦ ಯೋಜನಗಳ ಎತ್ತರದ ವಜ್ರ ಪರ್ವತ ಕಾಣಿಸುತ್ತದೆ. ಸಮುದ್ರದ ನಾಲ್ಕನೇ ಒಂದು ಭಾಗದಲ್ಲಿ ಚಕ್ರವಂತವೆಂಬ ಪರ್ವತವಿದೆ. ಅದರ ಮೇಲೆ ವಿಶ್ವಕರ್ಮ ೧೦೦೦ ಅಂಚುಗಳ ಚಕ್ರವನ್ನು ನಿರ್ಮಿಸಿದ್ದಾನೆ. ಅದನ್ನು ಯಾರೂ ಮುಟ್ಟದಂತೆ ಮಾಡುತ್ತಿದ್ದ ಹಯಗ್ರೀವನೆಂಬ ರಾಕ್ಷಸನನ್ನು ಮಹಾವಿಷ್ಣು ಕೊಂದು ಆ ಚಕ್ರವನ್ನು ಪಡೆದರು. ನಂತರ ಪಂಚಜನನೆಂಬ ರಾಕ್ಷಸನನ್ನು ಕೊಂದು ಶಂಖವನ್ನು ಪಡೆದರು. ಅಲ್ಲಿಂದ ಮುಂದೆ ಹೋದರೆ ನಿಮಗೆ ಪ್ರಾಗ್ಜೋತಿಷ್ಪುರವೆಂಬ ಪ್ರಾಂತ ಕಾಣಿಸುತ್ತದೆ. ಅದನ್ನು ನರಕಾಸುರ ಪಾಲಿಸುತ್ತಿದ್ದಾನೆ. ಅದರ ನಂತರ ಸೌವರ್ಣವೆಂಬ ಪರ್ವತ ಕಾಣಿಸುತ್ತದೆ. ಅದರ ಮೇಲೆ ಆನೆ, ಕಾಡುಹಂದಿ, ಹುಲಿ, ಸಿಂಹಗಳು ಜೋರಾಗಿ ಕಿರುಚುತ್ತಿರುತ್ತವೆ. ನಂತರ ಮೇಘನವೆಂಬ ಪರ್ವತ ಕಾಣಿಸುತ್ತದೆ. ಅದರ ಮೇಲೆಯೇ ಇಂದ್ರ ಪಾಕಶಾಸನನೆಂಬ ರಾಕ್ಷಸನನ್ನು ಕೊಂದು ದೇವತೆಗಳಿಂದ ಪಟ್ಟಾಭಿಷಿಕ್ತನಾದ. ಅಲ್ಲಿಂದ ಮುಂದೆ ೬೦೦೦೦ ಬಂಗಾರ ಪರ್ವತಗಳು ಕಾಣಿಸುತ್ತವೆ. ಅದರ ಮಧ್ಯೆ ಮೇರು ಪರ್ವತ ಕಾಣಿಸುತ್ತದೆ. ಆ ಪರ್ವತದ ಮೇಲೆ ಯಾವ ವಸ್ತುವಾದರೂ ಬಂಗಾರದಂತೆ ಹೊಳೆಯುತ್ತದೆ. ಮೇರು ಪರ್ವತದಿಂದ ೧೦೦೦೦ ಯೋಜನಗಳ ದೂರದಲ್ಲಿ ಅಸ್ತಮಯ ಪರ್ವತವಿದೆ. ಅಷ್ಟು ದೂರವನ್ನು ಸೂರ್ಯದೇವ ಅರ್ಧಮುಹೂರ್ತದಲ್ಲಿ ದಾಟುತ್ತಾನೆ. ಅಲ್ಲೇ ದೂರದಲ್ಲಿ ವಿಶ್ವಕರ್ಮ ನಿರ್ಮಿಸಿದ ಭವನದಲ್ಲಿ ಪಾಶಹಿಡಿದು ವರುಣ ಇರುತ್ತಾನೆ. ಅಲ್ಲಿಂದ ಮುಂದ ಬ್ರಹ್ಮಸಮಾನರಾದ ಮೇರುಸೌವರ್ಣಿ ಎಂಬ ಮಹರ್ಷಿ ಕಾಣಿಸುತ್ತಾರೆ. ಅವರಿಗೆ ನಮಸ್ಕಾರ ಮಾಡಿ ಸೀತೆ ಎಲ್ಲಿದ್ದಾಳೆಂದು ಕೇಳಿ. ಅಲ್ಲಿಂದ ಮುಂದೆ ಹೋಗುವುದು ಕಷ್ಟ. ನೀವು ಅಲ್ಲಿಯವರೆಗೂ ಹೋಗಿ ಹುಡುಕಿಕೊಂಡು ಬನ್ನಿ.”

ಕೊನೆಗೆ ಸುಗ್ರೀವ ಶತಬಲಿ ಎಂಬ ವಾನರನಿಗೆ ಹೇಳಿದ: "ನೀನು ಲಕ್ಷ ವಾನರರ ಜೊತೆ ಉತ್ತರ ದಿಕ್ಕಿಗೆ ಹೋಗು. ನೀವು ಮ್ಲೇಚ್ಛ, ಪುಳಿಂದ, ಶೂರಸೇನ, ಪ್ರಷ್ಠಳ, ಭರತ, ಕುರು, ಮಾದ್ರಕ, ಕಾಂಭೋಜ, ಯವನ, ಶಕ, ಕೌರವ ಮೊದಲಾದ ಪ್ರಾಂತಗಳಲ್ಲಿ ಹುಡುಕಿ. ನಂತರ ಸುದರ್ಶನ, ದೇವಸಖ ಪರ್ವತಗಳನ್ನು ಹುಡುಕಿ. ಅದರ ಮುಂದೆ ೧೦೦ ಯೋಜನಗಳ ನಿರ್ಜನ ಪ್ರದೇಶವಿದೆ. ಇನ್ನೂ ಮುಂದೆ ವಿಶ್ವಕರ್ಮ ನಿರ್ಮಿತವಾದ ಶೆವಟಾ ಭವನದಲ್ಲಿ ಯಕ್ಷರ ರಾಜನಾದ ಕುಬೇರನಿರುತ್ತಾನೆ. ಅಲ್ಲಿರುವ ಕ್ರೌಂಚ ಪರ್ವತದಲ್ಲಿ ಒಂದು ಸುರಂಗವಿದೆ. ನೀವು ಅದರ ಮೂಲಕ ಹೋದರೆ ನಿಮಗೆ ಮತ್ತೊಂದು ಬದಿಯಲ್ಲಿ  ಮೈನಾಕ ಪರ್ವತ ಸಿಗುತ್ತದೆ. ಅಲ್ಲಿ ಕಿಂಪುರುಷ ಸ್ತ್ರೀಯರು ವಾಸಿಸುತ್ತಾರೆ. ಮಯನೂ ಅಲ್ಲೇ ಇರುತ್ತಾನೆ. ನಿಮಗೆ ವೈಖಾನಸ, ಸಿದ್ದ, ವಾಲಖಿಲ್ಯರ ಆಶ್ರಮಗಳು ಕಾಣಿಸುತ್ತವೆ. ಅದನ್ನು ದಾಟಿದ ಮೇಲೆ ವೈಖಾನಸ ಸರೋವರ ಕಾಣಿಸುತ್ತದೆ. ಅದರಲ್ಲಿ ಕುಬೇರನ ಸಾರ್ವಭೌಮವೆಂಬ ಆನೆ ಇತರ ಹೆಣ್ಣು ಆನೆಗಳ ಜೊತೆ ಸ್ನಾನ ಮಾಡುತ್ತಿರುತ್ತದೆ. ನಂತರ ನಿಮಗೆ ಕೇವಲ ನೀಲ ಆಕಾಶ ಕಾಣಿಸುತ್ತದೆ. ನೀವು ಭಯಪಡದೆ ಮುಂದೆ ಹೋದರೆ ಶೈಲೋದವೆಂಬ ನದಿ ಸಿಗುತ್ತದೆ. ನದಿಯ ಇಬ್ಬದಿಯ ದಡಗಳಲ್ಲಿ ಕೀಚಕಗಳೆಂಬ ಪೊದೆಗಳು ಕಾಣಿಸುತ್ತವೆ. ಅದರ ಬಳಿ ನಿಮಗೆ ಋಷಿಗಳು ಕಾಣಿಸುತ್ತಾರೆ. ನಂತರ ನಿಮಗೆ ಪುಣ್ಯಾತ್ಮರ ದೇಶವಾದ ಉತ್ತರ ಕುರುದೇಶ ಕಾಣಿಸುತ್ತದೆ. ಅಲ್ಲಿ ಕೆಲವು ಸಾವಿರ ನದಿಗಳು ಕಾಣಿಸುತ್ತವೆ. ಎಲ್ಲ ನದಿಗಳಲ್ಲಿಯೂ ಬೆಳ್ಳಿಯ ಪದ್ಮಗಳು ಕಾಣಿಸುತ್ತವೆ. ಅವುಗಳ ರಜಸ್ಸು ನೀರಿನಲ್ಲಿ ಬೀಳುತ್ತಿರುವುದರಿಂದ ನೀರು ಸುವಾಸನೆಯುಕ್ತವಾಗಿರುತ್ತದೆ. ಅಲ್ಲಿ ಚಿತ್ರವಿಚಿತ್ರವಾದ ಗಿಡಗಳು ಸಿಗುತ್ತವೆ. ಅಲ್ಲಿಂದ ಮುಂದೆ ಹೋದರೆ ನಿಮಗೆ ಸಂಗೀತದ ಧ್ವನಿಗಳು ಕೇಳಿಸುತ್ತವೆ. ಎಷ್ಟೋ ಜನ ಸಂತೋಷವಾಗಿ ತಪಸ್ಸು ಮಾಡುತ್ತಾ ತಿರುಗುತ್ತಾ ನಿಮಗೆ ಸಿಗುತ್ತಾರೆ. ಅಲ್ಲಿಗೆ ಹೋದ ನಿಮಗೆ ದುಃಖವೆಂಬುದು ಇರುವುದಿಲ್ಲ. ಅದನ್ನು ದಾಟಿದ ಮೇಲೆ ಉತ್ತರ ಸಮುದ್ರ ಕಾಣಿಸುತ್ತದೆ. ಸಮುದ್ರ ಮಧ್ಯದಲ್ಲಿ ಸೋಮಗಿರಿಯೆನೆಂಬ ಪರ್ವತ ಕಾಣಿಸುತ್ತದೆ. ಸೂರ್ಯನ ಬೆಳಕಿಲ್ಲದಿದ್ದರೂ ಅದು ಪ್ರಕಾಶಿಸುತ್ತದೆ. ಅದನ್ನೂ ದಾಟಿದರೆ ನಿಮಗೆ ಬ್ರಹ್ಮಾಂಡವಾದ ಮಂದಿರ ಕಾಣಿಸುತ್ತದೆ.
ಭಗವಾನ್ ತತ್ರ ವಿಶ್ವಾತ್ಮಾ ಶಂಭುಃ ಏಕಾದಶ ಆತ್ಮಕಃ
ಬ್ರಹ್ಮಾ ವಸತಿ ದೇವೇಶೋ ಬ್ರಹ್ಮ ಋಷಿ ಪರಿವಾರಿತಃ

ಅಲ್ಲಿ ಶಂಕರ ಏಕಾದಶರುದ್ರನಾಗಿ ಕಾಣಿಸುತ್ತಿರುತ್ತಾನೆ. ಪಕ್ಕದಲ್ಲೇ ಬ್ರಹ್ಮ ಋಷಿಗಳಿಗೆ ವೇದಗಳನ್ನು ಬೋಧಿಸುತ್ತಿರುತ್ತಾರೆ. ಅದನ್ನು ದಾಟಿ ಯಾವ ಪ್ರಾಣಿಯೂ ಹೋಗಲಾರದು. ಅಲ್ಲಿಯ ವರೆಗೂ ನೀವು ಹೋಗಿ ಸೀತೆಯನ್ನು ಹುಡುಕಿ."

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ