೬೭. ದಿಕ್ಕು ತೋರಿಸಿದ ಸಂಪಾತಿ


ಗುಹೆಯಿಂದ ಬಂದ ನಂತರ ಅಂಗದ ಎಲ್ಲರಿಗೂ ಹೇಳಿದ: "ನಾವು ಆಶ್ವಯುಜ ಮಾಸದಲ್ಲಿ ಹೊರಟೆವು. ಈಗ ವಸಂತ ಋತು. ಒಂದು ತಿಂಗಳಲ್ಲಿ ಹಿಂತಿರುಗಿ ಬರಬೇಕೆಂದು ಸುಗ್ರೀವನ ಆಜ್ಞೆಯಾಗಿತ್ತು. ಆದರೆ ನಾವು ಕೆಲವು ತಿಂಗಳುಗಳ ಸಮಯ ಕಳೆದಿದ್ದೇವೆ. ತಡವಾಗಿದ್ದರೂ ಸೀತೆಯ ಬಗ್ಗೆ ನಮ್ಮಲ್ಲಿ ಯಾರಿಗೂ ತಿಳಿದಿಲ್ಲ. ಸುಗ್ರೀವ ಕೋಪಿಷ್ಠ. ಅವನ ಬಗ್ಗೆ ನನಗೆ ತಿಳಿದಿದೆ. ರಾಮ ಒತ್ತಾಯಿಸಿದ್ದರಿಂದ ಮಾತ್ರ ನನ್ನನ್ನು ಯುವರಾಜನನ್ನಾಗಿ ಮಾಡಿದ. ನನ್ನ ಬಗ್ಗೆ ಅವನಿಗೆ ಹೊಟ್ಟೆಕಿಚ್ಚಿದೆ. ಆದ್ದರಿಂದ ನಾವು ಅಲ್ಲಿಗೆ ಹೋಗುವುದು ಬೇಡ. ನಾವು ಇಲ್ಲಿಯೇ ಪ್ರಾಯೋಪ್ರವೇಶ ಮಾಡೋಣ (ಪ್ರಾಯೋಪ್ರವೇಶ - ಪೂರ್ವ ದಿಕ್ಕಿನಲ್ಲಿ ಆಚಮನ ಮಾಡಿ, ದಕ್ಷಿಣಕ್ಕೆ ದರ್ಭೆಯನ್ನು ಹಾಸಿಕೊಂಡು ಅದರ ಮೇಲೆ ಮಲಗುವುದು. ಕಡೆ ಹೋಗುವ ಯಾವ ಪ್ರಾಣಿಯಾದರೂ ಮಲಗಿದವರನ್ನು ತಿನ್ನಬಹುದು). ನಾನು ಮಾತ್ರ ಹಿಂದೆ ಬರುವುದಿಲ್ಲ."
ಅಂಗದನ ಮಾತು ಕೇಳಿದ ತಾರ, "ಅಂಗದ ಹೇಳಿದ ಮಾತು ನಿಜ. ನಾವು ಪ್ರಾಯೋಪ್ರವೇಶ ಮಾಡೋಣ. ಅಥವಾ, ಇನ್ನೊಂದು ಉಪಾಯವಿದೆ. ನಾವು ಸ್ವಯಂಪ್ರಭೆಯ ಗುಹೆಯೊಳಗೆ ಹೋಗೋಣ. ಅಲ್ಲಿ ನಾವು ಬೇಕಾದದ್ದನ್ನು ತಿಂದುಕೊಂಡು ಆರಾಮವಾಗಿರಬಹುದು" ಎಂದ.

ಚತುರ್ಣಾಂ ಉಪಾಯಾನಾಂ ತೃತೀಯಾಂ ಉಪವರ್ಣಯನ್ 
ಭೇದಯಾಮಾಸ ತಾನ್ ಸರ್ವಾನ್ ವಾನರಾನ್ ವಾಕ್ಯ ಸಂಪದಾ
ಚತುರೋಪಾಯಗಳಲ್ಲಿ ವಾನರರ ಮೇಲೆ ಸಾಮ, ದಾನ, ದಂಡಗಳು ಕೆಲಸಕ್ಕೆ ಬರುವುದಿಲ್ಲ. ಆದ್ದರಿಂದ ಇವರಿಗೆ ಭೇದವೇ ಸರಿಯೆಂದುಕೊಂಡು ಹನುಮಂತ ಅಂಗದನಿಗೆ, "ಅಂಗದ ನೀನು ರಾಜ್ಯವನ್ನು ಪಾಲಿಸುವ ಶಕ್ತಿಯುಳ್ಳವನು. ಆದರೆ ಇಂದೇಕೋ ನಿನ್ನ ಬುದ್ದಿಗೆ ವೈಕಲ್ಯ ಬಂದಿದೆ. ನೀನು ಪ್ರಾಯೋಪ್ರವೇಶ ಮಾಡಿದರೋ ಅಥವಾ ಗುಹೆಯೊಳಕ್ಕೆ ಹೋದರೋ ಆಗುವ ಪರಿಣಾಮವನ್ನು ಯೋಚಿಸಿದ್ದೀಯಾ? ಸ್ವಲ್ಪ ಯೋಚಿಸಿ ನಿರ್ಣಯ ತೆಗೆದುಕೋ. ಒಂದು ವೇಳೆ ನೀವೆಲ್ಲ ಹೋದರೂ ನಾನು, ಜಾಂಬವಂತ, ನೀಲ, ಸುಹೋತ್ರ ಬರುವುದಿಲ್ಲ. ಸಾವಿರ ಮಿಂಚುಗಳ ಶಕ್ತಿಯಿರುವ ಬಾಣಗಳು ಲಕ್ಷ್ಮಣನ ಬಳಿ ಎಷ್ಟೋ ಇವೆ. ಒಂದು ವೇಳೆ ನೀವು ಗುಹೆಯೊಳಗೆ ಹೋದರೆ ಅವು ಗುಹೆಯನ್ನು ನುಚ್ಚು ನೂರು ಮಾಡಿಬಿಡುತ್ತವೆ. ಹಾಗಾಗದಿದ್ದರೂ ನೀವು ಹೋದ ಸ್ವಲ್ಪ ಸಮಯಕ್ಕೆ ನಿಮಗೆ ನಿಮ್ಮ ಪತ್ನೀಪುತ್ರರು ಜ್ಞಾಪಕಕ್ಕೆ ಬರುತ್ತಾರೆ. ನೀನು ಹೇಳಿದಂತೆ ಸುಗ್ರೀವ ಅಸತ್ಯವಾದಿಯಲ್ಲ. ಅವನ ಸಮ್ಮತಿಯಂತೆಯೇ ನಿನಗೆ ಯುವರಾಜಪಟ್ಟ ಕಟ್ಟಿದ್ದಾರೆ. ಸುಗ್ರೀವನಿಗೆ ಸಂತಾನವಿಲ್ಲ. ನಮ್ಮ ರಾಜ್ಯಕ್ಕೆ ನೀನೇ ವಾರಸುದಾರ. ಸುಗ್ರೀವ ನಿನಗೆ ಎಂದಿಗೂ ಮೋಸ ಮಾಡಲಾರ. ನಾವೆಲ್ಲ ಹಿಂತಿರುಗಿ ಹೋಗಿ ಸುಗ್ರೀವನಿಗೆ ನಿಜ ಹೇಳೋಣ" ಎಂದ.

ಹನುಮನ ಮಾತಿಗೆ ಸಮಾಧಾನಗೊಳ್ಳದ ಅಂಗದ, "ಅಂದು ನನ್ನ ತಂದೆ ದುಂದುಭಿಯನ್ನು ಕೊಲ್ಲಲು ಬಿಲದೊಳಗೆ ಹೋದಾಗ, ಸುಗ್ರೀವ ರಾಜ್ಯದ ಮೇಲಿನ ಆಸೆಯಿಂದ ವಾಲಿ ಹಿಂತಿರುಗಿಬರದಂತೆ ಬಿಲದ ಬಾಗಿಲನ್ನೇ ಮುಚ್ಚಿದ್ದ. ಅಷ್ಟೇ ಅಲ್ಲದೆ ನನ್ನ ತಂದೆ ಬದುಕಿದ್ದರೂ ನನ್ನ ತಾಯಿಯನ್ನು ಅವನ ಪತ್ನಿಯನ್ನಾಗಿ ಮಾಡಿಕೊಂಡಿದ್ದ. ಅವನಿಗೆ ನನ್ನ ಮೇಲೆ ಯಾವ ವ್ಯಾಮೋಹವೂ ಇಲ್ಲ. ನಾನೇನಾದರೂ ಬರಿಗೈಲಿ ವಾಪಸ್ಸು ಹೋದರೆ ಸುಗ್ರೀವ ನನ್ನನ್ನು ಕೊಲ್ಲುವುದು ಖಂಡಿತ. ಅವನ ಕೈಲಿ ಸಾಯುವುದಕ್ಕಿಂತ ಪ್ರಾಯೋಪ್ರವೇಶವೇ ಉಚಿತ. ನೀವು ಹೋಗಿ ಸುಗ್ರೀವನಿಗೆ, ನನ್ನ ತಾಯಿ, ಚಿಕ್ಕಮ್ಮನಿಗೆ ನನ್ನ ಪ್ರಣಾಮಗಳನ್ನು ತಿಳಿಸಿ" ಎಂದು ಹೇಳಿ ಪ್ರಾಯೋಪ್ರವೇಶ ಮಾಡಲು ದರ್ಭೆಯ ಮೇಲೆ ಮಲಗಿದ. ಮಿಕ್ಕ ವಾನರರೂ ರಾಮ ಕಥೆಯನ್ನು ಮಾತಾಡಿಕೊಳ್ಳುತ್ತಾ  ಅವನನ್ನು ಅನುಸರಿಸಿದರು

ಸಂಪಾತಿಃ ನಾಮ ನಾಮ್ನಾ ತು ಚಿರಜೀವೀ ವಿಹಂಗಮಃ
ಭ್ರಾತಾ ಜಟಾಯುಷಃ ಶ್ರೀಮಾನ್ ಪ್ರಖ್ಯಾತ ಬಲ ಪೌರುಷಃ 
ಅವರೆಲ್ಲ ರಾಮ ಕಥೆ ಹೇಳುತ್ತಿದ್ದಾಗ ಶಿಖರದ ಮೇಲಕ್ಕೆ ರೆಕ್ಕೆಯಿಲ್ಲದ ಒಂದು ಪಕ್ಷಿ ಬಂತು. ಅಷ್ಟು ವಾನರರನ್ನು ನೋಡಿ, 'ಇವರೆಲ್ಲ ಪ್ರಾಯೋಪ್ರವೇಶ ಮಾಡಿದ್ದಾರೆ. ಆತುರವಿಲ್ಲದೆ ಒಬ್ಬೊಬ್ಬರನ್ನೇ ಆರಾಮವಾಗಿ ತಿನ್ನಬಹುದು' ಎಂದುಕೊಳ್ಳುತ್ತಿದ್ದಾಗ ಅದಕ್ಕೆ ರಾಮಕಥೆ ಕೇಳಿಸಿತು. ತಕ್ಷಣ ಅದು ಜೋರಾಗಿ ಕೂಗಿತು: "ನನ್ನ ಸೋದರ ಜಟಾಯು ರಾವಣನ ಕೈಲಿ ವಧಿಸಲ್ಪಟ್ಟಿದ್ದಾನೆ ಎಂದಿದ್ದು ಯಾರು? ಅವನು ಅಲ್ಲಿಗೆ ಹೋದದ್ದೇಕೆ? ಜಟಾಯು ದಶರಥನ ಸ್ನೇಹಿತ. ದಶರಥ ಮರಣಿಸಿದ್ದೇಕೆ? ನನಗೆ ರೆಕ್ಕೆಗಳಿಲ್ಲ. ನೀವು ಯಾರಾದರೂ ನನಗೆ ಸಹಾಯ ಮಾಡಿ."

ಆದರೆ ಪ್ರಾಯೋಪ್ರವೇಶ ಮಾಡುತ್ತಿದ್ದ ವಾನರರು, 'ಅದು ಮೋಸಗೊಳಿಸಿ ನಮ್ಮನ್ನು ತಿನ್ನಲು ನಾಟಕವಾಡುತ್ತಿದೆ' ಎಂದರು. ಅವರಲ್ಲೊಬ್ಬ, "ನಾವು ಹೇಗೂ ಪ್ರಾಯೋಪ್ರವೇಶ ಮಾಡುತ್ತಿದ್ದೇವೆ. ಇನ್ನು ಭಯವೇಕೆ. ಅದನ್ನು ಇಲ್ಲಿಗೆ ಕರೆತನ್ನಿ" ಎಂದ. ಅಂಗದ ಹೋಗಿ ಪಕ್ಷಿಯನ್ನು ಹತ್ತಿರ ತಂದ. ಅದು ಜಟಾಯುವಿಗೆ ಏನಾಯಿತೆಂದು ಕೇಳಿತು. ಅಂಗದ ರಾಮ ಕಥೆಯನ್ನೆಲ್ಲ ವಿವರಿಸಿ ಪಕ್ಷಿಯ ಬಗ್ಗೆ ವಿಚಾರಿಸಿದ. ಪಕ್ಷಿ ಹೇಳಿತು: "ನಾನು ಸಂಪಾತಿ. ಜಟಾಯುವಿನ ಸೋದರ. ನಾವಿಬ್ಬರೂ ಒಂದು ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಸೂರ್ಯನನ್ನು ಅನುಸರಿಸಬೇಕೆಂದು ಒಪ್ಪಂದ ಮಾಡಿಕೊಂಡೆವು. ಅಂತೆಯೇ ಇಬ್ಬರೂ ಸೂರ್ಯನ ಹಿಂದೆ ಹೊರಟೆವು. ಮಧ್ಯಾಹ್ನದ ವೇಳೆಗೆ ಸೂರ್ಯನ ಸಮೀಪ ಬಂದಾಗ ಶಾಖ ತಾಳಲಾರದೆ ಜಟಾಯು ಪ್ರಜ್ಞೆ ತಪ್ಪಿ ಬಿದ್ದ. ಹಿರಿಯನಾದ ನಾನು ಅವನನ್ನು ಕಾಪಾಡಲು ನನ್ನ ರೆಕ್ಕೆಗಳನ್ನು ಅವನಿಗೆ ಅಡ್ಡವಾಗಿ ಇಟ್ಟೆ. ಸೂರ್ಯನ ಶಾಖಕ್ಕೆ ನನ್ನ ರೆಕ್ಕೆಗಳು ಸುಟ್ಟು ಹೋಗಿ ನಾನು ವಿಂಧ್ಯ ಪರ್ವತದ ಮೇಲೆ ಬಿದ್ದೆ. ಆದರೆ ನನ್ನ ತಮ್ಮ ಎಲ್ಲಿ ಹೋದನೋ ನನಗೆ ತಿಳಿಯಲಿಲ್ಲ. ಇಂದು ನಿಮ್ಮಿಂದ ಅವನ ಹೆಸರು ಕೇಳಿದೆ. ಈಗ ಸತ್ತುಹೋದ ಅವನಿಗೆ ನಾನು ಜಲತರ್ಪಣ ಕೊಡಬೇಕು. ನನ್ನನ್ನು ನೀರಿನ ಬಳಿ ಕರೆದುಕೊಂಡು ಹೋಗಿ."

ಸಂಪಾತಿಯ ಕೋರಿಕೆಯಂತೆ ಅವನನ್ನು ನೀರಿನ ಬಳಿ ಕರೆದೊಯ್ದರು. ಸಂಪಾತಿ ಜಟಾಯುವಿಗೆ ತರ್ಪಣ ಕೊಟ್ಟ ನಂತರ ವಾನರರು, "ನಿನ್ನ ತಮ್ಮ ರಾಮಕಾರ್ಯದಲ್ಲಿ ಸಹಾಯ ಮಾಡಿದ. ನೀನೂ ಮಾಡುವೆಯಾ? ಸೀತೆ ಇರುವ ಜಾಗ ನಿನಗೆ ಗೊತ್ತಾ?" ಎಂದು ಕೇಳಿದರು

ಸಂಪಾತಿ,
ನಿರ್ದಗ್ಧ ಪಕ್ಷೋ ಗೃಧ್ರೋ ಅಹಂ ಗತ ವೀರ್ಯಃ ಪ್ಲವಂ ಗಮಾಃ
ವಾಜ್ಞ್ ಮಾತ್ರೇಣ ತು ರಾಮಸ್ಯ ಕರಿಷ್ಯೇ ಸಾಹ್ಯಂ ಉತ್ತಮಂ 
ರೆಕ್ಕೆ ಬಿದ್ದಿರುವ ನಾನು ಇದಕ್ಕಿಂತ ಏನು ಸಹಾಯ ಮಾಡಲಾಗುತ್ತದೆ? ರಾಮಕಾರ್ಯಕ್ಕೆ ಖಂಡಿತ ಸಹಾಯ ಮಾಡುತ್ತೇನೆ. ಸೀತೆಯನ್ನು ರಾವಣ ಆಕಾಶ ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ನಾನು ನೋಡಿದೆ. ರಾವಣ ವಿಶ್ವಾವಸುವಿನ ಮಗ. ಕುಬೇರನ ತಮ್ಮ. ಅವನು ಲಂಕೆಯ ರಾಜ. ಸಮುದ್ರಕ್ಕೆ ೧೦೦ ಜೋಜನಗಳ ದೂರದಲ್ಲಿ ಲಂಕೆಯಿದೆ. ಲಂಕೆಯಲ್ಲಿ ಎಲ್ಲಿ ನೋಡಿದರೂ ಬಂಗಾರದಿಂದ ನಿರ್ಮಿಸಲ್ಪಟ್ಟ ನಗರಗಳೇ ಕಾಣಿಸುತ್ತವೆ. ಅಲ್ಲಿ ದೀನಳಾಗಿ, ಹಸಿರು ಸೀರೆಯುಟ್ಟು, ರಾಕ್ಷಸ ಸ್ತ್ರೀಯರ ಮಧ್ಯೆ ಸೀತೆ ಅಳುತ್ತ ಕೂತಿದ್ದಾಳೆ. ನನಗೆ ಇವೆಲ್ಲ ಹೇಗೆ ಗೊತ್ತು ಎಂದು ಕೇಳಬೇಡಿ. ನನಗೆ ದಿವ್ಯ ದೃಷ್ಟಿಯಿದೆ. ಭೂಮಿ ಆಕಾಶದ ನಡುವೆ ಕೆಲವು ಪದರಗಳಿವೆ. ಮೊದಲನೇ ಪದರದಲ್ಲಿ ತಮ್ಮ ಕಾಲಿನ ಬಳಿಯಿರುವ ಧಾನ್ಯಗಳನ್ನು ಆರಿಸಿ ತಿನ್ನುವ ಕುಲಿಂಗ ಪಕ್ಷಿಗಳು ಹಾರುತ್ತವೆ. ಎರಡನೇ ಪದರದಲ್ಲಿ ಮರದಲ್ಲಿರುವ ಹಣ್ಣುಗಳನ್ನು ತಿನ್ನುವ ಪಕ್ಷಿಗಳು ಹಾರುತ್ತವೆ. ಮೂರನೇ ಪದರದಲ್ಲಿ ಭಾಸ, ಕ್ರೌಂಚ ಪಕ್ಷಿಗಳು ಹಾರುತ್ತವೆ. ನಾಲ್ಕನೇ ಪದರದಲ್ಲಿ ಗಿಡುಗಗಳು ಹಾರುತ್ತವೆ. ಐದನೇ ಪದರದಲ್ಲಿ ಹದ್ದುಗಳು ಹಾರುತ್ತವೆ. ಆರನೇ ಪದರದಲ್ಲಿ ಹಂಸಗಳು ಹಾರುತ್ತವೆ. ಏಳನೇ ಪದರದಲ್ಲಿ ವಿನಿತಾ ಪುತ್ರರಾದ, ವೈನತೇಯರಾದ, ನಾವು ಹಾರುತ್ತೇವೆ. ಆದ್ದರಿಂದ ನಮಗೆ ಸಹಜವಾಗಿ ೧೦೦ ಯೋಜನಗಳ ದೂರವಿರುವ ವಿಷಯಗಳನ್ನು ಇಲ್ಲಿಂದಲೇ ನೋಡುವ ದೃಷ್ಟಿಶಕ್ತಿಯಿದೆ. ದೂರದ ಲಂಕಾ ಪಟ್ಟಣದ ಅಶೋಕ ವನದಲ್ಲಿ ಸೀತೆಯಿದ್ದಾಳೆ. ೧೦೦ ಯೋಜನಗಳ ಸಮುದ್ರವನ್ನು ದಾಟಿ ಹೋಗುವ ಸಾಹಸ ಮಾಡಬಲ್ಲವನು ಸೀತೆಯನ್ನು ಕಾಣಬಹುದು.
ತೀಕ್ಷ್ಣ ಕಾಮಾಃ ತು ಗಂಧರ್ವಾಃ ತೀಕ್ಷ್ಣ ಕೋಪಾ ಭುಜಂಗಮಾಃ
ಮೃಗಾಣಾಂ ತು ಭಯಂ ತೀಕ್ಷ್ಣಂ ತತಃ ತೀಕ್ಷ್ಣ ಕ್ಷುದಾಾ ವಯಂ
ಗಂಧರ್ವರಿಗೆ ಕಾಮ ಜಾಸ್ತಿ, ಹಾವುಗಳಿಗೆ ಕೋಪ, ಮೃಗಗಳಿಗೆ ಭಯ, ಪಕ್ಷಿಗಳಿಗೆ ಹಸಿವು. ಒಂದು ದಿನ ನನಗೆ ತುಂಬಾ ಹಸಿವಾಗುತ್ತಿತ್ತು. ಹಾರಲು ನನಗೆ ಶಕ್ತಿ ಇಲ್ಲ. ದಿನಾಲೂ ನನಗೆ ನನ್ನ ಮಗ ಸುಪರ್ಶನನೇ ಆಹಾರ ತಂದುಕೊಡುತ್ತಿದ್ದ. ಆದರೆ ಒಂದು ದಿನ ಆಹಾರ ತರಲು ಹೋದವನು ಎಷ್ಟು ಹೊತ್ತಾದರೂ ಬರಲಿಲ್ಲ. ತುಂಬಾ ಹೊತ್ತಿನ ನಂತರ ಬರಿಗೈಲಿ ಬಂದ. ಹಸಿವಾಗಿದ್ದ ನನಗೆ ಸಿಟ್ಟು ಬಂದು ಅವನನ್ನು ಬೈದೆ. ಅವನು ಹೇಳಿದ: 'ಅಪ್ಪ! ಇಲ್ಲಿ ನನ್ನ ದೋಷವಿಲ್ಲ. ನಾನು ಬೆಳಿಗ್ಗೆಯೇ ಹೋಗಿ ಸಮುದ್ರದಲ್ಲಿರುವ ಮಹೇಂದ್ರಗಿರಿ ಪರ್ವತದ ಮೇಲೆ ಏನಾದರೂ ಸಿಕ್ಕುತ್ತದೇನೋ ಎಂದು ನೀರಿನಲ್ಲಿ ನೋಡುತ್ತಿದ್ದೆ. ಅಷ್ಟರಲ್ಲಿ ಕಪ್ಪು ಬಣ್ಣದ ರಾಕ್ಷಸ, ಕತ್ತಿನಲ್ಲಿ ಬಿಳಿಯ ಮಾಲೆಯನ್ನು ಹಾಕಿಕೊಂಡು ಹೋಗುತ್ತಿದ್ದ. ಅವನ ತೆಕ್ಕೆಯಲ್ಲಿ ಮಿಂಚಿನಂತೆ ತೇಜಸ್ವಿಯಾಗಿದ್ದ ಸ್ತ್ರೀಯೊಬ್ಬಳಿದ್ದಳು. ಅವಳು ಹೇ ರಾಮ, ಹೇ ಲಕ್ಷ್ಮಣ ಎಂದು ಕೂಗುತ್ತಿದ್ದಳು. ನಾನು ಅವನನ್ನು ನೋಡಿ ಆಹಾರ ಸಿಕ್ಕಿತು ಎಂದುಕೊಂಡೆ. ಆದರೆ ಅವನು ನನ್ನ ಬಳಿ ಬಂದು ನಮಸ್ಕರಿಸಿ ಸೌಮ್ಯದಿಂದ ದಾರಿಬಿಡಲು ಕೇಳಿಕೊಂಡ. ಅಷ್ಟು ಮೃದು ಭಾವದಿಂದ ಕೇಳಿದವನನ್ನು ಧಿಕ್ಕರಿಸಬಾರದೆಂದು ಅವನಿಗೆ ದಾರಿ ಬಿಟ್ಟೆ. ಆದರೆ ಅವನು ಹೋದ ತಕ್ಷಣ ಆಕಾಶದಲ್ಲಿದ್ದ ದೇವ, ಋಷಿ ಗಣಗಳು ಬಂದು ಅವನು ದುರಾತ್ಮ, ಅವನ ಹೆಸರು ರಾವಣ. ಅವನು ತುಂಬಾ ಬಲಶಾಲಿ ಎಂದು ಹೇಳಿದರು. ಆದ್ದರಿಂದ ನನಗೆ ಬರಲು ತಡವಾಯಿತು' ಎಂದ. ವಿಷಯ ನನ್ನ ಮಗನಿಂದಲೇ ನನಗೆ ತಿಳಿಯಿತು. 
ನಾನು ವಿಂಧ್ಯ ಪರ್ವತ ಶಿಖರದ ಮೇಲೆ ರೆಕ್ಕೆ ಸುಟ್ಟು ಬಿದ್ದಾಗ ೬ ದಿನಗಳು ಪ್ರಜ್ಞೆಯಿಲ್ಲದೆ ಬಿದ್ದಿದ್ದೆ. ನನ್ನ ತಮ್ಮನಿಲ್ಲ. ನನಗೆ ರೆಕ್ಕೆಯಿಲ್ಲ. ಸಾಯಬೇಕೆಂದುಕೊಂಡೆ. ಅಷ್ಟರಲ್ಲಿ ಒಂದು ಯೋಚನೆ ಬಂತು. ನಮಗೆ ರೆಕ್ಕೆಗಳಿದ್ದಾಗ ಕಾಮರೂಪಿಗಳಾದ ನಾನು ಮತ್ತು ನನ್ನ ತಮ್ಮ ಮನುಷ್ಯರೂಪವನ್ನು ಪಡೆದು ಇಲ್ಲೇ ಇದ್ದ ನಿಶಾಚರ ಮಹರ್ಷಿಯ ಆಶ್ರಮಕ್ಕೆ ಹೋಗಿ ಅವರ ಆಶೀರ್ವಾದ ಪಡೆಯುತ್ತಿದ್ದೆವು. ಈಗಲೂ ಅವರ ಆಶೀರ್ವಾದ ಪಡೆದು ಸಾಯಬೇಕೆಂದುಕೊಂಡು ನಿಧಾನವಾಗಿ ದೇಕುತ್ತಾ ಅವರ ಆಶ್ರಮದ ಬಳಿ ಹೋದೆ. ಆಗ ತಾನೇ ಸ್ನಾನ ಮಾಡಿ ಹೊರಬರುತ್ತಿದ್ದ ಅವರು ಅಭಿಷೇಕ ಮಾಡಿಸಿಕೊಂಡಿದ್ದ ಬ್ರಹ್ಮನಂತಿದ್ದರು. ಅವರ ಸುತ್ತ ಹುಲಿ, ಸಿಂಹ, ಹಾವುಗಳು ಸೇರಿದ್ದವು. ನನ್ನನ್ನು ನೋಡಿದ ಅವರು, ‘ನೀನು ನಿನ್ನ ತಮ್ಮ ನನ್ನ ಆಶೀರ್ವಾದಕ್ಕಾಗಿ ಬರುತ್ತಿದ್ದಿರಿ. ನಿನ್ನನ್ನು ನೋಡಿ ತುಂಬಾ ದಿನವಾಯಿತು. ನಿನ್ನ ರೆಕ್ಕೆಗಳೇನಾದವು?’ ಎಂದು ಕೇಳಿದರು. ನಾನು ನಡೆದ ಕಥೆಯನ್ನೆಲ್ಲ ವಿವರಿಸಿದೆ. ಆಗ ಅವರು, ‘ಸಂಪಾತಿ. ದುಃಖಿಸಬೇಡ. ಮುಂದೆ ನಿನ್ನಿಂದ ಒಂದು ಮಹತ್ಕಾರ್ಯವಾಗಬೇಕಿದೆ. ಇನ್ನು ಕೆಲವು ಕಾಲದಲ್ಲಿ ಸೀತೆಯನ್ನು ಹುಡುಕಿಕೊಂಡು ವಾನರರರು ಬರುತ್ತಾರೆ. ಅವರಿಗೆ ನೀನು ಸಹಾಯ ಮಾಡು. ನಾನು ನಿನಗೆ ಅಭಯ ಕೊಡುತ್ತೇನೆ. ಅವರಿಗೆ ಸಹಾಯ ಮಾಡಿದರೆ ನಿನ್ನ ರೆಕ್ಕೆಗಳು ಮತ್ತೆ ಬರುತ್ತವೆ. ನನಗೂ ರಾಮಲಕ್ಷ್ಮಣರನ್ನು ನೋಡಬೇಕೆಂದಿದೆ. ಆದರೆ ಅಲ್ಲಿಯವರೆಗೂ ನನ್ನ ಶರೀರ ನನಗೆ ಸಹಾಯ ಮಾಡುವುದಿಲ್ಲ. ನೀನು ಮಾತ್ರ ಈ ಬೆಟ್ಟದಲ್ಲೇ ಇರು. ನಿನಗೆ ಇನ್ನೊಂದು ವಿಷಯ ಹೇಳುತ್ತೇನೆ. ರಾವಣ ಸೀತೆಯನ್ನು ಕರೆದು ಕೊಂಡು ಹೋದಮೇಲೆ ಅವಳನ್ನು ವಶಪಡಿಸಿಕೊಳ್ಳಲು ತನ್ನ ಅಂತಃಪುರವನ್ನು ತೋರಿಸುತ್ತಾನೆ, ಸೊಗಸಾದ ಊಟ ಕೊಡುತ್ತಾನೆ. ಆದರೆ ಸೀತೆ ಅವನನ್ನು ಕಣ್ಣೆತ್ತಿಯೂ ನೋಡಳು. ಅವನು ಪಾಯಸ ಕೊಟ್ಟರೆ, ರಾಮಲಕ್ಷ್ಮಣರು ಬದುಕಿದ್ದರೆ ಪಾಯಸ ಅವರಿಗೆ ಸೇರಲಿ, ಇಲ್ಲದಿದ್ದರೆ ಇದು ಊರ್ಧ್ವಲೋಕದಲ್ಲಿರುವವರಿಗೆ ಸೇರಲಿ ಎಂದು ಆ ಪಾಯಸವನ್ನು ನೆಲದ ಮೇಲಿಡುತ್ತಾಳೆ. ರಾವಣ ಕೊಟ್ಟ ಊಟವನ್ನು ಸೀತೆ ಮುಟ್ಟುವುದೂ ಇಲ್ಲ. ಈ ವಿಷಯಗಳನ್ನು ನೀನು ವಾನರರರಿಗೆ ಹೇಳು’ ಎಂದರು. ಈ ಕಾರಣದಿಂದಲೇ ನಾನು ಇನ್ನೂ ಬದುಕಿದ್ದೇನೆಎಂದ.

ತಸ್ಯ ತು ಏವಂ ಬ್ರುವಾಣಸ್ಯ ಸಂಹತೈಃ ವಾನರೈಃ ಸಹ
ಉತ್ಪೇತತುಃ ತದಾ ಪಕ್ಷೌ ಸಮಕ್ಷಂ ವನ ಚಾರಿಣಾಂ

ಸಂಪಾತಿ ಆ ಮಾತುಗಳನ್ನು ಹೇಳಿದ ತಕ್ಷಣ ಅವನಿಗೆ ರೆಕ್ಕೆಗಳು ಬಂದವು. ಅವನು ಅನಂದದಿಂದ ರೆಕ್ಕೆ ಬಡಿಯುತ್ತಾ ಆಕಾಶಕ್ಕೆ ಹಾರಿದ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ