೬೮. ಸಮುದ್ರವನ್ನು ದಾಟುವವನು ಯಾರು?

ಸಂಪಾತಿಯ ಮಾತು ಕೇಳಿ ಅಲ್ಲಿದ್ದ ವಾನರರೆಲ್ಲ ಸಂತೋಷಗೊಂಡರು. ತಕ್ಷಣವೇ ಅಲ್ಲಿಂದ ಹೊರಟು ಎಲ್ಲರೂ ಸಮುದ್ರದ ಉತ್ತರ ತೀರವನ್ನು ಸೇರಿದರು. ಸಮುದ್ರವನ್ನು ನೋಡಿ ಎಲ್ಲರೂ ತಮ್ಮಲ್ಲೇ ಮಾತಾಡಿಕೊಳ್ಳಲು ಶುರು ಮಾಡಿದರು. "ಈ ೧೦೦ ಯೋಜನಗಳ ಸಮುದ್ರವನ್ನು ದಾಟಿ ಮಿಕ್ಕೆಲ್ಲರಿಗೆ ಜೀವದಾನ ಮಾಡುವವನು ಯಾರು? ಮತ್ತೆ ನಮ್ಮ ಹೆಂಡತಿ ಮಕ್ಕಳನ್ನು ನೋಡುವಂತೆ ಮಾಡುವವನು ಯಾರು? ಅಷ್ಟು ಸಾಹಸ ಮಾಡುವ ಸಾಮರ್ಥ್ಯ ಯಾರಿಗಿದೆ?"

ಅವರಲ್ಲೊಬ್ಬನಾದ ಶರಭ ತಾನು ೩೦ ಯೋಜನಗಳ ದೂರ ಹೋಗಬಲ್ಲೆನೆಂದ. ಋಷಭ ೪೦, ಗಂಧಮಾದನ ೫೦, ಮೈಂದ ೬೦, ದ್ವಿವಿದ ೭೦, ಸುಷೇಣ ೮೦ ಎಂದರು. ಜಾಂಬವಂತ ಎದ್ದು ನಿಂತು, "ನಾನು ಯುವಕನಾಗಿದ್ದಾಗ ನನಗೆ ತುಂಬಾ ಬಲವಿತ್ತು. ಪರಮೇಶ್ವರ ತ್ರಿವಿಕ್ರಮಾವತಾರದಲ್ಲಿ ಬೆಳೆಯುತ್ತಿದ್ದರೆ ಅವನಿಗೆ ನಾನು ೨೧ ಬಾರಿ ಪ್ರದಕ್ಷಿಣೆ ಹಾಕಿದ್ದೆ. ಆದರೆ ಈಗ ನನಗೆ ೯೦ ಯೋಜನಗಳು ಹೋಗಲಷ್ಟೇ ಸಾಧ್ಯ" ಎಂದ. ಅಂಗದ, "ನನಗೆ ೧೦೦ ಯೋಜನಗಳು ಹೋಗಲು ಸಾಧ್ಯವಾಗುತ್ತದೆ. ಆದರೆ ಹಿಂತಿರುಗಿ ಬರಲಾರೆ" ಎಂದ. ಅದಕ್ಕೆ ಜಾಂಬವಂತ, "ಪ್ರಭು ಕೆಲಸ ಮಾಡುತ್ತಿದ್ದಾಗ ನಾವೆಲ್ಲಾ ಸುಮ್ಮನೆ ಕೂತಿದ್ದರೆ ಅದು ಅಸಹ್ಯವಾಗಿರುತ್ತದೆ. ಅದು ಪಾಪವೂ ಕೂಡ. ನೀನು ನಮಗೆ ಕೆಲಸ ಕೊಡಬೇಕು. ಯಾರನ್ನು ಕಳಿಸಬೇಕೋ ನನಗೆ ಗೊತ್ತು" ಎಂದು ಅಲ್ಲಿಯವರೆಗೂ ಸುಮ್ಮನೆ ಕೂತಿದ್ದ ಹನುಮನ ಬಳಿ ಹೋಗಿ, "ಏನಯ್ಯಾ ಹನುಮ ಏನೂ ತಿಳಿಯದವನಂತೆ ಕೂತುಬಿಟ್ಟಿದ್ದೀಯ? ಬಹಳ ಹಿಂದೆ ಅಪ್ಸರೆಯರಲ್ಲಿ ಶ್ರೇಷ್ಠಳಾದ ಪುಂಜಿಕಸ್ಥಳ ಎಂಬುವವಳು ಯಾವುದೋ ಶಾಪದಿಂದ ಕುಂಜರನೆಂಬ ವಾನರನಿಗೆ ಮಗಳಾಗಿ ಹುಟ್ಟಿದಳು. ಅವಳಿಗೆ 'ಅಂಜನಾ' ಎಂದು ನಾಮಕರಣ ಮಾಡಿದರು. ಅವಳು ನಿನ್ನ ತಾಯಿ. ಕೇಸರಿಯ ಪತ್ನಿ. ಕಾಮರೂಪಿಯಾದ ಅವಳು ಒಂದು ಬಾರಿ ಮನುಷ್ಯ ರೂಪವನ್ನು ಧರಿಸಿ ಬೆಟ್ಟದ ಮೇಲೆ ನಿಂತಿದ್ದಾಗ ಅವಳನ್ನು ಮೋಹಿಸಿದ ವಾಯು, ಅಲ್ಲಿಗೆ ಬಂದು ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡ. 'ಯಾರೋ ದುರಾತ್ಮ ನನ್ನ ಪಾತಿವ್ರತ್ಯವನ್ನು ಹಾಳು ಮಾಡುತ್ತಿದ್ದಾನೆ' ಎಂದು ನಿನ್ನ ತಾಯಿ ಕಿರುಚಿಕೊಂಡಾಗ ಅವನು, 'ಅಮ್ಮ! ಬ್ರಹ್ಮದೇವರು ನಮ್ಮ ತೇಜಸ್ಸನ್ನು ವಾನರ ಸ್ತ್ರೀಯರಲ್ಲಿ ಬಿಡಬೇಕೆಂದು ಆದೇಶಿಸಿದ್ದಾರೆ. ನಾನು ನಿನ್ನ ಪಾತಿವ್ರತ್ಯಕ್ಕೆ ಭಂಗ ತಾರದೆ ನಿನ್ನನ್ನು ಮಾನಸಿಕವಾಗಿ ನೋಡಿದ ಮಾತ್ರದಿಂದ ನನ್ನಷ್ಟೇ ಶಕ್ತಿಯಿರುವ, ಬುದ್ಧಿವಂತನಾದ ಪುತ್ರನನ್ನು ಕರುಣಿಸುತ್ತೇನೆ' ಎಂದ. ಆ ವರದಿಂದಲೇ ನೀನು ಹುಟ್ಟಿದೆ. ನೀನು ಹುಟ್ಟಿದ ಸ್ವಲ್ಪ ದಿನದಲ್ಲೇ ಆಕಾಶದ ಸೂರ್ಯನನ್ನು ನೋಡಿ ಹಣ್ಣೆನೆಂದುಕೊಂಡು ಅವನನ್ನು ತಿನ್ನಲು ಹೋದೆ. ಸೂರ್ಯ ಪಥಕ್ಕೆ ಅಡ್ಡಹೋದ ಕಾರಣ ಇಂದ್ರ ನಿನ್ನನ್ನು ವಜ್ರಾಯುಧದಿಂದ ಹೊಡೆದ. ಆ ಏಟಿಗೆ ನಿನ್ನ ಎಡದವಡೆ ಮುರಿಯಿತು. ಆದ್ದರಿಂದಲೇ ನಿನ್ನನ್ನು ಹನುಮ ಎಂದು ಕರೆದರು. ನೀನು ಕೆಳಗೆ ಬೀಳುವುದನ್ನು ನೋಡಿ ಕೋಪಗೊಂಡ ನಿನ್ನ ತಂದೆ ವಾಯು ಭೂಮಿಯ ಮೇಲೆ ಬೀಸುವುದನ್ನೇ ನಿಲ್ಲಿಸಿಬಿಟ್ಟ. ಬ್ರಹ್ಮದೇವರು, ಗಾಳಿ ಬೀಸದಿದ್ದರೆ ಸೃಷ್ಟಿಯೇ ನಿಂತುಹೋಗುತ್ತದೆಂದು ನಿನಗೆ, 'ಹನುಮಾ! ನಿನ್ನನ್ನು ಯಾರೂ ಅಸ್ತ್ರ ಶಸ್ತ್ರಗಳಿಂದ ಬಂಧಿಸಲು ಸಾಧ್ಯವಿಲ್ಲ' ಎಂದು ವರ ಕೊಟ್ಟರು. ಇಂದ್ರನೂ ನಿನಗೆ ಸ್ವಚ್ಛಂದ ಮರಣಿಯಾಗು ಎಂದು ವರ ಕೊಟ್ಟ. ನಿನ್ನಷ್ಟಕ್ಕೆ ನೀನೇ ನಿನ್ನ ಶರೀರವನ್ನು ಬೇಡಬೇಕೇ ಆಗಲಿ ನಿನ್ನನ್ನು ಯಾರೂ ಏನೂ ಮಾಡಲಿಕ್ಕಾಗುವುದಿಲ್ಲ. ನಿನ್ನ ತಂದೆ ವಾಯುದೇವ ಜೋರಾಗಿ ಬೀಸಿದರೆ ದೂಡ್ಡ ದೊಡ್ಡ ಕೊಂಬೆಗಳಿರುವ ಮರಗಳೇ ಬೀಳುತ್ತವೆ. ವಾಯುವಿಗಿರುವ ಗಮನ ಶಕ್ತಿ ನಿನಗೂ ಇದೆ. ಇಂದು ಕೋಟಿ ಕೋಟಿ ವಾನರರ ಜೀವ ನಿನ್ನ ಕೈಲಿದೆ. ಈ ಸಮುದ್ರವನ್ನು ದಾಟಿ, ಸೀತೆಯನ್ನು ಹುಡುಕಿಕೊಂಡು ಬಾ. ನಿನ್ನ ಶಕ್ತಿ ತೋರಿಸು" ಎಂದು ಹೇಳಿ ಹುರಿದುಂಬಿಸಿದ. 

ಜಾಂಬವಂತನ ಮಾತಿನಿಂದ ಪ್ರೇರಿತನಾಗಿ ಹನುಮ ತನ್ನ ಶರೀರವನ್ನು ಮೇರುಪರ್ವತದಷ್ಟು ಬೆಳೆಸಿದ. ಗುಹೆಯಲ್ಲಿರುವ ಸಿಂಹ ಒಂದು ಬಾರಿ ಘರ್ಜನೆ ಮಾಡಿದರೆ ಹೊರಗಿರುವ ಪ್ರಾಣಿಗಳು ಭಯಪಟ್ಟಂತೆ, ಅಲ್ಲಿಯವರೆಗೂ ಸಾಧಾರಣನಂತಿದ್ದ ಹನುಮನ ಆಕಾರ ನೋಡಿ, ಅವನು ತನ್ನ ಬಾಹುಗಳನ್ನು ಒಂದು ಬಾರಿ ಮೇಲಕ್ಕೆತ್ತಿದಾಗ ಸುತ್ತಮುತ್ತಲಿದ್ದ ವಾನರರೆಲ್ಲ ಭಯದಿಂದ ಅವನನ್ನು ನೋಡುತ್ತಾ ಸ್ಥಂಭಿತರಾಗಿ ನಿಂತುಬಿಟ್ಟರು. ಹನುಮ ಉತ್ಸಾಹದಿಂದ ಹೇಳಿದ: "ನನ್ನ ತಂದೆ ವಾಯುದೇವ ಅಗ್ನಿಯ ಸಖ. ವಾಯುವಿನಷ್ಟೇ ಗಮನ ಶಕ್ತಿಯಿಂದ ನಾನೂ ಹೋಗುತ್ತೇನೆ. ಅಡ್ಡಬರುವ ಯಾರನ್ನಾದರೂ ನನ್ನ ಗಮನ ಶಕ್ತಿಯಿಂದ ಗುದ್ದಿ ಕೊಲ್ಲುತ್ತೇನೆ. ಪರ್ವತಗಳನ್ನು ಪುಡಿಮಾಡುತ್ತೇನೆ. ೧೦೦ ಯೋಜನಗಳೇನು? ೧೦೦೦೦ ಯೋಜನಗಳಾದರೂ ದಾಟುತ್ತೇನೆ. ಸೂರ್ಯ ಉದಯಿಸುವಾಗ ಅವನ ಬಳಿ ಹೋಗಿ ಅವನಿಗೆ ನಮಸ್ಕಾರ ಮಾಡಿ, ಅವನು ಅಸ್ತಮಿಸುವುದರೊಳಗಾಗಿ ಮತ್ತೆ ಅವನಿರುವ ಬಳಿ ಹೋಗಿ ನಮಸ್ಕಾರ ಮಾಡಬಲ್ಲೆ. ಸಮುದ್ರದಲ್ಲಿ ತಿರುಗುವ ಗರುಕ್ಮಂತನಿಗೆ ಸಾವಿರ ಬಾರಿ ನಮಸ್ಕಾರ ಮಾಡುತ್ತೇನೆ. ರಾವಣನನ್ನು ಕೊಲ್ಲುತ್ತೇನೆ, ಅಥವಾ ಲಂಕೆಯನ್ನೇ ಪುಡಿ ಮಾಡಿ ರಾಮನ ಪಾದದ ಬಳಿ ತಂದು ಹಾಕುತ್ತೇನೆ. ನನ್ನ ಪರಾಕ್ರಮದ ಮುಂದೆ ನಿಲ್ಲುವವನು ಯಾರೂ ಇಲ್ಲ. ಬ್ರಹ್ಮ-ಇಂದ್ರರು ಅಕ್ಕಪಕ್ಕ ಕೂತು ಅಮೃತ ಕುಡಿಯುವಾಗ ನಾನು ಮಧ್ಯ ಹೋಗಿ ಅವರಿಬ್ಬರ ಕೈಲಿರುವ ಅಮೃತವನ್ನೂ ತರಬಲ್ಲೆ. ಈ ಭೂಮಿ ನನ್ನನ್ನು ತಡೆದುಕೊಳ್ಳುವುದಿಲ್ಲ. ಆದ್ದರಿಂದ ಮಹೇಂದ್ರಗಿರಿ ಪರ್ವತದ ಮೇಲಿಂದ ಹೊರಡುತ್ತೇನೆ."

ಹನುಮಂತ ಮಹೇಂದ್ರಗಿರಿಯನ್ನು ಹತ್ತಿದಾಗ ಅಲ್ಲಿದ್ದ ಗಂಧರ್ವರು, ವಿದ್ಯಾಧರರು ಓಡಿಹೋದರು. ಬೆಟ್ಟ ಕಂಪಿಸಿತು. ಮರಗಳು ನೆಲಕ್ಕೆ ಬಿದ್ದವು. ಪ್ರಾಣಿಗಳು ದಿಕ್ಕೆಟ್ಟು ಓಡಿದವು. ವಾನರರು, "ದೇವತೆಗಳು, ಋಷಿಗಳ ಆಶೀರ್ವಾದದಿಂದ ಯಾವುದೇ ತೊಂದರೆಯಿಲ್ಲದೆ ೧೦೦ ಯೋಜನಗಳ ಸಮುದ್ರವನ್ನು ದಾಟಿ ಸೀತೆಯನ್ನು ಹುಡುಕಿಕೊಂಡು ಬಾ. ನಾವು ನಿನ್ನನ್ನೇ ಎದುರು ನೋಡುತ್ತಿರುತ್ತೇವೆ. ಕೊಟ್ಯಾಂತರ ವಾನರರನ್ನು ಕಾಪಾಡಿದ ಕೀರ್ತಿ ನಿನಗೆ ಸಲ್ಲಲಿ. ನೀನು ಬರುವವರೆಗೂ ನಾವು ಇಲ್ಲಿ ಪುಣ್ಯಕಾರ್ಯಗಳನ್ನು ಮಾಡುತ್ತಿರುತ್ತೇವೆ" ಎಂದು ಹಾರೈಸಿದರು. 


ಹನುಮನ ಮನಸ್ಸು ಅಷ್ಟುಹೊತ್ತಿಗಾಗಲೇ ಲಂಕೆಯಲ್ಲಿತ್ತು!

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ