೬೯. ಸುಂದರಕಾಂಡ - ಆರಂಭ
ಸುಂದರೇ ಸುಂದರೋ ರಾಮಃ ಸುಂದರೇ ಸುಂದರೀ ಕಥಃ
ಸುಂದರೇ ಸುಂದರೀ ಸೀತ ಸುಂದರೇ ಸುಂದರಂ ವನಂ
ಸುಂದರೇ ಸುಂದರಂ ಕಾವ್ಯಂ ಸುಂದರೇ ಸುಂದರಂ ಕಪಿಃ
ಸುಂದರೇ ಸುಂದರಂ ಮಂತ್ರಂ ಸುಂದರೇ ಕಿಂ ನ ಸುಂದರಂ?
ಇದು ವಾಲ್ಮೀಕಿಗಳ ಮಾತಲ್ಲ. ಸುಂದರಕಾಂಡದ ಕುರಿತು ವಿದ್ವಾಂಸರು ಹೇಳಿರುವ ಮಾತುಗಳು. ರಾಮ ಸುಂದರಾತಿ ಸುಂದರ. ಸೀತೆಯ ಕುರಿತು ಹೇಳುವ ಅವಶ್ಯಕತೆಯೇ ಇಲ್ಲ. ಆತ್ಮದರ್ಶನ ಪಡೆದ ಯೋಗಿಸ್ವರೂಪನಾದ ಸೌಂದರ್ಯರಾಶಿ ಹನುಮಂತ. ಆಶೋಕವನವೆಲ್ಲಾ ಸುಂದರ, ಲಂಕಾ ಪಟ್ಟಣವೂ ಸುಂದರ, ಶ್ಲೋಕಗಳೂ ಸುಂದರ. ಸುಂದರಕಾಂಡದಲ್ಲಿ ಸೌಂದರ್ಯವಿಲ್ಲದುದೇನು?
ಸುಂದರಕಾಂಡ ‘ತತ್’ ಪದದಿಂದ ಪ್ರಾರಂಭವಾಗಿ ‘ತತ್’ ಪದದಿಂದಲೇ ಮುಗಿಯುತ್ತದೆ. ‘ತತ್’ ಎಂದರೆ ಪರಬ್ರಹ್ಮ. ಸುಂದರಕಾಂಡವನ್ನು ಉಪಾಸನಕಾಂಡವೆನ್ನುತ್ತಾರೆ. ಪರಬ್ರಹ್ಮೋಪಾಸನೆಯನ್ನು ಸುಂದರಕಾಂಡ ನಮಗೆ ಕಲಿಸುತ್ತದೆ.
ತತೋ ರಾವಣನೀತಾಯ ಸೀತಾಯಾ ಶತೃಕರ್ಷನಾ
ಇಯೇಷ್ವ ಪದಮನ್ವೇಷುಂ ಚಾರಣಾಚರಿತೇ ಪಥಿ
ರಾವಣನಿಂದ ಅಪಹರಿಸಲ್ಪಟ್ಟ ಸೀತೆಯನ್ನು ಹುಡುಕಲು ಚಾರಣರ (ಚಾರಣರು - ಭೂಮಿಯ ಹತ್ತಿರವೇ ಇದ್ದು, ಯಾವಾಗಲೂ ಶುಭವಾರ್ತೆಗಳನ್ನೇ ಹೇಳುವ ದೇವತಾಸ್ವರೂಪರು) ಮಾರ್ಗದಲ್ಲಿ ಹೋಗಲು ಹನುಮ ನಿರ್ಧರಿಸಿದ. ಪರ್ವತದ ಮೇಲೆ ದೊಡ್ಡ ಎತ್ತು ನಿಂತಂತೆ ನಿಂತ ಹನುಮ, ಹೊರಡುವ ಮುಂಚೆ ಸೂರ್ಯ, ಇಂದ್ರ, ವಾಯು, ಬ್ರಹ್ಮ, ಸಮಸ್ತಭೂತಗಳಿಗೆ ನಮಸ್ಕಾರ ಮಾಡಿದ. ದಕ್ಷಿಣದ ಕಡೆ ಏಕಾಗ್ರತೆಯಿಂದ ನೋಡುತ್ತಾ ಶಿಖರವನ್ನು ತನ್ನ ಕಾಲಿನಿಂದ ತುಳಿದ ರಭಸಕ್ಕೆ ಮರಗಳ ಮೇಲಿದ್ದ ಹೂಗಳು ಕೆಳಗೆ ಬಿದ್ದವು. ಮತ್ತೊಮ್ಮೆ ಇನ್ನೂ ಜೋರಾಗಿ ತುಳಿದಾಗ, ಎಷ್ಟೋ ಕಾಲದಿಂದ ಮಹೇಂದ್ರಗಿರಿಯ ಬಿಲಗಳಲ್ಲಿದ್ದ ಹಾವುಗಳು ಹೊರಗೆ ಬರಲು ಪ್ರಯತ್ನಿಸಿದವು. ಆದರೆ ಅವು ಹೊರಬರುವುದರೊಳಗಾಗಿ ಬಿಲಗಳು ಮುಚ್ಚಿದ್ದವು. ಹಾವುಗಳ ಅರ್ಧಭಾಗ ಒಳಗೇ ಉಳಿಯಿತು. ನೋವನ್ನು ತಟ್ಟುಕೊಳ್ಳಲಾಗದೆ ಅವು ಅಲ್ಲಿದ್ದ ಕಲ್ಲುಗಳನ್ನು ಕಚ್ಚಿದಾಗ ಆ ವಿಷದಿಂದ ಹುಟ್ಟಿದ ಅಗ್ನಿ ಪರ್ವತವನ್ನೇ ಸುಟ್ಟಿತು. ಪರ್ವತದಲ್ಲಿ ಸಂಸಾರ ಸಮೇತ ವಾಸವಾಗಿದ್ದ ಗಂಧರ್ವರು ಹೊರಬಂದು ಆಕಾಶದಲ್ಲಿ ನಿಂತು ಹನುಮನನ್ನು ಆಶ್ಚರ್ಯದಿಂದ ನೋಡುತ್ತಿದ್ದರು.
ಏಷ ಪರ್ವತ ಸಂಕಶಾ ಹನುಮಾನ್ ಮಾರುತಾತ್ಮಜಾ
ತಿತೀರ್ಷಾತಿ ಮಹಾವೇಗಾ ಸಮುದ್ರಂ ಮಕರಾಲಯಂ
ಹನುಮ ತನ್ನ ಬಾಲವನ್ನು ಅತ್ತಿತ್ತ ಅಲ್ಲಾಡಿಸಿ, ಜೋರಾಗಿ ಉಸಿರು ತೆಗೆದುಕೊಂಡು, ಪರ್ವತವನ್ನು ಗಟ್ಟಿಯಾಗಿ ತುಳಿದು, ಸುತ್ತಲೂ ಇದ್ದ ವಾನರರನ್ನು ನೋಡಿ, “ರಾಮನ ಬಾಣದಿಂದ ಹೊರಬಂದ ಬಿಲ್ಲಿನಂತೆ ನಾನು ಲಂಕೆಯನ್ನು ಸೇರುತ್ತೇನೆ. ಅಲ್ಲಿ ಸೀತೆಯ ದರ್ಶನವಾಗದಿದ್ದರೆ ಸ್ವರ್ಗಕ್ಕೆ ಹೋಗಿ ಹುಡುಕುತ್ತೇನೆ. ಅಲ್ಲೂ ಸೀತೆ ಸಿಕ್ಕದಿದ್ದರೆ, ಲಂಕೆಗೆ ವಾಪಸ್ಸು ಬಂದು ರಾವಣನನ್ನು ಬಂಧಿಸಿ ರಾಮನ ಪಾದದ ಬಳಿ ತಂದು ಹಾಕುತ್ತೇನೆ” ಎಂದು ಪ್ರತಿಜ್ಞೆ ಮಾಡಿ ಆಕಾಶಕ್ಕೆ ಹಾರಿದ.
ಅವನು ಹಾರಿದ ವೇಗಕ್ಕೆ ಎಷ್ಟೋ ಸಾವಿರ ವರ್ಷಗಳಿಂದ ಬೆಟ್ಟದ ಮೇಲಿದ್ದ ಮರಗಳು ಬುಡಸಮೇತ ಮೆಲಕ್ಕೆದ್ದು, ಹಾರುತ್ತಿದ್ದ ಹನುಮನ ಮೇಲೆ ಪುಷ್ಪವೃಷ್ಠಿ ಮಾಡಿದವು. ಲಘುವಾಗಿದ್ದ ಮರಗಳು ಹನುಮನ ಜೊತೆ ಸ್ವಲ್ಪದೂರ ಹೋದವು. ಭಾರವಾಗಿದ್ದ ಮರಗಳು ಬೇಗ ಕೆಳಕ್ಕೆ ಬಿದ್ದವು. ಹಾರುತ್ತಿದ್ದ ಹನುಮನನ್ನು ನೋಡಿದವರಿಗೆ ಅವನು ಆಕಾಶವನ್ನು ಮುಟ್ಟುತ್ತಿದ್ದಾನೋ, ಸಮುದ್ರವನ್ನು ಮುಟ್ಟುತ್ತಿದ್ದಾನೋ ಎಂಬ ಅನುಮಾನ ಬರುತ್ತಿತ್ತು. ಹಚ್ಚಹಸಿರಿನ ಕಣ್ಣಿನಿಂದ ಹನುಮ ಸೂರ್ಯಮಂಡಲದಂತೆ ಪ್ರಕಾಶಿಸುತ್ತಿದ್ದ. ಅವನು ಹಾರುತ್ತಿದ್ದ ವೇಗಕ್ಕೆ ಸುಮುದ್ರದ ಮೇಲಿನ ಪದರ ಚಾಪೆಯಂತೆ ಸುತ್ತಿಕೊಂಡು ಒಳಗಿದ್ದ ಆಮೆ, ಮೀನು, ತಿಮಿಂಗಲಗಳು ಕಾಣಿಸಿದವು. ಹನುಮ ಮೋಡಗಳ ಒಳಗೆ ಹೋಗಿ, ಮತ್ತೆ ಹೊರಗೆ ಬರುತ್ತಾ ಲಂಕೆಯನ್ನು ಸೇರಲು ವೇಗವಾಗಿ ಹಾರುತ್ತಿದ್ದ.
ಹನುಮಂತನ ವೇಗವನ್ನು ಕೆಳಗಿನಿಂದ ನೋಡಿದ ಸಾಗರ, ‘ಸಾಗರಗಳು ಹುಟ್ಟುವುದಕ್ಕೆ ಕಾರಣವೇ ಇಕ್ಷ್ವಾಕು ವಂಶದ ಸಗರ. ಈಗ ಅದೇ ವಂಶದವನಾದ ರಾಮನ ಕಾರ್ಯಕ್ಕೆ ಹನುಮ ಹೋಗುತ್ತಿದ್ದಾನೆ. ಅವನಿಗೆ ಅತಿಥ್ಯ ಕೊಡುವುದು ನನ್ನ ಧರ್ಮ’ ಎಂದುಕೊಂಡು, ತನ್ನಲ್ಲಿದ್ದ ಮೈನಾಕ ಪರ್ವತಕ್ಕೆ ಹೇಳಿದ: “ಪಾತಾಳ ಲೋಕದಲ್ಲಿದ್ದ ರಾಕ್ಷಸರು ಆಗಾಗ ಸಮುದ್ರಮಾರ್ಗದಿಂದ ಮೇಲೆ ಬರುತ್ತಿದ್ದರು. ಅವರು ಹೊರಗೆ ಬಾರದಂತೆ ಒಳಗಿರುವ ಸುರಂಗಕ್ಕೆ ನೀನು ಅಡ್ದವಾಗಿ ಬಿದ್ದ ಕಾರಣದಿಂದ ಇಂದ್ರ ನಿನ್ನನ್ನು ಬಿಟ್ಟುಬಿಟ್ಟ. ಆದರೆ ನಿನಗಿರುವ ಶಕ್ತಿಯಿಂದ ನೀನು ಮೇಲೆ ಕೆಳಗೆ ಎಗರಬಲ್ಲೆ. ಈಗ ಹನುಮಂತನಿಗೆ ಆತಿಥ್ಯಕೊಡಲು ಮೆಲಕ್ಕೇಳು. ಅವನು ಪರ್ವತದ ಮೇಲೆ ಸ್ವಲ್ಪಹೊತ್ತು ವಿಶ್ರಮಿಸಿ ಹೊರಡಲಿ.”
(ಕೃತಯುಗದಲ್ಲಿ ಪರ್ವತಗಳಿಗೆ ರೆಕ್ಕೆಗಳಿದ್ದವು. ಅವು ಎಲ್ಲಿಗೆ ಬೇಕೆಂದರಲ್ಲಿಗೆ ಹಾರಿ ಹೋಗುತ್ತಿದ್ದವು. ಇದರಿಂದ ಋಷಿಗಳಿಗೆ, ಸಾಮಾನ್ಯರಿಗೆ ತೊಂದರೆಯಾಗುತ್ತಿತ್ತು. ಆಗ ಇಂದ್ರ ತನ್ನ ವಜ್ರಾಯುಧದಿಂದ ಅವುಗಳ ರೆಕ್ಕೆಗಳನ್ನು ಕತ್ತರಿಸಿಬಿಟ್ಟ. ಮೈನಾಕನ ರೆಕ್ಕೆಗಳನ್ನೂ ಕತ್ತರಿಸಲು ಹೋಗುತ್ತಿದ್ದಾಗ, ಅವನ ಮಿತ್ರನಾದ ವಾಯು ಅವನನ್ನು ಎತ್ತಿಕೊಂಡು ಹೋಗಿ ಸಮುದ್ರದಲ್ಲಿ ಹಾಕಿದ. ಅವನು ರಾಕ್ಷಸರು ಹೊರಬರುವ ದಾರಿಗೆ ಅಡ್ಡವಾಗಿ ಬಿದ್ದದ್ದರಿಂದ ಇಂದ್ರ ಬಿಟ್ಟುಬಿಟ್ಟ.)
ಮೈನಾಕ ಪರ್ವತದ ಶಿಖರಗಳು ಸಮುದ್ರದಿಂದ ಮೇಲಕ್ಕೆದ್ದವು. ಸೂರ್ಯರಶ್ಮಿ ಬೆಟ್ಟದ ಮೇಲೆ ಬಿದ್ದಾಗ ಆಕಾಶವೆಲ್ಲ ಕೆಂಪು ಬಣ್ಣದಿಂದ ತುಂಬಿಹೋಯಿತು. ಅಲ್ಲಿವರೆಗೂ ಇಲ್ಲದ ಶಿಖರಗಳನ್ನು ನೋಡಿದ ಹನುಮಂತ ತನ್ನನ್ನು ನಿರ್ಬಂಧಿಸಲು ಯಾರೋ ಬರುತ್ತಿದ್ದಾರೆ ಎಂದುಕೊಂಡು ತನ್ನ ವಕ್ಷಸ್ಥಳದಿಂದ ಶಿಖರಗಳನ್ನು ಗುದ್ದಿದ. ಅವು ಅಲ್ಲೇ ಪುಡಿ ಪುಡಿಯಾದವು! ಆಗ ಮೈನಾಕ ಮನುಷ್ಯ ರೂಪವನ್ನು ಪಡೆದು, “ಅಯ್ಯಾ! ನಾವು ಸಾಮಾನ್ಯರು ಬಂದರೇನೇ ಬಿಡುವುದಿಲ್ಲ. ನೀನು ನಮಗೆ ಉಪಕಾರ ಮಾಡಿದ ವಿಶೇಷವಾದ ಅತಿಥಿ. ಉಪಕಾರ ಮಾಡಿದವನಿಗೆ ಪ್ರತ್ಯುಪಕಾರ ಮಾಡುವುದು ನಮ್ಮ ಧರ್ಮ. ಇಕ್ಷ್ವಾಕು ವಂಶದವರಿಂದ ಸಾಗರ ಹುಟ್ಟಿತು. ನಿನ್ನ ತಂದೆಯಿಂದ ನಾವು ಉಪಕಾರ ಪಡೆದೆವು. ಆದ್ದರಿಂದ ನೀನು ಒಂದು ಬಾರಿ ಪರ್ವತದ ಮೇಲಿಳಿದು, ಜೇನು ಕುಡಿದು, ಹಣ್ಣು ತಿಂದು ವಿಶ್ರಮಿಸಿ ಹೊರಡು” ಎಂದ. ಹನುಮ ಮೈನಾಕನನ್ನು ಕೈಯಿಂದ ಮುಟ್ಟಿ, “ನಿನ್ನ ಮಾತಿನಿಂದ ನನಗೆ ತುಂಬಾ ಆನಂದವಾಯಿತು. ನೀನು ಅತಿಥ್ಯಕೊಟ್ಟಷ್ಟೇ ಸಂತೋಷವಾಯಿತು. ಆದರೆ ಈಗ ನನ್ನನ್ನು ಕ್ಷಮಿಸು. ನನಗೆ ಒಂದು ಮುಖ್ಯವಾದ ಕೆಲಸವಿದೆ. ಸೂರ್ಯಾಸ್ತಕ್ಕೆ ಮೊದಲು ನಾನು ಲಂಕೆಯನ್ನು ಸೇರಬೇಕು. ಪ್ರತಿಜ್ಞೆಮಾಡಿದ್ದೇನೆ. ಮಧ್ಯದಲ್ಲಿ ಎಲ್ಲಿಯೂ ನಿಲ್ಲಬಾರದು” ಎಂದು ಹೇಳಿ ನಿಲ್ಲದೆ ಹೊರಟುಹೋದ.
ಮೈನಾಕ ಹೊರಗೆ ಬಂದದ್ದನ್ನು ನೋಡಿದ ಇಂದ್ರ, “ಓಹ್! ಇಷ್ಟು ದಿನದ ಮೇಲೆ ನೀನು ಹೊರಗೆ ಬಂದೆ” ಎಂದ. ಮೈನಾಕ, ‘ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವುದು ಧರ್ಮ. ಇಂದ್ರ ನನ್ನ ರೆಕ್ಕೆಯನ್ನು ಕತ್ತರಿಸಿದರೆ ಕತ್ತರಿಸಲಿ’ ಎಂದುಕೊಂಡು ಸುಮ್ಮನಾದ. ಆದರೆ ಇಂದ್ರ, “ಮೈನಾಕ! ಹನುಮನಿಗೆ ಸಹಾಯಮಾಡಲು ನೀನು ಧೈರ್ಯವಾಗಿ ಹೊರಗೆ ಬಂದೆ. ನಾನು ನಿನ್ನನ್ನು ಏನೂ ಮಾಡುವುದಿಲ್ಲ” ಎಂದು ಅಭಯಕೊಟ್ಟು ಅವನನ್ನು ಬಿಟ್ಟುಬಿಟ್ಟ.
ದೇವತೆಗಳು ನಾಗಮಾತೆಯಾದ ಸುರಸೆಯನ್ನು (ಸುರಸೆ - ದಕ್ಷನ ಕುಮಾರಿ), “ಹನುಮ ಬರುತ್ತಿದ್ದಾನೆ. ನೀನು ದೊಡ್ದ ರಾಕ್ಷಸಿಯ ವೇಷವನ್ನು ಧರಿಸಿ, ಅವನಿಗೆ ಅಡ್ದವಾಗಿ ನಿಲ್ಲು. ನುಂಗುತ್ತೇನೆ ಎಂದು ಹೆದರಿಸಿ ಅವನ ಸಾಮರ್ಥ್ಯವನ್ನು ಪರೀಕ್ಷಿಸು” ಎಂದು ಕೇಳಿದರು. ಸುರಸೆ ಭಯಂಕರವಾದ ರೂಪವನ್ನು ತಾಳಿ ಸಮುದ್ರದಿಂದ ಹೊರಬಂದು ಹನುಮಂತನಿಗೆ, “ನಿನ್ನನ್ನು ದೇವತೆಗಳು ನನಗೆ ಆಹಾರವಾಗಿ ಕೊಟ್ಟಿದ್ದಾರೆ. ನಿನ್ನನ್ನು ನಾನು ತಿನ್ನುತ್ತೇನೆ. ನನ್ನ ಬಾಯೊಳಕ್ಕೆ ಬಾ” ಎಂದಳು.
ಹನುಮಂತ ಅವಳಿಗೆ ರಾಮಕಥೆಯನ್ನು ಹೇಳಿ, “ನಾನು ಸೀತೆಯನ್ನು ಹುಡುಕಲು ಹೋಗುತ್ತಿದ್ದೇನೆ. ಅವಳನ್ನು ಹುಡುಕಿ ರಾಮನಿಗೆ ವಿಷಯ ತಿಳಿಸಿ, ಅನಂತರ ನಿನ್ನ ಬಾಯೊಳಕ್ಕೆ ಹೋಗುತ್ತೇನೆ. ಈಗ ನನ್ನನ್ನು ಬಿಟ್ಟುಬಿಡು. ನಾನು ಸತ್ಯಹೇಳುತ್ತಿದ್ದೇನೆ. ಮಾತು ತಪ್ಪುವುದಿಲ್ಲ” ಎಂದ.
“ಹಾಗಾಗುವುದಿಲ್ಲ. ನನಗೆ ಬ್ರಹ್ಮದೇವರ ವರವಿದೆ. ನೀನು ನನ್ನ ಬಾಯನ್ನು ಪ್ರವೇಶಿಸಲೇಬೇಕು” ಎಂದು ಹೇಳಿ ಸುರಸೆ ತನ್ನ ದೊಡ್ಡ ಬಾಯನ್ನು ತೆಗೆದಳು. ಹನುಮ ತನ್ನ ಶರೀರವನ್ನು ಬೆಳೆಸಿದ. ಸುರಸೆ ಬಾಯಿಯನ್ನು ಬೆಳಸಿದಳು. ಹಾಗೆ ಇಬ್ಬರೂ ೧೦೦ ಯೋಜನಗಳಷ್ಟು ಬೆಳೆದರು. ತಕ್ಷಣ ಹನುಮ ಬೆರಳಿನಷ್ಟು ಚಿಕ್ಕವನಾಗಿ ಸುರಸೆಯ ಬಾಯೊಳಕ್ಕೆ ಹೋಗಿ ಹೊರಗೆಬಂದ. “ನೀನು ಹೇಳಿದಂತೆ ನಾನು ನಿನ್ನ ಬಾಯೊಳಕ್ಕೆ ಹೋಗಿ ಬಂದಿದ್ದೇನೆ. ಇನ್ನು ನಾನು ಹೊರಡುತ್ತೇನೆ.”
“ನೀನು ತುಂಬಾ ಬುದ್ದಿವಂತ. ಸೀತೆಯನ್ನು ರಾಮನ ಜೊತೆ ಸೇರಿಸಿದವನು ಹನುಮ ಎಂದು ಪ್ರಖ್ಯಾತಿಯನ್ನು ಪಡೆ” ಎಂದು ಸುರಸೆ ಹನುಮನಿಗೆ ಆಶೀರ್ವಾದ ಮಾಡಿ ದಾರಿ ಬಿಟ್ಟಳು. ಹನುಮ ಅವಳಿಗೆ ನಮಸ್ಕರಿಸಿ ಹೊರಟ.
ಮಾರ್ಗಮಧ್ಯದಲ್ಲಿ ಅವನನ್ನು ಸಿಂಹಿಕೆ ಎಂಬ ರಾಕ್ಷಸಿ ನೋಡಿದಳು. ಅವಳು ಕಾಮರೂಪಿ. ಅವಳಿಗೆ ನೆರಳನ್ನು ಹಿಡಿದು ಎಳೆಯುವ ಶಕ್ತಿಯಿತ್ತು. ಹನುಮನ ನೆರಳನ್ನು ಎಳೆಯಲು ಶುರು ಮಾಡಿದಳು. ತನ್ನ ಗಮನ ತಗ್ಗುತ್ತಿರುವುದನ್ನು ಗಮನಿಸಿದ ಹನುಮ ತನ್ನ ಶರೀರವನ್ನು ಜೋರಾಗಿ ಬೆಳೆಸಿದ. ಸಿಂಹಿಕೆಯೂ ತನ್ನ ಶರೀರವನ್ನು ಬೆಳೆಸಿದಳು. ಹನುಮಂತ ಸಣ್ಣವನಾಗಿ ಅವಳ ಬಾಯಲ್ಲಿ ಹೊಕ್ಕು, ಎದೆಯನ್ನು ಸೀಳಿ ಹೊರಗೆ ಬಂದುಬಿಟ್ಟ. ಸಿಂಹಿಕೆ ಅಲ್ಲೇ ಸತ್ತುಬಿದ್ದಳು.
ಹನುಮ ಲಂಕೆಯನ್ನು ಸೇರುವಷ್ಟರಲ್ಲಿ ಸಂಜೆಯಾಗಿತ್ತು. ತನ್ನ ಶರೀರವನ್ನು ಚಿಕ್ಕದಾಗಿ ಮಾಡಿ ಲಂಬಗಿರಿ ಎಂಬ ಪರ್ವತದ ಮೇಲಿಳಿದು ಸಮುದ್ರದ ಕಡೆ ನೋಡಿ, ‘ರಾಮನ ಅನುಗ್ರಹವೊಂದಿದ್ದರೆ ಇಂತಹ ಎಷ್ಟು ಸಮುದ್ರಗಳನ್ನಾದರೂ ದಾಟಬಲ್ಲೆ’ ಎಂದುಕೊಂಡ. ಧೃತಿ (ಅಂದುಕೊಂಡದನ್ನು ಸಾಧಿಸಬೇಂಬ ದೃಢತೆ), ದೃಷ್ಠಿ (ಆಲೋಚಿಸುವ ಸಾಮರ್ಥ್ಯ), ಮತಿ (ನಿರ್ಣಯ ತೆಗೆದುಕೊಳ್ಳುವ ಶಕ್ತಿ) ಮತ್ತು ದಾಕ್ಷ್ಯ (ಶಕ್ತಿ) - ಈ ನಾಲ್ಕಿದ್ದರೆ ಜೀವನದಲ್ಲಿ ಸೋಲೆಂಬುದೇ ಇಲ್ಲ. ಪರ್ವತದ ಮೇಲಿಳಿದ ಹನುಮ ವಿಶ್ವಕರ್ಮ ನಿರ್ಮಿತ ಲಂಕಾ ಪಟ್ಟಣವನ್ನು ನೋಡಿ ಆಶ್ಚರ್ಯಪಟ್ಟು ‘ಲಂಕೆಯನ್ನು ವಶಪಡಿಸಿಕೊಳ್ಳಲು ದೇವತೆಗಳಿಗೂ ಸಾಧ್ಯವಿಲ್ಲ’ ಎಂದುಕೊಂಡು ತನ್ನ ಈ ರೂಪದಿಂದ ಸೀತೆಯನ್ನು ಹುಡುಕಲು ಸಾಧ್ಯವಿಲ್ಲ ಎಂದು ಚಿಕ್ಕ ಮರಿಯ ರೂಪಕ್ಕೆ ಬದಲಾಗಿ ಲಂಕೆಯ ರಾಜದ್ವಾರಕ್ಕೆ ಬಂದ.
Comments
Post a Comment