೭೦. ಹುಡುಕಾಟ

ಲಂಕೆಯ ಮಹಾದ್ವಾರಕ್ಕೆ ಬಂದ ಹನುಮನಿಗೆ ವಿಕಟ್ಟಾಹಾಸದಿಂದ ನಗುತ್ತಾ ಪರ್ವತದಷ್ಟು ದೊಡ್ದದಾದ ಆಕಾರವುಳ್ಳ ಒಬ್ಬಳು ರಾಕ್ಷಸ ಸ್ತ್ರೀ ಕಾಣಿಸಿದಳು. ಹನುಮನನ್ನು ನೋಡಿದ ಅವಳು, “ನೀನು ಯಾರು? ನೀನು ಅರಣ್ಯದಲ್ಲಿ ತಿರುಗುವ ಕಪಿ. ನಿನಗಿಲ್ಲೇನು ಕೆಲಸ?” ಎಂದು ಕೇಳಿದಳು.
“ಒಂದು ಬಾರಿ ಇಲ್ಲಿರುವ ವನ-ಉಪವನಗಳನ್ನು, ಮರಗಳನ್ನು, ಭವನಗಳನ್ನು, ಸರೋವರಗಳನ್ನು ನೋಡಬೇಕೆಂದು ಬಂದಿದ್ದೇನೆ. ನನಗೆ ಅನುಮತಿ ಕೊಡು” ಎಂದ ಹನುಮ.
“ನಾನು ಅನುಮತಿ ಕೊಡುವುದಲ್ಲ, ನನ್ನನ್ನು ಗೆದ್ದವನು ಮಾತ್ರ ಒಳಗೆ ಹೋಗಬಲ್ಲ. ನೀನು ಒಳಗೆ ಹೋಗುವುದು ಸಾಧ್ಯವಿಲ್ಲ.”
“ಸರಿ. ಹಾಗಾದರೆ ನೀನು ಯಾರು?”
“ನಾನು ಒಳಗಿರುವ ಮಹಾತ್ಮನಾದ ರಾವಣನ ಆಜ್ಞೆಯಂತೆ ಲಂಕಾಪಟ್ಟಣವನ್ನು ಕಾವಲು ಕಾಯುತ್ತಿರುತ್ತೇನೆ” ಎಂದು ಹೇಳಿ ಮರದ ಮೇಲಿದ್ದ ಹನುಮನಿಗೆ ಒಂದು ಗುದ್ದು ಗುದ್ದಿದಳು.
ಆ ಏಟಿನಿಂದ ಹನುಮನಿಗೆ ತುಂಬಾ ಕೋಪಬಂತು. ಬಲಗೈಲಿ ಹೊಡೆದರೆ ಸಾಯುತ್ತಾಳೆಂದುಕೊಂಡು ಹನುಮ ಅವಳಿಗೆ ಎಡಗೈಯಿಂದ ಒಂದು ಏಟು ಕೊಟ್ಟ. ಆ ಏಟನ್ನು ತಾಳಲಾರದೆ ಅವಳು ಕೆಳಗೆ ಬಿದ್ದು ಹೇಳಿದಳು: “ನನ್ನನ್ನು ಲಂಕೆಯೆನ್ನುತ್ತಾರೆ. ಎಷ್ಟೋ ವರ್ಷಗಳಿಂದ ನಾನು ಇಲ್ಲಿ ಕಾವಲು ಕಾಯುತ್ತಿದ್ದೇನೆ. ನನಗೆ ರಾವಣನ ಕಾಟ ತಡೆಯಲಾಗುತ್ತಿಲ್ಲ. ‘ಒಬ್ಬ ವಾನರ ಬಂದು ನಿನಗೆ ರಾವಣನ ಕಾಟವನ್ನು ತಪ್ಪಿಸುತ್ತಾನೆ’ ಎಂದು ಬ್ರಹ್ಮದೇವರು ನನಗೆ ವರ ಕೊಟ್ಟಿದ್ದರು. ಈಗ ನನಗೆ ಅರ್ಥವಾಯಿತು. ಇನ್ನು ರಾವಣ ಕಥೆ ಮುಗಿದಂತೆಯೇ. ನೀನು ಒಳಗೆ ಹೋಗಿ ಸೀತೆಯನ್ನು ಹುಡುಕು.”

ಹನುಮ ಅಲ್ಲಿದ್ದ ಗೋಡೆಯನ್ನು ಹಾರಿ, ಎಡಗಾಲಿಟ್ಟು ಲಂಕೆಯ ಒಳಕ್ಕೆ ಹೋದ. ಲಂಕಾಪುರದ ವೈಭವವನ್ನು ನೋಡಿದ ಹನುಮನಿಗೆ ಅದು ಗಂಧರ್ವನಗರವೇನೋ ಎನಿಸಿತು. ಅಲ್ಲಿದ್ದ ದ್ವಾರಗಳು, ಸ್ಥಂಬಗಳು ಬಂಗಾರದಿಂದ ಮಾಡಲ್ಪಟ್ಟಿದ್ದವು. ಎಲ್ಲಕ್ಕೂ ನವರತ್ನಗಳನ್ನು ಅಂಟಿಸಿದ್ದರು. ಮೆಟ್ಟಿಲುಗಳನ್ನು ಸ್ಫಟಿಕಗಳಿಂದ ಹೊದ್ದಿಸಲಾಗಿತ್ತು. ಎಲ್ಲಿ ನೋಡಿದರೂ ಬಾವಿಗಳು, ಸರೋವರಗಳಿದ್ದವು. ಮರಗಳು, ಪಕ್ಷಿಗಳು, ಹಣ್ಣುಗಳು, ನವಿಲುಗಳು, ಆನೆಗಳು, ಬಂಗಾರದ ರಥಗಳಿಂದ ಲಂಕೆ ಅತ್ಯಂತ ರಮಣೀಯವಾಗಿತ್ತು. ರಾತ್ರಿಯ ಚಂದ್ರ ಬೆಳದಿಂಗಳನ್ನು ಸುರಿಸುತ್ತಾ ಲೋಕದ ಪಾಪವನ್ನು ಹೋಗಿಸುವವನಂತಿದ್ದ. ಚಂದ್ರನ ಬೆಳಕಿನಲ್ಲಿ ಹನುಮ ಲಂಕಾಪಟ್ಟಣದ ಬೀದಿಗಳಲ್ಲಿ ಸೀತೆಯನ್ನು ಹುಡುಕಲು ಶುರುಮಾಡಿದ. 

ಲಂಕೆಯಲ್ಲಿದ್ದ ಕೆಲವು ದೀಕ್ಷಿತರು ತಲೆಯಲ್ಲಿದ್ದ ಕೂದಲನ್ನು ತೆಗೆಸಿಕೊಂಡಿದ್ದರು. ಕೆಲವರು ಎತ್ತಿನ ಚರ್ಮವನ್ನು ಕಟ್ಟಿಕೊಂಡಿದ್ದರು. ಕೆಲವರು ದರ್ಭೆಗಳನ್ನು, ಕೆಲವರು ಅಗ್ಗಿಷ್ಠಿಕೆಗಳನ್ನು ಹಿಡಿದಿದ್ದರು. ಕೆಲವರು ಪಕ್ಕದವನಿಗೆ ತಮ್ಮ ಛಾತಿಯನ್ನು ತೋರಿಸುತ್ತಿದ್ದರು. ಕೆಲವರು ಕಣ್ಣಿಗೆ ಕಂಡ ಸ್ತ್ರೀಯರ ಮೆಲೆ ಬೀಳುತ್ತಿದ್ದರು. ಒಬ್ಬರೊನ್ನೊಬ್ಬರು ತಳ್ಳಿಕೊಳ್ಳುತ್ತಿದ್ದರು. ತಮ್ಮ ಭುಜಬಲಗಳನ್ನು ತೋರಿಸಿಕೊಳ್ಳುತ್ತಿದ್ದರು. ಒಬ್ಬ ಶೂಲವನ್ನು, ಒಬ್ಬ ಮುದ್ಗರವನ್ನು, ಒಬ್ಬ ಪರಿಘವನ್ನು ಹೀಗೆ ಒಬ್ಬೊಬ್ಬರು ಒಂದೊಂದು ಆಯುಧವನ್ನು ಹಿಡಿದಿದ್ದರು. 

ಹನುಮ ಪ್ರಹಸ್ತ, ಕುಂಭಕರ್ಣ, ಮಹೋದರ, ವಿರೂಪಾಕ್ಷ, ವಿದ್ಯುನ್ಮಾಲಿ, ವಜ್ರದಂಷ್ಟ, ಸುಖ, ಸಾರಣ, ಇಂದ್ರಜಿತ್, ಜಂಬುಮಾಲಿ, ಸುಮಾಲಿ, ರಸಿಕ್ಮೇತು, ಸೂರ್ಯಕೇತು, ವಜ್ರಕಾಯ, ಧೂಮ್ರಾಕ್ಷ, ಭೀಮ, ಘನ, ಹಸ್ತಿಮುಖ, ಕರಾಳ, ಪಿಶಾಚ, ಮತ್ತ, ಧ್ವಜಗ್ರೀವ, ಸುಕನಾಸ, ವಕ್ರ, ಶಟ, ವಿಕಟ, ಬ್ರಹ್ಮಕರ್ಣ, ದಂಷ್ಟ್ರ, ರೋಮಸ ಮುಂತಾದವರ ಮನೆಗಳೆಲ್ಲಾ ಹೋಗಿ ಹುಡುಕಿದ. ಆ ಸಮಯಗದಲ್ಲಿ ರಾಕ್ಷಸ ಸ್ತ್ರೀಯರು ತಮ್ಮ ಪತಿಯರ ಜೊತೆ ಆನಂದಪಡುತ್ತಿದ್ದರು. ಆ ಸ್ತ್ರೀಯರನ್ನು ನೋಡಿದ ಹನುಮ, ‘ನಮ್ಮ ಸೀತೆ ಹೀಗೆ ಇರಳು. ಅವಳು ಕಾಣಿಸಿದರೂ ಕಾಣಿಸದಂತಿರುವ ಚಂದ್ರರೇಖೆಯಂತಿರುತ್ತಾಳೆ. ಮಣ್ಣುಹಿಡಿದ ಬಂಗಾರದಂತಿರುತ್ತಾಳೆ. ಬಾಣದಿಂದ ಬಿದ್ದ ನೋವಿನಂತಿರುತ್ತಾಳೆ. ವಾಯುವಿನಿಂದ ಮುಚ್ಚಲ್ಪಟ್ಟ ಮೇಘದಂತಿರುತ್ತಾಳೆ’ ಎಂದುಕೊಳ್ಳುತ್ತಾ ರಾವಣಾಸುರನ ಪ್ರಾಸಾದದ ಬಳಿ ಬಂದ. 

ಅದು ರಾಕ್ಷಸೇಂದ್ರನಾದ ರಾವಣನ ಅಂತಃಪುರ. ಅದರ ಸುತ್ತ ಮೊದಲ ಪದರದಲ್ಲಿ ಕುದುರೆಯ ಮೇಲೆ ಕೆಲವರು ಕಾವಲು ಕಾಯುತ್ತಿದ್ದರು. ಎರಡನೇ ಪದರದಲ್ಲಿ ಆನೆಯ ಮೇಲೆ ಕಾವಲು ಕಾಯುತ್ತಿದ್ದರು. ಅದರೊಳಗಿನ ಪದರದಲ್ಲಿ ಕೆಲವರು ಕತ್ತಿಹಿಡಿದು ತಿರುಗುತ್ತಿದ್ದರು. ನಂತರದಲ್ಲಿ ರಾವಣ ನಿದ್ದೆಯಿಂದ ಎದ್ದ ನಂತರ ಅವನ ಮೈಗೆ ಬಳಿಯಲು ಕೆಲವರು ಚಂದನವನ್ನು ತೇಯುತ್ತಿದ್ದರು. ಅದಕ್ಕಿಂತ ಮುಂದೆ ರಾವಣ ಧರಿಸುವ ಪುಷ್ಪಮಾಲೆಗಳಿದ್ದವು. ಅದರ ಹಿಂದೆ ರಾವಣನಿಗೆ ಚೆನ್ನಾಗಿ ನಿದ್ದೆ ಬರುವಂತೆ ಮಾಡಲು ಕೆಲವರು ವಾದ್ಯಗಳನ್ನು ಹಿಡಿದು ಸಂಗೀತವನ್ನು ನುಡಿಸುತ್ತಿದ್ದರು. 

‘ಇನ್ನೂ ಕೆಲವರು ನಿದ್ದೆ ಮಾಡಿಲ್ಲ. ಎಲ್ಲರೂ ಮಲಗಿದ ಮೆಲೆ ಅಂತಃಪುರವನ್ನು ಪ್ರವೇಶಿಸುತ್ತೇನೆ’ ಎಂದುಕೊಂಡು ಹನುಮ ಹೊರಗೆ ಬಂದು ಕೆಲವು ಮನೆಗಳನ್ನು ಹುಡುಕಿದ. ಮನೆಗಳಲ್ಲಿದ್ದ ರಾಕ್ಷಸರು ಲಂಕೆಗೆ ಪೂಜೆ ಮಾಡುತ್ತಾ ಗಂಟೆ, ಶಂಖ, ಭೇರಿಗಳನ್ನು ಬಾರಿಸುತ್ತಿದ್ದರು. ಆ ಮನೆಗಳನ್ನು ನೋಡಿದ ಹನುಮ ತಾನು ಲಂಕೆಗೆ ಬಂದನೋ, ಸ್ವರ್ಗಕ್ಕೆ ಬಂದನೋ ಎಂದು ಅನುಮಾನ ಪಟ್ಟ. ಇಂದ್ರನಿಗಿದ್ದ ಭೋಗಗಳೆಲ್ಲ ಲಂಕೆಯಲ್ಲಿತ್ತು. ಎಂತಹ ಪಂಡಿತನಾದರೂ ಲಂಕೆಯಲ್ಲಿದ್ದ ಮನೆಗಳಲ್ಲಿ ಯಾವ ದೋಷವನ್ನೂ ಕಂಡುಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಆ ಮನೆಗಳನ್ನು ನೋಡಿದರೆ ದೇವತೆಗಳಿಗೂ ಪೂಜೆ ಮಾಡಬೇಕೆನಿಸುತ್ತಿತ್ತು. ಮನೆಗಳ ಕಿಟಕಿಗಳೂ ವಜ್ರಗಳಿಂದ ಮಾಡಲ್ಪಟ್ಟಿದ್ದವು. ಲಂಕೆಯ ವೈಭವವನ್ನು ಹನುಮ ಬಲದಿಂದ - ಲಂಕೆಯ ಸೌಂದರ್ಯದ ಮಧ್ಯೆ ಸೀತೆಯನ್ನು ಪತ್ತೆಹಚ್ಚಲೇಬೇಕೆಂಬ ಧೃಢ ಮನಸ್ಸಿನ ಬಲದಿಂದ - ನೋಡಿದ. ಮನೆಗಳನ್ನೆಲ್ಲ ಹುಡುಕಿದ ಮೇಲೆ ಹನುಮ ನಿಧಾನವಾಗಿ ರಾವಣನ ಅಂತಃಪುರವನ್ನು ಪ್ರವೇಶಿಸಿದ. 

ಮೊದಲಿಗೆ ರಾವಣನ ಪುಷ್ಪಕ ವಿಮಾನವನ್ನು ಹತ್ತಿದ (ಪುಷ್ಪಕ ವಿಮಾನವನ್ನು ವಿಶ್ವಕರ್ಮ ನಿರ್ಮಿಸಿ ಬ್ರಹ್ಮದೇವರಿಗೆ ಕೊಟ್ಟ. ಕುಬೇರನು ಬ್ರಹ್ಮದೇವರ ಕುರಿತು ತಪಸ್ಸು ಮಾಡಿದಾಗ, ಅವನ ತಪಸ್ಸಿಗೆ ಮೆಚ್ಚಿ ಬ್ರಹ್ಮದೇವರು ಅದನ್ನು ಕುಬೇರನಿಗೆ ಕೊಟ್ಟರು. ರಾವಣ ಕುಬೇರನ ಮೆಲೆ ಯುದ್ದ ಮಾಡಿ ಅದನ್ನು ಪಡೆದುಕೊಂಡ ಪುಷ್ಪಕ ವಿಮಾನದಲ್ಲಿ ಕೂತು ಮನಸ್ಸಿನಲ್ಲಿ ಏನಾದರೂ ಅಂದುಕೊಂಡರೆ, ಕಣ್ಣುರೆಪ್ಪೆಯಾಡಿಸುವಷ್ಟರಲ್ಲಿ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತದೆ). ಪುಷ್ಪಕ ವಿಮಾನದಲ್ಲಿದ್ದ ಶಿಲ್ಪಗಳು ವಜ್ರ-ವೈಢೂರ್ಯಗಳಿಂದ ಮಾಡಲ್ಪಟ್ಟಿದ್ದವು. ಅದರಲ್ಲಿ ಸರೋವರಗಳು, ಪದ್ಮಗಳು, ಉದ್ಯಾನವನಗಳು, ಬಂಗಾರದಿಂದ ಮಾಡಿದ ವೇದಿಕೆಗಳು, ಆಸನಗಳು, ಹಾಸಿಗೆಗಳು, ವಿಹರಿಸಲು ಪ್ರದೇಶಗಳು ಇದ್ದವು. ಅದರಲ್ಲಿ ಎಷ್ಟು ಜನ ಹತ್ತಿದರೂ ಮತ್ತೊಬ್ಬನಿಗೆ ಜಾಗವಿತ್ತು! ಅದರಲ್ಲಿದ್ದ ಹೊದಿಕೆಯ ಮೇಲೆ ಭೂಮಂಡವನ್ನೆಲ್ಲಾ ಚಿತ್ರೀಕರಿಸಿತ್ತು. ಭೂಮಿಯಲ್ಲಿದ್ದ ಎಲ್ಲ ಪರ್ವತಗಳು, ಅವುಗಳ ಮೇಲಿನ ಮರಗಳು, ಅವುಗಳಲ್ಲಿದ್ದ ಹೂಗಳನ್ನೂ ಚಿತ್ರೀಕರಿಸಲಾಗಿತ್ತು. ಅದರ ಪಕ್ಕದಲ್ಲಿ ನಾಲ್ಕು ಕೈಗಳಿರುವ ಲಕ್ಷ್ಮಿದೇವಿ ಪದ್ಮಾಸನ ಹಾಕಿಕೊಂಡು ಕೂತಂತೆ ಮತ್ತು ಎರೆಡು ಆನೆಗಳು ಕಲಶಗಳನ್ನು ಹಿಡಿದು ಪದ್ಮಗಳಿಂದ ಲಕ್ಷ್ಮಿದೇವಿಯನ್ನು ಅಭಿಷೇಕ ಮಾಡುವಂತೆ ಚಿತ್ರ ಬರೆಯಲಾಗಿತ್ತು.

ಹನುಮಂತ, ‘ಸೀತಮ್ಮ ಇಂತಹ ಸ್ಥಳದಲ್ಲಿ, ಇಷ್ಟು ರಾಕ್ಷಸರ ಮಧ್ಯ ಆನಂದವಾಗಿ ಇರಲಾರಳು. ಅವಳ ಕಣ್ಣಿಂದ ಬರುವ ಬಿಸಿನೀರು ಅವಳ ಎದೆಯ ಮೇಲೆ ಹರಿಯುತ್ತಿರುತ್ತದೆ. ರಾಮ ಕಟ್ಟಿದ ದಿವ್ಯ ಮಂಗಳಸೂತ್ರ ಅವಳ ಕತ್ತಿನಲ್ಲಿರುತ್ತದೆ. ಹುಬ್ಬು ಕಪ್ಪಾಗಿ, ಒತ್ತಾಗಿ ಇರುತ್ತದೆ. ಕಣ್ಣುಗಳು ಪರಿಪೂರ್ಣವಾದ ಪ್ರೀತಿಯನ್ನು ಸೂಸುತ್ತವೆ. ವನದಲ್ಲಿರುವ ನವಿಲಿನಂತೆ ಸೀತೆ ಇರುತ್ತಾಳೆ’ ಎಂದುಕೊಂಡು ರಾವಣ ಮಲಗುವ ಶಯನಾಗಾರದ ಬಳಿ ನಡೆದ.

ರಾವಣ ಮಲಗಿದ್ದ ಕೋಣೆಯ ಗೋಡೆಗಳು ಕಂಚಿನಿಂದ ಮಾಡಲ್ಪಟ್ಟಿದ್ದವು. ಅವನು ಮಲಗಿದ್ದ ತಲ್ಪ, ಅವನ ಹಾಕಿಕೊಂಡಿದ್ದ ಆಭರಣಗಳು ಬಂಗಾರದವಾಗಿದ್ದವು. ತಲ್ಪಕ್ಕೆ ವಜ್ರ ವೈಢೂರ್ಯಗಳಿಂದ ಮಾಡಿದ್ದ ಮೆಟ್ಟಿಲಿತ್ತು. ಅಲ್ಲಿದ್ದ ಸ್ತ್ರೀಯರು ಕೆಂಪು ಬಂಗಾರದ ಆಭರಣಗಳನ್ನು ಧರಿಸಿದ್ದರು. ಗೋಡೆಗಳ ಮೇಲಿದ್ದ ಕಂಚಿನಿಂದ ಬಂದ ಬೆಳಕು ಬಂಗಾರದ ಆಭರಣಗಳಿಂದ ಪ್ರತಿಫಲಿಸಿದ ಬೆಳಕಿನ ಜೊತೆ ಸೇರಿ ಅಗ್ನಿಯಂತೆ ಪ್ರಜ್ವಲಿಸುತಿತ್ತು. ಕಂಚಿನ ಪ್ರತಿಮೆಗಳು ಜೂಜಿನಲ್ಲಿ ಸೋತಿದ್ದರೂ ಪಕ್ಕದವನ ಆಟವನ್ನು ನೋಡುವವನಂತೆ ನಿಂತಿದ್ದವು. ಅಲ್ಲಿದ್ದ ಸ್ತ್ರೀಯರು ಒಬ್ಬರ ಮೇಲೊಬ್ಬರು ಜಾರಿದ ವಸ್ತ್ರಗಳಿಂದ ಮಲಗಿದ್ದರು. ಹಾಗೆ ಎಷ್ಟೋ ಸ್ತ್ರೀಯರು ಮದವಿಹ್ವಲರಾಗಿ, ರಾವಣನ ಜೊತೆ ಕಾಮಭೋಗವನ್ನು ಅನುಭವಿಸಿ, ಮದ್ಯಪಾನ ಮಾಡಿ, ಮತ್ತಿನಿಂದ ಬಳಲಿ ನಿದ್ರಿಸುತ್ತಿದ್ದರು. ಅವರಾರೂ ಕೀಳು ಜಾತಿಯ ಸ್ತ್ರೀಯರಲ್ಲ. ನಡತೆಗೆಟ್ಟವರಲ್ಲ. ಅವರು ರಾವಣನನ್ನು ಬಯಸಿ ಬಂದವರು. ಕೆಲವು ಸ್ತ್ರೀಯರು ಮಲಗಿದ್ದ ರಾವಣನ ಸುತ್ತ ಪರಿಮಳ ದ್ರವ್ಯಗಳನ್ನು ಸೇರಿಸಿ ಚಾಮರವನ್ನು ಬೀಸುತ್ತಿದ್ದರು. 

ಹನುಮ ರಾವಣನ ಬಳಿ ಹೋದಾಗ, ರಾವಣನ ರೋಮಕೂಪದಲ್ಲಿನ ಬ್ರಹ್ಮತೇಜಸ್ಸು ಅವನನ್ನು ದೂರಕ್ಕೆ ತಳ್ಳಿಬಿಟ್ಟಿತು! ಸ್ವಲ್ಪ ದೂರ ಹೋಗಿ ಒಂದು ವೇದಿಕೆಯ ಮೇಲೆ ನಿಂತು ರಾವಣನನ್ನು ನೋಡಿದ ಹನುಮನಿಗೆ ಯಾವುದೋ ಒಂದು ಕಪ್ಪಾದ ಮಬ್ಬು ಆಕಾಶದಿಂದ ಇಳಿದು ತಲ್ಪದ ಮೇಲೆ ಮಲಗಿದಂತೆ ಭಾಸವಾಯಿತು! ರಾವಣನ ಕಣ್ಣುಗಳು ಕೆಂಪಾಗಿದ್ದವು. ಕಿವಿಯ ಕುಂಡಲಗಳು ಪ್ರಕಾಶಿಸುತ್ತಿದ್ದವು. ಅರೆ ಮುಚ್ಚಿದ ಕಣ್ಣುಗಳು, ದೊಡ್ಡ ಕೈಗಳು, ಉತ್ತಮವಾದ ವಸ್ತ್ರಗಳಿಂದ ರಾವಣ ಹಾವಿನಂತೆ ನಿದ್ದೆಹೋಗುತಿದ್ದ. ವಿವಿಧ ಯುದ್ಧಗಳಲ್ಲಿ ಆದ ಗಾಯದ ಮಚ್ಛೆಗಳು ಅವನ ಮೈಮೇಲಿದ್ದವು. ಕೈ ಬೆರಳುಗಳು ಐದು ತಲೆಯ ಹಾವಿನಂತಿತ್ತು. ಅವನ ಸುತ್ತ ಒಬ್ಬಳು ಮೃದಂಗವನ್ನು ಹಿಡಿದು ನಿದ್ರಿಸುತ್ತಿದ್ದರೆ, ಒಬ್ಬಳು ವೀಣೆ, ಒಬ್ಬಳು ಕೊಳಲು, ಹೀಗೆ ಒಬ್ಬೊಬ್ಬರು ಒಂದೊಂದು ವಾದ್ಯವನ್ನು ಹಿಡಿದಿದ್ದರು. ಅವರೆಲ್ಲರನ್ನೂ ಒಬ್ಬೊಬ್ಬರನ್ನಾಗಿ ಹನುಮ ನೋಡುತ್ತಾ ಹೊರಟ. 


ರಾವಣನಿಂದ ಸ್ವಲ್ಪ ದೂರದಲ್ಲಿ ಬಂಗಾರದ ಮಂಚದ ಮೇಲೆ ಒಬ್ಬ ಸ್ತ್ರೀ ಮಲಗಿದ್ದಳು. ಅವಳು ರಾವಣನ ಪತ್ನಿ ಮಂಡೋದರಿ. ಅವಳನ್ನು ನೋಡಿದ ಹನುಮ ಅವಳು ಸೀತೆಯೇ ಎಂದುಕೊಂಡು ತನ್ನ ಭುಜ ತಟ್ಟಿಕೊಂಡು, ಬಾಲಕ್ಕೆ ಮುತ್ತಿಟ್ಟು, ಎಗರಾಡುತ್ತ ಸಂತೋಷದಿಂದ ತನ್ನ ಕೋತಿ ಬುದ್ದಿಯನ್ನು ಹೊರಹಾಕಿದ. ಆದರೆ ಮರುಕ್ಷಣದಲ್ಲೇ, 'ರಾಮನಿಲ್ಲದಿದ್ದಾಗ ಸೀತಮ್ಮ ಇಷ್ಟು ಒಳ್ಳೆಯ ಸೀರೆಯನ್ನುಟ್ಟು ರಾವಣನ ಹತ್ತಿರ ಹಾಯಾಗಿ ನಿದ್ದೆ ಹೋಗುತ್ತಾಳಾ? ನನ್ನ ಬುದ್ದಿಗೇನೋ ವೈಕಲ್ಯ ಬಂದಿದೆ. ಇವಳು ಸೀತೆಯಾಗಲು ಸಾಧ್ಯವೇ ಇಲ್ಲ' ಎಂದುಕೊಂಡು ಮುಂದೆ ಹೋದ. ಮುಂದೆ ವಿಧವಿಧವಾದ ಬಂಗಾರದ, ಬೆಳ್ಳಿಯ ಪಾತ್ರೆಗಳು, ಮಾಣಿಕ್ಯಗಳು, ಅರ್ಧ ಕುಡಿದು ಬಿಟ್ಟ ಪಾತ್ರೆಗಳು, ಹೂವಿನಿಂದ, ಹಣ್ಣುಗಳಿಂದ, ಜೇನಿನಿಂದ ತೆಗೆದ ಸುರೆಗಳಿದ್ದವು. ಸ್ತ್ರೀಪುರುಷರು ಮತ್ತಿನಲ್ಲಿ ಒಬ್ಬರ ಮೇಲೊಬ್ಬರು ಬಿದ್ದಿದ್ದರು. ಅವರೆಲ್ಲರನ್ನೂ ನೋಡುತ್ತಾ ಹನುಮ ಮುಂದೆ ಹೋದ. ಅವನಿಗೆ ಆಹಾರ ಶಾಲೆ ಕಾಣಿಸಿತು. ನವಿಲು, ಕೋಳಿ, ಮೇಕೆ, ಕುರಿ, ಕಾಡು ಹಂದಿ ಮುಂತಾದವುಗಳ ಮಾಂಸ, ವಿವಿಧ ಪದಾರ್ಥಗಳು ಅಲ್ಲಿದ್ದವು. ಹನುಮ ಅಲ್ಲೆಲ್ಲ ಹುಡುಕಿದ. ಮತ್ತೆ ಪುಷ್ಪಕ ವಿಮಾನದಲ್ಲಿ ಹೋಗಿ ನೋಡಿದ. ಸೀತೆ ಎಲ್ಲಿಯೂ ಕಾಣಿಸಲಿಲ್ಲ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ