೭೨. ತ್ರಿಜಟೆಯ ಸ್ವಪ್ನ
ನಿಧಾನವಾಗಿ ಬೆಳಗಾಯಿತು. ಬ್ರಾಹ್ಮೀ ಮಹೂರ್ತದಲ್ಲಿ ಲಂಕೆಯ ಬ್ರಹ್ಮರಾಕ್ಷಸರು ವೇದ ಮಂತ್ರಗಳು ಪಠಿಸುತ್ತಿರುವಾಗ, ಮಂಗಳವಾದ್ಯಗಳ ನಡುವೆ ರಾವಣ ಎದ್ದ (ಯಜ್ಞ-ಯಾಗಾದಿಗಳನ್ನು ಮಾಡುವಾಗ ಪಕ್ಷಪಾತ ಬುದ್ದಿಯಿಂದ ಮಂತ್ರಗಳನ್ನು ಪಠಿಸುವವರು ಬ್ರಹ್ಮರಾಕ್ಷಸರಾಗಿ ಹುಟ್ಟುತ್ತಾರೆ). ಎದ್ದು ತನ್ನ ವಸ್ತ್ರಗಳನ್ನು ಸರಿಪಡಿಸಿಕೊಂಡ. ಆಗ ಅವನಿಗೆ ಸೀತೆಯ ನೆನಪಾಗಿ ವಿಶೇಷವಾದ ಕಾಮವುಂಟಾಯಿತು. ಆಭರಣಗಳನ್ನು ಧರಿಸಿ, ಸ್ನಾನವೂ ಮಾಡದೆ ಅಶೋಕವನದ ಕಡೆ ಹೊರಟ. ರಾತ್ರಿ ಅವನ ಜೊತೆ ಕಳೆದ ಸ್ತ್ರೀಯರೂ ಅವನ ಹಿಂದೆ ಮದ್ಯದ ಪಾತ್ರೆ, ಛತ್ರಿ ಮುಂತಾದವುಗಳನ್ನು ಹಿಡಿದು ಹೊರಟರು. ಮಂಗಳ ವಾದ್ಯಗಳೂ ಹೊರಟವು. ಕೆಲವು ಅಂಗರಕ್ಷಕರು ಕತ್ತಿ ಹಿಡಿದು ಹೊರಟರು. ಅಲ್ಲಿಯವರೆಗೂ ಮರದ ಕೆಳಗೆ ತಲೆ ತಗ್ಗಿಸಿ ಕೂತಿದ್ದ ಸೀತೆ, ರಾವಣನನ್ನು ನೋಡಿ, ಅವನಿಗೆ ಉದ್ರೇಕವಾಗುವಂತಹ ಅಂಗಗಳು ಕಾಣಿಸದಂತೆ ಮುದುರಿಕೊಂಡು, ಅವಮಾನದಿಂದ ಯಜ್ಞವೇದಿಯಲ್ಲಿ ಉರಿಯುತ್ತಿರುವವಳಂತೆ ಕುಳಿತಳು. ಶ್ವೇತವಸ್ತ್ರವನ್ನು ಧರಿಸಿದ ರಾವಣನನ್ನು ಕಂಡು ಹನುಮ, ಅವನ ತೇಜಸ್ಸನ್ನು ತಡೆದುಕೊಳ್ಳಲು ಸಾಧ್ಯವಾಗದೆ ಎಲೆಗಳನ್ನು ಅಡ್ಡವಿಟ್ಟುಕೊಂಡು ಕುಳಿತ.
ನೇರವಾಗಿ ಸೀತೆಯ ಬಳಿ ಬಂದ ರಾವಣ ಅವಳನ್ನು ಕುರಿತು, "ಸೀತಾ ನಿನ್ನ ಸ್ತನಗಳು ಅಂದವಾಗಿವೆ. ನಿನ್ನ ತೊಡೆಗಳು ಆನೆಯ ಸೊಂಡಿಲಿನಂತಿವೆ. ನಿನಗೆ ಭಯವೇಕೆ? ನನ್ನ ಸಹಿತ ಇಲ್ಲಿರುವವರೆಲ್ಲರೂ ರಾಕ್ಷಸರೇ. ೧೦೦ ಯೋಜನಗಳ ಸಮುದ್ರವನ್ನು ದಾಟಿ ಬರಲು ಯಾರಿಗೂ ಸಾಧ್ಯವಿಲ್ಲ. ನಾನು ಎಲ್ಲ ಲೋಕಗಳನ್ನೂ ಸೋಲಿಸಿದ್ದೇನೆ. ಯಾರಿಗೂ ನನ್ನನ್ನು ಕಣ್ಣೆತ್ತಿ ನೋಡುವ ಧೈರ್ಯವಿಲ್ಲ. ನಿನಗೆ ತಪ್ಪು ಮಾಡಲು ಭಯವೇಕೆ!? ಯಾರಾದರೂ ಉತ್ತಮವಾದ ಸ್ತ್ರೀಯರು ಸಿಕ್ಕರೆ ಅವರನ್ನು ಎತ್ತಿಕೊಂಡು ಬಂದು ಅನುಭವಿಸುವುದು ರಾಕ್ಷಸ ಧರ್ಮ. ನನ್ನ ಧರ್ಮವನ್ನು ನಾನು ಪಾಲಿಸುತ್ತಿದ್ದೇನೆ. ನಾನೇನೋ ತಪ್ಪು ಮಾಡಿದವನಂತೆ ನೋಡಬೇಡ. ಮನುಷ್ಯನಿಗೆ ಸ್ವಲ್ಪದಿನ ಮಾತ್ರವೇ ಯೌವನವಿರುತ್ತದೆ. ನೀನು ಹೀಗೆ ಕೆಳಗೆ ಕೂತು ಉಪವಾಸ ಮಾಡಿದರೆ ನಿನ್ನ ಯೌವನ ಹಾಳಾಗುತ್ತದೆ. ಆಗ ನಾನು ನಿನ್ನನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಯೌವನದಲ್ಲಿದ್ದಾಗಲೇ ಭೋಗಗಳನ್ನು ಅನುಭವಿಸಬೇಕು. ನಾನು ನಿನ್ನನ್ನು ಪಡೆಯಬೇಕೆಂದುಕೊಂಡ ಉತ್ತರಕ್ಷಣದಲ್ಲೇ ಪಡೆಯಬಹುದು. ಆದರೆ ನನಗೆ ಅದು ಬೇಡ. ನೀನಾಗಿಯೇ ಬರಬೇಕು. ಒಂಟಿ ಜಡೆ ಕಟ್ಟಿಕೊಂಡು, ಮಲಿನವಾದ ಬಟ್ಟೆ ಉಟ್ಟು ಭೂಮಿಯ ಮೇಲೆ ಮಲಗಿ ಉಪವಾಸ ಮಾಡುವ ಅವಶ್ಯಕತೆ ನಿನಗೇನು? ಅಂತಃಪುರಕ್ಕೆ ಬಂದು ಅಲ್ಲಿರುವ ವಸ್ತ್ರ, ಆಭರಣಗಳನ್ನು ನೋಡು. ನಿನಗೆ ೭೦೦೦ ಸ್ತ್ರೀಯರು ದಾಸಿಯರಾಗಿರುತ್ತಾರೆ. ಆ ರಾಮ ದೀನ. ಅಡವಿಗಳಲ್ಲಿ ತಿರುಗುತ್ತಿರುತ್ತಾನೆ. ಬದುಕಿದ್ದಾನೋ ಇಲ್ಲವೋ ಅದೂ ತಿಳಿಯದು. ಇಂತಹ ಪರಿಸ್ಥಿತಿಯಲ್ಲಿ ಕೇವಲ ನರನಾದ ಅವನು ೧೦೦ ಯೋಜನಗಳ ಸಮುದ್ರ ದಾಟಿ ಬರುವುದು ಅಸಾಧ್ಯವಾದ ಮಾತು. ನನ್ನ ಜೊತೆ ಹಾಯಾಗಿರು. ಬೇಕಾದ ಆಭರಣಗಳನ್ನು ಧರಿಸು. ಬೇಕಾದರೆ ನಿನ್ನ ಬಂಧುಗಳನ್ನು ಕರೆದು ಅವರಿಗೂ ಕೊಡು" ಎಂದ.
ಅವನ ಮಾತು ಕೇಳಿ ಸೀತೆ ಕಿರುನಗೆ ಬೀರಿ ಒಂದು ಒಣ ತೃಣವನ್ನು ಅವಳಿಗೂ ರಾವಣನಿಗೂ ಮಧ್ಯವಿಟ್ಟು, "ರಾವಣಾ, ನಿನ್ನ ಮನಸ್ಸನ್ನು ನಿನ್ನವರ ಬಳಿಯೇ ಇಟ್ಟುಕೋ. ನಿನಗೆ ಅನೇಕ ಪತ್ನಿಯರಿದ್ದಾರೆ. ಅವರ ಜೊತೆ ಸುಖವಾಗಿರು. ಬೇರೆಯವರ ಪತ್ನಿಯರ ಮೇಲೆ ಆಸೆಪಡಬೇಡ. ಪ್ರಾಣವಿರುವವರೆಗೂ ಹೇಗಾದರೂ ಬದುಕಬಹುದು. ಆದರೆ ಸಾವು ನಿನ್ನ ಕೈಲಿಲ್ಲ. ನೀನು ಸುಖವಾಗಿ ಬದುಕಬೇಕಾದರೂ, ಸಾಯಬೇಕಾದರೂ ರಾಮನ ಅನುಗ್ರಹ ಬೇಕು. ನೀನು ಮಾಡುವ ಪಾಪಗಳಿಗೆ ಸರಿಯಾದ ಪ್ರಾಯಶ್ಚಿತ್ತ ಅನುಭವಿಸುತ್ತೀಯ. ನನ್ನನ್ನು ರಾಮನಿಗೆ ಒಪ್ಪಿಸಿ ಆರಾಮವಾಗಿರು. ನೀನು ಸೀತೆಯನ್ನು ಹೊತ್ತುಕೊಂಡು ಬರುವುದೆಂದರೇನು? ಸೂರ್ಯನಿಂದ ಸೂರ್ಯಕಾಂತಿಯನ್ನು ಬೇರ್ಪಡಿಸಲಾಗದಂತೆ, ವಜ್ರದಿಂದ ವಜ್ರದ ಪ್ರಭೆಯನ್ನು ತೆಗೆಯಲಾಗದಂತೆ, ಹೂವಿನಿಂದ ಅದರ ಪರಿಮಳವನ್ನು ಬೇರೆ ಮಾಡಲಾಗದಂತೆ ನನ್ನನ್ನು ರಾಮನಿಂದ ಬೇರೆ ಮಾಡಲು ನಿನಗೆ ಸಾಧ್ಯವಿಲ್ಲ. ನಿನ್ನನ್ನು ಕೊಲ್ಲಲು ಬ್ರಹ್ಮದೇವರು ಮಾಡಿದ ಉಪಾಯ ನನ್ನ ಅಪಹರಣ! ಪತಿವ್ರತೆಯನ್ನು ಅಪಹರಿಸಿದ ಪಾಪ ಇನ್ನು ಹೋಗುವುದಿಲ್ಲ. ನಾನು ನನ್ನ ತಪಃಶಕ್ತಿಯಿಂದ ನಿನ್ನನ್ನು ಇಲ್ಲೇ ಸುಟ್ಟು ಭಸ್ಮ ಮಾಡಬಲ್ಲೆ. ಆದರೆ ರಾಮನೇ ಬಂದು ನನ್ನನ್ನು ಕಾಪಾಡುತ್ತಾನೆಂದು ಕಾಯುತ್ತಿದ್ದೇನೆ. ಈ ಊರಿನಲ್ಲಿ ಧರ್ಮಬೋಧೆ ಮಾಡುವವರು ಯಾರಾದರೂ ಇದ್ದಾರಾ? ಇದ್ದರೂ ನೀನು ಕೇಳುತ್ತೀಯಾ? ಕೇಳಿದರೂ ಆಚರಿಸುತ್ತೀಯಾ?" ಎಂದಳು.
ರಾವಣನಿಗೆ ಕೋಪಬಂದು, "ಯಾವ ಸ್ತ್ರೀಯ ಮೇಲೆ ಅತಿಯಾದ ಕಾಮವಿರುತ್ತದೆಯೋ, ಅವಳನ್ನು ಉಪೇಕ್ಷಿಸುವ ಸ್ವಭಾವವೂ ಇರುತ್ತದೆ. ನನ್ನ ಹಿಂದೆ ಇಷ್ಟು ಸ್ತ್ರೀಯರು ಬಿದ್ದಿದ್ದಾರೆ. ನನ್ನನ್ನು ಸೇರಿದರೆ ಐಶ್ವರ್ಯ, ಸಿಂಹಾಸನ ಎಲ್ಲವನ್ನೂ ಕೊಡುತ್ತೇನೆಂದರೂ ಅಮರ್ಯಾದೆಯಿಂದ ಮಾತಾಡುತ್ತಿದ್ದೀಯ. ನನ್ನ ಬಗ್ಗೆ ನಿನಗೆ ಇನ್ನೂ ತಿಳಿದಿಲ್ಲ" ಎಂದು ಅಲ್ಲಿದ್ದ ರಾಕ್ಷಸ ಸ್ತ್ರೀಯರಿಗೆ, "ಇವಳಿಗೆ ಸಾಮ, ದಾನ, ಭೇದಗಳನ್ನು ಪ್ರಯೋಗಿಸಲು ನಿಮಗೆ ಹೇಳಿದೆ. ಇವಳು ಬಗ್ಗುತ್ತಿಲ್ಲ. ೧೦ ತಿಂಗಳು ಕಳೆದಿದೆ. ಇನ್ನು ಎರೆಡು ತಿಂಗಳಲ್ಲಿ ಇವಳು ನನ್ನ ದಾರಿಗೆ ಬಂದರೆ ಸರಿ. ಇಲ್ಲದಿದ್ದರೆ ದಂಡವಾದರೂ ಉಪಯೋಗಿಸಿ ದಾರಿಗೆ ತನ್ನಿ" ಎಂದ.
ರಾವಣನ ಜೊತೆಯೇ ಬಂದ ಅವನ ಪತ್ನಿಯರಲ್ಲೊಬ್ಬಳಾದ ಧಾನ್ಯಮಾಲಿನಿ ಅವನನ್ನು ಗಟ್ಟಿಯಾಗಿ ತಬ್ಬಿ, "ನಿನ್ನ ಮೇಲೆ ಮನಸ್ಸಿರುವ ಸ್ತ್ರೀಯನ್ನು ಭೋಗಿಸಿದರೆ ಆನಂದ. ನಿನ್ನ ಮೇಲೆ ಮನಸ್ಸಿಲ್ಲದ ಇವಳ ಬಳಿಯೇಕೆ? ನಡಿ ಹೋಗೋಣ" ಎಂದಾಗ ರಾವಣ ನಗುತ್ತ ಅಲ್ಲಿಂದ ಹೊರಟುಹೋದ.
ರಾವಣ ಹೋದ ನಂತರ ಅಲ್ಲಿದ್ದ ರಾಕ್ಷಸ ಸ್ತ್ರೀಯರು ಸೀತೆಯ ಸುತ್ತ ಸೇರಿ, "ಸೀತಾ! ಯಾವುದನ್ನೂ ಇಷ್ಟು ಅತಿ ಮಾಡಬಾರದು! ರಾವಣ ಸಾಮಾನ್ಯನಲ್ಲ, ಅವನು ಬ್ರಹ್ಮಕುಮಾರರಲ್ಲಿ ನಾಲ್ಕನೆಯವನಾದ ಪುಲಸ್ತ್ಯಬ್ರಹ್ಮನ ಮಗನಾದ ವಿಶ್ವಾವಸುವುನ ಮಗ. ರಾವಣಬ್ರಹ್ಮ! ಲೋಕದಲ್ಲಿ ಎಲ್ಲರನ್ನೂ ಜಯಿಸಿದವನು. ಬ್ರಹ್ಮನ ಕುರಿತು ತಪಸ್ಸು ಮಾಡಿ ವಿಶೇಷವಾದ ವರಗಳನ್ನು ಪಡೆದಿದ್ದಾನೆ. ಅಂತಹವನ ಜೊತೆ ಹಾಯಾಗಿ ಇರುವುದು ಬಿಟ್ಟು ಇದೇನು ನಿನ್ನ ಮೂರ್ಖತನ! ಹೋಗಲಿ ಬಿಡು ನಿಧಾನವಾಗಿ ಮನಸ್ಸು ಬದಲಾಯಿಸಿಕೊಳ್ಳುತ್ತಾಳೆಂದುಕೊಂಡರೆ ಇದೇನು? ನಿನಗೆಷ್ಟು ಹೇಳಬೇಕು?" ಎಂದು ಗದರಿಸಿದರು.
ಸೀತೆ ಹೇಳಿದಳು: "ಐಶ್ವರ್ಯ, ರಾಜ್ಯ, ರೂಪಗಳನ್ನು ನೋಡಿ ಗಂಡ ಎನ್ನುವುದು ನನಗೆ ಸಾಧ್ಯವಿಲ್ಲ. ಸೂರ್ಯ-ಸುವರ್ಚಲ, ವಸಿಷ್ಠ-ಅರುಂಧತಿ, ಶಚಿ-ಇಂದ್ರ, ರೋಹಿಣಿ-ಚಂದ್ರ, ಲೋಪಮುದ್ರೆ-ಅಗಸ್ತ್ಯ, ಸುಕನ್ಯೆ-ಚ್ಯವನ, ಸಾವಿತ್ರು-ಸತ್ಯವಂತ, ಶ್ರೀಮತಿ-ಕಪಿಲರಂತೆ ನಾನು ಮತ್ತು ರಾಮ. ನೀವು ನನ್ನನ್ನು ಕೊಂದು ತಿಂದರೂ ನಾನು ರಾಮನನ್ನು ಬಿಟ್ಟು ಬೇರೆ ಯಾರನ್ನೂ ಕಣ್ಣೆತ್ತಿಯೂ ನೋಡುವುದಿಲ್ಲ. ರಾವಣನನ್ನು ಎಡಗಾಲಿಂದಲೂ ಮುಟ್ಟುವುದಿಲ್ಲ. ನೀವು ಇಂತಹ ಮಾತುಗಳನ್ನು ನನಗೆ ಹೇಳಬಾರದು. ನಾನು ಕೇಳಬಾರದು."
ಸೀತೆಯ ಮಾತಿಗೆ ಪರಿಜ ಎಂಬ ರಾಕ್ಷಸಿ, "ಇವಳನ್ನು ರಾವಣ ಇಲ್ಲಿ ತಂದಿಟ್ಟಾಗಿನಿಂದ ನನ್ನ ಬಾಯಿಯಲ್ಲಿ ನೀರೂರುತ್ತಿದೆ. ಯಾವಾಗ ತಿನ್ನಬಹುದೋ ಎಂದು ಎದುರು ನೋಡುತ್ತಿದ್ದೇನೆ" ಎಂದಳು.
ಏಕಜಟೆ ಎಂಬ ಇನ್ನೊಬ್ಬ ರಾಕ್ಷಸಿ, "ನಾನು ಹೊರಗೆ ಯಾರಾದರೂ ಕೇಳಿಸಿಕೊಳ್ಳುತ್ತಾರೆ ಎಂಬ ಭಯದಿಂದ ಸುಮ್ಮನಿದ್ದೆ. ಹಸಿವಾಗಿರುವವರಿಗೆ ಊಟ ಮುಂದೆ ಇಟ್ಟು ತಿನ್ನಬೇಡವೆಂಬಂತಿದೆ ನನ್ನ ಪರಿಸ್ಥಿತಿ. ಪ್ರಭು ಹೇಗೂ ಇವಳನ್ನು ದಂಡಿಸಬಹುದು ಎಂದಿದ್ದಾರೆ. ಆದ್ದರಿಂದ ಇವಳನ್ನು ಕೊಂದು ತಿಂದುಬಿಡೋಣ. ಇವಳ ಹೃದಯದ ಕೆಳಗಿರುವ ಭಾಗ ನನ್ನದು" ಎಂದಳು.
ಅಜಮುಖಿ ಎಂಬ ರಾಕ್ಷಸಿ ಹೇಳಿದಳು: "ಇವಳನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳೋಣ. ಬೇಗ ಸುರೆ ತೆಗೆದುಕೊಂಡು ಬನ್ನಿ. ಸುರೆ ಕುಡಿಯುತ್ತಾ ಇವಳನ್ನು ತಿನ್ನುತ್ತಾ ನಿಕುಂಭಿಯಂತೆ ನಾಟ್ಯ ಮಾಡೋಣ."
ಅವರ ಮಾತುಗಳನ್ನೆಲ್ಲ ಕೇಳುತ್ತಿದ್ದ ಸೀತೆ, "ಇಲ್ಲಿ ಸಾಯಲೂ ಸ್ವೇಚ್ಛೆಯಿಲ್ಲ" ಎಂದುಕೊಂಡು ಕೂತಿದ್ದ ಜಾಗದಿಂದ ಎದ್ದು ಸ್ವಲ್ಪ ಮುಂದೆ ಹೋಗಿ ಕುಳಿತಳು. ಅಷ್ಟರಲ್ಲಿ ತ್ರಿಜಟೆ ಎಂಬ ರಾಕ್ಷಸಿ ಹಿಂದಿನ ರಾತ್ರಿ ತಾನು ಸ್ವಪ್ನದಲ್ಲಿ ಕಂಡದ್ದನ್ನು ಹೇಳಿದಳು: "ಬೆಳಗಿನಜಾವ ನನಗೊಂದು ಕನಸು ಬಿತ್ತು. ಅದರಲ್ಲಿ ಸಾವಿರ ಹಂಸಗಳು ಹೊತ್ತಿದ್ದ ಶಿಬಿಯ ಮೇಲೆ ಶ್ವೇತ ವಸ್ತ್ರವನ್ನು ಧರಿಸಿ, ಕತ್ತಿನಲ್ಲಿ ಬಿಳಿ ಪುಷ್ಪ ಮಾಲಿಕೆಯನ್ನು ಹಾಕಿಕೊಂಡು ಶ್ರೀರಾಮಚಂದ್ರಮೂರ್ತಿ, ಲಕ್ಷ್ಮಣನ ಜೊತೆ ಆಕಾಶದಲ್ಲಿ ಬಂದು ನಾಲ್ಕು ದಂತಗಳಿರುವ ಆನೆಯ ಮೇಲೆ ಇಳಿದರು. ಆನೆ ಒಂದು ಬಿಳಿಯ ಬೆಟ್ಟದ ಮೇಲೆ ಹೋಯಿತು. ಅಲ್ಲಿ ಹಸಿರು ಸೀರೆಯುಟ್ಟು ಸೀತೆ ಕಾಯುತ್ತಿದ್ದಳು. ರಾಮ ಸೀತೆಗೆ ತನ್ನ ಹಸ್ತವನ್ನು ಚಾಚಿ ಮೇಲೆ ಹತ್ತಿಸಿಕೊಂಡರು. ನಂತರ ವೃಷಭಗಳ ರಥಕ್ಕೆ ಬದಲಾದರು. ಆ ರಥ ಮುಂದೆ ಹೋಗುತ್ತಿದ್ದಾಗ ಸೀತೆ ಸೂರ್ಯ ಚಂದ್ರರಿಗೆ ನಮಸ್ಕಾರ ಮಾಡಿದಳು. ಎಲ್ಲರೂ ಉತ್ತರ ದಿಕ್ಕಿಗೆ ಹೋದರು. ಕ್ಷೀರ ಸಮುದ್ರದ ಮಧ್ಯದಲ್ಲಿ ಒಂದು ಬೆಟ್ಟವಿತ್ತು. ಅದರ ಮೇಲೆ ಒಂದು ಹೇಮಸಿಂಹಾಸನ. ಅದರ ಮೇಲೆ ರಾಮ ಕುಳಿತಿದ್ದರು. ಎಡತೊಡೆಯ ಮೇಲೆ ಸೀತೆ ಕೂತಿದ್ದಳು. ದೇವತೆಗಳು ರಾಮ ಸೀತೆಯರಿಗೆ ಪಟ್ಟಾಭಿಷೇಕ ಮಾಡುತ್ತಿದ್ದರು. ಆಗ ನನಗೆ ಕಂಡಿದ್ದು ಎರೆಡು ಕೈಗಳಿರುವ ರಾಮನಲ್ಲ. ಈ ಸಮಸ್ತ ಬ್ರಹ್ಮಾಂಡ ಯಾರಿಂದ ಉದ್ಭವಿಸಿ ಬರುತ್ತಿದೆಯೋ, ಯಾರಲ್ಲಿ ಲಯವಾಗುತ್ತಿದೆಯೋ, ಆ ಪರಬ್ರಹ್ಮ ಸ್ವರೂಪನಾದ ನಾಲ್ಕು ಕೈಗಳಿರುವ ಶ್ರೀಮಹಾವಿಷ್ಣು.
ಇತ್ತ ಲಂಕೆಯಲ್ಲಿ ರಾವಣ ಕತ್ತೆಗಳ ರಥವನ್ನು ಹತ್ತಿ, ಕೆಂಪು ವಸ್ತ್ರವನ್ನು ಧರಿಸಿ, ಎಣ್ಣೆಯನ್ನು ಕುಡಿಯುತ್ತಾ ಇದ್ದ. ಆ ರಥ ದಕ್ಷಿಣ ದಿಕ್ಕಿನಲ್ಲಿ ಹೋಗುತ್ತಿತ್ತು. ಸ್ವಲ್ಪದೂರ ಹೋದಮೇಲೆ ಅವನು ದಕ್ಷಿಣಕ್ಕೆ ಮುಖಮಾಡಿದಂತೆ ಬಿದ್ದುಬಿಟ್ಟ. ಮೇಲಕ್ಕೆದ್ದು ಕತ್ತಿನಲ್ಲಿ ಕಣಗಿಲೆ ಹೂವಿನ ಮಾಲೆಯನ್ನು ಹಾಕಿಕೊಂಡು ಹುಚ್ಚನಂತೆ ಕೂಗುತ್ತಾ, ಕುಣಿಯುತ್ತಾ ಓಡಿಹೋಗಿ ವಾಸನೆ ಬರುವ ಕಂದಕದಲ್ಲಿ ಬಿದ್ದುಬಿಟ್ಟ. ಆಗ ವಿಕಟ್ಟಾಹಸದಿಂದ ನಗುತ್ತಾ ಕೆಂಪು ವಸ್ತ್ರಗಳನ್ನು ಧರಿಸಿದ ಬೋಳುತಲೆಯ ಸ್ತ್ರೀ ಒಂದು ಪಾಶಹಾಕಿ ರಾವಣನನ್ನು ಹೊರಗೆಳೆದಳು. ಅವಳ ಹಿಂದೆ ಚಪ್ಪಾಳೆ ಹೊಡೆಯುತ್ತಾ, ಕುಣಿಯುತ್ತಾ ರಾವಣ ಹೋದ. ಅವರ ಹಿಂದೆ ಇಂದ್ರಜಿತ್ತು, ಕುಂಭಕರ್ಣ ಮುಂತಾದವರೂ ಹೋದರು. ವಿಭೀಷಣ ಮಾತ್ರ ನಾಲ್ಕು ದಂತಗಳಿರುವ ಆನೆಯನ್ನು ಹತ್ತಿ ಕೂತಿದ್ದ. ನಾಲ್ಕು ಮಂತ್ರಿಗಳಿಂದ ಸೇವಿಸಲ್ಪಡುತ್ತಿದ್ದ.
ಎಲ್ಲಿಂದಲೋ ಬಂದ ಒಂದು ಮಹಾವಾನರ ಲಂಕೆಯನ್ನೆಲ್ಲ ಸುಟ್ಟಿತು. ಎಲ್ಲಿ ನೋಡಿದರೂ, ‘ಅಮ್ಮಾ! ಅಪ್ಪಾ!’ ಎಂಬ ಕೂಗುಗಳೇ ಕೇಳಿಸುತ್ತಿದದವು. ಲಂಕೆಯೆಲ್ಲಾ ಬೂದಿಯಾಗಿತ್ತು. ಇಂತಹ ದೃಶ್ಯವನ್ನು ನಾನು ನನ್ನ ಕನಸಿನಲ್ಲಿ ನೋಡಿದೆ.
ಈ ಸೀತೆಗೆ ಮುಂದೆ ಶುಭವಾಗುತ್ತದೆ. ಆದ್ದರಿಂದಲೇ ನಿಷ್ಕಾರಣವಾಗಿ ಅವಳ ಎಡಗಣ್ಣು, ಎಡ ಭುಜ, ಎಡ ತೊಡೆಗಳು ಅದುರುತ್ತಿವೆ. ಈ ಮರದ ಮೇಲೆ ಪಕ್ಷಿಯೊಂದು ಕುಳಿತು ಕೂಗುತ್ತಿದೆ. ಪಕ್ಷಿ ಕೂಗುವಾಗ ಮರದ ಕೆಳಗೆ ಕುಳಿತ ಸ್ತ್ರೀ ತನ್ನ ಗಂಡನ ಜೊತೆ ಸೇರುತ್ತಾಳೆ. ಸೀತೆಯ ಕಾಂತಿ ತಗ್ಗಿದ್ದರೂ ಅವಳ ಶರೀರದಲ್ಲಿ ಶುಭಶಕುನಗಳು ಕಾಣಿಸುತ್ತಿವೆ. ಇವಳು ಸಾಕ್ಷಾತ್ ಮಹಾಲಕ್ಷ್ಮಿ. ನೀವು ಬದುಕಬೇಕೆಂದಿದ್ದರೆ ಸೀತೆಗೆ ನಮಸ್ಕಾರ ಮಾಡಿ ತಪ್ಪನ್ನು ಒಪ್ಪಿಕೊಳ್ಳಿ. ಅವಳು ತಪ್ಪದೇ ನಿಮ್ಮನ್ನು ಕ್ಷಮಿಸುತ್ತಾಳೆ.“
ತ್ರಿಜಟೆಯ ಮಾತು ಕೇಳಿ ಉಳಿದ ರಾಕ್ಷಸಿಯರು ಸುಮ್ಮನಾದರು.
Comments
Post a Comment