೭೩. ಸೀತಾ ದರ್ಶನ
‘ನೀವು ನನಗೆ ಇಷ್ಟು ದುಃಖಕೊಟ್ಟಿದ್ದೀರ. ನಾನು ಅತ್ತಂತೆಯೇ ಈ ಲಂಕೆಯೆಲ್ಲ ಅಳುತ್ತದೆ. ಪ್ರತಿ ಮನೆಯ ಮುಂದೆಯೂ ಅಳುವಿನ ಧ್ವನಿ ಕೇಳಿಸುತ್ತದೆ. ಲಂಕೆಯಲ್ಲಿನ ರಾವಣನಿಗೆ, ಇಲ್ಲಿರುವವರಿಗೆ ಧರ್ಮದ ತಿರುಳೂ ತಿಳಿದಿಲ್ಲ. ಆದ್ದರಿಂದಲೇ ನನ್ನನ್ನು ಇಲ್ಲಿ ತಂದಿಟ್ಟಿದ್ದಾರೆ. ೨ ತಿಂಗಳ ನಂತರ ರಾವಣನ ಕೈಲಿ ಸಾಯುವುದಕ್ಕಿಂತ ಈಗ ಸಾಯುವುದೇ ಮೇಲು. ಕಾಲವೇ ಮೃಗದ ಸ್ವರೂಪದಲ್ಲಿ ಬಂದು ನನ್ನ ಮೇಲೆ ಮೋಹ ಪಾಶ ಹಾಕಿತು. ನಾನು ಅಲ್ಪಭಾಗ್ಯೆ. ಆದ್ದರಿಂದಲೇ ಮೃಗಕ್ಕೆ ಮಾರುಹೋಗಿ ರಾಮನನ್ನು ಬಿಟ್ಟೆ. ರಾಮಾ! ರಾವಣ ೧೦ ತಿಂಗಳಿಂದ ಐಶ್ವರ್ಯವನ್ನು ತೋರಿಸಿ ನನ್ನನ್ನು ವಶಪಡಿಸಿಕೊಳ್ಳಲು ನೋಡಿದ. ಆದರೆ ನಾನು ಅವನಿಗೆ ವಶವಾಗಲಿಲ್ಲ. ನನ್ನ ಪತಿಯೇ ನನಗೆ ದೈವ. ಭೂಮಿಯ ಮೇಲೆ ಮಲಗಿದೆ, ಉಪವಾಸ ಮಾಡಿದೆ, ರಾಮನ ಅನುಗ್ರಹಕ್ಕಾಗಿ ಕಾದೆ. ಆದರೆ ನೀನು ಬರಲಿಲ್ಲ. ನನ್ನ ಪಾತಿವ್ರತ್ಯ ವಿಫಲವಾಗಿದೆ. ಕೃತಘ್ನನಿಗೆ ಉಪಕಾರ ಮಾಡಿದರೆ ಆ ಉಪಕಾರ ನಿಷ್ಪ್ರಯೋಜಕವಾದಂತೆ ನಾನು ಮಾಡಿದ ಉಪವಾಸ, ಪಾಲಿಸಿದ ಪಾತಿವ್ರತ್ಯ ಎಲ್ಲವೂ ನಿಷ್ಪ್ರಯೋಜಕವಾಯಿತು. ಚುಚ್ಚಿಕೊಂಡು ಸಾಯಲು ಇಲ್ಲಿ ಕತ್ತಿಯನ್ನು ಕೊಡುವವರು ಯಾರೂ ಇಲ್ಲ. ವಿಷಕುಡಿಯಲು ವಿಷವೂ ಇಲ್ಲ’ ಎಂದುಕೊಂಡು ಸೀತೆ ತನ್ನ ಕೂದಲನ್ನು ಮರದ ಕೊಂಬೆಗೆ ಕಟ್ಟಿ ಉರಿಬಿಗಿದು ಸಾಯಲು ನಿರ್ಧರಿಸಿದಳು.
ಸಾಯಲು ಸಿದ್ಧಳಾಗುತ್ತಿದ್ದ ಅವಳಿಗೆ ಶುಭಶಕುನಗಳು ಕಾಣಿಸಿದವು. ಸರೋವರದಲ್ಲಿ ಅರ್ಧ ಅರಳಿದ ಪದ್ಮಕ್ಕೆ ನೀರಿನಲ್ಲಿ ಕಾಂಡವಿರುತ್ತದೆ. ಅದರ ಪಕ್ಕಕ್ಕೆ ಒಂದು ಮೀನು ಬಂದು ನಿಂತು ಆ ಕಾಂಡವನ್ನು ಕದಲಿಸಿತು. ಅದರಿಂದ ಹೂವೂ ಕದಲಿತು. ಹೂವು ಕದಲಿದ ಸಮಯದಲ್ಲೇ ಸೀತೆಯ ಕಣ್ಣು ಕೂಡಾ ಅದುರಿತು!
ಅಲ್ಲಿಯವರೆಗೂ ಸೀತೆಯನ್ನು ಗಮನಿಸಿದ ಹನುಮಂತ ತನ್ನ ಮನಸ್ಸಿನಲ್ಲೇ, ‘ಈಶ್ವರಾನುಗ್ರಹದಿಂದ ನನಗೆ ಸೀತೆಯ ದರ್ಶನವಾಯಿತು. ರಾವಣನನ್ನು ನೋಡಿದೆ. ಅವನು ಸೀತೆಯ ಜೊತೆ ಮಾತಾಡುವುದನ್ನೂ ನೋಡಿದೆ. ತ್ರಿಜಟೆಯ ಸ್ವಪ್ನವನ್ನೂ ಕೇಳಿದೆ. ಈಗ ಸೀತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ. ಈ ವಿಷಯವನ್ನು ರಾಮನಿಗೆ ಹೇಳುವುದು ಸಾಧ್ಯವಿಲ್ಲ. ಅಕಸ್ಮಾತ್ ಸೀತೆ ಸತ್ತರೆ ರಾಮ ತನ್ನ ಬಾಣಗಳಿಂದ ಬ್ರಹ್ಮಾಂಡವನ್ನೇ ಕ್ಷೋಭಿಸುತ್ತಾನೆ. ಈಗ ಸೀತೆಯನ್ನು ಸಮಾಧಾನ ಮಾಡಬೇಕು. ಇಲ್ಲದಿದ್ದರೆ ನನ್ನಂತಹ ವಿವೇಚನೆಯಿಲ್ಲದ ಮಂತ್ರಿಯಿಂದ ಕೆಲಸ ಕೆಡುತ್ತದೆ. ಈಗ ಏನು ಮಾಡಲಿ? ಜೋರಾಗಿ ಮಾತಾಡಿದರೆ ಈ ರಾಕ್ಷಸ ಸ್ತ್ರೀಯರು ಕೇಳಿಸಿಕೊಂಡು ನನ್ನ ಮೇಲೆ ಯುದ್ಧಕ್ಕೆ ಬರುತ್ತಾರೆ. ಯುದ್ಧದಲ್ಲಿ ಜಯಾಪಜಯಗಳು ವಿಧಿನಿರ್ಣಯ. ಆದರೆ ರಾಮ ಲಂಕೆಯನ್ನು ಸೇರುವ ಹೊತ್ತಿಗೆ ರಾವಣ ಸೀತೆಯನ್ನು ಬೇರೆಯ ಕಡೆ ಬಚ್ಚಿಡಬಹುದು. ನಾನು ವಾನರ ಭಾಷೆಯಲ್ಲಿ ಮಾತಾಡಿದರೆ ಸೀತೆಗೆ ಅರ್ಥವಾಗುವುದಿಲ್ಲ. ವಾನರರೂಪದಲ್ಲಿ ಮನುಷ್ಯ ಭಾಷೆಯನ್ನು ಮಾತಾಡಿದರೆ ರಾವಣನ ಮಾಯೆಯೆಂದುಕೊಂಡು ಸೀತೆ ಜೋರಾಗಿ ಅರಚುತ್ತಾಳೆ. ನನ್ನ ಕಾರಣದಿಂದ ಸೀತೆ ಸತ್ತರೆ ಆ ಪಾಪ ನನ್ನದೇ. ಈಗ ಏನು ಮಾಡಬೇಕು? ಸೀತೆಗೆ ಹೇಗೆ ಸಮಾಧಾನ ಮಾಡಬೇಕು? ಈಗ ನನಗಿರುವ ಒಂದೇ ಒಂದು ಮಾರ್ಗ ರಾಮನಾಮ. ಸೀತೆಗೆ ಇಷ್ಟವಾದ ರಾಮಕಥೆಯನ್ನು ಹೇಳುವುದೇ ಸರಿ’ ಎಂದುಕೊಂಡು ರಾಮಕಥೆಯನ್ನು ಆರಂಭಿಸಿದ.
"ಪೂರ್ವದಲ್ಲಿ ಇಕ್ಷ್ವಾಕು ವಂಶದ ದಶರಥನೆಂಬ ರಾಜ ಕೋಸಲವನ್ನು ಪಾಲಿಸುತ್ತಿದ್ದ. ಐಶ್ವರ್ಯವಂತ, ಧಾರ್ಮಿಕ, ಇಂದ್ರನಿಗೆ ಸಮಾನನಾದ ಅವನು ಪುತ್ರಕಾಮೇಷ್ಟಿಯನ್ನು ಮಾಡಿ ರಾಮನನ್ನು ಹಿರಿಯಮಗನನ್ನಾಗಿ ಪಡೆದ. ತಂದೆಯ ಪ್ರತಿಜ್ಞೆಯನ್ನು ಕಾಪಾಡಲು ರಾಮ ೧೪ ವರ್ಷ ಕಾಡಿಗೆ ಹೋದ. ಅವನನ್ನು ಬಿಟ್ಟು ಇರಲಾರದೆ ಅವನ ಪತ್ನಿ ಸೀತೆ ಮತ್ತು ಅವನ ತಮ್ಮ ಲಕ್ಷ್ಮಣನೂ ಅವನ ಹಿಂದೆ ಹೊರಟರು. ಅವರು ಜನಸ್ಥಾನದಲ್ಲಿದ್ದಾಗ ರಾಮ ೧೪೦೦೦ ರಾಕ್ಷಸರನ್ನು ಸಂಹರಿಸಿದ. ಅದರಿಂದ ಕೋಪಗೊಂಡ ರಾವಣ ಮಾಯಾಜಿಂಕೆಯನ್ನು ಬಿಟ್ಟು ರಾಮಲಕ್ಷ್ಮಣರು ಇಲ್ಲದ ಸಮಯದಲ್ಲಿ ಸೀತೆಯನ್ನು ಅಪಹರಿಸಿದ. ಸೀತೆಯನ್ನು ಹುಡುಕುತ್ತಾ ಹೊರಟ ರಾಮನಿಗೆ ಸುಗ್ರೀವನ ಸ್ನೇಹವಾಯಿತು. ಸುಗ್ರೀವ ಸೀತಾನ್ವೇಷಣೆಗಾಗಿ ಎಲ್ಲ ದಿಕ್ಕುಗಳಿಗೂ ವಾನರರನ್ನು ಕಳಿಸಿದ. ದಕ್ಷಿಣ ದಿಕ್ಕಿಗೆ ಬಂದ ವಾನರರಲ್ಲಿ ಒಬ್ಬನಾದ ನಾನು ಸಮುದ್ರವನ್ನು ದಾಟಿದೆ. ಸೀತೆ ಹೇಗಿರುತ್ತಾಳೆ ಎಂಬುದನ್ನು ರಾಮ ವಿವರಿಸಿದ್ದ. ಈಗ ಆ ಸೀತೆಯನ್ನು ನಾನು ಈ ವೃಕ್ಷದ ಕೆಳಗೆ ನೋಡಿ ಧನ್ಯನಾದೆ" ಎಂದ.
ಅಲ್ಲಿಯವರೆಗೂ ಕೇಳದ ರಾಮನಾಮವನ್ನು ಕೇಳಿ ಸೀತೆ ಕತ್ತಿಗೆ ಸುತ್ತಿಕೊಂಡಿದ್ದ ಜಡೆಯನ್ನು ಬಿಚ್ಚಿದಳು. ಆನಂದದಿಂದ ಮರದ ಮೇಲೆ ನೋಡಿದಳು. ಸೀತೆಯ ಕಿವಿಗೆ ಮಾತ್ರ ಕೇಳುವಂತೆ, ನಿಧಾನವಾಗಿ ಬಂದು, ಮರವನ್ನು ಕಾಲಿನಲ್ಲಿ ಹಿಡಿದು, ಎಲೆಗಳನ್ನು ಪಕ್ಕಕ್ಕೆ ಸರಿಸಿ, ಶ್ವೇತ ವಸ್ತ್ರಧಾರಿಯಾಗಿ, ಹಸಿರು ಕಣ್ಣುಗಳ ಸುಗ್ರೀವನ ಮಂತ್ರಿಯಾದ ಹನುಮ ಸೀತೆಗೆ ಹತ್ತಿರದಲ್ಲಿ ಕಾಣಿಸಿದ. ಹನುಮನನ್ನು ನೋಡಿದ ತಕ್ಷಣ ಸೀತೆ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದುಹೋದಳು.
ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡ ಸೀತೆ ಕನಸಿನಲ್ಲಿ ವಾನರ ಕಾಣಿಸಿದನೆಂದುಕೊಂಡು ದುಃಖದಿಂದ, "ರಾಮ ಲಕ್ಷ್ಮಣರಿಗೆ ಮಂಗಳವಾಗಲಿ. ನನ್ನ ತಂದೆ ಜನಕ ಮಹಾರಾಜ ಕ್ಷೇಮವಾಗಿರಲಿ" ಎಂದು ಪ್ರಾರ್ಥಿಸಿದಳು (ಕನಸಿನಲ್ಲಿ ಕಪಿ ಕಂಡರೆ ಕೇಡು ಎಂದು ನಂಬಿಕೆ). ಆದರೆ ನಂತರವೇ, 'ನನಗೆ ನಿದ್ದೆ ಬಂದಿದ್ದರಲ್ಲವೇ ಕನಸು ಬೀಳುವುದು? ಯಾವಾಗಲೂ ರಾಮನನ್ನೇ ನೆನಪಿಸಿಕೊಳ್ಳುವುದರಿಂದ ನನಗೆ ರಾಮನಾಮ ಕೇಳಿಸಿದಂತೆ ಭಾಸವಾಗಿದೆ' ಎಂದುಕೊಂಡು ಮತ್ತೆ ಮೇಲೆ ನೋಡಿದಳು. ಹನುಮ ಅಲ್ಲೇ ಇದ್ದ. ಮತ್ತೆ ಸೀತೆ ಹೇಳಿದಳು: "ಇಂದ್ರನ ಜೊತೆಯೂರುವ ಬೃಹಸ್ಪತಿಗೆ ನಮಸ್ಕಾರ. ಅಗ್ನಿಗೆ ನಮಸ್ಕಾರ. ಬ್ರಹ್ಮದೇವರಿಗೆ ನಮಸ್ಕಾರ. ಈ ವಾನರ ಹೇಳಿದ ಮಾತುಗಳು ನಿಜವಾಗಲಿ."
ಅವಳ ಮಾತು ಕೇಳಿದ ಹನುಮ ನಿಧಾನವಾಗಿ ಕೊಂಬೆಯ ಮೇಲೆ ಬಂದು, "ಅಮ್ಮಾ! ನಾನು ಹೇಳಿದ್ದು ಸುಳ್ಳಲ್ಲ. ನಾನು ರಾಮ ದೂತ. ಸುಗ್ರೀವನ ಸಚಿವ. ನನ್ನನ್ನು ನಂಬು" ಎಂದ.
"ಯಾರು ಜೀವನವನ್ನು ನೂರು ವರ್ಷಗಳ ಕಾಲ ಬದುಕಲು ಪ್ರಯತ್ನ ಪಡುತ್ತಾನೋ, ಯಾರು ಉತ್ಸಾಹದಿಂದಿರುತ್ತಾನೋ ಅವನು ಎಂದಾದರೂ ಜಯ ಪಡೆದೇ ಪಡೆಯುತ್ತಾನೆ. ನಾನು ಬಹುಶಃ ಪ್ರಾಣ ಕಳೆದುಕೊಳ್ಳದಿದ್ದರಿಂದಲೇ ಈಗ ಶುಭ ವಾರ್ತೆ ಕೇಳಿದೆ."
"ಅಮ್ಮಾ! ನೀನು ದೇವತೆಯೋ, ಗಂಧರ್ವಳೋ, ಯಕ್ಷಳೋ, ಕಿನ್ನರಳೋ ಅಥವಾ ವಸಿಷ್ಠರಿಂದ ದೂರವಾದ ಅರುಂಧತಿಯೂ? ಅಗಸ್ತ್ಯರಿಂದ ದೂರವಾದ ಲೋಪಮುದ್ರಾದೇವಿಯೋ? ನಿನ್ನ ಪಾದಗಳು ಭೂಮಿಯ ಮೇಲೇ ಇವೆ. ಆದ್ದರಿಂದ ನೀನು ಮನುಷ್ಯಳೇ! ನಿನ್ನಲ್ಲಿ ರಾಜ ಲಕ್ಷಣಗಳಿವೆ. ಆದ್ದರಿಂದ ನೀನು ಕ್ಷತ್ರಿಯ ಸ್ತ್ರೀಯೇ ಇರಬೇಕು. ನೀನು ಜನಸ್ಥಾನದಲ್ಲಿ ರಾವಣನಿಂದ ಅಪಹರಿಸಲ್ಪಟ್ಟ ಸೀತೆ ಮಾತ್ರ ಅಲ್ಲ ಅಲ್ಲವೇ?"
"ಈ ಭೂಮಿಯನ್ನು ಆಳಿದ ಮಹಾತ್ಮನಾದ ದಶರಥ ಮಹಾರಾಜನ ಸೊಸೆ ನಾನು. ವಿದೇಹ ವಂಶದಲ್ಲಿ ಜನಕ ಮಹಾರಾಜನಿಗೆ ಜನಿಸಿದ ಮಗಳು. ನನ್ನನ್ನು ಸೀತೆ ಎನ್ನುತ್ತಾರೆ. ರಾಮನ ಹೆಂಡತಿ. ಅಯೋಧ್ಯೆಯಲ್ಲಿ ೧೨ ವರ್ಷಗಳು ಆರಾಮವಾಗಿ ಕಳೆದ ಮೇಲೆ ದಶರಥನ ಆಜ್ಞೆಯಂತೆ ದಂಡಾಕಾರಣ್ಯಕ್ಕೆ ಬಂದೆವು. ರಾಮನಿಲ್ಲದಿದ್ದಾಗ ರಾವಣ ನನ್ನನ್ನು ಅಪಹರಿಸಿ ಇಲ್ಲಿಗೆ ತಂದಿಟ್ಟಿದ್ದಾನೆ"
ಸೀತೆಗೆ ನಂಬಿಕೆ ಬಂದಿದೆ ಎಂದುಕೊಂಡು ಹನುಮ ಅವಳ ಹತ್ತಿರಕ್ಕೆ ಹೋದ. ಆದರೆ ಸೀತೆಗೆ ಪ್ರಜ್ಞೆ ತಪ್ಪಿದಂತಾಗಿ, "ನೀನು ದುರ್ಮಾರ್ಗನಾದ ರಾವಣ. ಮತ್ತೆ ಇಲ್ಲಿಗೇಕೆ ಬಂದೆ" ಎಂದರೂ ಮನಸ್ಸಿನಲ್ಲಿ, 'ಇವನನ್ನು ನೋಡಿದರೆ ಒಳ್ಳೆಯವನು ಅನಿಸುತ್ತಿದೆ. ಪುತ್ರವಾತ್ಸಲ್ಯವಾಗುತ್ತಿದೆ' ಎಂದುಕೊಂಡಳು. ನಂತರ, "ನೀನು ಯಾರು? ನಿಜ ಹೇಳು" ಎಂದು ಕೇಳಿದಳು.
"ಅಮ್ಮ ನಿನ್ನ ಅಪಹರಣವಾದ ಮೇಲೆ ರಾಮ ಜಟಾಯುವಿನ ಜೊತೆ ಮಾತಾಡಿದ. ಅವನ ಮರಣದ ನಂತರ ಕಬಂಧನನ್ನು ಸಂಹರಿಸಿ ಸುಗ್ರೀವನ ಜೊತೆ ಸ್ನೇಹ ಮಾಡಿಕೊಂಡ. ವಾಲಿ ಸಂಹಾರ ಮಾಡಿ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿದ. ನಿನ್ನನ್ನು ಹುಡುಕಲು ನಾಲ್ಕು ದಿಕ್ಕಿನಲ್ಲೂ ವಾನರರನ್ನು ಕಳಿಸಿದ್ದಾರೆ. ಅಂಗದನ ನಾಯಕತ್ವದಲ್ಲಿ ನಾವು ದಕ್ಷಿಣಕ್ಕೆ ಬಂದೆವು. ನನ್ನ ಹೆಸರು ಹನುಮ. ಶಂಭರಾಸುರನನ್ನು ಕೊಂದ ಕೇಸರಿ ನನ್ನ ತಂದೆ. ಅಂಜನಾದೇವಿ ಕ್ಷೇತ್ರವಾಗಿ ವಾಯುವಿನ ಔರಸಪುತ್ರನಾಯಾಗಿ ನಾನು ಜನಿಸಿದೆ. ಅಮ್ಮಾ! ನಾನು ನಿನ್ನ ಮಗನಂತೆ. ರಾಮನ ದೂತ. ನೀನು ಭಯ ಪಡಬೇಡ. ರಾಮ ಬಂದು ನಿನ್ನನ್ನು ಕಾಪಾಡುತ್ತಾನೆ."
"ನೀನು ವಾನರ. ರಾಮ ನರ. ನರವಾನರರಿಗೆ ಹೇಗೆ ಸ್ನೇಹವಾಯಿತು? ನನ್ನ ಶೋಕ ಹೋಗಬೇಕೆಂದರೆ ನಾನು ರಾಮನಾಮವನ್ನು ಕೇಳಬೇಕು. ನೀನು ರಾಮನ ಭಕ್ತನೇ ಆದರೆ ರಾಮನನ್ನು ವರ್ಣಿಸು.”
“ರಕ್ಷಿತಾ ಜೀವಲೋಕಸ್ಯ ಧರ್ಮಸ್ಯ ಪರಿರಕ್ಷಿತಾ
ರಕ್ಷಿತಾ ಸ್ವಸ್ಯ ಧರ್ಮಸ್ಯ ಸ್ವಜನಸ್ಯ ಚ ರಕ್ಷಿತಾ
ರಾಮ ಮೂರ್ತ ಧರ್ಮ. ತನ್ನ ಧರ್ಮವನ್ನೊಂದೇ ಅಲ್ಲದೆ ಇತರರ ಧರ್ಮವನ್ನೂ ಅವನು ರಕ್ಷಿಸುತ್ತಾನೆ.
ರಾಮಃ ಕಮಲಪತ್ರಾಕ್ಷಃ ಸರ್ವಸತ್ವ ಮನೋಹರಃ
ರೂಪ ದಾಕ್ಷಿಣ್ಯ ಸಂಪನ್ನಃ ಪ್ರಸೂತೋ ಜನಕಾತ್ಮಜೇ
ರಾಮ ಪದ್ಮದಂತಹ ಕಣ್ಣುಗಳುಳ್ಳವನು. ಅವನನ್ನು ಯಾವ ಪ್ರಾಣಿ ನೋಡಿದರೂ ಸಂತೋಷಪಡುತ್ತವೆ.
ತೇಜಸಾ ಆದಿತ್ಯ ಸಂಕಾಶಃ ಕ್ಷಮಯಾ ಪೃಥಿವೀಸಮಃ
ಬೃಹಸ್ಪತಿ ಸಮೇ ಬುದ್ಧ್ಯಾ ಯಶಸಾ ವಾಸವೋ ಸಮಃ
ತೇಜಸ್ಸಿನಲ್ಲಿ ಸೂರ್ಯನಿಗೆ ಸಮನಾದವನು, ಕ್ಷಮೆಯಲ್ಲಿ ಅವನು ಭೂಮಿಗೆ ಸಮ. ಬುದ್ದಿಯಲ್ಲಿ ಬೃಹಸ್ಪತಿಗೆ, ಕೀರ್ತಿಯಲ್ಲಿ ಇಂದ್ರನಿಗೆ ಅವನು ಸಮ. ರಾಮನಿಗೆ ವೇದ, ಧನುರ್ವಿದ್ಯೆ, ಸಮಸ್ತ ವೇದಾಂಗಗಳೂ ತಿಳಿದಿವೆ. ಅವನು ಎಂಟು ಅಡಿ ಉದ್ದವಿರುತ್ತಾನೆ. ರಾಮ ಮರ್ಯಾದಾ ಪುರುಷೋತ್ತಮ. ಯಾರನ್ನು, ಯಾವಾಗ, ಎಲ್ಲಿ ಕಾಪಾಡಬೇಕೋ ಅವನಿಗೆ ತಿಳಿದಿದೆ. ಅವನಿಗೆ ನಡತೆಯೇ ಪ್ರಧಾನ. ತಾನೇ ಕರ್ತೃ, ಕಾರಣವಾಗಿ ರಾಮ ಜಗತ್ತನ್ನೆಲ್ಲ ಆವರಿಸಿದ್ದಾನೆ.
ವಾನರೋಹಂ ಮಹಾಭಾಗೇ ದೂತೋ ರಾಮಸ್ಯ ಧೀಮತಃ
ರಾಮನಾಮಾಂಕಿತಂ ವೇದಂ ಪಶ್ಯ ದೇವ್ಯಂ ಹುಳೀಯಕಂ
ಪ್ರತ್ಯಯಾರ್ಥಂ ತವಾನೀತಂ ತೇನ ದತ್ತಂ ಮಹಾತ್ಮನಾ
ಸಮಾಶ್ವಸಿಹಿ ಭದ್ರಂತೇ ಕ್ಷೀಣ ದುಃಖಫಲಾಹ್ಯಸಿ
(ಈ ಶ್ಲೋಕಗಳು ಪಾವನವಾದುವು. ಇವನ್ನು ಸುಂದರಕಾಂಡ ಮಂತ್ರಗಳೆನ್ನುತ್ತಾರೆ. ಸೀತೆಯ ದುಃಖವನ್ನು ಹನುಮ ಈ ಮಂತ್ರಗಳಿಂದ ತೊಲಗಿಸುತ್ತಾನೆ. ಈ ಶ್ಲೋಕಗಳನ್ನು ಕೇಳಿ ಸೀತೆ ೧೦ ತಿಂಗಳಲ್ಲಿ ಮೊದಲ ಬಾರಿಗೆ ಸಂತೋಷಪಟ್ಟಳು.)
ಅಮ್ಮ! ನಾನು ವಾನರ. ರಾಮನ ಪರವಾಗಿ ಬಂದ ಅವನ ದೂತ. ಅವನು ನನ್ನ ಮೇಲೆ ನಿನಗೆ ನಂಬಿಕೆ ಬರುವಂತೆ ರಾಮನಾಮಾಂಕಿತವಾದ ಉಂಗುರವನ್ನು ಕೊಟ್ಟು ಕಳಿಸಿದ್ದಾನೆ. ಇದನ್ನು ತೆಗೆದುಕೊಂಡ ನಂತರ ನಿನ್ನ ಕಷ್ಟವೆಲ್ಲ ಉಪಸಂಹಾರವಾಗುತ್ತವೆ. ನೀನು ಶಾಂತಿಯನ್ನು ಪಡೆಯುತ್ತೀಯ" ಎಂದು ಹೇಳಿ ಹನುಮ ರಾಮನ ಉಂಗುರವನ್ನು ಸೀತೆಗೆ ಕೊಟ್ಟ.
Comments
Post a Comment