೫೬. ಜಟಾಯುವಿನ ಮರಣ

ರಾಮ ಶಾಂತನಾದ ಮೇಲೆ, "ಅಣ್ಣ! ಲೋಕದ ನಾಟಕ ನೋಡು. ಕಷ್ಟ ಎಲ್ಲರಿಗೂ ಬರುತ್ತದೆ. ನಹುಷನ ಮಗನಾದ ಯಯಾತಿ ಪಟ್ಟ ಕಷ್ಟ ಜ್ಞಾಪಕವಿದೆಯಾ? (ಯಯಾತಿ ಸತ್ತ ಮೇಲೆ ಸ್ವರ್ಗಕ್ಕೆ ಹೋದ. ಆಗ ದೇವೇಂದ್ರ ಅವನನ್ನು 'ಯಯಾತಿ, ನಿನ್ನ ರಾಜ್ಯದಲ್ಲಿ ಸುಳ್ಳು ಹೇಳದವನು ಯಾರು?' ಎಂದು ಕೇಳಿದ. ಅಲ್ಲಿಯವರೆಗೂ ಸುಳ್ಳು ಹೇಳದ ಯಯಾತಿ, ತಾನು ಎಂದಿಗೂ ಸುಳ್ಳು ಹೇಳಿಲ್ಲ ಎಂದ. ಆದರೆ ಇಂದ್ರ, 'ನಿನ್ನ ಬಗ್ಗೆ ನೀನೇ ಹೊಗಳಿಕೊಳ್ಳುತ್ತಿರುವುದರಿಂದ ನೀನು ಪಾಪಿ. ನಿನಗೆ ಸ್ವರ್ಗದಲ್ಲಿ ಪ್ರವೇಶವಿಲ್ಲ' ಎಂದು ಹೇಳಿ ಯಯಾತಿಯನ್ನು ವಾಪಸ್ಸು ಕಳಿಸಿಬಿಟ್ಟ.) ಜೀವನದುದ್ದಕ್ಕೂ ಕಷ್ಟ ಪಟ್ಟ ಯಯಾತಿ ಒಂದೇ ಒಂದು ಮಾತಿಗೆ, ಅದೂ ಇಂದ್ರನೇ ಕೇಳಿದಾಗ ಕೊಟ್ಟ ಉತ್ತರಕ್ಕೆ, ಸ್ವರ್ಗದಿಂದ ಭೂಮಿಗೆ ಬಿದ್ದ. ಇನ್ನು ನಮ್ಮ ಗುರು ವಸಿಷ್ಠರು. ಅವರಿಗೆ ೧೦೦ ಜನ ಮಕ್ಕಳು. ಅವರಲ್ಲಿ ಯಾರೂ ಭ್ರಷ್ಠರಲ್ಲ. ಎಲ್ಲರೂ ತಂದೆಯ ಮಾತು ಕೇಳುವವರೇ. ಅಂತಹವರು ತಂದೆಯನ್ನು ಗೌರವಿಸಿ ಮಾತಾಡಿದ್ದಕ್ಕೆ ಶಾಪಕ್ಕೆ ಗುರಿಯಾಗಿ ಶರೀರ ತ್ಯಾಗ ಮಾಡಿ ಸತ್ತರು (ವಿಶ್ವಾಮಿತ್ರರ ಶಾಪ.) ಅಷ್ಟು ಕಷ್ಟ ಬಂದರೂ ವಸಿಷ್ಠರು ವಿಚಲಿತರಾಗಲಿಲ್ಲ. ನಾವು ದಿನವೂ ನೋಡುವ ಭೂಮಿಗೆ ಎಷ್ಟು ತಾಳ್ಮೆಯಿದೆ. ಎಷ್ಟೋ ಜನರನ್ನು ಹೊರುತ್ತದೆ. ಇಂತಹ ಭೂಮಿ ಒಂದೊಂದು ಬಾರಿ ಪಾಪ ಭಾರವನ್ನು ಹೊರಲಿಕ್ಕಾಗದೆ ಕಂಪಿಸುತ್ತದೆ. ಸೂರ್ಯಚಂದ್ರರು ಸಾಕಷ್ಟು ಬಲಿಷ್ಠರು. ಅಂತಹವರನ್ನು ಗ್ರಹಣ ಸಮಯದಲ್ಲಿ ಪಾಪಿ ಗ್ರಹಗಳಾದ ರಾಹು ಕೇತುಗಳು ವಿಚಲಿತಗೊಳಿಸುತ್ತಾರೆ. ಮನುಷ್ಯನಿಗೆ ಕಷ್ಟ ಬಂದೇ ಬರುತ್ತದೆ. ಆ ಸಮಯದಲ್ಲಿ ಅದನ್ನು ತಟ್ಟುಕೊಂಡು, ಧರ್ಮವನ್ನು ಬಿಡದೆ ನಡೆಯುವವನಲ್ಲಿಯೇ ಶೀಲ ಪ್ರಕಾಶಿಸುತ್ತದೆ. ನೀನು ಜ್ಞಾನಿ ಅಣ್ಣ! ನಿನಗೆಲ್ಲ ಗೊತ್ತು. ಬೆಂಕಿಯನ್ನು ಬೂದಿ ಆವರಿಸಿದಂತೆ ನಿನ್ನ ಜ್ಞಾನವನ್ನು ಶೋಕ ಆವರಿಸಿದೆ. ಆ ಶೋಕವನ್ನು ಬಿಸಾಡು. ನನಗೆ ನಿನಗಿಂತ ಹೆಚ್ಚು ತಿಳಿದಿದೆ ಎಂದು ಹೇಳುತ್ತಿಲ್ಲ. ಕೇವಲ ನಿನ್ನ ಶೋಕವನ್ನು ತೊಲಗಿಸಲು ಪ್ರಯತ್ನಿಸುತ್ತಿದ್ದೇನೆ" ಎಂದ.

ಪೂರ್ವಜೋ ಅಪಿ ಉಕ್ತ ಮಾತ್ರಃ ತು ಲಕ್ಷ್ಮಣೇನ ಸುಭಾಷಿತಂ
ಸಾರ ಗ್ರಾಹಿ ಮಹಾಸಾರಂ ಪ್ರತಿಜಗ್ರಾಹ ರಾಘವಃ
ಇತರರು ಹೇಳಿದ ಸಾರವನ್ನು ಗ್ರಹಿಸಿ ತನ್ನ ತಪ್ಪನ್ನು ತಿದ್ದಿಕೊಳ್ಳುವ ಶಕ್ತಿಯಿರುವವನು ರಾಮ. ಲಕ್ಷ್ಮಣನ ಮಾತುಗಳನ್ನು ಕೇಳಿ ಶಾಂತನಾಗಿ, "ಲಕ್ಷ್ಮಣ ನಿನ್ನ ಮಾತು ನಿಜ. ಆದರೆ ನಾನು ಸೀತೆ ಕಾಣಿಸದಿದ್ದರೆ ಬದುಕೆನು. ಪರ್ವತ ಗುಹೆ, ಪೊದೆಗಳಲ್ಲಿ ಇರಬಹುದೇನೋ, ನಡಿ ಹುಡುಕೋಣ" ಎಂದು ಹೇಳಿ ಲಕ್ಷ್ಮಣನ ಜೊತೆ ಹೊರಟ. ಸ್ವಲ್ಪ ದೂರದಲ್ಲಿ ಅವರಿಗೆ ಮೈಯೆಲ್ಲಾ ರಕ್ತವಾದ, ರೆಕ್ಕೆಗಳಿಲ್ಲದೆ ಒಂದು ಪಕ್ಕಕ್ಕೆ ಕೂತಿದ್ದ ಜಟಾಯು ಕಾಣಿಸಿತು. ತಕ್ಷಣ ರಾಮ, 'ಇದು ಪಕ್ಷಿ ರೂಪದಲ್ಲಿರುವ ರಾಕ್ಷಸ. ಇದೆ ಸೀತೆಯನ್ನು ತಿಂದಿರಬೇಕು. ಇದನ್ನು ನಾನು ನಂಬುವುದಿಲ್ಲ. ಈಗಲೇ ಕೊಲ್ಲುತ್ತೇನೆ' ಎಂದು ಹೇಳಿ ತನ್ನ ಬಿಲ್ಲನ್ನು ತೆಗೆದ.

ಆಗ ಜಟಾಯು, "ರಾಮ! ನೀನು ಹುಡುಕುತ್ತಿರುವ ಸೀತೆಯನ್ನು ಹೊತ್ತುಕೊಂಡು ಹೋದವನು ರಾವಣ! ಅವನು ಸೀತೆಯನ್ನು ಹೊತ್ತುಕೊಂಡು ಹೋಗುವಾಗ ನಾನು ನನ್ನ ಶಕ್ತಿಯಿದ್ದಷ್ಟು ಯುದ್ಧ ಮಾಡಿದೆ. ಅವನ ಸಾರಥಿ, ರಥ, ಧ್ವಜಗಳನ್ನು ಬೀಳಿಸಿದೆ. ಆದರೆ ಅವನನ್ನು ತಡೆಯಲಾಗಲಿಲ್ಲ. ಆಕಾಶದಲ್ಲಿ ಹೋಗುತ್ತಾ ಮೇಘದಲ್ಲಿ ಧೂಳು ಸೃಷಿಸಿ ನನ್ನ ರೆಕ್ಕೆಗಳನ್ನು ಕತ್ತರಿಸಿಬಿಟ್ಟ. ಆದ್ದರಿಂದ ನನಗೆ ಏನೂ ಮಾಡಲಾಗಲಿಲ್ಲ. ನಾನಾಗಲೇ ಸತ್ತಿದ್ದೇನೆ. ಇನ್ನೊಂದು ಬಾರಿ ನನ್ನನ್ನು ಸಾಯಿಸಬೇಡ" ಎಂದ.

ಜಟಾಯುವಿನ ಮಾತು ಕೇಳಿ ರಾಮ ಬಿಲ್ಲನ್ನು ಬಿಸಾಡಿ ಅವನ ಬಳಿ ಓಡಿ ಬಂದು ತಬ್ಬಿಕೊಂಡು ಅತ್ತ. ಲಕ್ಷ್ಮಣನೂ ಜಟಾಯುವನ್ನು ತಬ್ಬಿಕೊಂಡು ಅತ್ತ
ರಾಜ್ಯಂ ಭ್ರಷ್ಟಂ ವನೇ ವಾಸಃ ಸೀತಾ ನಷ್ಟಾ ಮೃತೇ ದ್ವಿಜಃ
ಈದೃಶೀ ಇಯಂ ಮಮಾ ಲಕ್ಷ್ಮಿಃ ನಿರ್ದಹೇತ್ ಅಪಿ ಪಾವಕಂ
ರಾಮ, "ಲಕ್ಷ್ಮಣ! ನನ್ನ ರಾಜ್ಯ ಹೋಯಿತು. ಸೀತೆ ಹೋದಳು. ನಂಬಿದ ಜಟಾಯು ಮರಣಿಸುತ್ತಿದ್ದಾನೆ. ಇಂದು ನನಗಾಗುತ್ತಿರುವ ದುಃಖದಲ್ಲಿ ಅಗ್ನಿಯನ್ನು ಹಾಕಿದರೆ ಅಗ್ನಿಯೇ ಸುಟ್ಟುಹೋಗುತ್ತದೆ. ಜಟಾಯು, ನನಗಾಗಿ ನೀನು ಇಷ್ಟು ಕಷ್ಟ ಪಟ್ಟಿದ್ದೀಯ. ರಾವಣ ಎಲ್ಲಿರುತ್ತಾನೆ? ಅವನ ಶಕ್ತಿಯೇನು? ಸೀತೆಯನ್ನು ಯಾವ ಕಡೆ ಎತ್ತಿಕೊಂಡು ಹೋದ? ಅವನ ರಾಜ್ಯವಾವುದು? ಹೇಳುತ್ತೀಯಾ?" ಎಂದು ಕೇಳಿದ.
ಜಟಾಯು, "ರಾವಣ ಸೀತೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಮೋಡದಲ್ಲಿ ಧೂಳು ಸೃಷ್ಟಿಸಿ ದಕ್ಷಿಣಕ್ಕೆ ಹೋದ. ಇನ್ನೂ ಹೇಳಬೇಕೆಂದಿದೆ. ಆದರೆ ನನ್ನ ರೆಕ್ಕೆ ಹೋದ ಕಾರಣ ನನಗೆ ಕಣ್ಣು ಕಾಣಿಸುತ್ತಿಲ್ಲ. ಮಾತು ಬರುತ್ತಿಲ್ಲ. ನೀನು ಮಾತಾಡುವುದು ಸರಿಯಾಗಿ ಕೇಳಿಸುತ್ತಿಲ್ಲ. ನನ್ನಲ್ಲಿರುವ ಭಾವನೆಯನ್ನು ಸರಿಯಾಗಿ ಹೇಳುತ್ತಿದ್ದೇನೋ ಇಲ್ಲವೋ ಎಂಬ ಅನುಮಾನ ಬರುತ್ತಿದೆ. ಅರಣ್ಯವೆಲ್ಲಾ ನನಗೆ ಬಂಗಾರಮಯವಾಗಿ ಕಾಣಿಸುತ್ತಿದೆ. ಆದರೆ ರಾವಣ ವಿಂದ ಮಹೂರ್ತದಲ್ಲಿ ಸೀತೆಯನ್ನು ಹೊತ್ತುಕೊಂಡು ಹೋಗಿದ್ದಾನಾದ್ದರಿಂದ ಅವಳು ನಿನಗೆ ಸಿಗುತ್ತಾಳೆ. ಮಹೂರ್ತದಲ್ಲಿ ಕಳೆದುಕೊಂಡ ವಸ್ತು ಮತ್ತೆ ಯಜಮಾನನಿಗೆ ಸಿಗುತ್ತದೆ. ನಿನಗೆ ಪಟ್ಟಾಭಿಷೇಕ ನಡೆಯುತ್ತದೆ" ಎಂದು ಹೇಳುತ್ತಿದ್ದಾಗ ಅವನ ಬಾಯಿಯಿಂದ ರಕ್ತ ಕೂಡಿದ ಮಾಂಸದ ಮುದ್ದೆಗಳು ಹೊರಬರುತ್ತಿದ್ದವು. ಆದರೂ ತನ್ನ ಕೊನೆಯ ಪ್ರಾಣವನ್ನು ಹೊರತಂದು, " ರಾವಣನ ತಂದೆ ವಿಶ್ರಾವಸು. ಅವನು ಕುಬೇರನ ತಮ್ಮ..." ಎಂದು ಹೇಳುತ್ತಾ ಪ್ರಾಣಬಿಟ್ಟ.

ಅದನ್ನು ನೋಡಿದ ರಾಮ ಹತಾಶನಾಗಿ, "ನೋಡು ಲಕ್ಷ್ಮಣ! ರಾವಣ ಸೀತೆಯನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ತನ್ನ ಪ್ರಾಣವನ್ನು ಒತ್ತೆಯಿಟ್ಟು ಪಕ್ಷಿ ಅವಳನ್ನು ಕಾಪಾಡುವ ಪ್ರಯತ್ನ ಮಾಡಿತು. ನಾವು ಯೋಚನೆ ಮಾಡಿದರೆ ಧಾರ್ಮಿಕರು, ಶೂರರು, ಕಷ್ಟದಲ್ಲಿರುವವರನ್ನು ಕಾಪಾಡುವವರು ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಗಳಲ್ಲಿಯೂ ಇದ್ದಾರೆ. ಸೀತೆಯನ್ನು ಅಪಹರಿಸಿದ ದುಃಖಕ್ಕಿಂತ ಪಕ್ಷಿಯ ಸಾವು ನನಗೆ ಹೆಚ್ಚು ದುಃಖ ತರುತ್ತಿದೆ. ಜಟಾಯುವು ಕೂಡ ದಶರಥನಂತೆಯೇ ನಮಗೆ ಪೂಜ್ಯನೀಯ. ಈಗ ತಂದೆಯಂತೆಯೇ ಜಟಾಯುವಿಗೂ ಅಂತ್ಯ ಸಂಸ್ಕಾರ ಮಾಡಬೇಕೆಂದಿದ್ದೇನೆ. ಒಣ ಕಟ್ಟಿಗೆಗಳನ್ನು ತೆಗೆದುಕೊಂಡು ಬಾ. ಚಿತೆಯನ್ನು ಮಾಡಿ, ಅಗ್ನಿ ಸ್ಪರ್ಶವಾದ ಮೇಲೆ ರೋಹಿ ಮಾಂಸದ ಪಿಂಡ ಪ್ರದಾನ ಮಾಡೋಣ" ಎಂದ. (ರೋಹಿ - ಒಂದು ಮೃಗದ ಹೆಸರು. ಜಟಾಯು ಮಾಂಸಾಹಾರಿಯಾದ ಕಾರಣ ಅವನಿಗೆ ಮಾಂಸದಿಂದ ಪಿಂಡ ಪ್ರದಾನ ಮಾಡಿದರು.)

ಪಿಂಡ ಪ್ರದಾನದ ನಂತರ, ಗೋದಾವರಿಯಲ್ಲಿ ಉದಕ ಕ್ರಿಯೆಗಳನ್ನು ಮುಗಿಸಿ, " ಜಟಾಯು, ನೀನು ಉತ್ತಮ ಲೋಕಗಳನ್ನು ಹೊಂದು" ಎಂದು ರಾಮ ಲಕ್ಷ್ಮಣರು ಜಲ ತರ್ಪಣ ಕೊಟ್ಟು ಅಲ್ಲಿಂದ ಕ್ರೌಂಚಾರಣ್ಯಕ್ಕೆ ಹೋದರು.

ಭಯಂಕರವಾದ ಅರಣ್ಯದಲ್ಲಿ ಸ್ವಲ್ಪ ದೂರ ನಡೆದ ಮೇಲೆ ಒಂದು ಗುಹೆ ಕಾಣಿಸಿತು. ಹೆಜ್ಜೆ ಸಪ್ಪಳ, ಶಬ್ದಗಳು ಕೇಳಿಸಿದವು. ಅಷ್ಟರಲ್ಲೇ ಒಬ್ಬಳು ರಾಕ್ಷ ಸ್ತ್ರೀ ಓಡಿ ಬಂದಳು. ಅವಳ ಹೆಸರು ಅಯೋಮುಖಿ. ಹೊಟ್ಟೆ ಕೆಳಗೆ ಇಳೆ ಬಿದ್ದು, ವಿಕೃತಳಾದ ಅವಳು ಲಕ್ಷ್ಮಣನ ಮೇಲೆ ಆಸೆ ಪಟ್ಟಳು. "ನೀನು ತುಂಬಾ ಸುಂದರವಾಗಿದ್ದೀಯ. ನಾವು ಪರ್ವತಗಳ ಮೇಲೆ ಕ್ರೀಡಿಸೋಣ" ಎಂದಾಗ ಲಕ್ಷ್ಮಣ ಅವಳ ಕಿವಿ, ಮೂಗು, ಸ್ತನಗಳನ್ನು ಕೊಯ್ದು. ರಕ್ತ ಕಾರುತ್ತಾ ಅವಳು ಅಲ್ಲೇ ಸತ್ತು ಬಿದ್ದಳು.


Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ