೭೪. ಚೂಡಾಮಣಿ
ಹನುಮ ಕೊಟ್ಟ ಉಂಗುರವನ್ನು ತೆಗೆದುಕೊಂಡ ಸೀತೆ, "ಹನುಮ ಲಕ್ಷ್ಮಣ, ಭರತ, ಶತ್ರುಘ್ನ, ಕೌಸಲ್ಯೆ, ಸುಮಿತ್ರೆ, ಕೈಕೆ, ಕೋಸಲದ ಪ್ರಜೆಗಳು, ಸುಗ್ರೀವ, ಇತರ ವಾನರೆಲ್ಲ ಕ್ಷೇಮವೇ?" ಎಂದು ಕುಶಲಗಳನ್ನು ವಿಚಾರಿಸಿ, "ರಾಮನಿಗೆ ನನ್ನನ್ನು ಬಿಟ್ಟು ಯಾರೂ ಇಲ್ಲ. ನಾನಿಲ್ಲವೆಂದು ರಾಮನ ವರ್ತನೆಯಲ್ಲಿ ವೈಕಲ್ಯವೇನೂ ಇಲ್ಲವಲ್ಲ? ಅವನು ತನ್ನ ಪೌರುಷವನ್ನೇ ನಂಬಿಕೊಂಡು ದೈವವನ್ನು ನಿರಾಕರಿಸಿ ತಿರುತ್ತಿದ್ದಾನೋ ಅಥವಾ ಕೇವಲ ಭಗವಂತನನ್ನು ಮಾತ್ರ ನಂಬಿಕೊಂಡು ಬದುಕಿದ್ದಾನೋ? ರಾಮನಿಗೆ ನಾನು ಜ್ಞಾಪಕವಿರುವೆನಾ? ರಾವಣನನ್ನು ನಿಗ್ರಹಿಸಲು ರಾಮನಿಗೆ ಅಲ್ಲಿಂದಲೇ ಬಾಣ ಪ್ರಯೋಗ ಮಾಡುವುದು ಸಾಧ್ಯವಿಲ್ಲವೇ? ಅಸ್ತ್ರಪ್ರಯೋಗ ಮಾಡದೆ ಇನ್ನೂ ಏಕೆ ಉಪೇಕ್ಷಿಸುತ್ತಿದ್ದಾನೆ? ರಾವಣ ನನಗೆ ೧೨ ತಿಂಗಳ ಸಮಯಾವಕಾಶ ಕೊಟ್ಟಿದ್ದಾನೆ. ಈಗ ೧೦ ತಿಂಗಳು ಪೂರ್ತಿಯಾಗಿವೆ. ಇನ್ನು ಎರೆಡು ತಿಂಗಳುಗಳ ಕಾಲ ಮಾತ್ರ ಅವನು ನನ್ನನ್ನು ಬದುಕಲು ಬಿಡುತ್ತಾನೆ. ಆದರೆ ನಾನು ಒಂದು ತಿಂಗಳು ಮಾತ್ರ ಬದುಕುತ್ತೇನೆ. ಅಷ್ಟರಲ್ಲಿ ರಾಮ ಬಂದು ನನ್ನನ್ನು ಕಾಪಾಡಿದರೆ ಸರಿ. ಇಲ್ಲವಾದರೆ ನಾನು ಪ್ರಾಣ ಬಿಟ್ಟುಬಿಡುತ್ತೇನೆ. ಇದನ್ನು ಹೋಗಿ ರಾಮನಿಗೆ ಹೇಳು" ಎಂದಳು.
ಸೀತೆಯ ದುಃಖ ತುಂಬಿದ ಮಾತುಗಳನ್ನು ಕೇಳಿದ ಹನುಮ ತಲೆಯ ಮೇಲೆ ಕೈಗಳಿಟ್ಟುಕೊಂಡು, "ಅಮ್ಮ ಅಷ್ಟೊಂದು ದುಃಖ ಪಡಬೇಡ. ಮಲಯ, ವಿಂಧ್ಯ, ಮೇರು ಪರ್ವತಗಳ ಮೇಲಾಣೆ, ವಾನರರು ತಿನ್ನುವ ಕಂದಮೂಲಗಳ ಮೇಲಾಣೆ, ರಾಮನಿಗೆ ನಿನ್ನ ಮೇಲೆ ಅಪಾರವಾದ ಪ್ರೀತಿಯಿದೆ. ಎಲ್ಲಾದರೂ ಒಂದು ಪದ್ಮ ಕಂಡರೂ 'ಹಾ ಸೀತಾ!' ಎನ್ನುತ್ತಾನೆ. ಯಾವಾಗಲೂ ನಿನ್ನನ್ನು ಕುರಿತೇ ಧ್ಯಾನ ಮಾಡುತ್ತಾ ಪ್ರತಿಕ್ಷಣವೂ ದುಃಖದಿಂದಲೇ ಇರುತ್ತಾನೆ. ಈಗ ಅವನು ಪ್ರಸ್ರವಣ ಪರ್ವತದ ಗುಹೆಯಲ್ಲಿದ್ದಾನೆ. ಅವನ ಮೇಲೆ ಝರಿ, ಹಾವು, ಚೇಳುಗಳು ಓಡಾಡಿದರೂ ಅವನಿಗೆ ಜ್ಞಾನವಿರುವುದಿಲ್ಲ. ೧೦೦ ಯಾಗಗಳನ್ನು ಮಾಡಿ ಐರಾವತದ ಮೇಲೆ ಕುಳಿತ ಇಂದ್ರನ ಬಳಿ ಶಚೀದೇವಿಯಿದ್ದಂತೆ ನಿನ್ನನ್ನು ಪ್ರಸ್ರವಣ ಪರ್ವತದ ಗುಹೆಯಲ್ಲಿರುವ ರಾಮನ ಬಳಿ ಕರೆದುಕೊಂಡು ಹೋಗಿ ಕೂರಿಸುತ್ತೇನೆ. ಹವ್ಯವಾಹನನಾದ ಅಗ್ನಿ ಹವಿಸ್ಸನ್ನು ಎಷ್ಟು ಪವಿತ್ರವಾಗಿ ತೆಗೆದುಕೊಂಡು ಹೋಗುತ್ತಾನೋ ಅಷ್ಟೇ ಪವಿತ್ರವಾಗಿ ನಾನೂ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ನೀನು ಬಂದು ನನ್ನ ಬೆನ್ನಿನ ಮೇಲೆ ಕುಳಿತುಕೋ" ಎಂದ.
ಆದರೆ ಹನುಮನ ಸಣ್ಣ ರೂಪವನ್ನು ನೋಡಿದ ಸೀತೆಗೆ ನಗುಬಂತು. “ಏನು ಹೇಳುತ್ತಿದ್ದೀಯ ಹನುಮ! ನೀನೇ ಇಷ್ಟು ಚಿಕ್ಕವನು. ಇನ್ನು ನಿನ್ನ ಬೆನ್ನ ಮೇಲೆ ನಾನು ಕೂರಬೇಕಾ? ನನ್ನನ್ನು ಹೊತ್ತುಕೊಂಡು ಸಮುದ್ರವನ್ನು ದಾಟುತ್ತೀಯಾ? ನಿನ್ನ ಕಪಿ ಬುದ್ಧಿಯನ್ನು ತೋರಿಸುತ್ತಿದ್ದೀಯ” ಎಂದಳು.
ಸೀತೆಯ ಮಾತು ಕೇಳಿ ಹನುಮ ಕೋಪಿಸಿಕೊಂಡು ಅವಳಿಗೆ ತನ್ನ ಸ್ವರೂಪವನ್ನು ತೋರಿಸಲು ಮೇರು ಪರ್ವತ ಶಿಖರಗಳು ಆಕಾಶವನ್ನು ಚುಂಬಿಸುವಂತೆ ತಾನೂ ಪರ್ವತ ಸ್ವರೂಪವನ್ನು ಪಡೆದ. ದೊಡ್ಡ ದೊಡ್ಡ ಪಾದಗಳು, ಬಲವಾದ ತೊಡೆ, ಸಣ್ಣ ನಡು, ವಿಶಾಲವಾದ ವಕ್ಷಸ್ಥಳ, ಶಂಖದಂತಹ ಕಂಠ, ಹಸಿರು ಕಣ್ಣುಗಳು, ಪರಿಘಗಳಂತಹ ಭುಜಗಳಿಂದ ಸೀತೆಯ ಮುಂದೆ ನಿಂತ.
ಹನುಮನ ರೂಪವನ್ನು ಕಂಡು ಸೀತೆ, ಆಶ್ಚರ್ಯದಿಂದ, “ಹನುಮಾ! ನೀನು ಯಾರೆಂದು ನನಗೆ ತಿಳಿಯಿತು. ೧೦೦ ಯೋಜನಗಳ ಸಮುದ್ರವನ್ನು ದಾಟಿದಾಗಲೇ ಗುರುತಿಸಿದೆ. ಹೀಗೆ ಇಷ್ಟುದೂರ ಬರುವ ಶಕ್ತಿ ಕೇವಲ ಗರುಕ್ಮಂತನಿಗೆ, ನಿನ್ನ ತಂದೆ ವಾಯುವಿಗೆ ಮಾತ್ರ ಇದೆ. ನಿನ್ನ ಸಾಮರ್ಥ್ಯವನ್ನು ನೋಡಿಯೇ ನಿನ್ನನ್ನು ಇಲ್ಲಿಗೆ ಕಳಿಸಿದ್ದಾರೆ. ನಾನು ನಿನ್ನ ಬೆನ್ನ ಮೇಲೆ ಕುಳಿತು ಬಂದರೆ ಸಮುದ್ರದ ಮೇಲೆ ಹೋಗುವಾಗ ಜಾರಿ ಬೀಳಬಹುದು. ಅಥವಾ ರಾಕ್ಷಸರು ದಾರಿಗೆ ಅಡ್ಡಬಂದು ನಿನಗೂ ಅವರಿಗೂ ಜೋರಾದ ಯುದ್ಧವೇ ನಡೆಯಬಹುದು. ಆಗ ನೀನು ಯುದ್ಧ ಮಾಡುತ್ತೀಯ ಅಥವಾ ನನ್ನನ್ನು ಕಾಪಾಡುತ್ತೀಯಾ? ಒಂದು ವೇಳೆ ನಾನೇನಾದರೂ ರಾಕ್ಷಸರಿಗೆ ಸಿಕ್ಕರೆ ಮತ್ತೆ ರಾವಣ ನನ್ನನ್ನು ಯಾರಿಗೂ ಸಿಗದ ಜಾಗದಲ್ಲಿ ಬಚ್ಚಿಡಬಹುದು. ಆದ್ದರಿಂದ ನಾನು ನಿನ್ನ ಬೆನ್ನ ಮೇಲೆ ಕುಳಿತು ಬರಲು ಸಾಧ್ಯವಿಲ್ಲ. ನಿನಗೆ ರಾಕ್ಷಸರನ್ನು ಕೊಂದು ರಾಮನ ಬಳಿ ಕರೆದೊಯ್ಯುವ ವಿಶ್ವಾಸವಿರಬಹುದು. ಆದರೆ ನನಗೆ ಪ್ರಜ್ಞೆಯಿದ್ದಷ್ಟು ಹೊತ್ತು, ತಿಳಿದು ತಿಳಿದು ರಾಮನ ವಿನಾ ಯಾವ ಪುರುಷನನ್ನೂ ಮುಟ್ಟುವುದಿಲ್ಲ. ರಾಮನೇ ಬಂದು ರಾವಣನನ್ನು ಕೊಂದು ನನ್ನನ್ನು ಸಮುದ್ರ ದಾಟಿಸಬೇಕು” ಎಂದಳು.
“ಅಮ್ಮಾ! ಒಬ್ಬಳು ನರಕಾಂತೆ ಇಷ್ಟು ಕಷ್ಟಪಟ್ಟ ಮೇಲೂ, ‘ನಾನು ಬರುವುದಿಲ್ಲ’ ಎನ್ನುವುದು ನಿನಗೆ ಮಾತ್ರ ಸಾಧ್ಯ. ನೀನು ನನ್ನ ಜೊತೆ ಬರಲು ಒಪ್ಪಲಿಲ್ಲ. ನಾನು ಹೋಗಿ ರಾಮನಿಗೆ ಹೇಳಲು ಏನಾದರೂ ಒಂದು ನೆನಪನ್ನು ಕಟಾಕ್ಷಿಸು.”
ಸೀತೆ, “ನಾವು ಅರಣ್ಯವಾಸ ಮಾಡುವಾಗ ಚಿತ್ರಕೂಟದಲ್ಲಿ ಆಶ್ರಮ ನಿರ್ಮಿಸಿಕೊಂಡು ಆ ತಪೋಭೂಮಿಯಲ್ಲಿ ವಿಹರಿಸುತ್ತಿದ್ದೆವು. ಒಂದು ದಿನ ವಿಹಾರ ಮಾಡುವಾಗ ರಾಮ ಅಲ್ಲಿದ್ದ ನೀರಿನಲ್ಲಿ ಆಡಿಕೊಂಡು ಬಂದು ನನ್ನ ಪಕ್ಕದಲ್ಲಿ ಕುಳಿತುಕೊಂಡ. ನಾನು ಕೆಲವು ಮಾಂಸದ ಉಂಡೆಗಳನ್ನು ಅಲ್ಲಿ ಒಣಹಾಕಿದ್ದೆ. ನಾನು, ರಾಮ ಸಂತೋಷವಾಗಿ ಮಾತಾಡುತ್ತಿದ್ದೆವು. ಆಗ ಕಾಕಾಸುರನೆಂಬ ಕಾಗೆ ಬಂದು ಆ ಉಂಡೆಗಳನ್ನು ತಿನ್ನಲು ಪ್ರಾರಂಭಿಸಿತು. ನಾನು ಒಂದು ಕಟ್ಟಿಗೆಯನ್ನು ಅದರ ಮೇಲೆ ಎಸೆದೆ. ಆ ಪಕ್ಷಿ ನನ್ನ ಎದೆಯ ಮೇಲೆ ಕೂತು ಕುಕ್ಕಲು ಪ್ರಾರಂಭಿಸಿತು. ನೋವಿನಿಂದ ನಾನು ಒದ್ದಾಡಿದಾಗ ನನ್ನ ಸೊಂಟದ ಡಾಬು ಜಾರಿತು. ಅದನ್ನೇ ತೆಗೆದು ಕಾಗೆಯ ಮೇಲೆ ಎಸೆಯಲು ಹೋದಾಗ ರಾಮ, ‘ಕಾಗೆಯ ಮೇಲೆ ಡಾಬು ಎಸೆಯುತ್ತೀಯಾ’ ಎಂದ. ನಾನು ರಾಮನ ತೊಡೆಯ ಮೇಲೆ ಮಲಗಿದೆ. ರಾಮನ ಮೇಲೆ ಮಲಗಿದ್ದಷ್ಟು ಹೊತ್ತೂ ಆ ಕಾಗೆ ನನ್ನ ತಂಟೆಗೆ ಬರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಾನು ಎದ್ದೆ. ರಾಮ ನನ್ನ ತೊಡೆಯ ಮೇಲೆ ಮಲಗಿದ್ದ. ಮತ್ತೆ ಆ ಕಾಗೆ ನನ್ನ ಎದೆಯ ಮೇಲೆ ಕುಳಿತು ಕುಕ್ಕಲು ಶುರು ಮಾಡಿತು. ರಕ್ತ ಬಂತು. ರಕ್ತದ ಹನಿಗಳು ಮಲಗಿದ್ದ ರಾಮನ ಮೇಲೆ ಬಿದ್ದಾಗ ರಾಮ ಎದ್ದ. ನಾನು ಅಳುತ್ತಾ ಕೂತಿದ್ದೆ. ಅವನ ಬಾಯಿಯಿಂದ ಸಹಜವಾಗಿ, ‘ಐದು ತಲೆಯ ಹಾವಿನ ಜೊತೆ ಆಟವಾಡುತ್ತಿರುವು ಯಾರು?’ ಎಂಬ ಮಾತು ಬಂತು (ಸೀತೆ ಪಂಚಮುಖಿ ಗಾಯತ್ರಿದೇವಿ ಎಂದು ರಾಮ ಲೋಕಕ್ಕೆ ಹೇಳಿದ). ಅವನು ಸುತ್ತಲೂ ನೋಡಿದಾಗ ಮೂಗು, ಕಾಲುಗಳಲ್ಲಿ ರಕ್ತವಾಗಿದ್ದ ಒಂದು ಕಾಗೆ ಕಾಣಿಸಿತು. ರಾಮ ಅಲ್ಲಿಯೇ ಇದ್ದ ಒಣಹುಲ್ಲಿನಲ್ಲಿ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ಕಾಗೆಯ ಮೇಲೆ ಬಿಟ್ಟ. ಬ್ರಹ್ಮಾಸ್ತ್ರ ಕಾಗೆಯನ್ನು ಅಟ್ಟಿಸಿಕೊಂಡು ಹೋಯಿತು. ಅದು ಮೂರು ಲೋಕಗಳನ್ನು ಸುತ್ತಿ ಎಲ್ಲರ ಬಳಿಯೂ ಹೋಗಿ ರಕ್ಷಿಸಲು ಕೇಳಿಕೊಂಡಿತು. ಆದರೆ ಅವರು, ‘ರಾಮನ ಅಸ್ತ್ರದಿಂದ ನಾವು ರಕ್ಷಿಸಲು ಆಗುವುದಿಲ್ಲ’ ಎಂದು ಹೇಳಿ ಕಳಿಸಿಬಿಟ್ಟರು. ಕೊನೆಗೆ ಅದು ರಾಮನ ಬಳಿಯೇ ಬಂದು ಬಿದ್ದಿತು. ರಾಮ, ‘ನನ್ನ ಬಳಿ ಬಂದು ಬಿದ್ದದ್ದರಿಂದ ನೀನು ನನಗೆ ಶರಣಾದಂತೆ. ನಾನು ನಿನ್ನನ್ನು ಬಿಟ್ಟುಬಿಡುತ್ತೇನೆ. ಆದರೆ ಬ್ರಹ್ಮಾಸ್ತ್ರವನ್ನು ಬಿಟ್ಟ ಮೇಲೆ ಪ್ರಾಣಕ್ಕೆ ಸಮವಾದದ್ದೇನಾದರೂ ಕೊಡಬೇಕು’ ಎಂದ. ಕಾಕಾಸುರ ತನ್ನ ಬಲಗಣ್ಣನ್ನು ಕೊಟ್ಟು ಹೊರಟು ಹೋದ. ಅಂದು ನನಗಾಗಿ ಕಾಗೆಯ ಮೇಲೆಯೇ ಬ್ರಹ್ಮಾಸ್ತ್ರವನ್ನು ಬಿಟ್ಟ ರಾಮ ಇಂದು ಏಕೆ ಸುಮ್ಮನಿದ್ದಾನೋ ಕೇಳು (ರಾಮ ರಾವಣರ ಮಧ್ಯೆ ಆಗ ಶತೃತ್ವವಿರಲಿಲ್ಲ. ರಾಮ ಅಯೋಧ್ಯೆಗೆ ಹೋಗುವ ಮುಂಚೆ ರಾವಣ ಹೇಗೂ ಸೀತೆಯನ್ನು ಅಪಹರಿಸುತ್ತಾನೆ. ಸೀತೆಗೆ ಅಪಕಾರ ಬಂದರೆ ರಾಮ ಹೇಗೆ ಸ್ಪಂದಿಸುತ್ತಾನೆ ಎಂಬುನ್ನು ನೋಡಲು ದೇವತೆಗಳು ಇಂದ್ರನ ಮಗನಾದ ಕಾಕಾಸುರನನ್ನು ಕಳಿಸಿದರು).
ಹನುಮಾ! ನನ್ನಿಂದ ಚಿಕ್ಕದೋ, ದೊಡ್ಡದೋ ಯಾವುದೋ ತಪ್ಪು ನಡೆದಿರಬಹುದು. ರಾಮನ ಪಾದಕ್ಕೆ ನಮಸ್ಕರಿಸಿದೆನೆಂದು ಹೇಳು. ದಶರಥ ಮಹಾರಾಜ ಮರಣಿಸಿದರೂ ರಾಮ ಶಾಂತನಾಗಿರಲು ಕಾರಣ ಲಕ್ಷ್ಮಣ. ಅತ್ತಿಗೆಯನ್ನು ತಾಯಿಯಂತೆ ನೋಡುವ ಸ್ವಭಾವ ಅವನದು. ಅವನು ನನ್ನ ಮಗನ ಸಮಾನ. ಅವನ ಕುಶಲ ಕೇಳಿದೆನೆಂದು ಹೇಳು. ಸುಗ್ರೀವನಿಗೂ ಕುಶಲವನ್ನು ತಿಳಿಸು. ನಿನ್ನ ಮಾತುಗಳಿಂದ ರಾಮನಿಗೆ ನನ್ನ ಮೇಲಿನ ಪ್ರೀತಿ ಇನ್ನೂ ಹೆಚ್ಚಾಗುವಂತೆ ಮಾಡಿ ನನ್ನನ್ನು ಬೇಗ ಕರೆದುಕೊಂಡು ಹೋಗುವಂತೆ ಮಾಡು” ಎಂದು ಕಾಕಾಸುರನ ವೃತ್ತಾಂತವನ್ನು ನೆನಪಿಗಾಗಿ ಹೇಳಿದಳು.
ಹನುಮ, “ಅಮ್ಮಾ! ಕಾಕಾಸುರನ ವೃತ್ತಾಂತವನ್ನು ಹೇಳಿದೆ. ಆದರೆ ಇದರ ಜೊತೆ ಇನ್ನೇನಾದರೂ ಕೊಡುತ್ತೀಯ?” ಎಂದು ಕೇಳಿದ.
ಸೀತೆ ತನ್ನ ಸೆರಗಿನಲ್ಲಿ ಇಟ್ಟುಕೊಂಡಿದ್ದ ಚೂಡಾಮಣಿಯನ್ನು ತೆಗೆದು ಹನುಮನಿಗೆ ಕೊಟ್ಟು, “ಇದನ್ನು ನನ್ನ ಅಮ್ಮ ನನ್ನ ಮದುವೆಯ ಸಮಯದಲ್ಲಿ ಮುಡಿಗೆ ಅಲಂಕಾರವಾಗಿ ಕೊಟ್ಟಿದ್ದಳು. ಇದನ್ನು ರಾಮನಿಗೆ ಕೊಡು. ಇದನ್ನು ನೋಡಿದರೆ ಅವನಿಗೆ ಏಕಕಾಲಕ್ಕೆ ನನ್ನ ಅಮ್ಮ, ದಶರಥ ಮಹಾರಾಜ ಮತ್ತು ನಾನು ಜ್ಞಾಪಕಕ್ಕೆ ಬರುತ್ತೇವೆ” ಎಂದಳು. ಹನುಮ ಚೂಡಾಮಣಿಯನ್ನು ಕಣ್ಣಿಗೆ ಒತ್ತಿಕೊಂಡು ರಾಮ ಕೊಟ್ಟ ಉಂಗುರವನ್ನು ಭದ್ರಪಡಿಸಿಕೊಂಡಂತೆ ಆ ಚೂಡಾಮಣಿಯನ್ನೂ ಭದ್ರವಾಗಿ ಇಟ್ಟುಕೊಂಡ. ಸೀತೆಯ ಆಭರಣ ಅವನ ಕೈಗೆ ಬಿದ್ದಾಕ್ಷಣವೇ ಅವನಿಗೆ ವಿಶೇಷವಾದ ಧೈರ್ಯ, ಶಕ್ತಿಗಳು ಬಂದವು.
ಮತ್ತೆ ಸೀತೆ ಹನುಮನಿಗೆ, "ಒಂದು ಬಾರಿ ನಾನು ರಾಮನ ಜೊತೆ ವಿಹರಿಸುತ್ತಿದ್ದಾಗ ಹಣೆಯ ಮೇಲೆ ಇಟ್ಟುಕೊಂಡಿದ್ದ ತಿಲಕ ಅಳಸಿತ್ತು. ಆಗ ರಾಮ ಅಲ್ಲಿಯೇ ಇದ್ದ ಕುಂಕುಮಶಿಲೆಯಿಂದ ಕುಂಕುಮವನ್ನು ತೆಗೆದು ನನ್ನ ಹಣೆಗಿಟ್ಟ. ಅದನ್ನೂ ಅವನಿಗೆ ಜ್ಞಾಪಿಸು" ಎಂದಳು.
"ಸರಿಯಮ್ಮ! ನಾನು ಇನ್ನು ಹೊರಡುತ್ತೇನೆ"
"೧೦ ತಿಂಗಳಿಂದ ನಾನು ಇಲ್ಲೇ ಇದ್ದೇನೆ. ಒಂದು ಬಾರಿಯೂ ರಾಮನಾಮವನ್ನು ಕೇಳಿರಲಿಲ್ಲ. ನೀನು ಬಂದು ರಾಮ ನಾಮವನ್ನು ನುಡಿದು ನನ್ನ ಮನಸ್ಸಿಗೆ ತುಂಬಾ ಸಂತೋಷವನ್ನು ಕೊಟ್ಟಿದ್ದೀಯ. ನೀನು ಅಷ್ಟು ಬೇಗ ಹೋಗುತ್ತೇನೆಂದರೆ ನನಗೆ ದುಃಖವಾಗುತ್ತದೆ. ಈ ರಾತ್ರಿ ಇಲ್ಲೇ ರಹಸ್ಯವಾಗಿ ಉಳಿದು ನಾಳೆ ಮತ್ತೆ ನನ್ನನ್ನು ನೋಡಿ ಹೋಗು"
"ಅಮ್ಮಾ ನೀನು ದುಃಖ ಪಡಬೇಡ. ಅಲ್ಲಿ ರಾಮನೂ ನಿನ್ನ ಕುರಿತೇ ಯೋಚಿಸುತ್ತಾ ಶೋಕ ಪಡುತ್ತಿದ್ದಾನೆ."
"ನೀನು ಹೀಗೆ ಹೇಳಿದರೆ ನನಗೆ ಇನ್ನೂ ಹೆಚ್ಚು ದುಃಖವಾಗುತ್ತದೆ. ರಾಮ ಶೋಕ ಪಡುತ್ತಿದ್ದಾನೆ ಎಂಬ ವಿಷಯವನ್ನು ನನಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಹನುಮ! ಈ ಸಮುದ್ರವನ್ನು ದಾಟಲು ನಿನಗೆ, ಗರುಕ್ಮಂತನಿಗೆ, ವಾಯುವಿಗೆ ಸಾಧ್ಯ. ಆದರೆ ರಾಮ ಇಲ್ಲಿಗೆ ಹೇಗೆ ಬರುತ್ತಾನೆ?"
ಹನುಮ ಸೀತೆಗೆ ವಿನಯದಿಂದ ಉತ್ತರಿಸಿದ: "ಅಮ್ಮ! ಸುಗ್ರೀವನ ಬಳಿ ನನಗಿಂತ ಕಡಿಮೆ ಬಲವುಳ್ಳವರು ಯಾರೂ ಇಲ್ಲ. ಎಲ್ಲರೂ ನನ್ನ ಸಮಾನರಾದ ಬಲವುಳ್ಳವರು ಅಥವಾ ನನಗಿಂತಲೂ ಹೆಚ್ಚು ಬಲವುಳ್ಳವರು. ನಾನು ಹೋಗಿ ರಾಮನಿಗೆ ವಿಷಯ ತಿಳಿಸುತ್ತೇನೆ. ರಾಮ ಸ್ವಲ್ಪ ಸಮಯದಲ್ಲೇ ವಾನರ ಸೈನ್ಯದ ಜೊತೆ ಬಂದು ರಾವಣನ ಸಂಹಾರ ಮಾಡುತ್ತಾನೆ.”
Comments
Post a Comment