೭೫. ಕೊಲಾಹಲ ಸೃಷ್ಠಿಸಿದ ಹನುಮ

ಹನುಮಂತ ಸೀತೆಯನ್ನು ಬಿಟ್ಟು ಬಂದು ಉತ್ತರ ದಿಕ್ಕಿನಲ್ಲಿ ನಿಂತು, 'ಹೇಗೂ ಲಂಕೆಗೆ ಬಂದು ಸೀತೆಯನ್ನು ನೋಡಿದ್ದಾಗಿದೆ. ಒಂದು ಬಾರಿ ರಾವಣನನ್ನೂ ನೋಡೋಣ. ಏನಾದರೂ ಪ್ರಯೋಜನವಾದರೆ ಆಗಲಿ. ದರ್ಶನ ಕೇಳಿದರೆ ಅವನು ಕೊಡುವುದಿಲ್ಲ. ಅವನಿಗೆ ಇಷ್ಟವಾದ ಅಶೋಕವನವನ್ನು ನಾಶಮಾಡಿಬಿಡೋಣ. ಆಗ ಅವನೇ ಕರೆಯುತ್ತಾನೆ' ಎಂದುಕೊಂಡು ಭೀಮರೂಪವನ್ನು ಪಡೆದು ಅಶೋಕವನದ ಮೇಲೆ ಎಗರಿದ. ಅವನ ವೇಗಕ್ಕೆ ಅಲ್ಲಿದ್ದ ಮರಗಳು ಬಿದ್ದವು. ಅವನು ಮಾಡಿದ ಶಬ್ದಕ್ಕೆ ಪಕ್ಷಿಗಳು ಸತ್ತವು. ಅಲ್ಲಿದ್ದ ಸರೋವರದ ನೀರನ್ನೆಲ್ಲ ತೆಗೆದುಬಿಟ್ಟ. ಹನುಮ ಮಾಡುತ್ತಿದ್ದ ವಿಧ್ವಂಸಕ್ಕೆ ಅಲ್ಲಿದ್ದ ರಾಕ್ಷಸಿಯರು ಹೆದರಿ ಸೀತೆಯ ಬಳಿ ಬಂದು, " ಕೋತಿ ಚಿಕ್ಕದಿದ್ದಾಗ ಮರದ ಮೇಲೆ ಕೂತಿದ್ದನ್ನು ನಾವು ನೋಡಿದ್ದೇವೆ. ಅದು ನಿನ್ನ ಹತ್ತಿರ ಮಾತಾಡಿದೆ ಎಂದು ನಮ್ಮ ಅನುಮಾನ. ಕೋತಿ ಯಾರು?" ಎಂದು ಕೇಳಿದರು.
"ಹಾವಿನ ಕಾಲುಗಳು ಹಾವಿಗೇ ತಿಳಿಯಬೇಕು. ಅವನು ರಾಕ್ಷಸನೋ, ಯಾರೋ ತಿಳಿಯುವ ಶಕ್ತಿ ನನಗೆಲ್ಲಿದೆ? ನಿಮಗೇ ತಿಳಿಯಬೇಕು" ಎಂದಳು ಸೀತೆ.

ರಾಕ್ಷಸ ಸ್ತ್ರೀಯರು ರಾವಣನ ಬಳಿ ಬಂದು, "ಸ್ವಾಮಿ ಎಲ್ಲಿಂದಲೋ ಬಂದ ಮಹಾವಾನರ ಅಶೋಕವನವನ್ನೆಲ್ಲ ನಾಶ ಮಾಡುತ್ತಿದೆ. ಅದು ಯಾರ ದೂತನೋ ನಮಗೆ ಗೊತ್ತಿಲ್ಲ. ಆದರೆ ಸೀತೆ ಕೂತಿದ್ದ ಶಿಂಶುವಾ ವೃಕ್ಷವನ್ನು ಬಿಟ್ಟು ಇನ್ನೆಲ್ಲವನ್ನೂ ನಾಶಮಾಡಿದೆ. ಆ ಮರವನ್ನು ತಿಳಿದು ಬಿಟ್ಟಿತೋ, ತಿಳಿಯದೆ ಬಿಟ್ಟಿತೋ ನಮಗೆ ತಳಿಯದು. ಆದರೆ ಎಲ್ಲವನ್ನೂ ನಾಶಮಾಡಿ ಮರವನ್ನು ಮಾತ್ರ ಬಿಟ್ಟಿದೆಯೆಂದರೆ ನಮಗೆ ಅನುಮಾನ ಬರುತ್ತಿದೆ. ನೀವು ಮನಸ್ಸಿಟ್ಟ ಸೀತೆಯ ಜೊತೆ ವಾನರ ಮಾತಾಡಿತು" ಎಂದರು.
ರಾವಣನಿಗೆ ಕೋಪಬಂದು, ತನ್ನ ೮೦೦೦೦ ಕಿಂಕರರನ್ನು ಕರೆದು, " ವಾನರನನ್ನು ಬಂಧಿಸಿ. ಸಿಗದಿದ್ದರೆ ಅವನನ್ನು ಕೊಲ್ಲಿ" ಎಂದು ಹೇಳಿ ಕಳಿಸಿದ.

ಹನುಮ ಹತ್ತಿರವಿದ್ದ ತೋರಣದ ಮೇಲೆ ಕೂತು ಜಯ ಮಂತ್ರವನ್ನು ಪಠಿಸುತ್ತಿದ್ದ:
ಜಯತ್ಯತಿಬಲೋ ರಾಮೋ ಲಕ್ಷ್ಮಣಶ್ಚ ಮಹಾಬಲಃ
ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಾಲಿತಃ
ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ
ಹನುಮಾನ್ ಶತೃಸೈನ್ಯಾನಾಂ ನಿಹನ್ತಾ ಮಾರುತಾತ್ಮಜಃ
ನ ರಾವಣ ಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್
ಶಿಲಾಭಿಸ್ತು ಪ್ರಹರತಃ ಪಾದಶೈಶ್ಚ ಸಹಶ್ರಹಃ
ಅರ್ಥಯತ್ವಾ ಪುರೀಂ ಲಂಕಾಂ ಅಭಿವಾದ್ಯ ಚ ಮೈಥಿಲೀಂ
ಸಮೃದ್ಧಾರ್ಧೋ ಗಮಿಶ್ಯಾಮಿ ಮಿಷತಾಂ ಸರ್ವರಕ್ಷಸಾಮ್
ರಾಮ ಲಕ್ಷ್ಮಣರು ವಿಶೇಷವಾದ ಬಲದಿಂದ ಜಯ ಪಡೆಯುತ್ತಾರೆ. ರಾಮನಿಂದ ರಕ್ಷಿಸಲ್ಪಟ್ಟ ಸುಗ್ರೀವ ಜಯ ಪಡೆಯುತ್ತಾನೆ. ರಾಮನ ದಾಸ ನಾನು, ಹನುಮ. ನಾನು ಯುದ್ಧದಲ್ಲಿ ಯಾವುದೇ ಆಯುಧಗಳನ್ನು ಬಳಸುವುದಿಲ್ಲ. ರಾವಣನ ಸೈನ್ಯವನ್ನು ಕಾಲಿನಿಂದ ತುಳಿದು, ಕೈಯಿಂದ ಗುದ್ದಿ, ಮರ ಕಲ್ಲುಗಳಿಂದ ಹೊಡೆದು ಕೊಂದುಬಿಡುತ್ತೇನೆ. ನನಗೆ ಸಾವಿರ ರಾವಣಾಸುರರು ಒಂದು ಕೀಟದೊಂದಿಗೆ ಸಮಾನ. ನನ್ನನ್ನು ತಡೆಯುವವನು ಯಾರೂ ಇಲ್ಲ. ಸೀತೆಯನ್ನು ನೋಡಲು ಹೇಗೆ ಬಂದೆನೋ ಹಾಗೆಯೇ ಸಮುದ್ರವನ್ನೂ ದಾಟಿ ಹೋಗುತ್ತೇನೆ. ನನ್ನನ್ನು ಹಿಡಿವ ಗಂಡಸು ಲಂಕೆಯಲ್ಲಿ ಯಾರೂ ಇಲ್ಲ."

ಹನುಮ ಮಂತ್ರ ಪಠಿಸುತ್ತಿದ್ದಾಗ ರಾವಣ ಕಳಿಸಿದ ೮೦ ಸಾವಿರ ಕಿಂಕರರು ಅವನ ಮೇಲೆ ವಿವಿಧ ಆಯುಧಗಳನ್ನು ಎಸೆದರು. ಪ್ರಚಂಡನಾದ ಹನುಮ ತಾನು ಕೂತಿದ್ದ ತೋರಣಕ್ಕಿದ್ದ ಕಬ್ಬಿಣದ ಪರಿಘವನ್ನು ತೆಗೆದು ಅವರ ಮೇಲೆ ಎಸೆದ. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ರಾಕ್ಷಸರ ರಕ್ತ, ಮಾಂಸಗಳಿಂದ ಪ್ರದೇಶ ತುಂಬಿಹೋಯಿತು. ಹನುಮ ಮತ್ತೆ ತೋರಣದ ಮೇಲೆ ಕುಳಿತಾಗ ಸಾವಿರ ಕಂಬಗಳ ಒಂದು ಪ್ರಾಸಾದ ಕಾಣಿಸಿತು. ಅವನು ಅದರ ಮೇಲೆ ಹತ್ತಿ ಜೋರಾದ ಕೂಗು ಹಾಕಿದ. ಶಬ್ದಕ್ಕೆ ಅನೇಕರ ಹೃದಯವೇ ನಿಂತಿತು. ಕೆಲವರು ಕಿವಿಯಲ್ಲಿ ರಕ್ತ ಕಾರಿ ಸತ್ತುಬಿದ್ದರು. ಪ್ರಾಸಾದದ ಮಧ್ಯದಲ್ಲಿದ್ದ ಬಂಗಾರದ ಕಂಬವನ್ನು ಗಾಳಿಯಲ್ಲಿ ಜೋರಾಗಿ ತಿರುಗಿಸಿದಾಗ, ವೇಗಕ್ಕೆ ಹುಟ್ಟಿದ ಅಗ್ನಿ ಪ್ರಾಸಾದವನ್ನೆಲ್ಲ ಸುಟ್ಟುಬಿಟ್ಟಿತು. ಅದಕ್ಕೆ ಕಾವಲಿದ್ದ ೧೦೦ ರಾಕ್ಷಸರನ್ನೂ ಹನುಮ ಕೊಂದುಬಿಟ್ಟ. ನಂತರ, "ವಾನರರು ಹತ್ತು, ನೂರು, ಸಾವಿರ, ಹತ್ತು ಸಾವಿರ ಆನೆಗಳ ಬಲವುಳ್ಳವರು. ನಾವು ಭೂಮಿಗೆ ಅಡ್ಡವಾಗಿ, ನೇರವಾಗಿ ಎಗರಬಲ್ಲೆವು. ಎಲ್ಲರೂ ಸೀತೆಯನ್ನು ಹುಡುಕುತ್ತಿದ್ದಾರೆ. ಅವರು ನಿಮ್ಮನ್ನು ಬಿಡುವುದಿಲ್ಲ. ರಾಮನ ಜೊತೆ ಕಟ್ಟಿಕೊಂಡ ವೈರದಿಂದ ನೀವೆಲ್ಲ ಸಾಯುತ್ತೀರ" ಎನ್ನುತ್ತಾ ಮತ್ತೆ ತೋರಣದ ಮೇಲೆ ಕುಳಿತು ಜಯ ಮಂತ್ರವನ್ನು ಪಠಿಸಲು ಶುರುಮಾಡಿದ.

೮೦ ಸಾವಿರ ಜನ ಸತ್ತ ವಿಷಯವನ್ನು ತಿಳಿದ ರಾವಣ ಪ್ರಹಸ್ತನ ಮಗನಾದ ಜಂಬುಮಾಲಿಯನ್ನು ಹನುಮನ ಮೇಲೆ ಯುದ್ಧಕ್ಕೆ ಕಳಿಸಿದ. ಅವನು ಕತ್ತೆಗಳ ರಥದ ಮೇಲೆ ಬಂದ. ಹನುಮ ಅವನ ಮೇಲೆ ಒಂದು ದೊಡ್ಡ ಕಲ್ಲನ್ನು ಎಸೆದಾಗ ಜಂಬುಮಾಲಿ ಅದನ್ನು ಒಂದು ಬಾಣದಿಂದ ನಿಗ್ರಹಿಸಿದ. ನಂತರ ಹನುಮ ಎಸೆದ ಮರವನ್ನೂ ಕಡಿದು ಹಾಕಿ, ಹನುಮನ ಎದೆ, ಮುಖದ ಮೇಲೆ ಬಾಣಗಳನ್ನು ಬಿಟ್ಟ. ಹನುಮನ ಶರೀರದಿಂದ ರಕ್ತ ಸುರಿಯಿತು. ಆಗ ಹನುಮ ಮತ್ತೊಂದು ದೊಡ್ಡ ಕಲ್ಲನ್ನು ಕಿತ್ತು ತಿರುಗಿಸಿ ಜಂಬುಮಾಲಿಯ ಮೇಲೆ ಎಸೆದ. ಅದು ಅವನ ರಥ, ಕಟ್ಟೆಗಳು, ಅವನ ಕೈ ಕಾಲು, ತಲೆಯೆಲ್ಲವನ್ನೂ ನುಚ್ಚುನೂರು ಮಾಡಿತು. ಜಂಬುಮಾಲಿಯ ಹಿಂದೆ ಬಂದ ರಾಕ್ಷಸರನ್ನೆಲ್ಲ ಹನುಮ ಕೊಂದು ಮತ್ತೆ ತೋರಣದ ಮೇಲೆ ಹತ್ತಿ ಜಯಮಂತ್ರವನ್ನು ಪಠಿಸಲು ಆರಂಭಿಸಿದ.

"ಜಂಬುಮಾಲಿ ಮತ್ತು ಅವನ ಸೈನ್ಯ ನಾಶವಾಯಿತು" - ರಾವಣನಿಗೆ ಸುದ್ದಿ ಬಂತು. ಕೋಪಗೊಂಡ ರಾವಣ ತನ್ನ ೭೬ ಮಂತ್ರಿಗಳ ಮಕ್ಕಳನ್ನು ಯುದ್ಧಕ್ಕೆ ಕಳಿಸಿದ. ಅವರು ಎಲ್ಲ ದಿಕ್ಕುಗಳಿಂದಲೂ ಹನುಮನ ಮೇಲೆ ದಾಳಿ ಮಾಡಿದರು. ಹನುಮ ತನ್ನ ಶರೀರವನ್ನು ದೊಡ್ಡದಾಗಿ ಬೆಳೆಸಿ ಮೇಲಕ್ಕೆ ಹಾರಿ ಅವರ ಮೇಲೆ ಬಿದ್ದ. ಅವನು ಬಿದ್ದ ರಭಸಕ್ಕೆ ಕೆಲವರು ಸತ್ತರು. ಕೆಲವರನ್ನು ಹಲ್ಲುಗಳಿಂದ ಕಚ್ಚಿ ಕೊಂದ. ಪ್ರದೇಶವೆಲ್ಲ ರಕ್ತಮಯವಾಯಿತು.

ಖತಿಗೊಂಡ ರಾವಣ ತನ್ನ ಐವರು ಸೇನಾಧಿಪತಿಗಳನ್ನು ಕರೆದು, "ನೀವು ವಾನರವನ್ನು ಹುಷಾರಾಗಿ ಹಿಡಿಯಿರು. ಅದು ಸಾಮಾನ್ಯವಾದ ವಾನರವಲ್ಲ. ನಾನು ಅನೇಕ ಮಹರ್ಷಿಗಳಿಗೆ ತೊಂದರೆ ಕೊಟ್ಟಿದ್ದೇನೆ. ಅವರು ತಮ್ಮ ತಪಃಶಕ್ತಿಯಿಂದ ವಾನರನನ್ನು ಸೃಷ್ಠಿಸಿರಬಹುದು" ಎಂದು ಹೇಳಿ ಕಳಿಸಿದ.


ವಿರೂಪಾಕ್ಷ, ಯೂಪಾಕ್ಷ, ದುರ್ಧರ, ಪ್ರಘಸ, ಭಾಸಕರ್ಣ ಎಂಬ ಐವರು ಸೇನಾನಾಯಕರು ಹನುಮನ ಮೇಲೆ ಯುದ್ಧಕ್ಕೆ ಬಂದರು. ದುರ್ಧರ ಬಿಟ್ಟ ಮೂರು ಕಬ್ಬಿಣದ ಬಾಣಗಳು ಹನುಮನ ತಲೆಗೆ ತಗುಲಿದವು. ಕೋಪಗೊಂಡ ಹನುಮ ಆಕಾಶಕ್ಕೆಗರಿ ದುರ್ಧರನ ಮೇಲೆ ಬಿದ್ದಾಗ ದುರ್ಧರ ಸತ್ತುಬಿದ್ದ. ಮಿಕ್ಕವರನ್ನೂ ಮರ, ಕಲ್ಲುಗಳಲ್ಲಿ ಹೊಡೆದು ಕೊಂದ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ