೫೭. ಕಬಂಧನ ಕಥೆ


ಅಯೋಮುಖಿಯನ್ನು ಕೊಂದು ರಾಮಲಕ್ಷ್ಮಣರು ಮುಂದೆ ಹೊರಟರು. ಅರಣ್ಯದಲ್ಲಿ ಸ್ವಲ್ಪದೂರ ಪ್ರಯಾಣಿಸಿದ ಮೇಲೆ ಲಕ್ಷ್ಮಣ ರಾಮನಿಗೆ, "ಅಣ್ಣ! ನನಗೆ ದುಃಶಕುನಗಳು ಕಾಣಿಸುತ್ತಿವೆ. ಏನೋ ಭಯ ಆವರಿಸುತ್ತಿದೆ. ವಂಕಜಲವೆಂಬ ಪಕ್ಷಿಯ ಕೂಗು ಕೇಳಿಸುತ್ತಿದೆ. ಕೂಗು ಕೇಳಿದವರಿಗೆ ಜಯ ಸಿಗುತ್ತದಾದರೂ ದಾರುಣವಾದ ಯುದ್ಧ ನಡೆಯುತ್ತದೆ..." ಎನ್ನುತ್ತಿದ್ದಾಗ, ಅವರಿಗೆ ಒಂದು ಶಬ್ದ ಕೇಳಿಸಿತು. ಶಬ್ದ ಬಂದ ಕಡೆ ದೃಷ್ಟಿ ಹರಿಸಿದಾಗ ಅವರಿಗೆ ಎಲ್ಲೂ ಕಾಣದ ರೂಪವೊಂದು ಕಾಣಿಸಿತು. ಅದಕ್ಕೆ ತಲೆ, ಕಾಲುಗಳಿಲ್ಲ. ಎದೆಯಿಂದ ನಡುವಿನವರೆಗೆ ಮಾತ್ರ ಶರೀರವಿದೆ. ಅದರಲ್ಲೇ ಒಂದು ದೊಡ್ಡ ಬಾಯಿ, ಕಣ್ಣುಗಳಿವೆ. ಕಣ್ಣು ಎಷ್ಟೋ ದೂರದಲ್ಲಿದ್ದ ರೂಪಗಳನ್ನು ಕೂಡ ನೋಡುತ್ತದೆ. ಅದರ ಕೈ ಒಂದು ಯೋಜನದಷ್ಟು ಉದ್ದ. ಅದು ನಡೆಯಲಾಗದ ಕಾರಣ ತೆವಳಿಕೊಂಡು ಕಾಡಿನಲ್ಲಿ ಸಿಕ್ಕಿದ್ದನ್ನು ತಿನ್ನುತ್ತಿತ್ತು. ಅದನ್ನು ನೋಡಿ ಇದೇನು ವಿಚಿತ್ರವೆಂದುಕೊಳ್ಳುವಷ್ಟರಲ್ಲಿ ಅವರಿಬ್ಬರನ್ನೂ ಹಿಡಿದುಬಿಟ್ಟಿತು! "ನಾನು ರಾಕ್ಷಸ. ನನ್ನನ್ನು ಕಬಂಧನೆನ್ನುತ್ತಾರೆ. ಇಲ್ಲಿಗೆ ಏಕೆ ಬಂದಿರಿ? ಈಗ ನಾನು ನಿಮ್ಮಿಬ್ಬರನ್ನು ತಿಂದುಬಿಡುತ್ತೇನೆ" ಎಂದಿತು. ಅವರನ್ನು ಹತ್ತಿರ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾಗ, ಲಕ್ಷ್ಮಣ ರಾಮನಿಗೆ ಇನ್ನು ಅವನನ್ನು ಉಪೇಕ್ಷಿಸಿದರೆ ತೊಂದರೆ ಎಂದ. ತಕ್ಷಣ ಲಕ್ಷ್ಮಣ ಅವನ ಎಡ ಬಾಹುವನ್ನೂ, ರಾಮ ಬಲಬಾಹುವನ್ನೂ ಕಡಿದುಬಿಟ್ಟರು

ಕಬಂಧ ನೋವಿನಿಂದ, "ನೀವಿಬ್ಬರೂ ಯಾರು?" ಎಂದು ಕೇಳಿದ.
ಲಕ್ಷ್ಮಣ: "ಇವನು ರಾಮ. ದಶರಥನ ಮಗ. ತಂದೆಯ ಮಾತಿನಂತೆ ೧೪ ವರ್ಷ ವನವಾಸಕ್ಕೆ ಬಂದಿದ್ದಾನೆ. ಇವನ ಪತ್ನಿ ಸೀತೆಯನ್ನು ಯಾರೋ ಅಪಹರಿಸಿದ್ದಾರೆ. ಅವಳನ್ನು ಹುಡುಕುತ್ತ ನಾವು ಕಡೆ ಬಂದೆವು. ನೀನು ಯಾರು? ಇಂತಹ ರೂಪವನ್ನು ನಾವು ಎಲ್ಲೂ ನೋಡಿಲ್ಲ"
"ನಾನು ನನ್ನ ಕಥೆ ಹೇಳುತ್ತೇನೆ. ಅದಕ್ಕೆ ಮುಂಚೆ ನೀವು ನನಗೆ ಒಂದು ಉಪಕಾರ ಮಾಡಬೇಕು. ಒಂದು ಚಿತೆ ಮಾಡಿ, ಅದರ ಮೇಲಿಟ್ಟು ನನ್ನನ್ನು ಸುಟ್ಟುಬಿಡಿ."
"ಸರಿ. ಆದರೆ ಸೀತೆಯನ್ನು ಯಾರೋ ರಾಕ್ಷಸ ಅಪಹರಿಸಿದ್ದಾನೆ. ನೀನೂ ರಾಕ್ಷಸ. ನಿನಗೇನಾದರೂ ಗೊತ್ತೇ?"
" ವಿಷಯವನ್ನು ನಾನು ಶರೀರದಿಂದ ಹೇಳಲು ಆಗುವುದಿಲ್ಲ. ನೀವು ಇದನ್ನು ಸುಟ್ಟರೆ ನನಗೆ ಹಿಂದಿನ ಶರೀರ ಬರುತ್ತದೆ. ಅದಕ್ಕೆ ಎಲ್ಲ ಜ್ಞಾಪಕವಿದೆ. ಈಗ ಇದನ್ನು ಸುಟ್ಟುಬಿಡಿ."
"ಆಯಿತು. ಅದಕ್ಕೆ ಮುಂಚೆ ನೀನು ಯಾರು? ನಿನಗೆ ರೂಪವೇಕೆ? ಅದನ್ನು ಹೇಳು."
ಕಬಂಧ ತನ್ನ ಚರಿತ್ರೆಯನ್ನು ಹೇಳಿದ: "ಪೂರ್ವದಲ್ಲಿ ನಾನು ಒಬ್ಬ ಮಹಾನ್ ತೇಜಸ್ವಿಯಾಗಿದ್ದೆ. ನನ್ನ ಹೆಸರು ಧನು. ನನಗೆ ಸೂರ್ಯ, ಚಂದ್ರ, ಇಂದ್ರರಂತಹ ರೂಪವಿತ್ತು. ಅದನ್ನು ನೋಡಿ ಎಲ್ಲರೂ ಉಬ್ಬಿಹೋಗುತ್ತಿದ್ದರು. ಆದರೆ ನನಗೆ ಒಂದು ಕೆಟ್ಟ ಆಲೋಚನೆ ಬಂತು. ನಾನು ಕಾಮರೂಪಿಯಾದ್ದರಿಂದ ಅರಣ್ಯಕ್ಕೆ ಹೋಗಿ, ವಿಚಿತ್ರವೇಷವನ್ನು ಪಡೆದು ಎಲ್ಲರನ್ನೂ ಭಯಪಡಿಸಬೇಕೆನ್ನಿಸಿತು. ಅಂತೆಯೇ ವಿಚಿತ್ರ ರೂಪವನ್ನು ಧರಿಸಿ ಅರಣ್ಯಕ್ಕೆ ಹೋದೆ. ಅಲ್ಲಿಗೆ ಸ್ಥೂಲಶಿರ ಎಂಬ ಒಬ್ಬ ಮಹರ್ಷಿ ಬಂದರು. ಅವರ ಮುಂದೆ ಹೋಗಿ ಜೋರಾಗಿ ಶಬ್ದ ಮಾಡಿದೆ. ನನ್ನ ಉಪದ್ರವವನ್ನು ನೋಡಿ ಅವರು, 'ನಿನಗೆ ವೇಷ ಒಂದು ಆಟದಂತಿದೆ. ತುಂಬಾ ಕಾಲ ನೀನು ಹೀಗೇ ಇರು' ಎಂದು ಶಪಿಸಿ ಹೊರಟುಹೋದರು. ತಕ್ಷಣ ನನ್ನ ನಿಜರೂಪವನ್ನು ಪಡೆದು, 'ನಿಮ್ಮ ಶಾಪ ಇನ್ನು ಸ್ವಲ್ಪಹೊತ್ತಿನಲ್ಲೇ ತಟ್ಟುತ್ತದೆ. ಆದರೆ ಇದರ ಉಪಸಂಹಾರವೇನು?' ಎಂದು ಕೇಳಿದೆ. ಅವರು ಇನ್ನು ಸ್ವಲ್ಪದಿನವಾದ ಮೇಲೆ ರಾಮಲಕ್ಷ್ಮಣರು ನನ್ನ ಕೈಗಳನ್ನು ಕತ್ತರಿಸುತ್ತಾರೆ. ನಂತರ ಶಾಪವಿಮೋಚನೆ ಎಂದು ಹೇಳಿ ಹೋದರು. ನಾನು ತಪಸ್ಸನ್ನಾರಂಭಿಸಿದೆ. ಕೆಲಕಾಲದ ನಂತರ ಬ್ರಹ್ಮ ದೇವರು ಪ್ರತ್ಯಕ್ಷರಾದರು. ಅವರ ಹತ್ತಿರ ದೀರ್ಘಾಯುಷ್ಯನಾಗಲು ವರ ಪಡೆದೆ. ಅಹಂಕಾರದಿಂದ ಇಂದ್ರನ ಮೇಲೆ ಯುದ್ಧಕ್ಕೆ ಹೋದೆ. ಇಂದ್ರ ನನ್ನ ಮೇಲೆ ವಜ್ರಾಯುಧ ಪ್ರಯೋಗಿಸಿದ. ಅದು ನನ್ನ ಕಾಲುಗಳನ್ನು ಕೈಯೊಳಕ್ಕೆ ಸೇರಿಸಿಬಿಟ್ಟಿತು. ತಲೆಯನ್ನು ಎದೆಯೊಳಗೆ ಸೇರಿಸಿತು. ಕೇವಲ ಎದೆಯಿಂದ ನಡುವಿನವರೆಗೂ ಇದ್ದ ಶರೀರದಿಂದ ನಾನು ಕೆಳಗೆ ಬಿದ್ದೆ. 'ನನಗೆ ದೀರ್ಘಾಯುಷ್ಯನಾಗುವ ವರವಿದೆ. ನನ್ನ ಬಾಯಿ ಒಳಗೆ ಹೋಗಿದೆ. ಈಗ ನಾನೇನು ತಿನ್ನಬೇಕು?' ಎಂದು ನಾನು ಇಂದ್ರನನ್ನು ಕೇಳಿದಾಗ ಅವನು ಕಣ್ಣು, ಬಾಯಿಗಳನ್ನು ಕೊಟ್ಟು, ನನ್ನ ಕೈಗಳನ್ನು ಯೋಜನದಷ್ಟು ಉದ್ದ ಮಾಡಿದ. ರಾಮ! ಅಂದಿನಿಂದ ನಾನು ಇಲ್ಲೇ ಸಿಕ್ಕಿದ್ದನ್ನು ತಿನ್ನುತ್ತಾ ನಿಮ್ಮ ಹೆಜ್ಜೆಯನ್ನೇ ಕಾಯುತ್ತಾ ಇದ್ದೇನೆ. ನೀವು ಶರೀರವನ್ನು ಸುಟ್ಟರೆ ತುಂಬಾ ಉಪಕಾರವಾಗುತ್ತದೆ."
(ನಮಗಿರುವ ಸುಗುಣಗಳಿಂದಲೇ ನಮಗೆ ಅಹಂಕಾರ ಬರುತ್ತದೆ. ಒಬ್ಬೊಬ್ಬರಿಗೆ ಒಂದೊಂದು. ಅಂದ, ಹಣ, ಅಧಿಕಾರ, ವಿದ್ಯೆ, ಬುದ್ದಿಗಳಿಂದ ಅಹಂಕಾರ ಬರುತ್ತದೆ. ನಮಗಿರುವುದರಿಂದ ಹತ್ತುಜನಕ್ಕೆ ಉಪಯೋಗವಾಗಲೆಂದು ನಾವು ಬದುಕುವುದಿಲ್ಲ. ಇದೇ ಕಬಂಧನ ಜೀವನದಿಂದ ನಾವು ಕಲಿಯಬೇಕಾದ ಪಾಠ.)

ರಾಮಲಕ್ಷ್ಮಣರು ಕಬಂಧನನ್ನು ಒಂದು ಚಿತೆಯ ಮೇಲಿಟ್ಟು ಸುಟ್ಟರು. ತಕ್ಷಣ ಅದರಿಂದ ಆಭರಣಗಳನ್ನು ಧರಿಸಿ, ತೇಜಸ್ವಿಯಾದ ದಿವ್ಯಶರೀರದಿಂದ ಧನು ಮೇಲೆ ಬಂದ. “ರಾಮ ನಿನಗೆ ಕೆಟ್ಟ ಕಾಲ ನಡೆಯುತ್ತಿದೆ. ನಿನ್ನ ಹಾಗೆ ಹೆಂಡತಿಯನ್ನು ಕಳೆದುಕೊಂಡವನು. ಇನ್ನೊಬ್ಬನಿದ್ದಾನೆ. ಅವನೂ ಧಾರ್ಮಿಕ. ಅವನ ಹೆಸರು ಸುಗ್ರೀವ. ಋಕ್ಷರಜಸ್ಸೆಂಬ ವಾನರರ ಪತ್ನಿಗೆ ಸೂರ್ಯನ ತೇಜಸ್ಸಿನಿಂದ ಹುಟ್ಟಿದವನು. ನಾಲ್ವರು ವಾನರರ ಜೊತೆ ಋಷ್ಯಮೂಕ ಪರ್ವತದಲ್ಲಿದ್ದಾನೆ. ಅವನನ್ನು ಅವನ ಅಣ್ಣ ವಾಲಿ ರಾಜ್ಯದಿಂದ ಹೊರಹಾಕಿದ್ದಾನೆ. ಅವನ ಜೊತೆ ಸ್ನೇಹ ಬೆಳೆಸು. ವಾನರ ಎಂದು ಅವನನ್ನು ಉಪೇಕ್ಷಿಸಬೇಡ. ಈಗ ನಿನಗೆ ಒಬ್ಬ ಮಿತ್ರನ ಅವಶ್ಯಕತೆಯಿದೆ. ಸುಗ್ರೀವ ನಿನಗೆ ತಕ್ಕವನು. ಇಲ್ಲಿಂದ ನೀನು ಪಶ್ಚಿಮಕ್ಕೆ ಹೋಗು, ಅಲ್ಲಿ ನಿನಗೆ ಅಸಾಮಾನ್ಯವಾದ ಹಣ್ಣುಗಳುಳ್ಳ ವೃಕ್ಷಸಮೂಹ ಕಾಣಿಸುತ್ತದೆ. ಆ ಹಣ್ಣುಗಳನ್ನು ತಿಂದು ಮುಂದೆ ಹೋದರೆ ಕಾಡು ಸಿಗುತ್ತದೆ, ಇನ್ನೂ ಮುಂದೆ ಹೋದರೆ ಸುಗಂಧಭರಿತವಾದ, ನಿರ್ಮಲವಾದ, ತಂಪಾದ ನೀರಿನಿಂದ ಕೂಡಿದ ಪಂಪಾ ಸರೋವರ ಕಾಣುತ್ತದೆ. ಅಲ್ಲಿ ಹಂಸ, ಪ್ಲವ, ಕ್ರೌಂಚ, ಕುರರವಗಳೆಂಬ ಪಕ್ಷಿಗಳಿವೆ, ರುಚಿಕರವಾದ ಮೀನುಗಳಿವೆ. ಅವು ನಿಮಗೆ ಆಹಾರವಾಗಬಹುದು. ನೀವು ರಾತ್ರಿ ಅಲ್ಲೇ ಕಳೆಯಿರಿ. ಅಲ್ಲಿ ನಿಮಗೆ ಎಂದೂ ಬಾಡದ ಹೂಗಳು ಕಾಣಿಸುತ್ತವೆ. ಅವನ್ನು ಯಾರೂ ಧರಿಸರು. ಆ ಹೂಗಳ ಚರಿತ್ರೆ ಕೇಳು: 
ಪೂರ್ವದಲ್ಲಿ ಮತಂಗರೆಂಬ ಮಹರ್ಷಿ ಇದ್ದರು. ಅವರ ಶಿಷ್ಯರು ಅವರಿಗೆ ಬೇಕಾದ ದರ್ಭೆ ಮುಂತಾದವುಗಳನ್ನು ಅರಣ್ಯದಿಂದ ತಂದುಕೊಡುತ್ತಿದ್ದರು. ಒಂದು ಬಾರಿ ಅವರ ಬೆವರಿನ ಹನಿಗಳು ಕೆಳಗೆ ಬಿದ್ದವು. ಅವರ ಗುರುಸೇವೆ ಎಷ್ಟಿತ್ತೆಂದರೆ ಆ ಬೆವರಿನ ಹನಿಗಳು ಕೆಳಗೆ ಬಿದ್ದ ತಕ್ಷಣ ಅವು ಹೂಗಳಾದವು. ಅವು ಇಂದಿಗೂ ಬಾಡದೆ ಹಾಗೇ ಉಳಿದಿವೆ.
ಋಷ್ಯಮೂಕ ಪರ್ವತ ಪಂಪಾ ಸರೋವರದ ಎದುರಿಗಿದೆ. ಆ ಪರ್ವತವನ್ನು ಬ್ರಹ್ಮದೇವರು ನಿರ್ಮಿಸಿದರು. ಅದನ್ನು ಹತ್ತುವುದು ಕಷ್ಟ. ಆ ಪರ್ವತವನ್ನು ಆನೆಗಳು ರಕ್ಷಿಸುತ್ತಿರುತ್ತವೆ. ಅವು ಪ್ರತಿದಿನ ಪಂಪಾ ಸರೋವರಕ್ಕೆ ಗುಂಪು ಗುಂಪಾಗಿ ಬಂದು ನೀರು ಕುಡಿಯುತ್ತವೆ. ನಂತರ ರಕ್ತಬರುವಂತೆ ಹೊಡೆದಾಡುತ್ತವೆ. ಮರುಕ್ಷಣವೇ ಸ್ನೇಹಿತರಂತೆ ಸೊಂಡಿಲಿಗೆ ಸೊಂಡಿಲು ಸೇರಿಸಿಕೊಂಡು ಹೋಗಿ ಪರ್ವತದ ಸುತ್ತ ತಿರುಗುತ್ತವೆ. ಋಷ್ಯಮೂಕ ಪರ್ವತ ಮೇಲೆ ಮಲಗಿಕೊಂಡರೆ ರಾತ್ರಿ ಕಾಣುವ ಕನಸು ಬೆಳಗಾಗುವಷ್ಟರಲ್ಲಿ ನಿಜವಾಗುತ್ತದೆ. ಪಾಪ ಮಾಡಿದವನಿಗೆ ಬೆಟ್ಟ ಹತ್ತುವುದು ಸಾಧ್ಯವಿಲ್ಲ. ಅದರ ಮೇಲೆ ಐವರು ವಾನರರಿದ್ದಾರೆ. ಪರ್ವತದ ಮೇಲೆ ಒಂದು ಗುಹೆಯಿದೆ. ಅದರ ಪಕ್ಕ ಒಂದು ತೋಟವಿದೆ. ತೋಟದಲ್ಲಿರುವ ಹಣ್ಣುಗಳನ್ನು ತಿಂದು, ಸರಸ್ಸಿನ ನೀರು ಕುಡಿಯುತ್ತಾ ಸುಗ್ರೀವ ಆ ಗುಹೆಯಲ್ಲಿರುತ್ತಾನೆ. ಅವನು ಆಗಾಗ ಹೊರಗೆ ಬಂದು, ಶಿಖರದ ಮೇಲಿನ ಒಂದು ದೊಡ್ದ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಾನೆ. ಜ್ಞಾಪಕವಿಟ್ಟುಕೊ, ಸುಗ್ರೀವನಿಗೆ ಸೂರ್ಯಕಿರಣಗಳು ಭೂಮಿಯ ಮೇಲೆ ಎಲ್ಲಿಯವರೆಗೂ ಬೀಳುತ್ತವೆಯೋ, ಅಲ್ಲಿಯವರೆಗೂ ಇರುವ ಪರ್ವತಗಳು, ಗುಹೆಗಳು, ಅದರಲ್ಲಿರುವವರು, ಅವರ ವಂಶ ಎಲ್ಲ ತಿಳಿದಿದೆ. ಅವನ ಸ್ನೇಹ ಮಾಡು. ನಿನಗೆ ಉಪಕಾರವಾಗುತ್ತದೆ“ ಎಂದು ಹೇಳಿ ಹೊರಟುಹೋದ.

ರಾಮ ಲಕ್ಷ್ಮಣರು ಅಲ್ಲಿಂದ ಹೊರಟು ಮತಂಗ ಮಹರ್ಷಿಯ ಆಶ್ರಮ ಸೇರಿದರು. ಅಲ್ಲಿ ಅವರ ಶಿಷ್ಯೆಯಾದ ಶಬರಿ ಅವರನ್ನು ನೋಡಿ ಓಡಿಬಂದು ಅವರಿಗೆ ನಮಸ್ಕಾರ ಮಾಡಿದಳು. ಅರ್ಘ್ಯ ಪಾದ್ಯಗಳನ್ನು ಕೊಟ್ಟು ಅತಿಥಿಗೆ ಮಾಡಬೇಕಾದ ಎಲ್ಲ ಉಪಚಾರಗಳನ್ನೂ ಮಾಡಿದಳು. ರಾಮ ಉಪಚಾರಗಳನ್ನು ಸ್ವೀಕರಿಸಿದ ನಂತರ, “ನೀವು ನಿಯಮದಿಂದ ಜೀವನ ನಡೆಸುತ್ತಿದ್ದೀರಾ? ನಿಯಮಿತವಾದ ಆಹಾರ ಸೇವಿಸುತ್ತಿದ್ದೀರಾ? ತಪಸ್ಸು ಮಾಡುತ್ತಿದ್ದೀರಾ? ನಿಮ್ಮ ಗುರುಗಳ ಅನುಗ್ರಹ ಪಡೆದಿದ್ದೀರಾ?” ಎಂದು ಮುಂತಾದ ಕುಶಲ ಪ್ರಶ್ನೆಗಳನ್ನು ಕೇಳಿದ. 
ಶಬರಿ, “ರಾಮ! ಎಂದು ನಿನ್ನ ದರ್ಶನ ಮಾಡಿದೆನೋ, ಅಂದೇ ನನ್ನ ತಪಸ್ಸು ಸಿದ್ದಿಸಿತು. ನಾನು ನನ್ನ ಗುರುವಾದ ಮತಂಗ ಮಹರ್ಷೀಯ ಶಿಷ್ಯರ ಜೊತೆ ತಪಸ್ಸು ಮಾಡಿದೆ. ನೀನು ಚಿತ್ರಕೂಟ ಪರ್ವತದ ಮೇಲಿದ್ದಾಗ ನಮ್ಮ ಗುರುಗಳು ವಿಮಾನಗಳನ್ನು ಹತ್ತಿ ಉತ್ತಮಲೋಕಗಳಿಗೆ ಹೊರಟುಹೋದರು. ಅವರು ಹೋಗುವಾಗ, ‘ರಾಮ ಆಶ್ರಮದ ಬಳಿ ಬರುತ್ತಾನೆ ಅವರಿಗೆ ಅತಿಥ್ಯ ಕೊಟ್ಟು ನೀನೂ ನಮ್ಮ ಹತ್ತಿರ ಬಾ’ ಎಂದು ಹೇಳಿ ಹೋದರು” ಎಂದಳು.
ರಾಮ, “ನಿನ್ನ ಪ್ರಭಾವವನ್ನು ನಾನು ನೋಡಬೇಕೆಂದಿದ್ದೇನೆ” ಎಂದಾಗ ಶಬರಿ ರಾಮನನ್ನು ಒಳಗೆ ಕರೆದುಕೊಂಡು ಹೋಗಿ ಒಂದು ಅಗ್ನಿವೇದಿಯನ್ನು ತೋರಿಸಿ, “ರಾಮ, ನಮ್ಮ ಗುರುಗಳು ಈ ಅಗ್ನಿವೇದಿಯ ಬಳಿ ಅಗ್ನಿಹೋತ್ರ ಮಾಡುತ್ತಿದ್ದರು. ಅವರು ವೃದ್ದರಾಗಿ ಕೈಯಲ್ಲಿ ಶಕ್ತಿಯಿಲ್ಲದಿದ್ದರೂ ಹೂಗಳನ್ನು ಆ ವೇದಿಯ ಮೇಲಿಡುತ್ತಿದ್ದರು. ಈ ವೇದಿಯನ್ನು ನೋಡು. ಹೂಗಳು ಇನ್ನೂ ಬಾಡದೆ ಹಾಗೇ ಇವೆ. ಅವರು ಹೋದಾಗಿನಿಂದಲೂ ಈ ಅಗ್ನಿವೇದಿಯ ಕಾಂತಿ ದಿಕ್ಕು, ದಿಕ್ಕಿಗೂ ಪ್ರಕಾಶಿಸುತ್ತಿದೆ. ನಮ್ಮ ಗುರುಗಳಿಗೆ ನದಿಗೆ ಹೋಗಿ ಸ್ನಾನ ಮಾಡುವ ಶಕ್ತಿಯಿರಲಿಲ್ಲ. ಆದ್ದರಿಂದ ಅವರು ಇಲ್ಲೇ ಕೂತು ನಮಸ್ಕಾರ ಮಾಡಿದಾಗ ಏಳು ಸಮುದ್ರಗಳ ನೀರೂ ಇಲ್ಲೇ ಹರಿಯುತ್ತಿತ್ತು. ಅವರು ಸ್ನಾನ ಮಾಡಿ ಇಲ್ಲೇ ಬಟ್ಟೆಗಳನ್ನು ಒಣಹಾಕುತ್ತಿದ್ದರು. ಅವು ಇನ್ನೂ ಒದ್ದೆಯಾಗಿವೆ. ಅವರು ಹೋಗುವಾಗ ವಸ್ತುಗಳು ಯಾವ ಸ್ಥಿತಿಯಲ್ಲಿದ್ದವೋ ಅವು ಇಂದಿಗೂ ಅದೇ ಸ್ಥಿತಿಯಲ್ಲಿವೆ. ರಾಮ ನಿನಗಾಗಿ ಈ ಅರಣ್ಯದಿಂದ ಅನೇಕ ಪದಾರ್ಥಗಳನ್ನು ತಂದಿದ್ದೇನ. ಸ್ವೀಕರಿಸು” ಎಂದಳು. ಅವನ್ನು ಕೊಟ್ಟು, “ಗುರುಗಳು ಹೇಳಿದ್ದ ಅತಿಥ್ಯವನ್ನು ನಿನಗೆ ಕೊಟ್ಟಿದ್ದೇನೆ. ಇನ್ನು ನಾನು ಹೋರಡುತ್ತೇನೆ” ಎಂದು ಕೇಳಿ ಸಂಕಲ್ಪಮಾತ್ರದಿಂದ ಅಗ್ನಿಯನ್ನು ಸೃಷ್ಠಿಸಿ ಅದರಲ್ಲಿ ಧುಮುಕಿ ತನ್ನ ಶರೀರವನ್ನು ಬಿಟ್ಟುಬಿಟ್ಟಳು. ಅದರಿಂದ ಅವಳ ದಿವ್ಯಶರೀರ ಹೊರಗೆ ಬಂದು ಅವಳ ಗುರುವಿದ್ದ ಲೋಕಕ್ಕೆ ಹೋರಟುಹೋಯಿತು.


ಆ ದೃಶ್ಯವನ್ನು ಕಂಡು ರಾಮಲಕ್ಷ್ಮಣರು ರೋಮಾಂಚನಗೊಂಡು ಅಲ್ಲಿಂದ ಹೊರಟು ಋಷ್ಯಮೂಕ ಪರ್ವತದ ಕಡೆಗೆ ಹೊರಟರು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ