೫೯. ರಾಮ-ಸುಗ್ರೀವರ ಸ್ನೇಹ


ಹನುಮ ಮತ್ತೆ ಸನ್ಯಾಸಿಯ ವೇಷ ಧರಿಸಿ ರಾಮಲಕ್ಷ್ಮಣರನ್ನು ಸುಗ್ರೀವನಿರುವ ಪ್ರದೇಶಕ್ಕೆ ಕರೆದುಕೊಂಡು ಬಂದ. ಸುಗ್ರೀವನಿಗೆ ಅವರನ್ನು ಪರಿಚಯಿಸಿ
ಅಯಂ ರಾಮೋ ಮಹಾಪ್ರಾಜ್ಞ ಸಂಪ್ರಾಪ್ತೋ ದೃಢ ವಿಕ್ರಮಃ
ಲಕ್ಷ್ಮಣೇನ ಸಹ ಭ್ರಾತ್ರಾ ರಾಮೋಯಂ ಸತ್ಯ ವಿಕ್ರಮಃ
ಸುಗ್ರೀವ ಬಂದಿರುವವರು ಮಹಾ ಪ್ರಾಜ್ಞನಾದ ರಾಮಚಂದ್ರಮೂರ್ತಿ ಮತ್ತು ಅವನ ತಮ್ಮ ಲಕ್ಷ್ಮಣ. ರಾಮ ತನ್ನ ತಂದೆ ದಶರಥನ ಆಜ್ಞೆಯಂತೆ ಕಾಡಿಗೆ ಬಂದಿದ್ದಾನೆ. ರಾಜ್ಯ ಕಳೆದುಕೊಂಡು ಅಲ್ಲ. ರಾಮನ ಪತ್ನಿ ಸೀತೆಯನ್ನು ಯಾವನೋ ರಾಕ್ಷಸ ಅಪಹರಿಸಿದ್ದಾನೆ. ಅವಳನ್ನು ಹುಡುಕುತ್ತಾ ಇವರು ಇಲ್ಲಿಗೆ ಬಂದಿದ್ದಾರೆ. ನಿನಗೆ ಶರಣರಾಗಿ ನಿನ್ನ ಸ್ನೇಹವನ್ನು ಬಯಸುತ್ತಿದ್ದಾರೆ" ಎಂದ.

ಸುಗ್ರೀವ ಸಂತೋಷದಿಂದ, "ರಾಮ ನಿಮ್ಮ ಬಳಿ ತಪಸ್ಸು, ಒಳ್ಳೆಯ ಗುಣಗಳು, ವಿಶೇಷವಾದ ಪ್ರೀತಿಗಳಿವೆ. ನಿನ್ನಂತಹವನು ನನ್ನ ಸ್ನೇಹಿತನಾಗಿ ಸಿಕ್ಕಿರುವುದು ನನ್ನ ಅದೃಷ್ಟ. ಇಂತಹ ಸ್ನೇಹಿತ ಸಿಕ್ಕಿದರೆ ಏನನ್ನಾದರೂ ಪಡೆಯಬಹುದು. ಇದು ದೇವತೆಗಳು ನನಗೆ ಕೊಟ್ಟ ವರ ಎಂದುಕೊಳ್ಳುತ್ತೇನೆ. ನಿನಗೆ ತಿಳಿಯದುದೇನಲ್ಲ. ಗಂಡನ ಕೈಯನ್ನು ಹೆಂಡತಿ ಗಟ್ಟಿಯಾಗಿ ಹಿಡಿದುಕೊಳ್ಳುವಂತೆ, ಸ್ನೇಹ ಬಯಸುವವರೂ ಹಾಗೇ ಮಾಡಬೇಕು. ನಾನು ನನ್ನ ಸ್ನೇಹದ ಪ್ರತೀಕವಾಗಿ ನನ್ನ ಬಾಹುಗಳನ್ನು ಚಾಚುತ್ತಿದ್ದೇನೆ. ನೀನೂ ನಿನ್ನ ಬಾಹುಗಳನ್ನು ನನ್ನ ಜೊತೆ ಸೇರಿಸು" ಎಂದ.

ತಕ್ಷಣ ಹನುಮ ತನ್ನ ನಿಜರೂಪನ್ನು ಪಡೆದು ಓಡಿಹೋಗಿ ನಾಲ್ಕಾರು ಒಣ ಕಟ್ಟಿಗೆಗಳನ್ನು ತಂದು ಅಗ್ನಿಹೋತ್ರವನ್ನು ಸ್ಥಾಪಿಸಿದ. ರಾಮ ಸುಗ್ರೀವರು ಅಗ್ನಿಹೋತ್ರಕ್ಕೆ ಪ್ರದಕ್ಷಿಣೆ ಮಾಡಿ ಪರಸ್ಪರ ಕೈಗಳನ್ನು ಹಿಡಿದರು. ರಾಮ, "ಇಂದಿನಿಂದ ನಾವು ಸ್ನೇಹಿತತು. ನಿನ್ನ ಕಷ್ಟ ನನಗೆ, ನನ್ನ ಕಷ್ಟ ನಿನಗೆ" ಎಂದ.

ಸುಗ್ರೀವ ರಾಮನಿಗೆ ಸಾಲವೃಕ್ಷವನ್ನು ಕಡಿದು ರಾಮನಿಗೆ ಆಸನವಾಗಿ ಕೊಟ್ಟ. ಹನುಮ ಲಕ್ಷ್ಮಣನಿಗೆ ಗಂಧದ ಮರವನ್ನು ಆಸನವಾಗಿ ಕೊಟ್ಟ. ಅವರಿಬ್ಬರೂ ಕುಳಿತ ಮೇಲೆ ಸುಗ್ರೀವ, "ರಾಮ, ನನ್ನ ಅಣ್ಣನಾದ ವಾಲಿ ನನ್ನನ್ನು ರಾಜ್ಯದಿಂದ ಹೊರಹಾಕಿ ನನ್ನ ಪತ್ನಿಯನ್ನು ಅವನ ಪತ್ನಿಯನ್ನಾಗಿ ಮಾಡಿಕೊಂಡಿದ್ದಾನೆ. ಈಗ ದಿಕ್ಕಿಲ್ಲದವನಂತೆ ಬೆಟ್ಟದ ಮೇಲೆ ಜೀವನ ಮಾಡುತ್ತಿದ್ದೇನೆ" ಎಂದು ತನ್ನ ಕಷ್ಟ ತೋಡಿಕೊಂಡ
ರಾಮ
ಉಪಕಾರ ಫಲಂ ಮಿತ್ರಂ ವಿದಿತಂ ಮೇ ಮಹಾಕಪೇ
ವಾಲಿನಂ ತಂ ವಧಿಷ್ಯಾಮಿ ತವ ಭಾರ್ಯ ಅಪಹಾರಿಣಂ
ಉಪಕಾರ ಮಾಡುವವನೇ ಸ್ನೇಹಿತ. ನೀನು ಬದುಕಿದ್ದಾಗಲೇ ವಾಲಿ ನಿನ್ನ ಪತ್ನಿಯನ್ನು ಅನುಭವಿಸುತ್ತಿದ್ದಾನೆ. ಇದೊಂದು ಸಾಕು ಅವನನ್ನು ಕೊಲ್ಲಲು. ನಾನು ಖಂಡಿತವಾಗಿ ವಾಲಿಯ ಸಂಹಾರ ಮಾಡುತ್ತೇನೆ."

ರಾಮನ ಮಾತುಗಳನ್ನು ಕೇಳಿ ಸುಗ್ರೀವ, ಅವನ ಮಂತ್ರಿಗಳು ಸಂತೋಷಪಟ್ಟರು. ಆಶ್ಚರ್ಯದಿಂದ ಒಬ್ಬೊರನ್ನೊಬ್ಬರು ನೋಡಿಕೊಂಡರು. ಸುಗ್ರೀವನೂ, "ಕಾಣಿಸದೆ ಹೋದ ವೇದವನ್ನು ತಂದುಕೊಟ್ಟಂತೆ ನಿನಗೆ ಸೀತೆಯನ್ನು ತಂದುಕೊಡುತ್ತೇನೆ. ಸೀತೆ ಸ್ವರ್ಗ, ಪಾತಾಳಗಳಲ್ಲಿರಲಿ ಅವಳನ್ನು ಹುಡುಕಿ ತರುವ ಜವಾಬ್ದಾರಿ ನನ್ನದು" ಎಂದು ಮಾತುಕೊಟ್ಟ. ಸುಗ್ರೀವನ ಮಾತು ಕೇಳಿ ರಾಮನಿಗೆ ಸೀತೆಯ ನೆನಪು ಬಂದು ಕಣ್ಣಲ್ಲಿ ನೀರು ತುಂಬಿಕೊಂಡಿತು. ಹೀಗೆ ರಾಮ ಸುಗ್ರೀವರು ಭಾಷೆ ಪಡೆಯುತ್ತಿದ್ದಾಗ, ಮತ್ತೊಂದು ಕಡೆ ಸೀತೆ, ವಾಲಿ ಮತ್ತು ರಾವಣರ ಎಡ ಕಣ್ಣುಗಳು ಅದುರಿದವು!

ಸುಗ್ರೀವ ಏನನ್ನೋ ನೆನಪಿಸಿಕೊಂಡವನಂತೆ, "ರಾಮ ಅಳಬೇಡ. ನಿನಗೆ ಆಶ್ಚರ್ಯಕರವಾದ ಘಟನೆಯೊಂದನ್ನು ಹೇಳುತ್ತೇನೆ. ಕೆಲದಿನಗಳ ಹಿಂದೆ ನಾನು ಪರ್ವತಗಳ ಮೇಲೆ ನನ್ನ ಮಂತ್ರಿಗಳ ಜೊತೆ ಕೂತಿದ್ದೆ. ಅದೇ ಸಮಯದಲ್ಲಿ ಕೆಂಪು ಕಣ್ಣುಗಳಿದ್ದ ಒಬ್ಬ ರಾಕ್ಷಸ ಹಸಿರು ಸೀರೆಯುಟ್ಟ ಯಾರೋ ಒಬ್ಬಳು ಸ್ತ್ರೀಯನ್ನು ಕರೆದುಕೊಂಡು ಹೋಗುತ್ತಿದ್ದ. ಸ್ತ್ರೀ ತನ್ನ ಸೆರಗನ್ನು ಹರಿದು ಕೆಲವು ಆಭರಣಗಳನ್ನು ಅದರಲ್ಲಿ ಸುತ್ತಿ ಕೆಳಗೆ ಎಸೆದಳು. ಬಹುಶಃ ಸ್ತ್ರೀ ಸೀತೆಯೇ ಇರಬೇಕು. ಆಭರಣಗಳನ್ನು ತರುತ್ತೇನೆ. ಒಂದು ಬಾರಿ ನೋಡು" ಎಂದು ಹೇಳಿ ಅವನ್ನು ತಂದುಕೊಟ್ಟ. ಅವನ್ನು ನೋಡಿ ರಾಮನಿಗೆ ಶೋಕದಿಂದ ಮೂರ್ಛೆ ಬಂದಿತು. ಕೆಲ ಹೊತ್ತಿನ ಮೇಲೆ ಚೇತರಿಸಿಕೊಂಡು ಅವನ್ನು ನೋಡಲು ಪ್ರಯತ್ನಿಸಿದರೂ ಅವನ ಕಣ್ಣಲ್ಲಿನ ನೀರಿನಿಂದ ಅವನಿಗೆ ಅವು ಸರಿಯಾಗಿ ಕಾಣಿಸಲಿಲ್ಲ. ಲಕ್ಷ್ಮಣನನ್ನು ಕರೆದು ಅವನ್ನು ಪರೀಕ್ಷಿಸಲು ಹೇಳಿದ. ಲಕ್ಷ್ಮಣ,
ಅಹಂ ಜಾನಾಮಿ ಕೇಯೂರೇ ಜಾನಾಮಿ ಕುಂಡಲೇ
ನೂಪುರೇ ತು ಅಭಿಜಾನಾಮಿ ನಿತ್ಯಂ ಪಾದ ಅಭಿವಂದನಾತ್
ಅಣ್ಣ ಕೇಯೂರ, ಕುಂಡಲಗಳು ಅತ್ತಿಗೆಯವೋ ಅಲ್ಲವೋ ನನಗೆ ತಿಳಿಯದು. ಆದರೆ ಕಾಲುಂಗುರ ಮಾತ್ರ ಅತ್ತಿಗೆಯವೇ. ಪ್ರತಿದಿನ ಅವಳಿಗೆ ನಮಸ್ಕಾರ ಮಾಡುವಾಗ ನಾನು ಇವನ್ನು ನೋಡುತ್ತಿದ್ದೆ" ಎಂದ.

ದುಃಖ ಪಡುತ್ತಿದ್ದ ರಾಮನನ್ನು ನೋಡಿ ಸುಗ್ರೀವ, "ಅಳಬೇಡ ರಾಮ. ನಾನೂ ನಿನ್ನಂತೆಯೇ ದುಃಖ ಪಡುತ್ತಿದ್ದೇನೆ. ನನ್ನ ಪತ್ನಿ ಕೂಡ ಅಪಹರಿಸಲ್ಪಟ್ಟಿದ್ದಾಳೆ. ನಾನು ನಿನ್ನಂತೆ ಅಳುತ್ತಿದ್ದೇನೆಯೇ? ನಾನು ನಿನಗೆ ಹೇಳುವಷ್ಟು ಸಮರ್ಥನಲ್ಲ. ಆದರೂ ನೀನು ನನ್ನ ಸ್ನೇಹಿತನಾದ್ದರಿಂದ ಹೇಳುತ್ತಿದ್ದೇನೆ. ನಮ್ಮ ಸ್ನೇಹಕ್ಕಾದರೂ ನಿನ್ನ ದುಃಖವನ್ನು ಉಪಶಮಿಸಿಕೋ" ಎಂದು ಸಮಾಧಾನ ಮಾಡಿದ.
"ಸ್ನೇಹಿತನಾಡುವ ಮಾತು ಆಡಿದೆ ಸುಗ್ರೀವ. ಆದರೆ ರಾಕ್ಷಸ ಎಲ್ಲಿದ್ದಾನೋ ಹೇಳು. ಮೊದಲು ಅವನನ್ನು ಸಂಹರಿಸಿ ಬರುವೆ."
"ನಾನು ನಿಜ ಹೇಳುತ್ತಿದ್ದೇನೆ. ನಿನ್ನ ಪತ್ನಿಯನ್ನು ತಂದುಕೊಡುವ ಭಾರ ನನ್ನದು. ರಾಕ್ಷಸನ ಹೆಸರು ನನಗೆ ತಿಳಿಯದು. ಅವನೆಲ್ಲಿರುತ್ತಾನೋ ತಿಳಿಯದು. ಆದರೆ ನೀನು ಭಯ ಪಡಬೇಡ. ಮೊದಲು ನನ್ನ ಕೆಲಸಕ್ಕೆ ಸಹಾಯ ಮಾಡು."
" ವಾಲಿ ಎಲ್ಲಿರುತ್ತಾನೋ ಹೇಳು. ಅವನನ್ನು ಕೊಲ್ಲುತ್ತೇನೆ. ನಾನು ಎಂದಿಗೂ ಮಾತು ತಪ್ಪಿಲ್ಲ. ನಿನಗೆ ಕೊಟ್ಟ ಮಾತಿನಂತೆ ವಾಲಿಯನ್ನು ಸಂಹರಿಸುತ್ತೇನೆ."
ರಾಮನ ಮಾತು ಕೇಳಿ ಸಂತೋಷಗೊಂಡ ಸುಗ್ರೀವ, "ನೀನು ಇಷ್ಟು ಹೇಳಿದ ಮೇಲೆ ನನ್ನದೇನಿದೆ. ನಿನ್ನಂತಹ ಸ್ನೇಹಿತ ಸಿಕ್ಕಿದರೆ ಸ್ವರ್ಗವೇ ಸಿಕ್ಕುತ್ತದೆ. ಇನ್ನು ವಾನರ ರಾಜ್ಯ ಸಿಗುವುದೇನು ಮಹಾ!" ಎಂದ.
"ಏನು ನಡೆಯಿತೋ ಹೇಳು. ನೀನು ಇಲ್ಲಿ, ಕಾಡಿನಲ್ಲಿ, ಬಂದು ಬದುಕುವ ಸ್ಥಿತಿ ಏಕೆ ಬಂತು?" ಎಂದು ರಾಮ ಕೇಳಿದಾಗ ಸುಗ್ರೀವ ತನ್ನ ಪರಿಸ್ಥಿತಿಯನ್ನು ಸಂಕ್ಷಿಪ್ತವಾಗಿ ಹೇಳಿದ. ಆದರೆ ರಾಮ ವಿಷಯವನ್ನು ಪೂರ್ಣವಾಗಿ ವಿವರಿಸಲು ಕೇಳಿದಾಗ ಸುಗ್ರೀವ ತನ್ನ ಈಗಿನ ಪರಿಸ್ಥಿತಿಯ ವೃತ್ತಾಂತವನ್ನು ಹೇಳಿದ:

"ಮೊದಲು ನಮ್ಮ ತಂದೆಯಾದ ಋಕ್ಷರಜಸ್ಸು ವಾನರ ರಾಜ್ಯವನ್ನು ಪಾಲಿಸುತ್ತಿದ್ದ. ಅವನಿಗೆ ಇಂದ್ರನ ಅಂಶದಿಂದ ಹುಟ್ಟಿದವನು ವಾಲಿ. ಸೂರ್ಯನ ಅಂಶದಿಂದ ಹುಟ್ಟಿದವನು ನಾನು. ದೊಡ್ಡ ಮಗನಾದ ವಾಲಿ ಸಹಜವಾಗಿ ತಂದೆಯ ಪ್ರೀತಿಯನ್ನು ಪಡೆದ. ನಾನೂ ವಾಲಿಯನ್ನು ಪ್ರೀತಿಯಿಂದಲೇ ಅನುಗಮಿಸಿದೆ. ಋಕ್ಷರಜಸ್ಸು ಮರಣಹೊಂದಿದ ಮೇಲೆ ವಾಲಿ ರಾಜನಾದ. ನಾನು ವಾಲಿಯ ಬಳಿ ವಿನಯ, ಭಯ ಭಕ್ತಿ, ವಿಧೇಯತೆಗಳಿಂದ ಇದ್ದೆ. ದುಂದುಭಿ ಎಂಬ ರಾಕ್ಷಸನ ಅಣ್ಣ ಮಯನಿಗೆ ಮಾಯಾವಿ ಎಂಬ ಮಗನಿದ್ದ. ಮಾಯಾವಿಗೂ ವಾಲಿಗೂ ಒಬ್ಬಳು ಸ್ತ್ರೀ ಸಂಬಂಧವಾಗಿ ವೈರವುಂಟಾಯಿತು. ಒಂದು ರಾತ್ರಿ ಮಾಯಾವಿ ಕಿಷ್ಕಿಂಧೆಯ ಹೆಬ್ಬಾಗಿಲಿಗೆ ಬಂದು ವಾಲಿಯನ್ನು ಯುದ್ಧಕ್ಕೆ ಕರೆದ. ಅಲ್ಲಿಯವರೆಗೂ ತನ್ನ ಪತ್ನಿಯರ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಿದ್ದ ವಾಲಿ ಹೊರಗೆ ಬಂದ. ಅವನ ಹಿಂದೆ ನಾನೂ ಬಂದೆ. ಆದರೆ ಮಾಯಾವಿ ನಮ್ಮನ್ನು ನೋಡಿ ಓಡಿಹೋದ. ಅಲ್ಲಿದ್ದ ಸ್ತ್ರೀಯರು, 'ಅವನು ಓಡಿಹೋದ. ಬಿಟುಬಿಡು' ಎಂದು ಹೇಳಿದರೂ ಕೇಳದೆ ವಾಲಿ ಮಾಯಾವಿಯ ಹಿಂದೆ ಹೋದ. ನಾನೂ ಹೋದೆ. ಸಾಕಷ್ಟು ದೂರ ಹೋದ ಮೇಲೆ ಮಾಯಾವಿ ಪೊದೆಗಳಿಂದ ಆವೃತವಾದ ಒಂದು ಗುಹೆಯೊಳಗೆ ಹೋದ. ನನ್ನನ್ನು ಬಿಲದ ದ್ವಾರದ ಬಳಿ ಕಾವಲಿರಿಸಿ ವಾಲಿ ಅವನನ್ನು ಕೊಂದು ಬರುವುದಾಗಿ ಹೇಳಿ ಒಳಗೆ ಹೋದ. ಒಂದು ವರ್ಷವಾದರೂ ನಾನು ಹೊರಗೇ ಇದ್ದೆ. ವಾಲಿ ಬರಲೇ ಇಲ್ಲ. ತುಂಬಾ ಕಾಲವಾದ ಮೇಲೆ ಗುಹೆಯೊಳಗಿಂದ ರಾಕ್ಷಸನ ಧ್ವನಿ ಕೇಳಿಬಂತು. ಬಾಗಿಲಿನಿಂದ ರಕ್ತ ಹೊಳೆಯಾಗಿ ಹರಿದು ಬಂತು. ಆದರೆ ಎಲ್ಲಿಯೂ ವಾಲಿಯ ಮುಖವಾಗಲೀ, ಧ್ವನಿಯಾಗಲೀ ಕೇಳಿಸಲಿಲ್ಲ. ರಾಕ್ಷಸರು ವಾಲಿಯನ್ನು ಕೊಂದಿರಬೇಕೆಂದುಕೊಂಡು, ಮತ್ತೆ ರಾಕ್ಷಸರು ಹೊರಗೆ ಬಂದರೆ ತೊಂದರೆ ಎಂದು ಬಿಲಕ್ಕೆ ಒಂದು ದೊಡ್ಡ ಕಲ್ಲನ್ನು ಅಡ್ಡವಾಗಿರಿಸಿ, ಅವನಿಗೆ ಅಲ್ಲೇ ಉದಕಕ್ರಿಯೆಗಳನ್ನು ಮಾಡಿ, ತರ್ಪಣಗಳನ್ನು ಬಿಟ್ಟು ವಾಪಸ್ಸು ಬಂದೆ. ರಾಜ್ಯದಲ್ಲಿ ಯಾರಿಗೂ ತಿಳಿಯದಂತೆ ಮಾಡಬೇಕಾದ ಕ್ರಿಯೆಗಳನ್ನು ಮಾಡಿದೆ. ಅಷ್ಟು ಎಚ್ಚರವಾಗಿದ್ದರೂ ಮಂತ್ರಿಗಳು ಹೇಗೋ ವಿಷಯ ತಿಳಿದು ರಾಜನಿಲ್ಲದ ರಾಜ್ಯವಿರಬಾರದಾದ್ದರಿಂದ ಬಲವಂತವಾಗಿ ನನ್ನನ್ನು ಸಿಂಹಾಸನದ ಮೇಲೆ ಕೂರಿಸಿದರು. ನಾನು ಧರ್ಮ ಬದ್ಧವಾಗಿಯೇ ರಾಜ್ಯಭಾರ ಮಾಡುತ್ತಿದ್ದೆ.
ಕೆಲ ಕಾಲದ ಮೇಲೆ ವಾಲಿ ರಾಜ್ಯ ಹಿಂತಿರುಗಿ ಬಂದ. ನನ್ನನ್ನು ಕೋಪದಿಂದ ನೋಡಿ ನನ್ನ ಮಂತ್ರಿ, ಸ್ನೇಹಿತರನ್ನು ಕಾರಾಗೃಹದಲ್ಲಿ ಬಂಧಿಸಿದ. ಸಮಯದಲ್ಲಿ ನಾನು ರಾಜನಾಗಿದ್ದೆ. ನಾನು ವಾಲಿಯನ್ನು ಬಂಧಿಸಬಹುದಾಗಿತ್ತು. ಆದರೆ ಅಣ್ಣನೆಂಬ ಗೌರವದಿಂದ ಅವನನ್ನು ನಿಗ್ರಹಿಸಲಿಲ್ಲ.
ದಿಷ್ಟ್ಯಾ ಅಸಿ ಕುಶಲೀ ಪ್ರಾಪ್ತೋ ನಿಹತಃ ಚ ತ್ವಯಾ ರಿಪುಃ
ಅನಾಥಸ್ಯ ಹಿ ಮೇ ನಾಥಃ ತ್ವಂ ಏಕೋ ಅನಾಥ ನಂದನಃ
ಬದಲಾಗಿ ಅವನ ಬಳಿ ಹೋಗಿ ಕೈ ಜೋಡಿಸಿ, ತಲೆ ಬಾಗಿಸಿ, ‘ಅಣ್ಣಾ! ನೀನಿಲ್ಲದೆ ನಾನು ಅನಾಥನಾಗಿದ್ದೆ. ನೀನು ಹಿಂತಿರುಗಿ ಬಂದಿರುವುದು ನನಗೆ ತುಂಬಾ ಸಂತೋಷಕೊಟ್ಟಿದೆ. ಈ ಶ್ವೇತಚ್ಛತ್ರವನ್ನು ನಿನ್ನ ಶಿರಸ್ಸಿನ ಮೇಲಿಡುತ್ತೇನೆ. ಚಾಮರ ಬೀಸುತ್ತೇನೆ. ನೀನು ಹಿಂದಿನಂತೆ ಮತ್ತೆ ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡು. ನನಗೆ ಪಟ್ಟಾಭಿಷೇಕದ ಮೇಲೆ ಆಸೆಯಿರಲಿಲ್ಲ. ಆದರೆ ಬಲವಂತವಾಗಿ ಈ ಮಂತ್ರಿಗಳು ನನಗೆ ಪಟ್ಟಾಭಿಷೇಕ ಮಾಡಿದರು. ನಾನು ನಿನಗೆ ನಮಸ್ಕಾರ ಮಾಡುತ್ತೇನೆ. ನೀನೇ ವಾನರ ರಾಜ’ ಎಂದೆ. 

ಆದರೆ ವಾಲಿ, ‘ಛಿ! ಛಿ! ದುಷ್ಟ! ನಾನಿಲ್ಲದ ಸಮಯ ನೋಡಿ ನೀನು ಪಟ್ಟಾಭಿಷೇಕ ಮಾಡಿಕೊಂಡಿದ್ದೀಯ. ದುರಾತ್ಮನೇ!’ ಎಂದು ಹೇಳಿ ಮರುದಿನ ಜಾನಪದರು, ಮಂತ್ರಿಗಳು, ವಾನರರ ಸಭೆ ಸೇರಿಸಿದ. ನಾನು ಅವನ ಪಕ್ಕದಲ್ಲಿ ನಿಂತುಕೊಂಡೆ. ಅವನು ಸಭೆಗೆ, ‘ನಾನು ಮಾಯಾವಿಯನ್ನು ಕೊಲ್ಲಲು ಆ ರಾತ್ರಿ ಅವನ ಹಿಂದೆ ಓಡಿದೆ. ಈ ಮಹಾಪಾಪಿ ನನ್ನ ತಮ್ಮನೂ ಹಿಂದೆ ಬಂದ. ನಾನು ಇವನನ್ನು ಹೊರಗೆ ನಿಲ್ಲಿಸಿ ಒಂದು ಬಿಲದ ಬಳಿ ಬಂದು ನಿಂತೆ. ಈ ಪಾಪಿ ದುರಾಲೋಚನೆಯಿಂದ ನಾನು ಒಳಗೆ ಹೋದ ತಕ್ಷಣ ಆ ಬಿಲಕ್ಕೆ ಶಿಲಾದ್ವಾರವನ್ನು ಇಟ್ಟು ಮುಚ್ಚಿಬಿಟ್ಟ. ನಾನು ಸಾಯುತ್ತೇನೆಂದುಕೊಂಡು ಇಲ್ಲಿಗೆ ಬಂದು ಪಟ್ಟಾಭಿಷೇಕ ಮಾಡಿಕೊಂಡಿದ್ದಾನೆ. ಆದರೆ ನಾನು ಒಳಗೆ ಹೋದ ಮೇಲೆ ಮಾಯಾವಿ ಕಾಣಿಸಲಿಲ್ಲ. ಒಂದು ವರ್ಷಗಳ ಕಾಲ ಹುಡುಕಿದ ಮೇಲೆ ಅವನು ಬಂಧು-ಮಿತ್ರರ ಜೊತೆ ಕಾಣಿಸಿದ. ಅವರೆಲ್ಲರನ್ನೂ ನಾನು ಕೊಂದೆ. ಬಿಲವೆಲ್ಲಾ ರಕ್ತಮಯವಾಯಿತು. ನಾನು ಹೊರಗೆ ಬರುವಷ್ಟರಲ್ಲಿ ಈ ಬಿಲಕ್ಕೆ ಶಿಲೆ ಅಡ್ಡವಾಗಿತ್ತು. ಕಷ್ಟಪಟ್ಟು ಅದನ್ನು ಸರಿಸಿ ಇಲ್ಲಿಗೆ ಬಂದೆ. ಇಲ್ಲಿಗ ಬಂದಾಗ ಇವನು ಸಿಂಹಾಸನದ ಮೇಲಿದ್ದ. ಇವನು ನನ್ನನ್ನು ಕೊಂದು ಸಿಂಹಾಸನ ಪಡೆಯಬೇಕೆಂದುಕೊಂಡವನು. ಇವನನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು’ ಎಂದು ಹೇಳಿ ನನ್ನನ್ನು ಕತ್ತು ಹಿಡಿದು ರಾಜ್ಯದಿಂದ ಹೊರಗೆ ಹಾಕಿದ. ನಾನು ಭಯದಿಂದ ಹೊರಗೆ ಬಂದೆ. ಆದರೆ ವಾಲಿ ನನ್ನನ್ನು ಬಿಡಲಿಲ್ಲ. ಕೊಲ್ಲಲು ನನ್ನ ಹಿಂದೆ ಬಂದ. ನಾನು ಭೂಮಿಯೆಲ್ಲಾ ಸುತ್ತಿದೆ. ಕೊನೆಗೆ ಅವನು ಈ ಋಷ್ಯಮೂಕಕ್ಕೆ ಬರಲಾಗದ ಕಾರಣ ಇಲ್ಲಿಗೆ ಬಂದೆ. ನನ್ನ ಪ್ರಿಯ ಪತ್ನಿ ರುಮೆಯನ್ನು ನಾನು ಬದುಕಿರುವಂತೆಯೇ ಅವನ ಪತ್ನಿಯನ್ನಾಗಿ ಮಾಡಿಕೊಂಡಿದ್ದಾನೆ. ನಾನು ಮಾಡದ ಪಾಪಕ್ಕೆ ನನ್ನನ್ನು ರಾಜ್ಯದಿಂದ ಹೊರಹಾಕಿದ್ದಾನೆ.”

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ