೬೦. ವಾಲಿಯ ವಧೆಗೆ ಸಿದ್ಧತೆ
ಸುಗ್ರೀವನ ಮಾತು ಕೇಳಿ ರಾಮ, “ಯಾವುದೇ ಲೋಪವಿಲ್ಲದ ಬಂಗಾರದ ಬಾಣಗಳು ನನ್ನ ಬತ್ತಳಿಕೆಯಲ್ಲಿವೆ. ಪಾಪಾತ್ಮನಾದ ವಾಲಿ ನನ್ನ ಕಣ್ಣಿಗೆ ಕಾಣಿಸದಿರುವಷ್ಟು ದಿನ ಮಾತ್ರ ಬದುಕಿರುತ್ತಾನೆ. ನೀನು ಭಯಪಡಬೇಡ. ಅವನೆಲ್ಲಿದ್ದಾನೋ ತೋರಿಸು” ಎಂದ.
ವಾಲಿಯ ಪರಾಕ್ರಮದ ಬಗ್ಗೆ ಸುಗ್ರೀವ ವಿವರಿಸಿದ:
`“ಸಮುದ್ರಾತ್ ಪಶ್ಚಿಮಾತ್ ಪೂರ್ವಂ ದಕ್ಷಿಣಾತ್ ಅಪಿ ಚ ಉತ್ತರಂ
ಕ್ರಾಮಾತಿ ಅನುದಿನೇ ಸೂರ್ಯೇ ವಾಲೀ ವ್ಯಪಗತಃ ಕ್ಲಮಃ
ರಾಮ ಆತುರಪಡಬೇಡ. ವಾಲಿಯ ಪರಾಕ್ರಮದ ಬಗ್ಗೆ ನಿನಗೆ ಹೇಳುತ್ತೇನೆ ಕೇಳು. ಅವನು ಸೂರ್ಯೋದಯಕ್ಕೆ ಮುಂಚೆಯೇ ಏಳುತ್ತಾನೆ. ಅಂತಃಪುರದಿಂದ ಒಂದೇ ಬಾರಿಗೆ ಜಿಗಿದು ಪೂರ್ವಸಮುದ್ರವನ್ನು ಸೇರುತ್ತಾನೆ. ಅಲ್ಲಿ ಸಂಧ್ಯಾವಂದನೆ ಮಾಡಿ ಮತ್ತೊಂದು ಜಿಗಿತಕ್ಕೆ ಪಶ್ಚಿಮ ಸಮುದ್ರತೀರವನ್ನು ಸೇರುತ್ತಾನೆ. ಅಂತೆಯೇ ಒಂದೊಂದೇ ಜಿಗಿತಗಳಲ್ಲಿ ಉತ್ತರ ದಕ್ಷಿಣಗಳಲ್ಲಿಯೂ ಸಂಧ್ಯಾವಂದನೆ ಮಾಡುತ್ತಾನೆ. ಅಲ್ಲಿ ನೋಡು ಆ ಪರ್ವತಗಳು! ವಾಲಿ ಸಂಧ್ಯಾವಂದನೆಯ ನಂತರ ಹಾಲು ಕುಡಿದು ಈ ಅರಣ್ಯಕ್ಕೆ ಬರುತ್ತಾನೆ. ಈ ಪರ್ವತ ಶಿಖರಗಳನ್ನು ಹಿಡಿದು ತಿರುಗಿಸಿ ಮತ್ತೆ ಇಲ್ಲಿಯೇ ಇಡುತ್ತಾನೆ.
ಪೂರ್ವದಲ್ಲಿ ದುಂದುಭಿ ಎಂಬ ರಾಕ್ಷಸನಿದ್ದ. ಅವನು ಬಲದ ಅಹಂಕಾರದಿಂದ ಸಮುದ್ರವನ್ನು ಯುದ್ಧಕ್ಕೆ ಕರೆದ. ಸಮುದ್ರ ತಾನು ಯುದ್ದ ಮಾಡಲಾಗುವುದಿಲ್ಲ ಎಂದಾಗ ಅವನು ಸಮುದ್ರನಿಗೆ ಸಮಾನನಾದವನನ್ನು ತೋರಿಸಲು ಹೇಳಿದ. ಸಮುದ್ರ ಉತ್ತರದ, ಪಾರ್ವತಿಯ ತಂದೆಯಾದ, ಅರಣ್ಯ, ಗುಹೆಗಳಿಂದ ಕೂಡಿದ ಹಿಮವಂತನನ್ನು ಸೂಚಸಿದ. ದುಂದುಭಿ ಹಿಮವಂತ ಪರ್ವತಕ್ಕೆ ಹೋಗಿ, ಅಲ್ಲಿಯ ಶಿಖರಗಳನ್ನು ಕಿತ್ತು ಬಿಸಾಡಲು ಶುರುಮಾಡಿದ. ಅದನ್ನು ನೋಡಿ ಕೇಳಲು ಬಂದ ಹಿಮವಂತನನ್ನು ದುಂದುಭಿ ಯುದ್ಧಕ್ಕೆ ಕರೆದ. ಹಿಮವಂತನೂ ತನಗೆ ಯುದ್ದ ಮಾಡಲಾಗುವುದಿಲ್ಲ ಎಂದ. ಆಗ ದುಂದುಭಿ, ‘ನೀನೂ ಹಾಗೆಂದರೆ ಹೇಗೆ? ನನ್ನ ಜೊತೆ ಯುದ್ದ ಮಾಡಬಲ್ಲವನನ್ನು ತೋರಿಸು’ ಎಂದಾಗ ಹಿಮವಂತ, ‘ನಿನ್ನಂತೆಯೇ ಯುದ್ದಕ್ಕಾಗಿಯೇ ಯಾವಾಗಲೂ ಕಾಯುತ್ತಿರುವವನು ಕಿಷ್ಕಿಂಧೆಯಲ್ಲೊಬ್ಬನಿದ್ದಾನೆ. ಅವನ ಹೇಸರು ವಾಲಿ’ ಎಂದು ವಾಲಿಯ ಹೆಸರನ್ನು ಸೂಚಿಸಿದ.
ದುಂದುಭಿ ಕಿಷ್ಕಿಂಧೆಗೆ ಬಂದು ಅಲ್ಲಿದ್ದ ಗಿಡಗಳನ್ನು, ಬಾಗಿಲುಗಳನ್ನು ಕಿತ್ತುಬಿಸಾಡಲು ಶುರುಮಾಡಿದ. ಅವನ ಚೇಷ್ಟೆಯನ್ನು ನೋಡಿ ಪತ್ನಿಯರ ಜೊತೆ ಸರಸವಾಡುತ್ತಿದ್ದ ವಾಲಿ ಹೊರಗೆ ಬಂದಾಗ ದುಂದುಭಿ ವಾಲಿಯನ್ನು ಪ್ರಚೋದಿಸಿ ಯುದ್ದಕ್ಕೆ ಕರೆದ. ಅವನ ಕರೆಗೆ ಓಗೊಟ್ಟು ವಾಲಿ ಕಂಠಪೂರ್ತಿ ಕುಡಿದಿದ್ದರೂ ಇಂದ್ರ ಕೊಟ್ಟ ಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡು ದುಂದುಭಿಯ ತಲೆಯ ಮೇಲೆ ಒಂದು ಗುದ್ದು ಗುದ್ದಿದ. ಆ ಏಟಿಗೆ ದುಂದುಭಿಯ ಮೂಗು, ಬಾಯಿ, ಕಿವಿಗಳಿಂದ ರಕ್ತಕಾರಿ, ಅವನು ಸತ್ತುಬಿದ್ದ. ವಾಲಿ ಆ ಸತ್ತ ಶರೀರವನ್ನು ಮೇಲೆಕ್ಕೆತ್ತಿ ತಿರುಗಿಸಿ ಎಸೆದ. ಗಾಳಿಯಲ್ಲಿ ಯೋಜನಗಳ ದೂರ ಸಾಗಿ ಅದು ಮತಂಗ ಮಹರ್ಷಿಯ ಆಶ್ರಮದ ಹತ್ತಿರ ಬಿತ್ತು. ಆಶ್ರಮದ ಪರಿಸರವೆಲ್ಲ ರಕ್ತಮಯವಾಯಿತು. ತನ್ನ ದಿವ್ಯದೃಷ್ಠಿಯಿಂದ ಆ ಶರೀರವನ್ನು ಎಸೆದವನನ್ನು ನೋಡಿ ಮಹರ್ಷಿಗಳು, ‘ಈ ಕಳೇಬರವನ್ನು ಇಲ್ಲಿಗೆ ಎಸೆದವನು ಇಲ್ಲಿಗೆ ಬಂದರೆ, ಅವನ ತಲೆ ನೂರು ಹೋಳಾಗಿ ಸತ್ತು ಬೀಳುತ್ತಾನೆ. ಇಲ್ಲಿ ಇನ್ನಾರಾದರೂ ವಾಲಿಯ ಸಹಚರರಿದ್ದರೆ ಅವರು ತಕ್ಷಣವೇ ಹೊರಟುಹೋಗಿ. ನಾಳೆ ಇಲ್ಲಿ ಯಾರಾದರೂ ಕಾಣಿಸಿದರೆ ಅವರು ನನ್ನ ಶಾಪಕ್ಕೆ ಗುರಿಯಾಗುತ್ತಾರೆ’ ಎಂದರು.
ಆದ್ದರಿಂದ ವಾಲಿ ಈ ಪರ್ವತದ ಕಡೆಗೆ ಕಣ್ಣೆತ್ತಿಯೂ ನೋಡನು. ನಾನು ಬದುಕಬೇಕೆಂದರೆ ಈ ಬ್ರಹ್ಮಾಂಡದಲ್ಲಿರುವ ಏಕೈಕ ಜಾಗ ಈ ಋಷ್ಯಮೂಕ ಪರ್ವತ. ಅಲ್ಲಿ ಬಿಳಿಯದಾಗಿ ಕಾಣುತ್ತಿರುವ ನೋಡು ಬೆಟ್ಟನೋಡು. ಅದು ದುಂದುಭಿಯ ಅಸ್ಥಿಪಂಜರ. ಈಗ ಬೆಟ್ಟದಂತಾಗಿದೆ.
ವಾಲಿ ಇಲ್ಲಿಯವರೆಗೂ ಯಾರ ವಿರುದ್ಧವೂ ಸೋತಿಲ್ಲ. ‘ಸೋಲು’ ಪದದ ಅರ್ಥವೇ ತಿಳಿದಿಲ್ಲ ಅವನಿಗೆ. ೧೫ ವರ್ಷಗಳ ಕಾಲ ಗೋಲಭನೆಂಬ ಗಂಧರ್ವನ ಮೇಲೆ ಯುದ್ಧ ಮಾಡಿ ಗೆದ್ದ. ನಿನಗೆ ಇನ್ನೊಂದು ವಿಷಯ ಹೇಳುತ್ತೇನೆ. ಅಲ್ಲಿ ಕಾಣಿಸುತ್ತಿರುವ ಸಾಲವೃಕ್ಷಗಳನ್ನು ನೋಡು. ವಾಲಿ ಸಂಧ್ಯಾವಂದನೆಯ ನಂತರ ದಿನವೂ ಇಲ್ಲಿಗೆ ಬಂದು ಅವನ್ನು ಕೈಯಿಂದ ಕದಲಿಸುತ್ತಾನೆ. ಎಲೆಗಳು ಕೆಳಗೆ ಬಿದ್ದು ವೃಕ್ಷವೆಲ್ಲಾ ಬೋಡಾಗುತ್ತದೆ. ನಾನು ಹೀಗೆ ಹೇಳುತ್ತಿದ್ದನೆಂದು ತಪ್ಪು ತಿಳಿದುಕೊಳ್ಳಬೇಡ ರಾಮ. ಈಗ ನೀನು ವಾಲಿಯ ಪರಾಕ್ರಮ ಕೇಳಿದ್ದೀಯ. ಈಗಲೂ ನೀನು ವಾಲಿಯನ್ನು ಸಂಹರಿಸಬಹುದು ಎಂದುಕೊಳ್ಳುತ್ತಿದ್ದೀಯ? ನಿನಗೆ ಇನ್ನೂ ಆ ಧೈರ್ಯವಿದೆಯಾ?”
ಸುಗ್ರೀವನ ಮಾತು ಕೇಳಿದ ಲಕ್ಷ್ಮಣ ಮುಗುಳುನಗೆಯಿಂದ, “ಮಹಾವೀರನಾದ ನಿನ್ನ ವಾಲಿಯನ್ನು ನನ್ನ ಅಣ್ಣ ಕೊಲ್ಲುತ್ತಾನೆ. ಈಗ ಏನು ಮಾಡಿದರೆ ನೀನು ಅದನ್ನು ನಂಬುತ್ತೀಯ?” ಎಂದು ಕೇಳಿದ.
“ವಾಲಿ ಈ ಏಳು ಮರಗಳನ್ನೂ ಕಡಿದು ಹಾಕಬಲ್ಲನು. ರಾಮ ಅಷ್ಟು ಮಾಡುವುದು ಬೇಡ. ಅವನು ಬಾಣದಿಂದ ಒಂದು ವೃಕ್ಷವನ್ನು ಹೊಡದರೆ ಸಾಕು. ದುಂದುಭಿಯನ್ನು ನನ್ನ ಅಣ್ಣ ಎಸೆದಾಗ ಅದು ಯೋಜನಗಳ ದೂರ ಬಿತ್ತು. ರಾಮ ಈ ಅಸ್ಥಿಪಂಜರವನ್ನು ೨೦೦ ಬಾಣಗಳಷ್ಟು ದೂರ ಹೋಗುವಂತೆ ಮಾಡಿದರೆ ನಾನು ನಂಬುತ್ತೇನೆ.”
ರಾಮ, “ಸರಿ. ನಿನಗೆ ನಂಬಿಕೆ ಬರಲು ಏನು ಬೇಕಾದರೂ ಮಾಡುತ್ತೇನೆ” ಎಂದ.
ರಾಘವೋ ದುಂದುಭೇಃ ಕಾಯಂ ಪಾದ ಅಂಗುಷ್ಠೇನ ಲೀಲಯಾ
ತೋಲಯತ್ವಾ ಮಹಾಬಾಹುಃ ವಿಕ್ಷೇಪ ದಶ ಯೋಜನಂ
ರಾಮ ದುಂದುಭಿಯ ಕಳೇಬರವನ್ನು ತನ್ನ ಕಾಲಿನ ಹೆಬ್ಬರೆಳಿನಿಂದ ಒದ್ದಾಗ ಅದು ೧೦ ಯೋಜನಗಳ ದೂರ ಬಿತ್ತು. ರಾಮ ಇಷ್ಟು ಸಾಕೇ ಎನ್ನುವಂತೆ ಸುಗ್ರೀವನ ಕಡೆ ನೋಡಿದ. ಆದರೆ ಸುಗ್ರೀವ, “ಅಂದು ವಾಲಿಯ ಜೊತೆ ಯುದ್ದ ಮಾಡುವಾಗ ಇವನು ರಕ್ತಮಾಂಸದಿಂದ ಕೂಡಿ ತುಂಬಾ ಭಾರವಾಗಿದ್ದ. ವಾಲಿ ಆಗ ಕಂಠ ಪೂರ್ತಿ ಕುಡಿದಿದ್ದ. ಅಷ್ಟೇ ಅಲ್ಲದೆ ಯುದ್ಧಮಾಡಿ ಬಹಳ ಬಳಲಿದ್ದ. ಆದರೆ ರಾಮ ಉತ್ಸಾಹದಿಂದಿದ್ದಾನೆ. ಮದ್ಯಸೇವಿಸಿಲ್ಲ. ಪರೀಕ್ಷೆಗೆ ಕೂಡುವವನಂತೆ ಸಿದ್ಧನಾಗಿದ್ದಾನೆ. ಅಂದು ವಾಲಿ ಎಸೆದದ್ದು ಬಲಿಷ್ಠವಾದ ಶರೀರವನ್ನು. ಅದೇ ಒಂದು ಯೋಜನ ದೂರ ಬಿತ್ತು. ಇಂದು ರಾಮ ಒದ್ದಿದ್ದು ಅಸ್ಥಿಪಂಜರವನ್ನು. ಇದು ೧೦ ಯೋಜನ ದೂರ ಹೋಗುವುದರಲ್ಲಿ ಯಾವುದೇ ದೊಡ್ಡತನವಿಲ್ಲ! ಆ ಸಾಲವೃಕ್ಷಗಳನ್ನೂ ಬೀಳಿಸಲಿ. ನನಗೆ ನಂಬಿಕೆ ಬರುತ್ತದೆ. ಆಗ ವಾಲಿಯನ್ನು ಕೊಲ್ಲಲು ಹೋಗೋಣ” ಎಂದ.
ರಾಮ ತನ್ನ ಬಿಲ್ಲಿಗೆ ಬಂಗಾರದ ಬಾಣವನ್ನು ಸಂಧಿಸಿ, ಗುರಿಯಿಟ್ಟು ಆ ಸಾಲವೃಕ್ಷಗಳ ಕಡೆ ಬಿಟ್ಟಾಗ, ಕಣ್ಣು ರೆಪ್ಪೆಯಾಡಿಸುವಷ್ಟರಲ್ಲಿ ಆ ಬಾಣ ಏಳು ಸಾಲವೃಕ್ಷಗಳನ್ನೂ ಬೀಳಿಸಿ, ಎದುಗಿರಿದ್ದ ಪರ್ವತದ ಶಿಖರವನ್ನು ಹೊಡೆದುರುಳಿಸಿ, ಪಾತಾಳಲೋಕದವರೆಗೂ ಹೋಗಿ ಮತ್ತೆ ರಾಮನ ಬತ್ತಳಿಕೆಯಲ್ಲಿ ಬಂದು ಕುಳಿತಿತು!
ಈ ಆಶ್ಚರ್ಯವನ್ನು ನೋಡಿದ ಸುಗ್ರೀವ ತನ್ನ ಶಿರಸ್ಸನ್ನು ಬಾಗಿಸಿ ರಾಮನ ಕಾಲಿನ ಮೇಲೆ ಬಿದ್ದ! ಅವನ ಕಿರೀಟ ರಾಮನ ಪಾದದ ಮೇಲೆ ಬಿತ್ತು! “ರಾಮ! ನಿನ್ನ ಬಾಣಕ್ಕಿರುವ ವೇಗ ಇಂದ್ರನ ಬಾಣಕ್ಕೂ ಇಲ್ಲ! ನಾನು ತಪ್ಪುತಿಳಿದಿದ್ದೆ. ವಾಲಿಯೇನು? ನಿನ್ನ ಬಾಣ ವಜ್ರಾಯುಧ ಹಿಡಿದ ಇಂದ್ರನ ತಲೆಯನ್ನೂ ತೆಗೆಯುತ್ತದೆ. ನಾಡಿ ವಾಲಿಯ ಬಳಿ ಹೋಗೋಣ” ಎಂದ. ಸುಗ್ರೀವ ಮುಂದೆ ಹೋದ. ಅವನ ಹಿಂದೆ ರಾಮಲಕ್ಷ್ಮಣರು, ಸುಗ್ರೀವನ ಮಂತ್ರಿಗಳಾದ ಹನುಮಂತ, ನಲ, ನೀಲ ಮೊದಲಾದವರು ಹೊರಟರು.
ಸರ್ವೇತೇ ತ್ವರಿತಂ ಗತ್ವಾ ಕಿಷ್ಕಿಂಧಾಂ ವಾಲಿನಃ ಪುರೀಂ
ವೃಕ್ಷಃ ಆತ್ಮಾನಾಂ ಆವೃತ್ಯಹಿ ಅತಿಷ್ಠನ್ ಗಹಾನ್ ವನೇ
ಸುಗ್ರೀವ ಮುಂದೆ ಬೇಗ ಬೇಗ ನಡೆದು ಕಿಷ್ಕಿಂಧೆಯ ಒಳಗೆ ಹೋದರೆ ಉಳಿದವರು ಅಲ್ಲಲ್ಲಿ ಮರಗಳ ಹಿಂದೆ ಅವಿತುಕೊಂಡರು. ಒಳಗೆ ಹೋದ ಸುಗ್ರೀವ ವಾಲಿಯನ್ನು ಜೋರಾಗಿ ಕೂಗಿ ಹೊರಗೆ ಬರಲು ಹೇಳಿದ. ಅವನ ಧೈರ್ಯವನ್ನು ನೋಡಿ ಆಶ್ಚರ್ಯಚಕಿತನಾಗಿ ವಾಲಿ ಹೊರಗೆ ಬಂದು, “ಏನೋ ಮತ್ತೆ ಬಂದಿದ್ದೀಯ? ಬುದ್ದಿ ನೆಟ್ಟಗಿದೆಯಾ? ನೋಡು ಬಾ ನನ್ನ ಪ್ರತಾಪ” ಎಂದು ಹೇಳಿ ಮುಷ್ಠಿಬಿಗಿಸಿ ಸುಗ್ರೀನ ತಲೆಯ ಮೇಲೆ ಒಂದು ಗುದ್ದು ಗುದ್ದಿದ. ಆ ಏಟಿನ ಪ್ರಭಾವಕ್ಕೆ ಸುಗ್ರೀವನ ನವರಂಧ್ರಗಳಿಂದಲೂ ರಕ್ತಹರಿಯಿತು. ಚೇತರಿಸಿಕೊಂಡು ಸುಗ್ರೀವನೂ ವಾಲಿಯನ್ನು ಹೊಡೆಯಲು ಪ್ರಾರಂಭಿಸಿದ. ಯುದ್ದ ಘೋರವಾಯಿತು. ಇಬ್ಬರೂ ಕಠಾರಿಗಳಿಂದ ಚುಚ್ಚಿಕೊಂಡರು. ಕಾಲುಗಳಿಂದ ಒದ್ದುಕೊಂಡರು. ತಲೆಗಳಿಂದ ಗುದ್ದುಕೊಂಡರು. ಯುದ್ಧ ಶುರುವಾಗಿ ಎಷ್ಟುಹೊತ್ತಾದರೂ ರಾಮನ ಬಾಣ ಬರದಿದ್ದರಿಂದ ಸುಗ್ರೀವ ಸುತ್ತ ತಲೆಯಾಡಿಸಿದ. ರಾಮ ಕಾಣಿಸಲಿಲ್ಲ. ವಾಲಿಯ ಜೊತೆ ಇನ್ನು ಯುದ್ಧ ಮಾಡಲಾಗುವುದಿಲ್ಲವೆಂದು ಸುಗ್ರೀವ ಋಷ್ಯಮೂಕ ಪರ್ವತಕ್ಕೆ ಓಡಿದ. ವಾಲಿಯೂ ಅಂತಃಪುರದೊಳಕ್ಕೆ ಹೋದ.
ಸುಗ್ರೀವ ಪರ್ವತ ಮೇಲಿನ ಒಂದು ಬಂಡೆಯ ಮೇಲೆ ಸುರಿಯುತ್ತಿರುವ ರಕ್ತ ಒರೆಸಿಕೊಂಡು, ಆಯಾಸದಿಂದ ಅಳುತ್ತಾ ಕುಳಿತ. ಅಷ್ಟರಲ್ಲಿ ಲಕ್ಷ್ಮಣನ ಜೊತೆ ರಾಮ ಅಲ್ಲಿಗೆ ಬಂದ. ಅವರನ್ನು ನೋಡಿ ಸುಗ್ರೀವ, “ಏನಪ್ಪಾ! ನೀನು ಪ್ರತಿಜ್ಞೆ ಮಾಡಿದ ಮೇಲೆಯೇ ನಾನು ವಾಲಿಯ ಮೇಲೆ ಯುದ್ಧಕ್ಕೆ ಹೋದೆ. ನಾನು ಕೊಲ್ಲುವುದಿಲ್ಲ ಎಂದು ಒಂದು ಮಾತು ಹೇಳಿದ್ದರೆ ನಾನು ಹೋಗುತ್ತಲೇ ಇರಲಿಲ್ಲ. ನನ್ನನ್ನು ಹೀಗೆ ಹೊಡೆಸಿದ ಕಾರಣ ಏನು?” ಎಂದ ವ್ಯಂಗವಾಗಿ.
ಅದಕ್ಕುತ್ತರವಾಗಿ ರಾಮ, “ಸುಗ್ರೀವ, ಇದಕ್ಕೂ ಮುನ್ನ ನಾನು ವಾಲಿಯನ್ನು ನೋಡಿರಲಿಲ್ಲ. ನೀನು ಅವನ ಜೊತೆ ಯುದ್ಧ ಮಾಡುವಾಗ ವಾಲಿಯ ಮೇಲೆ ಬಾಣ ಬಿಡಬೇಕೆಂದುಕೊಂಡು ಬಂದೆ. ಆದರೆ ನಿಮ್ಮನ್ನು ಒಟ್ಟಿಗೆ ನೋಡಿದ ಮೇಲೆ ಆಶ್ಚರ್ಯವಾಯಿತು. ಪ್ರತಿಯೊಂದು ವಿಷಯದಲ್ಲಿಯೂ ನೀವು ಅಶ್ವಿನಿ ದೇವತೆಗಳಂತೆ ಅನುರೂಪರಾಗಿದ್ದೀರ! ನಿಮ್ಮಲ್ಲಿ ವಾಲಿಯಾರು? ಸುಗ್ರೀವನಾರು? ಎಂದು ನನಗೆ ತಿಳಿಯಲಿಲ್ಲ. ಕಂಠದಿಂದಲಾದರೂ ಗುರಿತಿಸೋಣವೆಂದರೆ ನಿಮ್ಮ ಧ್ವನಿಯೂ ಒಂದೇ ತರಹ ಇದೆ. ನಿಮ್ಮ ಓಟ, ಅಲಂಕಾರ, ವೇಗ ಎಲ್ಲವೂ ಒಂದೇ ತರವಾಗಿತ್ತು. ಒಂದು ವೇಳೆ ನಾನು ಹೇಗಾದರೂ ನಿಶ್ಚಯಿಸಿ ಬಾಣಬಿಟ್ಟು ಅಕಸ್ಮಾತ್ ಅದು ನಿನಗೇ ತಾಗಿದರೆ……! ನೆನಪಿಡು ಸುಗ್ರೀವ. ಆ ಬಾಣ ತಗುಲಿದವನು ಈ ಭೂಮಿಯ ಮೇಲೆ ಜೀವಂತವಾಗಿ ಇರಲಾರ.
ಗಜ ಪುಷ್ಟಿಂ ಇಮಾಂ ಫುಲ್ಲಾಂ ಉತ್ಪಾಟ್ಯ ಶುಭ ಲಕ್ಷಣಾಂ
ಕುರು ಲಕ್ಷ್ಮಣ ಕಂಠೇ ಅಸ್ಯ ಸುಗ್ರೀವಸ್ಯ ಮಹಾತ್ಮನಃ
ನಿನ್ನನ್ನು ವಾಲಿಗಿಂತ ಬೇರೆಯಾಗಿ ಗುರುತಿಸಬೇಕೆಂದರೆ ಒಂದು ದಾರಿಯಿದೆ. ಲಕ್ಷ್ಮಣ, ಅಲ್ಲಿ ಒಂದು ದೊಡ್ಡ ಹೂವಿನ ಹಾರ ಇದ್ದಂತಿದೆ. ಅದನ್ನು ತಂದು ಸುಗ್ರೀವನ ಕೊರಳಿಗೆ ಹಾಕು. ವಾಲಿಗೆ ಇಂತಹ ಮಾಲೆ ಇರುವುದಿಲ್ಲ. ಆಗ ನಾನು ಇವರಿಬ್ಬರನ್ನು ಪ್ರತ್ಯೇಕಿಸಬಹುದು. ಸುಗ್ರೀವ! ನೀನು ಈ ಮಾಲೆಯನ್ನು ಹಾಕಿಕೊಂಡು ಯುದ್ಧಕ್ಕೆ ಹೊರಡು” ಎಂದ.
Comments
Post a Comment