೬೨. ಸುಗ್ರೀವನ ಪಟ್ಟಾಭಿಷೇಕ
ರಾಮನ ಮಾತುಗಳನ್ನು ಕೇಳಿ ವಾಲಿ ತನ್ನ ತಪ್ಪನ್ನು ತಿದ್ದಿಕೊಂಡು ನಮಸ್ಕಾರ ಮಾಡಿ, “ಮಹಾನುಭಾವ ರಾಮಚಂದ್ರ! ನೀನು ಹೇಳಿದ್ದು ಯದಾರ್ಥ. ದೋಷ ನನ್ನದೇ! ನೀನು ನನ್ನನ್ನು ಕೊಂದಿದ್ದರಲ್ಲಾಗಲಿ, ನನ್ನಲ್ಲಿ ದೋಷವಿರುವುದರಲ್ಲಾಗಲೀ ಎಳ್ಳಷ್ಟೂ ಸಂದೇಹವಿಲ್ಲ. ನೀನು ಧರ್ಮಾಧರ್ಮ ವಿಚಕ್ಷಣೆಯಿಂದ, ನಿನಗಿರುವ ಜ್ಞಾನದಿಂದ ಪೂರ್ವಾಪರಗಳನ್ನು ಪರಿಶೀಲಿಸಿ ಏನು ಮಾಡಬೇಕೊ ನಿರ್ಣಯಿಸಿ ಅದನ್ನು ಕಾರ್ಯಗತಗೊಳಿಸುತ್ತೀಯ. ನಿನ್ನನ್ನು ನೋಡಿ ನನಗೆ ಹೆಮ್ಮೆಯಾಗುತ್ತಿದೆ. ನಿನ್ನ ಕೈಲಿ ಮರಣವಾದರೂ ನನಗೆ ಅದು ಸ್ವರ್ಗವೇ!
ನ ಚ ಆತ್ಮಾನಂ ಅಹಂ ಶೋಚೇ ನ ತಾರಾಂ ನ ಅಪಿ ಬಾಂಧವಾನ್
ಯಥಾ ಪುತ್ರಂ ಗುಣಶ್ರೇಷ್ಠಂ ಅಂಗದಂ ಕನಕಾಂಗದಂ
ನನಗೆ ಪ್ರಾಣ ಹೋಗುತ್ತದೆಂದು ದುಃಖವಾಗುತ್ತಿಲ್ಲ. ತಾರೆಯ ಬಗೆಗೂ ಯೋಚನೆಯಿಲ್ಲ. ಆದರೆ ನನಗೆ ನನ್ನ ಪ್ರಿಯಪುತ್ರನಾದ ಅಂಗದನದೇ ಚಿಂತೆ. ಅವನು ಚಿಕ್ಕಂದಿನಿಂದಲೂ ಸುಖಕ್ಕೆ ಒಗ್ಗಿಕೊಂಡಿದ್ದಾನೆ. ಅವನ ಭವಿಷ್ಯದ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಅವನ ಶ್ರೇಯಸ್ಸನ್ನು, ಅಭಿವೃದ್ಧಿಯನ್ನು ನೀನೇ ನೋಡಿಕೊಳ್ಳಬೇಕು” ಎಂದ.
ರಾಮ: ”ದಂಡನೆಗೊಳಗಾಗಬೇಕಾದ ಪಾಪವೇನಾದರೂ ಇದ್ದರೆ, ಆ ದಂಡನೆಯನ್ನು ರಾಜ್ಯದಿಂದಾಗಲೀ, ರಾಜನಿಂದಾಗಲೀ ಪಡೆದುಬಿಡಬೇಕು. ಆಗ ಆ ಪಾಪ ಅಲ್ಲೇ ಹೋಗಿಬಿಡುತ್ತದೆ. ಇಲ್ಲವಾದರೆ ಅದು ತನ್ನ ಫಲ ಕೊಡಲು ಶುರುಮಾಡುತ್ತದೆ. ನೀನು ಅದೃಷ್ಟವಂತ! ನಿನ್ನ ಪಾಪಕ್ಕೆ ಶಿಕ್ಷೆ ಅನುಭವಿಸಿದ್ದೀಯ. ನೀನು ಶರೀರವನ್ನು ಬಿಟ್ಟ ಮೇಲೆ ಸ್ವರ್ಗಕ್ಕೆ ಹೋಗಲು ಯಾವುದೇ ತೊಂದರೆಯಿಲ್ಲ. ನೀನು ಅಂಗದನನ್ನು ಹೇಗೆ ನೋಡಿಕೊಳ್ಳುತ್ತಿದ್ದೆಯೋ ಹಾಗೆಯೇ ಸುಗ್ರೀವನೂ ಅವನನ್ನು ನೋಡಿಕೊಳ್ಳುತ್ತಾನೆ. ಚಿಕ್ಕಪ್ಪನಿಂದ ತೊಂದರೆಯಾಗಬಹುದೇನೋ ಎಂದು ಭಯಪಡಬೇಡ. ಒಂದು ವೇಳೆ ಹಾಗೇನಾದರೂ ಆದರೆ ಅಂಗದನನ್ನು ನಾನು ನೋಡಿಕೊಳ್ಳುತ್ತೇನೆ"
ವಾಲಿ ಕೆಳಗೆ ಬಿದ್ದದ್ದನ್ನು ನೋಡಿ ಅಲ್ಲಿದ್ದ ಕಪಿಗಳೆಲ್ಲ ಓಡಿಹೋಗಲು ಶುರುಮಾಡಿದವು. ಅಲ್ಲಿ ಆಗುತ್ತಿದ್ದ ಅವಾಂತರವನ್ನು ನೋಡಿ ತಾರೆ ಹೊರಗೆ ಬಂದು ಏನಾಗುತ್ತಿದೆ ಎಂದು ಒಬ್ಬ ವಾನರನನ್ನು ವಿಚಾರಿಸಿದಳು. ಅವರಲ್ಲೊಬ್ಬ, "ರಾಮನಿಗೂ, ವಾಲಿಗೂ ಘೋರ ಯುದ್ಧವಾಯಿತು. ವಾಲಿ ದೊಡ್ಡ ದೊಡ್ಡ ಮರಗಳನ್ನು, ಬೆಟ್ಟಗಳನ್ನು ರಾಮನ ಮೇಲೆ ಎಸೆದ. ರಾಮ ವಜ್ರಾಯುಧದಂತಹ ಬಾಣದಿಂದ ಆ ಮರಗಳನ್ನು, ಬೆಟ್ಟಗಳನ್ನು, ಕೊನೆಗೆ ವಾಲಿಯನ್ನೂ ಹೊಡೆದುಹಾಕಿದ. ನಿನ್ನ ಮಗನನ್ನು ರಕ್ಸಿಸಿಕೋ" ಎಂದ.
(ಇದೇ ಲೋಕರೀತಿ. ವಾರ್ತೆ ಬಾಯಿಯಿಂದ ಬಾಯಿಗೆ ಹರಡಿದಷ್ಟೂ ಬದಲಾಗುತ್ತದೆ.)
ಗಂಡನೇ ಇಲ್ಲದ ಮೇಲೆ ರಾಜ್ಯವೇಕೆ ಎಂದುಕೊಂಡು ತಾರೆ ವಾಲಿಯ ಬಳಿ ಓಡಿದಳು. ಅವನ ಬಳಿ ಬಂದಮೇಲೆ, "ನೀನು ನನ್ನ ಮಾತುಕೇಳದೆ ಈ ಪರಿಸ್ಥಿತಿ ತಂದುಕೊಂಡೆ. ಕಾಮಕ್ಕೆ ದಾಸನಾಗಿ... ಸುಗ್ರೀವನ ಹೆಂಡತಿಯನ್ನು ಅಪಹರಿಸಿ..." ಎಂದು ಕೊನೆಯುಸಿರೆಳೆಯುತ್ತಿದ್ದ ವಾಲಿಯ ಮೇಲೆ ಬಿದ್ದು ಅತ್ತಳು. ಅಲ್ಲಿದ್ದ ಅಂಗದನೂ ನೆಲದ ಮೇಲೆ ಬಿದ್ದು ಅತ್ತ. ತನ್ನ ಕೊನೆಯ ಕ್ಷಣಗಳಲ್ಲಿ ವಾಲಿ ಸುಗ್ರೀವನಿಗೆ ಹೇಳಿದ: "ಸುಗ್ರೀವ ನನ್ನ ತಪ್ಪನ್ನು ಪಕ್ಕಕ್ಕಿಡು! ಕಾಲ ನನ್ನ ಬುದ್ದಿಗೆ ಮಂಕುಬೂದಿಯೆರೆಚಿ ನಿನ್ನ ಮೇಲೆ ದ್ವೇಷ ಸಾಧಿಸುವಂತೆ ಮಾಡಿತು. ಅದರ ಫಲವಾಗಿ ನಾನು ನಿನ್ನಿಂದ ದೂರವಾಗುತ್ತಿದ್ದೇನೆ. ಅಣ್ಣತಮ್ಮಂದಿರು ಒಟ್ಟಿಗೆ ಸುಖಪಡುವುದು ನಮ್ಮ ತಲೆಯಲ್ಲಿ ಬರೆದಿಲ್ಲ. ನಾನು ಹೋಗುವ ಸಮಯ ಹತ್ತಿರವಾಗತ್ತಿದೆ. ಕೊನೆಯಲ್ಲಿ ಒಂದು ಮಾತು. ನನಗೆ ಒಬ್ಬನೇ ಮಗ. ಇಂದು ನನಗಾಗಿ ಕೆಳಗೆ ಬಿದ್ದು ಅಳುತ್ತಿದ್ದಾನೆ. ಅವನು ಸುಖದಿಂದಲೇ ಬೆಳೆದಿದ್ದಾನೆ. ಕಷ್ಟವೆಂಬುದು ಅವನಿಗೆ ತಿಳಿಯದು. ನಾನು ಹೋದ ಮೇಲೆ ತಾರೆ ಬದುಕುತ್ತಾಳೋ ಇಲ್ಲವೋ ನನಗೆ ತಿಳಿಯದು. ಆದರೆ ಅಂಗದನನ್ನು ಮಾತ್ರ ಚೆನ್ನಾಗಿ ನೋಡಿಕೋ. ತಾರೆಗೆ ಒಂದು ವಿಶೇಷ ಶಕ್ತಿಯಿದೆ. ನಮಗೇನಾದರೂ ದೊಡ್ಡ ಆಪತ್ತು ಬಂದರೆ, ಆ ಸಮಯದಲ್ಲಿ ನಮಗೆ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅವಳು ತನ್ನ ಸೂಕ್ಷ್ಮ ಬುದ್ದಿಯಿಂದ ಸಲಹೆ ಕೊಡುತ್ತಾಳೆ. ಅಂತಹ ಪರಿಸ್ಥಿತಿಯೇನಾದರೂ ಬಂದರೆ ಅವಳ ಸಹಾಯ ಪಡೆದುಕೋ. ರಾಮನನ್ನು ಎಂದಿಗೂ ಲಘುವಾಗಿ ಪರಿಗಣಿಸಬೇಡ. ಹಾಗೇನಾದರೂ ಮಾಡಿದರೆ ನಿನಗೂ ನನ್ನ ಪರಿಸ್ಥಿತಿಯೇ ಬಂದೀತು! ನನಗೆ ನನ್ನ ತಂದೆ ಇಂದ್ರ ಕೊಟ್ಟ ಮಾಲೆಯಿದೆ. ನನ್ನ ಪ್ರಾಣಹೋದರೆ, ಶವದ ಮೇಲಿದ್ದು ಇದು ಅಪವಿತ್ರವಾಗುತ್ತದೆ. ಹಾಗಾಗುವ ಮುಂಚೆಯೇ ಇದನ್ನು ನೀನು ಧರಿಸು.” ವಾಲಿ ಕೊಟ್ಟ ಮಾಲೆಯನ್ನು ಸುಗ್ರೀವ ಹಾಕಿಕೊಂಡ.
ತಾರೆ, "ಯಾವಾಗಲೂ ಸುಗ್ರೀವನನ್ನು ಸಾಯಿಸುತ್ತೇನೆ ಎನ್ನುತ್ತಿದ್ದೆ. ಈಗ ನೋಡು ಅವನೇ ನಿನ್ನನ್ನು ಈ ಸ್ಥಿತಿಗೆ ತಂದಿದ್ದಾನೆ. ಬಲವಿದೆಯೆಂದು ನಾಲ್ಕು ದಿಕ್ಕಿನನಲ್ಲೂ ಸಂಧ್ಯಾವಂದನೆ ಮಾಡಲು ಸಮುದ್ರಕ್ಕೆ ಹೋಗುತ್ತಿದ್ದೆ. ಯಾರ ಯಾರ ಮೇಲೋ ಯುದ್ಧಕ್ಕೆ ಹೋಗುತ್ತಿದ್ದೆ. ಎಷ್ಟೋ ಜನರನ್ನು ಹೀಗೆ ನೆಲದ ಮೇಲೆ ಬೀಳಿಸಿದ್ದೆ. ಇಂದು ನೀನೇ ಹೀಗೆ ಬಿದ್ದಿದ್ದೀಯ. ಶೂರನಿಗೆ ಹೆಣ್ಣು ಕೊಟ್ಟರೆ ಅವಳಿಗೆ ಹಠಾತ್ತಾಗಿ ವೈಧವ್ಯ ಬರುತ್ತದೆ. ಅದಕ್ಕೇ ಅವನಿಗೆ ಯಾರೂ ಹೆಣ್ಣು ಕೊಡುವುದಿಲ್ಲ.
ಪತಿ ಹೀನಾ ತು ಯಾ ನಾರೀ ಕಾಮಂ ಭವತು ಪುತ್ರಿಣೀ
ಧನಧಾನ್ಯ ಸಮೃದ್ಧಾ ಅಪಿ ವಿಧವಾ ಇತಿ ಉಚ್ಯತೇ ಜನೈಃ
ಮಾತು ಕೇಳುವ ಮಕ್ಕಳು ಎಷ್ಟಿದ್ದರೂ, ಎಷ್ಟೇ ಐಶ್ವರ್ಯವಿದ್ದರೂ, ವಿದ್ಯೆಯಿದ್ದರೂ ನೀನಿಲ್ಲದಿದ್ದರೆ ಲೋಕ ನನ್ನನ್ನು ವಿಧವೆಯೆಂದೇ ಕರೆಯುತ್ತದೆ" ಎಂದಳು.
ಸುಗ್ರೀವ ರಾಮನಿಗೆ ಹೇಳಿದ: "ನೀನು ಮಾಡಿದ ಪ್ರತಿಜ್ಞೆಯನ್ನು ನೆರವೇರಿಸಿದ್ದೀಯ. ಆದರೆ ಅಣ್ಣನನ್ನೇ ಕೊಲ್ಲಲು ಹೇಳಿದ ನಾನಿನ್ನೆಂತಹ ಪಾಪಿ! ನಾನು ಮಾಡಿದ ದುಷ್ಕೃತ್ಯ ಈಗ ನನಗೆ ಅರ್ಥವಾಗುತ್ತಿದೆ. ಅವನ ದುಷ್ಟತನ ನೋಡಿ ಅವನಿದ್ದವರೆಗೂ ಅವನು ಹೋದರೆ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಿದ್ದೆ. ಆದರೆ ಅವನು ಹೀಗೆ ಬಿದ್ದಮೇಲೆ ಅಣ್ಣನ ಪ್ರಾಮುಖ್ಯತೆ ನನಗೆ ಅರ್ಥವಾಗುತ್ತಿದೆ. ಒಂದೇ ತಾಯಿಯ ಮಕ್ಕಳೆಂದು ನಾನು ಅವನ ಜೊತೆ ಎಷ್ಟು ಯುದ್ಧ ಮಾಡಿದರೂ ಅವನು ನನ್ನನ್ನು ಕೊಲ್ಲಲಿಲ್ಲ. ಆದರೆ ನಾನು ಅವನನ್ನು ಕೊಂದುಬಿಟ್ಟಿದ್ದೇನೆ. ನಿನ್ನನ್ನು ಕೇಳುವಾಗ ನನಗೆ ದುಃಖ ತಿಳಿಯಲಿಲ್ಲ. ಆದರೆ ಈಗ ತಿಳಿಯುತ್ತಿದೆ. ನನಗೆ ಈ ರಾಜ್ಯ ಬೇಡ ರಾಮ! ಯಾವಾಗಲಾದರೂ ನಾನು ತಪ್ಪು ಮಾಡಿದರೆ ಕಟ್ಟಿಗೆಯಿಂದ ಹೊಡೆದು ನನ್ನನ್ನು ತಿದ್ದುತ್ತಿದ್ದ. ಈಗ ನನಗೆ ಯಾರಿದ್ದಾರೆ? ನಾನು ಅಗ್ನಿ ಪ್ರವೇಶ ಮಾಡುತ್ತೇನೆ. ಮಿಕ್ಕ ವಾನರರು ನಿನಗೆ ಸೀತಾನ್ವೇಷಣೆಯಲ್ಲಿ ಸಹಾಯ ಮಾಡುತ್ತಾರೆ."
ಸುಗ್ರೀವನ ದುಃಖವನ್ನು ನೋಡಿ ರಾಮನೂ ಕಣ್ಣೀರು ಹಾಕಿದ. ವಾಲಿಗೆ ಚುಚ್ಚಿಕೊಂಡಿದ್ದ ಬಾಣದಿಂದ ತಾರೆಗೆ ಅವನನ್ನು ತಬ್ಬಿಕೊಳ್ಳಲಾಗಲಿಲ್ಲ. ಅದನ್ನು ನೋಡಿ ರಾಮ ಆ ಬಾಣವನ್ನು ತೆಗೆದುಬಿಟ್ಟ. ವಾಲಿಯ ಪ್ರಾಣಪಕ್ಷಿ ಹಾರಿಹೋಯಿತು. ಸ್ವಲ್ಪ ಹೊತ್ತು ವಾಲಿಯನ್ನು ತಬ್ಬಿ ಅತ್ತ ಮೇಲೆ ತಾರೆ, "ರಾಮ, ನಿನ್ನನ್ನು ಕುರಿತು ಯೋಚಿಸುವುದೂ ಕಷ್ಟ. ನಿನಗೆ ಭೂಮಿಗಿರುವಷ್ಟು ತಾಳ್ಮೆಯಿದೆ. ಬಿಲ್ಲು ಹಿಡಿದ ನಿನ್ನನ್ನು, ನಿನ್ನ ಶರೀರವನ್ನು, ಅದರ ಕಾಂತಿಯನ್ನು ನೋಡಿದ ಮೇಲೆ ನೀನು ಸಾಮಾನ್ಯನಲ್ಲ ಎಂದು ತಿಳಿಯಿತು. ಪ್ರಪಂಚದಲ್ಲಿ ಎಲ್ಲದಕ್ಕಿಂತ ದೊಡ್ಡದು ಕನ್ಯಾದಾನ. ನಾನು ಇಲ್ಲದಿದ್ದರೆ ವಾಲಿ ಅಲ್ಲಿಯೂ ಸಂತೋಷವಾಗಿರಲಾರ. ಅವನನ್ನು ಹೊಡೆದ ಬಾಣದಿಂದಲೇ ನನ್ನನ್ನೂ ಹೊಡೆದುಬಿಡು" ಎಂದಳು.
ರಾಮ: "ನೀನು ಹಾಗೆ ಶೋಕಿಸಬಾರದಮ್ಮ! ಕಾಲ ತುಂಬಾ ಬಲಿಷ್ಠವಾದುದು. ಪುಣ್ಯ ಪಾಪಗಳಿಗೆ ಅದೇ ಫಲ ಕೊಡುತ್ತದೆ. ವಾಲಿಯ ಶರೀರದ ಮುಂದೆ ಹೀಗೆ ಮಾತಾಡಬಾರದು. ಮಾಡಬೇಕಾದ ಕೆಲಸಗಳನ್ನು ಕುರಿತು ಯೋಚಿಸಿ" ಎಂದ.
ವಾಲಿಯ ಶರೀರವನ್ನು ಅಗ್ನಿಗೆ ಆಹುತಿ ಕೊಟ್ಟರು. ನಂತರ ರಾಮ, ಸುಗ್ರೀವ, ಹನುಮ ಮುಂತಾದವರು ಸಭೆ ಸೇರಿದರು. ಹನುಮಂತ ಹೇಳಿದ: "ನಿನ್ನ ಕಾರಣದಿಂದ ಸುಗ್ರೀವ ಇಷ್ಟು ದೊಡ್ಡ ರಾಜ್ಯ ಪಡೆದಿದ್ದಾನೆ. ಒಂದು ಬಾರಿ ನೀನು ರಾಜ್ಯದೊಳಗೆ ಬಂದರೆ ನಿನಗೆ ರತ್ನಾಭರಣಗಳನ್ನು ಕೊಟ್ಟು, ನಿನ್ನ ಆಶೀರ್ವಾದ ಪಡೆಯಲು ಸುಗ್ರೀವ ಬಯಸುತ್ತಿದ್ದಾನೆ."
ರಾಮ: "ನಾನು ನನ್ನ ತಂದೆಗೆ ಕೊಟ್ಟ ಮಾತಿನಂತೆ ಕಾಡಿನಲ್ಲೇ ಇರಬೇಕು. ಗ್ರಾಮದಲ್ಲಾಗಲೀ, ಪಟ್ಟಣದಲ್ಲಾಗಲೀ ನಿದ್ದೆ ಹೋಗುವುದಿಲ್ಲ. ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿ. ಅಂಗದ ಯೋಗ್ಯ. ಅವನಿಗೆ ಯುವರಾಜ ಪಟ್ಟಾಭಿಷೇಕ ಮಾಡಿ. ನೀವೆಲ್ಲ ಕಿಷ್ಕಿಂಧೆಯಲ್ಲಿರಿ. ಇದು ಮಳೆಗಾಲ. ಈಗ ರಾವಣನನ್ನು ಹುಡುಕುವುದು ಕಷ್ಟ. ಸುಗ್ರೀವ, ಇಷ್ಟು ದಿನ ನೀನು ಕಷ್ಟ ಪಟ್ಟಿದ್ದೀಯ. ಇನ್ನು ನಾಲ್ಕು ತಿಂಗಳು ಆರಾಮವಾಗಿ ಸುಖಪಡು. ಕಾರ್ತೀಕ ಮಾಸದಲ್ಲಿ ನನ್ನನ್ನು ಜ್ಞಾಪಿಸಿಕೋ. ಅಲ್ಲಿಯವರೆಗೂ ನಾನ್ನು ಪ್ರಸ್ರವಣ ಪರ್ವತದ ಗುಹೆಯಲ್ಲಿರುತ್ತೇನೆ."
ಕಿಷ್ಕಿಂಧೆಗೆ ಹೋದ ಮೇಲೆ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿದರು. ಸುಗ್ರೀವ ಮತ್ತೆ ತಾರೆಯನ್ನು ಪಡೆದ. ರುಮೆ, ತಾರೆಯರ ಜೊತೆ ಆನಂದದಿಂದ ಕಾಲ ಕಳೆದ.
Comments
Post a Comment