೬೩. ಶರದೃತುವಿನ ಆಗಮನ
ಬಾಲ ಇಂದ್ರಗೋಪ್ತಾ ಅಂತರ ಚಿತ್ರಿತೇನ ವಿಭಾತಿ ಭೂಮಿಃ ನವ ಶಾದ್ವಲೇನ
ಗಾತ್ರ ಅನುಪೃಕ್ತೇನ ಶುಕ ಪ್ರಭೇಣ ನಾರೀ ಇವ ಲಾಕ್ಷ ಉಕ್ಷಿತ ಕಂಬಲೇನ
ವರ್ಷಾಕಾಲದ ಸೌಂದರ್ಯವನ್ನು ನೋಡಿ ಪ್ರಸ್ರವಣ ಪರ್ವತದಲ್ಲಿ ಕಾಲ ಕಳೆಯುತ್ತಿದ್ದ ರಾಮ ಲಕ್ಷ್ಮಣನಿಗೆ ಹೇಳಿದ: “ನೋಡು ಲಕ್ಷ್ಮಣ! ಭೂಮಿಯ ಮೇಲೆಲ್ಲಾ ಹುಲ್ಲು ದೊಡ್ಡದಾಗಿ ಬೆಳದು ಭೂಮಿ ಹಸಿರಾಗಿ ಕಾಣಿಸುತ್ತಿದ್ದಾಳೆ. ಹಸಿರು ಭೂಮಿಯ ಮೇಲೆ ಓಡಾಡುತ್ತಿರುವ ಕೆಂಪು ಹುಳಗಳು, ಭೂಮಿಗೆ ಕೆಂಪು ಚುಕ್ಕೆಗಳಿರುವ ಹಸಿರು ಸೀರೆ ಉಡಿಸಿದಂತೆ ಕಾಣಿಸುತ್ತಿದೆ. ನದಿಗಳು ತುಂಬು ನೀರಿನಿಂದ ಪ್ರವಹಿಸುತ್ತಿವೆ. ಮೇಘಗಳು ಮಳೆ ಸುರಿಸುತ್ತಿವೆ. ಆನೆಗಳು ಘೀಳಿಡುತ್ತಿವೆ. ಕಾಡಿನ ಮಧ್ಯ ಭಾಗ ಹೊಳೆಯುತ್ತಿದೆ. ಪತ್ನಿ ಇಲ್ಲದವರು ಧ್ಯಾನ ಮಾಡುತ್ತಿದ್ದಾರೆ. ಮಳೆಯ ನಡುವೆ ನವಿಲುಗಳು ನರ್ತಿಸುತ್ತಿವೆ. ಕಪಿಗಳು ಸಂತೋಷದಿಂದ ಕುಣಿದಾಡುತ್ತಿವೆ. ಆಕಾಶದಲ್ಲಿ ಹೋಗುತ್ತಿರುವ ಮೇಘಗಳು ರಥಗಳಂತಿವೆ. ಮಿಂಚುಗಳು ರಥಕ್ಕೆ ಕಟ್ಟಿದ ಪತಾಕೆಯಂತಿವೆ. ಗಾಳಿ ಜೋರಾಗಿ ಬೀಸುತ್ತಿವೆ. ಇವೆಲ್ಲ ನೋಡಿದರೆ ನನಗೆ ರಾವಣನ ಜೊತೆ ಯುದ್ಧ ಮಾಡಲು ಕಾತರರಾಗಿರುವ ವಾನರರ ಶಕ್ತಿ ಜ್ಞಾಪಕಕ್ಕೆ ಬರುತ್ತಿದೆ.
ಮಾರ್ಗ ಅನುಗಃ ಶೈಲ ವನ ಅನುಸಾರೀ ಸಂಪ್ರಸ್ಥಿತೋ ಮೇಘ ರವಂ ನಿಶಮ್ಯ
ಯುದ್ಧ ಅಭಿಕಾಮಃ ಪ್ರತಿನಾದ ಶಂಕೀ ಮತ್ತೋ ಗಜೇಂದ್ರಃ ಪ್ರತಿಸಂನಿವೃತ್ತಃ
ಒಂದು ಮದಗಜ ಮಳೆಯಲ್ಲಿ ನೆನೆದು ಮಲಗಿತ್ತು. ಅಷ್ಟರಲ್ಲಿ ಗುಡುಗು ಜೋರಾಗಿ ಶಬ್ದ ಮಾಡಿತು. ಆ ಶಬ್ದವನ್ನು ಕೇಳಿ ಇನ್ನೊಂದು ಆನೆ ಕೂಗುತ್ತಿದೆಂದುಕೊಂಡು ತನ್ನ ಸೊಂಡಿಲೆತ್ತಿ ಘೀಳಿಡುತ್ತಾ ಅದರ ಮದವನ್ನು ಅಡಗಿಸುತ್ತೇನೆಂದು ಹೋಯಿತು. ಆದರೆ ಸ್ವಲ್ಪಹೊತ್ತಿನಲ್ಲಿ ಮೋಡದಿಂದ ಬಂದ ಮತ್ತೊಂದು ಗುಡುಗನ್ನು ಕೇಳಿ ಅದು ಆನೆಯಲ್ಲವೆಂದುಕೊಂಡು ಹಿಂದೆ ಮಲಗಿದ್ದ ಜಾಗದಲ್ಲೇ ಬಂದು ಮಲಗಿದೆ. ಬಣ್ಣಬಣ್ಣದ ಕಪ್ಪೆಗಳು, ಬಾಲವಿರುವ ಕಪ್ಪೆಗಳು, ಉದ್ದವಿರುವ ಕಪ್ಪೆಗಳು ವಟಗುಟುತ್ತಿವೆ. ಈ ವರ್ಷಾಕಾಲದಲ್ಲಿಯೇ ಸಾಮವೇದದ ಪಾಠ ಆರಂಭಿಸುತ್ತಾರೆ.
ನಿದ್ರಾ ಶನೈಃ ಕೇಶವಂ ಅಭ್ಯುಪೈತಿ ದ್ರುತಂ ನದೀ ಸಾಗರಂ ಅಭ್ಯುಪೈತಿ
ಹೃಷ್ಟಾ ಬಲಾಕಾ ಘನಂ ಅಭ್ಯುಪೈತಿ ಕಾಂತಾ ಸ ಕಾಮಾ ಪ್ರಿಯಂ ಅಭ್ಯುಪೈತಿ
ನಿದ್ದೆ ನಿಧಾನವಾಗಿ ಸುಷುಪ್ತಿಯನ್ನು ಸೇರಿದಂತೆ, ನದಿಗಳು ವೇಗವಾಗಿ ಸಮುದ್ರ ಸೇರುತ್ತವೆ. ಆಕಾಶದಲ್ಲಿ ಬಲಾಕ ಪಕ್ಷಿಗಳು ಹಿಂಡು ಹಿಂಡಾಗಿ ಹಾರುತ್ತಿವೆ. ಪತಿವ್ರತೆಯಾದ ಕಾಂತೆ ಈ ಋತುವಿನ ಪ್ರಭಾವದಲ್ಲಿ ತನ್ನ ಕಾಂತನ ಆಲಿಂಗನವನ್ನು ಸೇರುತ್ತಾಳೆ. ಈ ಋತು ತುಂಬಾ ಪ್ರಭಾವವಾದುದು ಲಕ್ಷ್ಮಣ! ಸುಗ್ರೀವ ತುಂಬಾ ಕಷ್ಟಪಟ್ಟಿದ್ದಾನೆ. ಅವನು ವಿಶ್ರಾಂತಿ ಪಡೆಯಲಿ. ನನಗೆ ಅವನ ಮೇಲೆ ವಿಶ್ವಾಸವಿದೆ. ಮಳೆಗಾಲದ ನಂತರ ಕಾರ್ತೀಕ ಮಾಸ ಬರುತ್ತದೆ. ಮಳೆ ನಿಲ್ಲುತ್ತದೆ. ಆಗ ಸುಗ್ರೀವ ನಮಗೆ ಖಂಡಿತವಾಗಿ ಸಹಾಯ ಮಾಡುತ್ತಾನೆ.”
ಮಳೆಗಾಲ ಪೂರ್ತಿಯಾಯಿತು. ಕಾರ್ತೀಕ ಮಾಸ ಆರಂಭವಾಯಿತು. ಹನುಮಂತ ಸಲ್ಲಾಪದಲ್ಲಿ ತೊಡಗಿದ್ದ ಸುಗ್ರೀವನ ಬಳಿ ಬಂದು ಅವನಿಗೆ ಮಾಡಬೇಕಾದ ಕೆಲಸದ ಕುರಿತು ಜ್ಞಾಪಿಸಿದ: “ಸುಗ್ರೀವ, ರಾಮನ ಅನುಗ್ರಹದಿಂದ ರಾಜ್ಯವನ್ನು ಪಡೆದೆ. ಈಗ ನೀನು ಅವನಿಗೆ ಪತ್ಯುಪಕಾರ ಮಾಡಬೇಕು. ನಾಲ್ಕು ವಿಷಯಗಳಲ್ಲಿ ರಾಜ ಯಾವಾಗಲೂ ಎಚ್ಚರಿಕೆಯಿಂದಿರಬೇಕು: ತನ್ನ ಕೋಶಾಗಾರ ಯಾವಾಗಲೂ ತುಂಬಿರುವಂತೆ ನೋಡಿಕೊಳ್ಳಬೇಕು. ಶಕ್ತಿಯುತವಾದ ಸೈನ್ಯವಿಟ್ಟುಕೊಳ್ಳಬೇಕು. ಮಿತ್ರರ ಜೊತೆ ಭೇದವಿಟ್ಟುಕೊಳ್ಳಬಾರದು. ರಾಜ್ಯವನ್ನು ಸಮರ್ಥವಾಗಿ ನಡೆಸುವವನಾಗಿರಬೇಕು. ಮಳೆಗಾಲ ಪೂರ್ತಿಯಾಗಿದೆ. ಇಷ್ಟುಹೊತ್ತಿಗೆ ನೀನು ರಾಮನ ಬಳಿ ಹೋಗಬೇಕಾಗಿತ್ತು. ಆದರೆ ಇನ್ನೂ ನೀನು ಹೋಗಿಲ್ಲ. ಈಗ ರಾಮನೇ ಜ್ಞಾಪಕ ಮಾಡುತ್ತಾನೆ. ಅವನ ಜ್ಞಾಪಿಸಿದರೆ ಅದು ಬೇರೆ ರೀತಿಯದಾಗಿರುತ್ತದೆ. ಅವನು ಇನ್ನೂ ಜ್ಞಾಪಿಸದಿರುವುದು ಅವನ ಔದಾರ್ಯ. ಅವನು ತಾಳ್ಮೆ ಕಳೆದುಕೊಳ್ಳುವ ಮುಂಚೆ ನೀನೇ ಹೋಗಿ ಅವನನ್ನು ಭೇಟಿಯಾಗುವುದು ಉತ್ತಮ. ನೀನು ವಾನರರನ್ನು ಪ್ರತಿ ದಿಕ್ಕಿಗೂ ಹೋಗಿ ಸೀತೆಯನ್ನು ಹುಡುಕಲು ಆದೇಶಿಸು. ನೀನೇ ಮುಂಚೆ ಹೇಳಿದರೆ ನಿನ್ನ ಮರ್ಯಾದೆ ಉಳಿಯುತ್ತದೆ. ರಾಮ ಬಂದು ಕೇಳುವವರೆಗೂ ನಿಲ್ಲಬೇಡ. ನೀವು ಅಗ್ನಿಸಾಕ್ಷಿಯಾಗಿ ಸ್ನೇಹ ಮಾಡಿಕೊಂಡಿದ್ದೀರ. ರಾಮ ಅವನು ಮಾಡಿದ ಉಪಕಾರಕ್ಕೆ ಸಮನಾದ ಉಪಕಾರವನ್ನೇನು ಕೇಳಿಲ್ಲ. ಎಲ್ಲ ದಿಕ್ಕುಗಳಿಗೂ ಹೋಗಲು ಶಕ್ತರಾದ ವಾನರರು ನಿನ್ನ ಬಳಿಯಿದ್ದಾರೆ. ಸೀತೆಯನ್ನು ಹುಡುಕಲು ಅವರು ಉತ್ಸಾಹದಿಂದಲೂ ಇದ್ದಾರೆ. ಆದರೆ ನಿನ್ನ ಆಜ್ಞೆಯಿಲ್ಲದೆ ಅವರು ಹೋಗುವಂತಿಲ್ಲ. ರಾಮ ಕೋಪದಿಂದ ಬಿಲ್ಲು ಹಿಡಿದರೆ ನಿನಗಷ್ಟೇ ಅಲ್ಲ, ಇಡೀ ಲೋಕ್ಕಕ್ಕೇ ಆಪತ್ತು.“
ಹನುಮಂತನ ಮಾತುಗಳನ್ನು ತಕ್ಷಣ ಅರ್ಥ ಮಾಡಿಕೊಂಡ ಸುಗ್ರೀವ ನೀಲನನ್ನು ಕರೆದು, “ನೀನು ಬೇಗ ಹೋಗಿ ಭೂಮಿಯಲ್ಲಿರುವ ಎಲ್ಲ ಕಪಿಗಳನ್ನೂ, ಲಾಂಗೂಲಗಳನ್ನೂ , ಕರಡಿಗಳನ್ನೂ ಸುಗ್ರೀವನ ಆಜ್ಞೆಯೆಂದು ಇಲ್ಲಿಗೆ ಬಂದು ಸೇರಲು ಹೇಳು. ೧೫ ದಿನದೊಳಗೆ ಅವರು ಬಂದು ಇಲ್ಲಿಗೆ ಸೇರಬೇಕು. ಇಲ್ಲದಿದ್ದರೆ ಅವರ ಕುತ್ತಿಗೆ ಕತ್ತರಿಸಲ್ಪಡುತ್ತದೆ. ಇದು ಸುಗ್ರೀವನ ಆಜ್ಞೆ ಎಂದು ಪ್ರಕಟಿಸು” ಎಂದ. ಸುಗ್ರೀವನ ಆಜ್ಞೆ ಪ್ರಕಟನೆಯಾಯಿತು. ಸುಗ್ರೀವ ಮತ್ತೆ ಅಂತಃಪುರಕ್ಕೆ ಹೋದ.
ಇತ್ತ ಕಾರ್ತೀಕ ಮಾಸವಾದರೂ ಸುಗ್ರೀವನಿಂದ ಯಾವುದೇ ವಾರ್ತೆ ಬರದಿದ್ದರಿಂದ ರಾಮ ಲಕ್ಷ್ಮಣನನ್ನು ಕರೆದು, “ಶರದೃತು ಬಂದಿದೆ. ಪರಸ್ಪರ ವೈರವಿರುವ ರಾಜರು ಯುದ್ಧಕ್ಕೆ ಹೋದರು. ಆಕಾಶ ನಿರ್ಮಲವಾಗಿದೆ. ನೀರಿನ ಪ್ರವಾಹ ಕಡಿಮೆಯಾಗಿ ನದಿ ಪರಿಶುದ್ಧವಾಗಿದೆ. ನೆಲದ ಮೇಲಿನ ಕೆಸರು ಇಂಗಿದೆ. ಚಂದ್ರ ಬೆಳದಿಂಗಳು ಸುರಿಸುತ್ತಿದ್ದಾನೆ. ಆದರೆ ಸುಗ್ರೀವನಿಗೆ ಇನ್ನೂ ಕಾಲ ಬಂದಂತಿಲ್ಲ. ಅವನು ಮಾಡಬೇಕಾದ ಕೆಲಸ ಮರೆತಂತಿದೆ.
ಪ್ರಿಯಾ ವಿಹೀನೇ ದುಃಖ ಆರ್ತೇ ಹೃತ ರಾಜ್ಯೇ ವಿವಾಸಿತೇ
ಕೃಪಾಂ ನ ಕುರುತೇ ರಾಜಾ ಸುಗ್ರೀವೋ ಮಯಿ ಲಕ್ಷ್ಮಣ
ನನ್ನ ಪ್ರಿಯಪತ್ನಿಯನ್ನು ರಾಕ್ಷಸ ಹೊತ್ತುಕೊಂಡು ಹೋಗಿದ್ದಾನೆ. ನಾನು ದುಃಖದಿಂದಿದ್ದೇನೆ. ದೀನ, ಅನಾಥ. ಈಗ ನನ್ನ ಹತ್ತಿರ ಏನೂ ಇಲ್ಲ. ಗುಹೆಯಲ್ಲಿ ಅಡಗಿದ್ದೇನೆ. ಮನೆಯಿಂದ ತುಂಬಾ ದೂರದಲ್ಲಿದ್ದೇನೆ. ಆದ್ದರಿಂದಲೇ ಅವನು ನಮಗೆ ಮಾತು ಕೊಟ್ಟಿದ್ದರೂ ಮರೆತಿದ್ದಾನೆ. ತನ್ನ ಪತ್ನಿಯರ ಜೊತೆ ಸುಖಪಡುತ್ತಿದ್ದಾನೆ.
ಆರ್ಥೀನಾಂ ಉಪಪನ್ನಾನಾಂ ಪೂರ್ವಂ ಚ ಅಪಿ ಉಪಕಾರಿಣಾಂ
ಆಶಾಂ ಸಂಶ್ರುತ್ಯ ಯೋ ಹಂತಿ ಸ ಲೋಕೇ ಪುರುಷಾಧಮಃ
ಯಾರು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರ ಮಾಡರೋ ಅವರನ್ನು ಪುರುಷಾಧಮರು ಎಂದು ಶಾಸ್ತ್ರ ಹೇಳುತ್ತದೆ. ಯಾರು ಆಡಿದ ಮಾತಿಗೆ ತಪ್ಪುವುದಿಲ್ಲವೋ ಅವರು ಪುರುಷೋತ್ತಮರು. ತಮ್ಮ ಕೆಲಸಗಳಾದ ಮೇಲೆ, ತಮ್ಮ ಮಿತ್ರರ ಗೋಜಿಗೆ ಹೋಗದೆ ಜೀವನ ಮಾಡುವವನ ಶರೀರವನ್ನು ಅವನು ಸತ್ತ ಮೇಲೆ ನಾಯಿಗಳೂ ಮೂಸುವುದಿಲ್ಲ. ಸುಗ್ರೀವ ಇಂದು ಅಷ್ಟು ಕೃತಘ್ನನಾಗಿದ್ದಾನೆ. ಮತ್ತೆ ನನ್ನ ಬಿಲ್ಲಿನ ಝೇಂಕಾರ ಕೇಳಬೇಕೆಂದು ಅವನು ಆಶಿಸುತ್ತಿರುವಂತಿದೆ. ರಾಮನ ಕೋಪದ ಸ್ವರೂಪವನ್ನು ಅವನು ಮರೆತಿದ್ದಾನೆ. ಲಕ್ಷ್ಮಣಾ, ನೀನು ಕಿಷ್ಕಿಂಧೆಗೆ ಹೋಗಿ,
ನ ಸ ಸಂಕುಚಿತಃ ಪಂಥಾ ಯೇನ ವಾಲೀ ಹತೋ ಗತಃ
ಸಮಯೇ ತಿಷ್ಠ ಸುಗ್ರೀವ ಮಾ ವಾಲಿ ಪಥಂ ಅನ್ವಗಾಃ
’ಬಿಲ್ಲು ಹಿಡಿದ ನನ್ನಣ್ಣನ ಕೋಪ ನೋಡಬೇಕೆಸುತ್ತಿದೆಯಾ ಸುಗ್ರೀವಾ? ವಾಲಿ ಹೋದ ದಾರಿ ಇನ್ನೂ ಮುಚ್ಚಿಲ್ಲ. ಮಾಡಿಕೊಂಡ ಒಪ್ಪಂದಕ್ಕೆ ಬದ್ದನಾಗು. ಇಲ್ಲದಿದ್ದರೆ ನೀನೂ ನಿನ್ನ ಅಣ್ಣ ಹೋದ ದಾರಿಯಲ್ಲೇ ಹೋಗುತ್ತೀಯ’ ಎಂದು ಹೇಳಿ ಅವನನ್ನು ಎಚ್ಚರಿಸು” ಎಂದ.
ಲಕ್ಷ್ಮಣ, “ಅಣ್ಣ ಇಷ್ಟೆಲ್ಲ ಮಾತು ಬೇಡ. ಅವನು ರಾಜನಾಗುವುದಕ್ಕೆ ಅನರ್ಹ. ಈಗಲೇ ಹೋಗಿ ಅವನನ್ನು ಕೊಂದುಬರುತ್ತೇನೆ. ನನ್ನ ಕೋಪವನ್ನು ಇನ್ನು ತಡೆದುಕೊಳ್ಳಲಾರೆ. ಸುಗ್ರೀವನನ್ನು ಕೊಂದು ಅಂಗದನಿಗೆ ಪಟ್ಟಾಭಿಷೇಕ ಮಾಡುತ್ತೇನೆ. ಅಂಗದ ಸೈನ್ಯ ಕಳಿಸಿ ಸೀತೆಯನ್ನು ಹುಡುಕಿಸುತ್ತಾನೆ. ಸುಗ್ರೀವನ ಮೋಸ, ನಿನ್ನ ದುಃಖ ನನಗೆ ಇನ್ನೂ ಕೋಪ ಬರಿಸುತ್ತಿದೆ” ಎಂದು ಹೇಳಿ ಹೊರಡಲು ಸಿದ್ದನಾದ.
ಲಕ್ಷ್ಮಣನ ಮಾತು ಕೇಳಿ ಅವನು ಸುಗ್ರೀವನನ್ನು ಕೊಂದರೂ ಕೊಲ್ಲಬಹುದು ಎಂದುಕೊಂಡು ರಾಮ ಸಮಾಧಾನವಾಗಿ, “ಲಕ್ಷ್ಮಣ, ನಾವು ಹಿಂದೆ ಮಾಡಿಕೊಂಡ ಸ್ನೇಹ ಜ್ಞಾಪಕವಿಟ್ಟುಕೊ. ಸುಗ್ರೀವ ಮತ್ತೆ ದಾರಿಗೆ ಬರುವಂತೆ ಮಾಡು. ಕೊಲ್ಲುತ್ತೇನೆ ಎಂಬ ಅಮಂಗಳದ ಮಾತಾಡಬೇಡ” ಎಂದು ಹೇಳಿ ಕಳಿಸಿದ.
ರಾಮನ ಮಾತು ಲಕ್ಷ್ಮಣನ ಕೋಪವನ್ನು ಇಳಿಸಲಿಲ್ಲ. ತನ್ನ ಅಣ್ಣನಿಗೆ ಕೋಪ ಬರುವಂತೆ ಮಾಡಿದ ಸುಗ್ರೀವನ ಮೇಲೆ ಆಗ್ರಹದಿಂದ ಕಿಷ್ಕಿಂಧೆಗೆ ಅಡ್ಡದಾರಿಯಲ್ಲಿ ಹೊರಟ. ತನ್ನ ದಾರಿಗೆ ಅಡ್ಡಬಂದ ಕಲ್ಲು, ಮುಳ್ಳು, ಮರ, ಗಿಡ, ಪೊದೆಗಳನ್ನು ಕಿತ್ತು ಬಿಸಾಡಿ ಕಿಷ್ಕಿಂಧೆಯನ್ನು ಸೇರಿದ. ಅವನು ಬರುತ್ತಿರುವುದನ್ನು ನೋಡಿ ಕೆಲವು ವಾನರರು ಓಡಿಹೋದರು. ಇನ್ನೂ ಕೆಲವರು ಅವನು ಯುದ್ಧಕ್ಕೆ ಬರುತ್ತಿರುವನೇನೋ ಎಂದುಕೊಂಡು ಜೋರಾಗಿ ಕಿರುಚಿಕೊಂಡರು. ಆ ಸಮಯದಲ್ಲಿ ಸುಗ್ರೀವ ರುಮೆ, ತಾರೆ, ಇನ್ನಿತರ ವಾನರ ಸ್ತ್ರೀಯರ ಜೊತೆ ಮಧುಪಾನ ಮಾಡಿ, ಅಮಲಿನಿಂದ ಕಾಮಭೋಗವನ್ನು ಅನುಭವಿಸುತ್ತಿದ್ದ.
Comments
Post a Comment