೮೫. ಗರುಕ್ಮಂತನ ಆಶೀರ್ವಾದ
ರಾಮ ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡ. ಲಕ್ಷ್ಮಣ ಇನ್ನೂ ಕೆಳಗೇ ಇದ್ದದ್ದನ್ನು ನೋಡಿ, "ಒಂದು ವೇಳೆ ಲಕ್ಷ್ಮಣ ಸತ್ತಿದ್ದರೆ ಸೀತೆ ಸಿಕ್ಕಿದರೂ ಏನು ಪ್ರಯೋಜನ? ಸೀತೆಯಂತಹ ಪತ್ನಿ ಸಿಕ್ಕಬಹುದು. ಆದರೆ ಲಕ್ಷ್ಮಣನಂತಹ ತಮ್ಮ ಸಿಗಲು ಸಾಧ್ಯವೇ ಇಲ್ಲ. ಲಕ್ಷ್ಮಣನಿಗೆ ಒಂದೇ ಬಾರಿಗೆ ೫೦೦ರಕ್ಕೂ ಹೆಚ್ಚು ಬಾಣಗಳನ್ನು ಬಿಡುವ ಶಕ್ತಿಯಿದೆ. ನನಗಾಗಿ ಯುದ್ಧ ಮಾಡಲು ಬಂದ ಲಕ್ಷ್ಮಣ ಹೀಗೆ ಬಿದ್ದಿದ್ದರೆ, ನನಗೆ ಸೀತೆಯೇನು? ಈ ಜೀವನವೇ ಬೇಡ" ಎಂದು ಪ್ರಲಾಪಿಸಿದ. ನಂತರ ಸುಗ್ರೀವನನ್ನು ಕರೆದು, "ಸುಗ್ರೀವ, ನೀನು ಇಷ್ಟು ಕಾಲ ಮಾಡಿದ ಉಪಕಾರ ಸಾಕು. ಲಕ್ಷ್ಮಣನನ್ನು ಹೀಗೆ ನೋಡುತ್ತಾ ನಾನು ಬದುಕಿರುವುದಿಲ್ಲ. ನೀವು ಇಲ್ಲೇ ಇದ್ದರೆ ರಾವಣ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಜಾಂಬವಂತ, ಹನುಮ, ಅಂಗದ ಎಲ್ಲರ ಜೊತೆ ನೀನು ಕಿಷ್ಕಿಂಧೆಗೆ ವಾಪಸ್ಸು ಹೋಗು. ಆದರೆ ನಾನು ವಿಭೀಷಣನಿಗೆ ರಾಜ್ಯ ಕೊಡಿಸುತ್ತೇನೆಂದು ಮಾತು ಕೊಟ್ಟಿದ್ದೆ. ಈಗ ಅದು ಸುಳ್ಳಾಗಿದೆ. ಅಸತ್ಯ ನನ್ನ ಬಾಯಿಯಿಂದ ಬಂದಿದೆಯೆಂದು ನನಗೆ ತುಂಬಾ ದುಃಖವಾಗುತ್ತಿದೆ" ಎಂದ.
ಸುಗ್ರೀವ ವಿಭೀಷಣನಿಗೆ, "ಇವರು ಮೂರ್ಛೆ ಹೋಗಿದ್ದಾರೆ. ಸತ್ತಿಲ್ಲ. ನೀನು ಇವರನ್ನು, ಮಿಕ್ಕ ವಾನರರನ್ನು ಕರೆದುಕೊಂಡು ಕಿಷ್ಕಿಂಧೆಗೆ ಹೋಗು. ನಾನು ರಾವಣನನ್ನು ಕೊಂದು ಸೀತೆಯನ್ನು ತರುತ್ತೇನೆ. ಬೇಗ ಹೊರಡು" ಎಂದ.
ಸುಗ್ರೀವನ ಮಾತಿಗೆ ಸುಷೇಣ, "ಪೂರ್ವದಲ್ಲಿ ದೇವದಾನವರಿಗೆ ಯುದ್ದವಾದಾಗ, ದಾನವರು ದೇವತೆಗಳನ್ನು ವಿಶೇಷವಾದ ಅಸ್ತ್ರಗಳಿಂದ ಬಂಧಿಸಿದರು. ದೇವತೆಗಳು ಪ್ರಾಣ ಬಿಡುವ ಸಂದರ್ಭದಲ್ಲಿ ದೇವಗುರುವಾದ ಬೃಹಸ್ಪತಿ ಸಂಜೀವಕರ್ಣಿ, ವಿಶಲ್ಯಕರ್ಣಿ, ಸಂಧಾನಕರ್ಣಿ ಎಂಬ ಔಷಧಿಯುಕ್ತ ಸಸಿಗಳನ್ನು ಹಿಂಡಿ ಅವುಗಳ ವಾಸನೆ ತೋರಿಸಿದಾಗ ದೇವತೆಗಳು ಬದುಕಿದರು. ಕ್ಷೀರಸಮುದ್ರದಲ್ಲಿಯುವ ಆ ಔಷಧಿಗಳನ್ನು ಹುಡುಕುವ ಶಕ್ತಿ ನಮ್ಮಲ್ಲಿ ಹನುಮ, ಸಂಪಾತಿ, ಋಷಭ, ನೀಲ ಮೊದಲಾದ ನಾಯಕರಿಗಿದೆ. ಯಾರಾದರೂ ಅವನ್ನು ತಂದು ಅವನ್ನು ಹಿಂಡಿ ರಾಮಲಕ್ಷ್ಮಣರಿಗೆ ವಾಸನೆ ತೋರಿಸಿದರೆ ಅವರು ಬದುಕಿಕೊಳ್ಳುತ್ತಾರೆ" ಎಂದ.
ಅವರೆಲ್ಲ ಹಾಗೆ ಮಾತಾಡುತ್ತಿದ್ದಾಗ ಆಕಾಶದಲ್ಲಿ ಜೋರಾದ ಶಬ್ದವೊಂದು ಕೇಳಿಸಿತು. ಧ್ವನಿ ಯಾವುದೆಂದು ಎಲ್ಲರೂ ಸಮುದ್ರದ ಕಡೆ ನೋಡಿದಾಗ ಅವರಿಗೆ ಬ್ರಹ್ಮಾಂಡವಾದ ತೇಜಸ್ಸಿನಿಂದ, ರೆಕ್ಕೆ ಬಡಿಯುತ್ತಾ ಒಂದು ಮಹಾಸ್ವರೂಪ ಕಾಣಿಸಿತು. ಅದು ಬರುತ್ತಿದ್ದ ವೇಗಕ್ಕೆ ಸಮುದ್ರದ ಬಳಿಯಿದ್ದ ಹಲವಾರು ಮರಗಳು ಕೆಳಗೆ ಬಿದ್ದವು. ಮರುಕ್ಷಣದಲ್ಲಿ ಗರುಕ್ಮಂತ ಅವರ ಮುಂದೆ ನಿಂತಿದ್ದ. ವಾನರರು ಆಶ್ಚರ್ಯದಿಂದ ಗರುಕ್ಮಂತನಿಗೆ ನಮಸ್ಕಾರ ಮಾಡಿದರು. ಅವನನ್ನು ನೋಡಿದ ತಕ್ಷಣ ರಾಮಲಕ್ಷ್ಮಣರನ್ನು ಹಿಡಿದಿದ್ದ ನಾಗಗಳು ಬಿಟ್ಟು ಓಡಿದವು. ರಾಮಲಕ್ಷ್ಮಣರು ಸ್ವಸ್ಥರಾಗಿ ಮೇಲಕ್ಕೆದ್ದರು. ಗರುಕ್ಮಂತ ಅವರಿಬ್ಬರನ್ನು ತಬ್ಬಿಕೊಂಡು ಅವರ ಮುಖಗಳನ್ನು ತನ್ನ ಕೈಗಳಿಂದ ಸವರಿದ. ರಾಮಲಕ್ಷ್ಮಣರಿಗೆ ತಮ್ಮ ಪೂರ್ವದ ಶಕ್ತಿ, ತೇಜಸ್ಸುಗಳು ಬಂದವು. ಗಾಯಗಳು ಮಾಯವಾದವು. ಗರುಕ್ಮಂತ ರಾಮನಿಗೆ, "ರಾಮ, ಇನ್ನು ಮುಂದೆ ತುಂಬಾ ಹುಷಾರಾಗಿರು. ಕದ್ರುವನ ಮಕ್ಕಳಾದ ಭಯಂಕರವಾದ ಹಾವುಗಳನ್ನು ಇಂದ್ರಜಿತ್ತ ತನ್ನ ಬಾಣಗಳನ್ನಾಗಿ ಮಾಡಿಕೊಂಡಿದ್ದಾನೆ. ನಾಗಬಂಧನಗಳಿಂದ ದೇವೇಂದ್ರನೂ ಬಿಡಿಸಿಕೊಳ್ಳಲಾರ. ಯಕ್ಷ, ಗಂಧರ್ವ, ಕಿನ್ನರರು ಬಂದರೂ ಇವು ಬಿಡುವುದಿಲ್ಲ. ನನ್ನನ್ನು ನೋಡಿದರೆ ಮಾತ್ರ ಇವು ಓಡಿಹೋಗುತ್ತವೆ" ಎಂದ.
“ನೀವು ಯಾರು?" - ರಾಮ ಕೇಳಿದ.
ಗರುಕ್ಮಂತ, "ನಾನು ಗರುಕ್ಮಂತ. ನಾನು ಬಂದ ಕಾರಣ ಕೇಳಬೇಡ. ನಾನು ಹೇಳಲೂಬಾರದು. ನನಗೂ ನಿನಗೂ ಸ್ನೇಹವಿದೆ. ನನಗೂ ನಿನಗೂ ಇರುವ ಅನುಬಂಧವನ್ನು ಯುದ್ಧದ ನಂತರ ಹೇಳುತ್ತೇನೆ. ಇನ್ನು ಸ್ವಲ್ಪ ದಿನದಲ್ಲಿ ಈ ಲಂಕೆಯಲ್ಲಿ ಬಾಲ-ವೃದ್ಧರು ಹೊರತು ಇನ್ನಾರೂ ಇರುವುದಿಲ್ಲ. ನೀನು ರಾವಣನನ್ನು ವಧಿಸಿ ಸೀತೆಯನ್ನು ಪಡಿಯುತ್ತೀಯ. ಇನ್ನು ನಾನು ಹೊರಡುತ್ತೇನೆ" ಎಂದು ಹೇಳಿ ಎಲ್ಲರಿಗೂ ಆಶೀರ್ವದಿಸಿ ತನ್ನ ಬಂಗಾರದ ರೆಕ್ಕೆಗಳನ್ನು ಬಡಿಯುತ್ತಾ ಆಕಾಶಕ್ಕೆ ಹಾರಿದ.
ಮತ್ತೆ ಚೇತರಿಸಿಕೊಂಡ ರಾಮಲಕ್ಷ್ಮಣರನ್ನು ನೋಡಿ ವಾನರರು ಭೇರಿಗಳನ್ನು ಬಾರಿಸಿದರು. ಮೇಲೆ ಕೆಳಗೆ ಕುಣಿದು, ಹಾಡುಗಳನ್ನು ಹಾಡುತ್ತಾ ಕೇಕೆ ಹಾಕಿದರು. ಸಂತೋಷದಿಂದ ಅರಮನೆಯಲ್ಲಿ ಕುಳಿತಿದ್ದ ರಾವಣನಿಗೆ ವಾನರರ ಮಹಾನಾದವನ್ನು ಕೇಳಿ ಆಶ್ಚರ್ಯವಾಯಿತು. ಅವನ ಭಟರು ಪ್ರಾಸಾದದ ಮೇಲೆ ನಿಂತು ನೋಡಿದರೆ ಅವರಿಗೆ ಮದಗಜಗಳಂತಿದ್ದ ರಾಮಲಕ್ಷ್ಮಣರು ಕಾಣಿಸಿದರು. ರಾಕ್ಷಸರು ರಾವಣನಿಗೆ ವಿಷಯವನ್ನು ನಿವೇದಿಸಿದಾಗ ಅವನಿಗೆ ಆಶ್ಚರ್ಯವಾಯಿತು. ನಂತರ ಕೋಪವೂ ಬಂತು. ಧೂಮ್ರಾಕ್ಷನೆಂಬ ರಾಕ್ಷಸನನ್ನು ಕರೆದು, "ನೀನು ಈಗಲೇ ಹೋಗಿ ರಾಮ, ಲಕ್ಷ್ಮಣ, ಸುಗ್ರೀವರನ್ನು ಕೊಂದು ಬಾ. ನನಗೆ ನಿನಗಿಂತಲೂ ಹೆಚ್ಚಿನ ಬಂಧುವಿಲ್ಲ. ನೀನು ಅಪಾರವಾದ ಶೌರ್ಯವಿರುವವನು. ನಿನಗೆ ಎಷ್ಟು ಬೇಕೋ ಅಷ್ಟು ಸೈನ್ಯವನ್ನು ತೆಗೆದುಕೊಂಡು ಹೋಗಿ ಬೇಗ ಕೆಲಸ ಮುಗಿಸಿಕೊಂಡು ಬಾ" ಎಂದು ಹೇಳಿ ಕಳಿಸಿದ.
ಧೂಮ್ರಾಕ್ಷ ಪಶ್ಚಿಮ ದ್ವಾರದಿಂದ ಹೊರಟ. ಹೊರಡುವಾಗ, ಆಕಾಶದಿಂದ ರಕ್ತದ ಮಳೆ ಸುರಿಯಿತು. ಹದ್ದು ಬಂದು ಅವನ ರಥದ ಮೇಲೆ ಕುಳಿತಿತು. ಇನ್ನೂ ಮುಂತಾದ ಅಪಶಕುನಗಳು ಕಾಣಿಸಿದವು. ಧೂಮ್ರಾಕ್ಷ ಅವನ್ನು ಲೆಕ್ಕಿಸದೆ ಹೊರಟ. ಯುದ್ಧ ಭೂಮಿಗೆ ಬಂದ ಅವನು ಒಂದೇ ಸಮನೆ ಬಾಣಗಳನ್ನು ಬಿಟ್ಟು ವಾನರರನ್ನು ಕೊಲ್ಲತೊಡಗಿದ. ಹನುಮ ಒಂದು ದೊಡ್ಡ ಕಲ್ಲನ್ನು ಧೂಮ್ರಾಕ್ಷನ ರಥದ ಮೇಲೆ ತಂದು ಎಸೆದ. ಧೂಮ್ರಾಕ್ಷ ತಪ್ಪಿಸಿಕೊಳ್ಳಲು ರಥದಿಂದ ಹೊರಗೆ ಜಿಗಿದು ಹನುಮನನ್ನು ಬಾಣಗಳಿಂದ ಹೊಡೆದ. ರಥ ಪುಡಿಯಾಯಿತು. ಹನುಮ ಮತ್ತೊಂದು ಕಲ್ಲನ್ನು ಎಸೆದಾಗ ಧೂಮ್ರಾಕ್ಷ ಮರಣಿಸಿದ.
ನಂತರ ವಜ್ರದಂಷ್ಟ್ರನೆಂಬುವವನನ್ನು ರಾವಣ ಯುದ್ಧಕ್ಕೆ ಕಳಿಸಿದ. ಅವನು ದಕ್ಷಿಣ ದ್ವಾರದಿಂದ ಹೊರಗೆ ಬಂದ. ಅವನು ಒಂದೇ ಬಾರಿಗೆ ಐದಾರು ಬಾಣಗಳನ್ನು ಬಿಡುತ್ತಿದ್ದ. ಅವನನ್ನು ಉಪೇಕ್ಷಿಸಬಾರದೆಂದು ಅಂಗದ ಒಂದು ದೊಡ್ಡ ವೃಕ್ಷವನ್ನು ಎಸೆದ. ಅದನ್ನು ವಜ್ರದಂಷ್ಟ್ರ ತನ್ನ ಬಾಣಗಳಿಂದ ನಿಗ್ರಹಿಸಿದ. ಮತ್ತೆ ಅಂಗದ ಎರೆಡು ದೊಡ್ಡ ಕಲ್ಲುಗಳನ್ನು ಎಸೆದು ಮೊದಲು ರಥವನ್ನು ನಂತರ ವಜ್ರದಂಷ್ಟ್ರನನ್ನು ಕೆಡವಿದ.
ವಜ್ರದಂಷ್ಟ್ರನ ನಂತರ ಅಕಂಪನನೆಂಬ ರಾಕ್ಷಸ ಪಶ್ಚಿಮ ದ್ವಾರದಿಂದ ಯುದ್ಧಕ್ಕೆ ಬಂದ. ಬರುವಾಗ ಅವನ ಎಡಗಣ್ಣು ಅದುರಿತು. ಪ್ರಾಣಿಗಳು ಜೋರಾದ ಶಬ್ದ ಮಾಡಿದವು. ಧ್ವನಿ ನಡುಗಿತು. ಅವನ್ನೆಲ್ಲ ಲೆಕ್ಕಿಸದೆ ಅಕಂಪನ ಭಯಂಕರವಾದ ಯುದ್ಧ ಮಾಡಿದ. ಹನುಮಂತ ಎಸೆದ ದೊಡ್ಡ ಕಲ್ಲನ್ನು ಹೊಡೆದು ಬೀಳಿಸಿ, ದೊಡ್ಡ ಮರವನ್ನು ೧೪ ಬಾಣಗಳನ್ನು ಬಿಟ್ಟು ಪುಡಿಮಾಡಿದ. ಕೊನೆಗೆ ಹನುಮ ಮತ್ತೊಂದು ದೊಡ್ಡ ಮರವನ್ನು ತೆಗೆದುಕೊಂಡು ರೌದ್ರರೂಪದಿಂದ ಜೋರಾಗಿ ಓಡುತ್ತಾ ಬಂದು ಅಕಂಪನನನ್ನು ಹೊಡೆದಾಗ ಅವನೂ ಸತ್ತುಬಿದ್ದ.
ತನ್ನ ಮೂವರು ವೀರರು ಸತ್ತದ್ದನ್ನು ನೋಡಿ ರಾವಣ ಪ್ರಹಸ್ತನನ್ನು ಕರೆದು, "ಪ್ರಹಸ್ತ, ಯುದ್ಧ ತೀವ್ರವಾಗುತ್ತಿದೆ. ಹೋದವನು ಹಿಂತಿರುಗಿ ಬರುತ್ತಿಲ್ಲ. ಈಗ ನಾನೋ, ಕುಂಭಕರ್ಣನೋ, ನಿಕುಂಭನೋ ಅಥವಾ ನೀನೋ ಯುದ್ಧಕ್ಕೆ ಹೋಗಬೇಕು. ನಾವು ಯುದ್ಧ ಮಾಡಲು ಶಕ್ತರಲ್ಲ ಎಂದು ನೀನು ಹೇಳಿದರೆ ನಿಲ್ಲಿಸಿಬಿಡೋಣ" ಎಂದ.
"ನೀವು ಇಷ್ಟಕ್ಕೆ ಮೊದಲೇ ಈ ಪ್ರಶ್ನೆಯನ್ನು ಸಭೆಯಲ್ಲಿ ಕೇಳಿದಾಗ ಎಷ್ಟೋ ಜನ ಸೀತೆಯನ್ನು ಕೊಟ್ಟಿಬಿಡಿ ಎಂದರು. ನೀವು ಆಗಲೇ ಕೊಡುವುದಿಲ್ಲವೆಂದಿರಿ. ಈಗ ಯುದ್ಧ ನಿಲ್ಲಿಸಿಬಿಡುವುದೆಂದರೇನು? ಯಜ್ಞಕ್ಕೆ ಹಾಕುವ ದರ್ಭೆಯಂತೆ ಸಿದ್ದನಿದ್ದೇನೆ. ನಾನು ಯುದ್ಧಕ್ಕೆ ಹೋಗಬೇಕೆಂಬುದು ನಿಮ್ಮ ಉದ್ದೇಶವೇ?"
"ಪ್ರಹಸ್ತ ನಿನ್ನ ಕಂಠ ದೊಡ್ಡದು. ಯುದ್ಧ ಭೂಮಿಗೆ ಹೋಗಿ ಜೋರಾಗಿ ಕೂಗು. ವಾನರರು ಚಪಲ ಬುದ್ದಿಯವರು. ಅವರಿಗೆ ಯುದ್ಧ ಮಾಡಲು ಬರುವುದಿಲ್ಲ. ನೀನು ಕೂಗಿದರೆ ಓಡಿಹೋಗುತ್ತಾರೆ. ಆಗ ಯುದ್ಧಭೂಮಿಯಲ್ಲಿ ರಾಮಲಕ್ಷ್ಮಣರನ್ನು ಹರತುಪಡಿಸಿ ಇನ್ನಾರೂ ಉಳಿಯುವುದಿಲ್ಲ. ಅವರನ್ನು ಸುಲಭವಾಗಿ ಮುಗಿಸಬಹುದು."
ರಾವಣನ ಮಾತಿನಂತೆ ಪ್ರಹಸ್ತ ಅವನಿಗೆ, ರಥಕ್ಕೆ ಪ್ರದಕ್ಷಿಣೆ ಹಾಕಿ ಲಕ್ಷಾಂತರ ರಾಕ್ಷಸರ ಸೈನ್ಯದೊಂದಿಗೆ ಪೂರ್ವದ್ವಾರದಿಂದ ಯುದ್ಧಕ್ಕೆ ಹೊರಟ.
ಪ್ರಹಸ್ತ ಮತ್ತು ನೀಲರಿಗೆ ಭಯಂಕರವಾದ ಯುದ್ಧ ನಡೆಯಿತು. ಪ್ರಹಸ್ತ ಎಷ್ಟೋ ಮಂದಿ ವಾನರರನ್ನು ಕೊಂದ. ಪ್ರಹಸ್ತ ನೀಲನನ ಮೇಲೆ ಬಿಟ್ಟ ಬಾಣಗಳು ಎಮ್ಮೆಯ ಮೇಲೆ ಬರೆ ಎಳೆದಂತಿತ್ತು. ನೀಲ ಒಂದು ದೊಡ್ಡ ಮರವನ್ನು ಕಿತ್ತು ಪ್ರಹಸ್ತನ ರಥಕ್ಕೆ ಹೊಡೆದು ಪುಡಿಮಾಡಿದ. ಸಾಲವೃಕ್ಷದಿಂದ ಕುದುರೆಗಳನ್ನು ಬೀಳಿಸಿದ. ಕೊನೆಗೆ ನೀಲ ಒಂದು ದೊಡ್ಡ ಶಿಲೆಯನ್ನು ತಂದು ಪ್ರಹಸ್ತನ ಮೇಲೆ ಎಸೆದಾಗ ಅವನು ಸತ್ತುಬಿದ್ದ.
Comments
Post a Comment