೯೪. ರಾವಣ ವಧೆ
ರಾವಣ ಕಪ್ಪು ಕುದುರೆಗಳ ರಥವನ್ನು ಹತ್ತಿ ಮತ್ತೆ ಯುದ್ಧಕ್ಕೆ ಬಂದ. ಅವನನ್ನು ನೋಡಿ ರಾಮ ಮಾತಲಿಗೆ, "ಮಾತಲಿ, ರಾವಣ ಬರುತ್ತಿದ್ದಾನೆ. ಹುಷಾರು. ಯಾವುದೇ ಸಮಯದಲ್ಲೂ ಮೈ ಮರೆಯಬೇಡ. ರಥವನ್ನು ಬಲಕ್ಕೆ ನಡೆಸು. ನೀನು ಇಂದ್ರನ ಸಾರಥಿ. ನಿನಗೆಲ್ಲ ತಿಳಿದಿದೆ. ಆದರೂ ನಿನಗೆ ಧೈರ್ಯಬರಲು ಹೇಳಿದೆ. ತಪ್ಪು ತಿಳಿಯಬೇಡ" ಎಂದ.
ಮತ್ತೆ ಯುದ್ಧ ಭೂಮಿಯಲ್ಲಿ ರಾಮ, ರಾವಣರ ರಥಗಳು ಎದುರು ಬದುರಾಗಿ ನಿಂತವು. ಆಕಾಶದಲ್ಲಿ ದೇವತೆಗಳು, ಋಷಿಗಳು ಸೇರಿ ರಾಮನಿಗೆ ಸ್ವಸ್ತಿ ಹೇಳಿದರು. ರಾವಣ ಯುದ್ಧ ಭೂಮಿಗೆ ಬಂದಾಗ ಆಕಾಶದಲ್ಲಿ ರಕ್ತದ ಮಳೆಯಾಯಿತು. ಅವನ ಧ್ವಜದ ಮೇಲೆ ಹದ್ದು ಹಾರಿತು. ಭೂಮಿ ಕಂಪಿಸಿತು. ಆಕಾಶದಲ್ಲಿ ಮೋಡಗಳಿಲ್ಲದೆಯೇ ಮಿಂಚು ಹರಿಯಿತು. ಆಕಾಶದಿಂದ ಬಂದ ಒಂದು ಧೂಮಕೇತು ರಾವಣನ ರಥದ ಮೇಲೆ ಬಿತ್ತು. ಹೊಡೆಯಲು ಕೈ ಎತ್ತಿದ ರಾಕ್ಷಸರ ಕೈಗಳು ಯಾರೋ ತಡೆದಂತೆ ನಿಂತುಬಿಟ್ಟವು. ಲಂಕೆಯೆಲ್ಲ ಉರಿಯುತ್ತಿದೆಯೇನೋ ಎನ್ನುವಂತೆ ಕೆಂಪಗಾಯಿತು. ಸೂರ್ಯನ ಕೆಂಪು, ಹಸಿರು ಕಿರಣಗಳು ರಾವಣನ ಮೇಲೆ ಬಿದ್ದವು. ನಿಷ್ಕಾರಣವಾಗಿ ನರಿ, ಕುದುರೆ ಮತ್ತು ಇತರ ಮೃಗಗಳು ಅರಚಿದವು.
ರಾಮ-ರಾವಣ ಯುದ್ಧ ಆರಂಭವಾದ ಮೇಲೆ ವಾನರರು ಮತ್ತು ರಾಕ್ಷಸರು ಸುಮ್ಮನೆ ನಿಂತುಬಿಟ್ಟರು. ಬಾಣಗಳು ಆಕಾಶದಲ್ಲಿ ಒಂದಕ್ಕೊಂದು ತಾಗಿ ಮಿಂಚುಗಳಂತೆ ಕೆಳಗೆ ಬೀಳುತ್ತಿದ್ದವು. ರಾವಣ ಕೆಲವು ಬಾಣಗಳನ್ನು ರಾಮನ ರಥದ ಮೇಲೆ ಬಿಟ್ಟ. ಆದರೆ ರಥದ ಶಕ್ತಿಯಿಂದ ಆ ಬಾಣಗಳೇ ಕೆಳಗೆ ಬಿದ್ದವು. ರಾಮ ರಾವಣನ ಧ್ವಜವನ್ನು ಬೀಳಿಸಿದ. ನಂತರ ರಾವಣನ ಕುದುರೆಗಳಿಗೆ ಹೊಡೆದ. ಆದರೆ ಆ ಕುದುರೆಗಳು ಕನಿಷ್ಠ ಅಲ್ಲಾಡಲೂ ಇಲ್ಲ. ರಾವಣ ಮಾಯೆಯನ್ನು ಸೃಷ್ಟಿಸಿ ಕಲ್ಲು, ಪರ್ವತಗಳು, ಮರಗಳನ್ನು ರಾಮನ ಮೇಲೆ ಎಸೆದ. ರಾಮ ಅವನ್ನೆಲ್ಲ ನಿಗ್ರಹಿಸಿ ರಾವಣನ ಕುದುರೆ, ಸಾರಥಿಗಳನ್ನು ಹೊಡೆದ.
ಆ ಯುದ್ಧ ನಡೆಯುತ್ತಿರಬೇಕಾದರೆ ಸಮುದ್ರಗಳು ಕ್ಷೋಭಿಸಿದವು. ನದಿಗಳಲ್ಲಿ ಪ್ರವಾಹವುಂಟಾಯಿತು. ಭೂಮಿಯೆಲ್ಲ ಧೂಳಿನಿಂದ ತುಂಬಿಹೋಯಿತು. ವಾಲ್ಮೀಕಿ ಮಹರ್ಷಿಗಳು ಈ ಯುದ್ಧವನ್ನು,
ಗಗನಮ್ ಗಗನಾಕಾರಮ್ ಸಾಗರಂ ಸಾಗರೋಪಮಂ
ರಾಮ ರಾವಣಾಯೋರ್ಯುದ್ಧಮ್ ರಾಮರಾವಣಯೋರಿವ
ಸಮುದ್ರಕ್ಕೆ ಸಮುದ್ರವೇ ಸಾಟಿ, ಆಕಾಶಕ್ಕೆ ಆಕಾಶವೇ ಸಾಟಿ, ಅಂತೆಯೇ ರಾಮ-ರಾವಣರ ಯುದ್ಧಕ್ಕೆ ರಾಮ-ರಾವಣರ ಯುದ್ಧವೇ ಸಾಟಿ ಎಂದು ವರ್ಣಿಸಿದ್ದಾರೆ.
ರಾಮ ವಿಷಸರ್ಪದ ಬಾಣವನ್ನು ರಾವಣನ ಕಂಠಕ್ಕೆ ಗುರಿಯಿಟ್ಟು ಹೊಡೆದ. ತಕ್ಷಣ ಅವನ ಒಂದು ಶಿರಸ್ಸು ಕೆಳಗೆ ಬಿತ್ತು. ಆದರೆ ಮರುಕ್ಷಣವೇ ಮತ್ತೆ ಬಂದು ಸೇರಿತು. ರಾಮ ಮತ್ತೆ ಹೊಡೆದ, ಶಿರಸ್ಸು ಮತ್ತೆ ಬಂದು ಸೇರಿತು. ಹೀಗೆ ನೂರು ಬಾರಿಯಾದರೂ ರಾವಣನ ಹತ್ತೂ ತಲೆಗಳೂ ಇದ್ದಲ್ಲೇ ಇದ್ದವು!
'ಈ ಬಾಣದಿಂದ ಮಾರೀಚ, ಖರ, ದೂಷಣ, ವಾಲಿಯನ್ನು ಕೊಂದಿದ್ದೇನೆ. ಆದರೆ ಇದು ಇವನನ್ನು ಕೊಲ್ಲುತ್ತಿಲ್ಲ' - ಎಂದುಕೊಂಡ ರಾಮ.
ರಾಮ ರಾವಣರ ಯುದ್ಧ ಸತತವಾಗಿ ಏಳು ರಾತ್ರಿ ಏಳು ಹಗಲುಗಳು ನಡೆಯಿತು. ಆಕಾಶವೆಲ್ಲ ದೇವತೆಗಳು, ಋಷಿಗಳಿಂದ ತುಂಬಿಹಯಿತು. ಮಾತಲಿ ರಾಮನಿಗೆ, "ರಾಮ ೭ ದಿನಗಳಿಂದ ಯುದ್ಧ ಮಾಡುತ್ತಿರುವೆ. ದೇವತೆಗಳು ರಾವಣನ ವಧೆಗೆ ನಿರ್ಣಯಿಸಿದ ಮಹೂರ್ತ ಆಸನ್ನವಾಗಿದೆ. ನಿನ್ನ ತೂಣೀರದಲ್ಲಿ ಅಗಸ್ತ್ಯರು ಕೊಟ್ಟ ದಿವ್ಯವಾದ ಬಾಣವಿದೆ. ಅದನ್ನು ಪ್ರಯೋಗಿಸು" ಎಂದ.
ಅದು ಲೋಕವನ್ನು ರಕ್ಷಿಸಲು ಬ್ರಹ್ಮದೇವರು ಇಂದ್ರನಿಗೆ ಕೊಟ್ಟ ಅಸ್ತ್ರ. ವಾಯುವೇಗದಿಂದ ಹೋಗುವ ಶಕ್ತಿಯುಳ್ಳದ್ದು. ಆ ಬಾಣದ ಶಿರಸ್ಥಾನದಲ್ಲಿ ಅಗ್ನಿ, ಸೂರ್ಯರಿರುತ್ತಾರೆ. ಅದರ ಶರೀರವೆಲ್ಲ ಬ್ರಹ್ಮಮಯ. ಸೂರ್ಯನ ತೇಜಸ್ಸಿನಿಂದ ಕೂಡಿದ ಬಾಣ ಕಾಲಾಗ್ನಿಯಂತಿರುತ್ತದೆ. ಅಲ್ಲಿಯವರೆಗೂ ಅದು ಎಷ್ಟೋ ರಾಕ್ಷಸರನ್ನು ಕೊಂದಿತ್ತು. ಆ ಬಾಣವನ್ನು ತೆಗೆದರೆ ನರಿ, ಹದ್ದುಗಳಂತಹ ಕ್ರೂರ ಪ್ರಾಣಿಗಳು ಅಲ್ಲಿಗೆ ಬಂದು ಸೇರುತ್ತಿದ್ದವು. ಸತ್ತ ಹೆಣಗಳನ್ನು ಭಕ್ಷಿಸಲು!
ರಾಮ ಅಸ್ತ್ರವನ್ನು ತೆಗೆದ. ಅದು ಹುತ್ತದಿಂದ ಬರುತ್ತಿರುವ ಸರ್ಪದಂತಿತ್ತು. ಅದನ್ನು ತನ್ನ ಕೈಯಲ್ಲಿ ಹಿಡಿದು, ಕಣ್ಣಿಗೆ ಒತ್ತಿಕೊಂಡು, ವೇದೋಕ್ತವಾಗಿ ಅದರಲ್ಲಿ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿದ. ತನ್ನ ಬಿಲ್ಲಿಗೆ ಹೆದೆಯೇರಿಸಿ, ಕಿವಿಯವರೆಗೂ ಎಳೆದು, ಶತ್ರುನಿಗ್ರವಾಗಲಿ ಎಂದು ಪರಮಾತ್ಮನ ಸ್ತೋತ್ರಮಾಡುತ್ತಾ ರಾವಣನ ಎದೆಗೆ ಗುರಿಯಿಟ್ಟು ಬಿಟ್ಟ. ಕ್ರೂರ ಧ್ವನಿಯನ್ನು ಮಾಡುತ್ತಾ ಆ ಬಾಣ ಒಂದೇ ಕ್ಷಣದಲ್ಲಿ ರಾವಣನ ಎದೆಯನ್ನು ಸೀಳಿತು! ರಾವಣನ ಕೈಯಲ್ಲಿದ್ದ ಬಿಲ್ಲು, ಆಯುಧಗಳು ಕೆಳಗೆ ಬಿದ್ದವು. ರಾವಣ ಸತ್ತಿದ್ದ!
ಆಕಾಶದಲ್ಲಿ ದೇವದುಂದುಭಿಗಳು ಮೊಳಗಿದವು. ಸುಗ್ರೀವ, ಲಕ್ಷ್ಮಣ, ಹನುಮ, ಜಾಂಬವಂತ, ಅಂಗದ, ಋಷಭ, ನೀಲ, ಸುಷೇಣ, ಗಂಧಮಾದನ, ಮೈಂದ, ದ್ವಿವಿದ, ವೇಗದರ್ಶಿ ಎಲ್ಲರೂ ಬಂದು ರಾಮನನ್ನು ಸುತ್ತುವರೆದರು. 'ರಾಮ, ರಾಮ' ಎನ್ನುತ್ತಾ ಸಂತೋಷದಿಂದ ಕೂಗಿದರು. ಹನುಮ ನರ್ತಿಸಿದ. ರಾಕ್ಷಸರೆಲ್ಲ ಓಡಿಹೋದರು. ದೇವತೆಗಳು ರಾಮನನ್ನು ಹೊಗಳಿದರು.
Comments
Post a Comment