೮೬. ಯುದ್ಧರಂಗಕ್ಕೆ ರಾವಣ

ಪ್ರಹಸ್ತನ ಮರಣ ರಾವಣನನ್ನು ಉದ್ವಿಗ್ನಗೊಳಿಸಿತು. ಸೈನ್ಯವನ್ನು ಕರೆದು, "ಈಗ ನಾನೇ ಯುದ್ಧಕ್ಕೆ ಹೋಗುತ್ತೇನೆ. ನಾನು ಹೊರಗೆ ಹೋದರೆ ವಾನರರು ಒಳಗೆ ನುಗ್ಗಬಹುದು. ನೀವು ಹುಷಾರಾಗಿ ಕೋಟೆಯ ಕಾವಲು ಕಾಯಿರಿ" ಎಂದು ಆಜ್ಞೆ ಮಾಡಿ ದೊಡ್ಡ ಸೈನ್ಯದ ಜೊತೆ ಯುದ್ಧಭೂಮಿಗೆ ಬಂದ. 

ಯುದ್ಧಕ್ಕೆ ಬಂದ ರಾವಣನನ್ನು ನೋಡಿದ ರಾಮ, 'ನಡು ಮಧ್ಯಾಹ್ನ ಸೂರ್ಯನನ್ನು ನೋಡಿದರೆ ದೃಷ್ಟಿ ಮಂಕಾದಂತೆ ಇವನನ್ನು ನೋಡುತ್ತಿದ್ದರೆ ನನ್ನ ದೃಷ್ಟಿ ಮಂಕಾಗುತ್ತಿದೆ' ಎಂದುಕೊಂಡು ಪಕ್ಕದಲ್ಲಿದ್ದ ವಿಭೀಷಣನಿಗೆ ಬಂದವನು ಯಾರೆಂದು ಕೇಳಿದ. ವಿಭೀಷಣ, "ರಾಮ, ಆನೆಯ ಮೇಲೆ ಬರುತ್ತಿರುವವನು ಅಕಂಪನ (ಇನ್ನೊಬ್ಬನು. ಸತ್ತವನಲ್ಲ). ಅವನನ್ನು ಪರ್ವತಗಳಿಂದಲೇ ಹೊಡೆಯಬೇಕು. ಅವನ ಪಕ್ಕದ ರಥದಲ್ಲಿರುವವನು ಇಂದ್ರಜಿತ್ತ. ಸಿಂಹಗಳು ಎಳೆಯುವ ಅವನ ಆ ರಥ ಯಜ್ಞಾಗ್ನಿಯಿಂದ ಬರುತ್ತದೆ. ಈ ಕಡೆ ಬರುತ್ತಿರುವವನು ಅತಿಕಾಯ. ಅವನ ಶರೀರ ಮಹೇಂದ್ರ, ವಿಂದ್ಯ ಪರ್ವತಗಳಂತಿದೆ. ಅವನು ಭಯಂಕರವಾದ ಯುದ್ಧ ಮಾಡುತ್ತಾನೆ. ಇನ್ನೊಂದು ಆನೆಯ ಮೇಲಿರುವವನು ಮಹೋದರ. ಕುದುರೆಯ ಮೇಲೆ ಬರುತ್ತಿರುವುದು ಅರವೀರಭಯಂಕರನಾದ ಪಿಶಾಚ. ವೃಷಭದ ಮೇಲೆ ತ್ರಿಶೂಲ ಹಿಡಿದು ಬರುತ್ತಿರುವವನು ತ್ರಿಶಿರಸ್ಕ. ಸರ್ಪವನ್ನು ಧ್ವಜವಾಗಿರಿಸಿಕೊಂಡು ಬರುತ್ತಿರುವವನು ಕುಂಭ. ಅವನ ಪಕ್ಕದಲ್ಲಿರುವವನು ನಿಕುಂಭ. ಎಲ್ಲರಿಗೂ ಊಟ ಮಾಡುವುದು ಇಷ್ಟವಾದರೆ ಇವನಿಗೆ ಯುದ್ಧ ಮಾಡುವುದೆಂದರೆ ಇಷ್ಟ. ಮುಂದೆ ಬರುತ್ತಿರುವವನು ನರಾಂತಕ. ಅಲ್ಲಿ ನೋಡು. ಆನೆಯ ಮೇಲೆ ಹತ್ತು ತಲೆ, ಇಪ್ಪತ್ತು ಕೈಗಳಿಂದ, ಕಿರೀಟಿಯಾಗಿ, ಕುಂಡಲಗಳನ್ನು ಹಾಕಿಕೊಂಡು, ಪರ್ವತದಂತಹ ಕಾಯವಿರುವವನು, ಯುದ್ಧದಲ್ಲಿ ಇಂದ್ರ, ಯಮರನ್ನು ಸೋಲಿಸಿದವನು ಬರುತ್ತಿದ್ದಾನೆ. ಅವನೇ ರಾವಣ. ಅವನನ್ನು ನೋಡಿದರೆ ಎಲ್ಲರೂ ಹೆದರುತ್ತಾರೆ" ಎಂದು ಸೈನ್ಯವನ್ನು ವಿವರಿಸಿದ.
ರಾಮ, "ಏನು ತೇಜಸ್ಸು? ಏನು ಕಾಂತಿ? ಮಧ್ಯಾಹ್ನದ ಸೂರ್ಯನಂತಿದ್ದಾನೆ. ಇಷ್ಟು ದಿನಕ್ಕೆ ಇವನನ್ನು ನೋಡುವ ಅದೃಷ್ಟ ಸಿಕ್ಕಿದೆ. ಇವನು ಇನ್ನು ಹಿಂದಕ್ಕೆ ಹೋಗುವುದಿಲ್ಲ. ಇವನ ಜೊತೆ ಯುದ್ಧ ಮಾಡುವುದನ್ನೇ ಎದುರುನೋಡುತ್ತಿದ್ದೆ" ಎಂದು ಹೇಳಿ ಯುದ್ಧಕ್ಕೆ ಸಿದ್ಧನಾದ.

ರಾವಣನನ್ನು ನೋಡಿದ ಸುಗ್ರೀವ ಒಂದು ದೊಡ್ಡ ಕಲ್ಲನ್ನು ಅವನ ಮೇಲೆ ಎಸೆದ. ಅರ್ಧ ಚಂದ್ರಾಕಾರ ಬಾಣದಿಂದ ರಾವಣ ಅದನ್ನು ನಿಗ್ರಹಿಸಿ ಬಂಗಾರದ ಬಾಣಗಳಿಂದ ಸುಗ್ರೀವನ ಎದೆಗೆ ಹೊಡೆದ. ಭೂಮಿಯಿಂದ ನೀರು ಬಂದಂತೆ ಸುಗ್ರೀವನ ಎದೆಯಿಂದ ರಕ್ತ ಬಂತು. ಅವನು ಜೋರಾಗಿ ಕೂಗುತ್ತ ಭೂಮಿಯ ಮೇಲೆ ಬಿದ್ದು ಮೂರ್ಛೆ ಹೋದ. ನಂತರ ರಾವಣ ಗವಯ, ಗವಾಕ್ಷ, ಸುಷೇಣ, ಋಷಭ, ನಲ ಮೊದಲಾದ ವಾನರ ವೀರರನ್ನು ೪, ೬, ೮, ೧೨ ಬಾಣಗಳನ್ನು ಒಂದೇ ಬಾರಿಗೆ ಹೊಡೆದು ಬೀಳಿಸಿದ. ವಾನರ ವೀರರನ್ನು ಹೊಡೆಯುತ್ತಿದ್ದಾನೆಂದು ಓಡಿ ಬಂದ ಹನುಮ ತನ್ನ ಬಲಮುಷ್ಠಿಯನ್ನು ಬಿಗಿಸಿ, "ರಾವಣ ನಿನಗೆ ಬ್ರಹ್ಮದೇವರ ವರವಿದೆಯೆಂಬ ಅಹಂಕಾರದಿಂದ  ಸೀತೆಯನ್ನು ಅಪಹರಿಸಿದ್ದೀಯ. ಒಂದೇ ಒಂದು ಗುದ್ದಿನಿಂದ ನಿನ್ನನ್ನು ಮೇಲೆ ಕಳಿಸುತ್ತೇನೆ" ಎಂದ. 
"ನಿನಗೆ ಅಷ್ಟು ಧೈರವಿದ್ದರೆ ನನ್ನನ್ನು ಹೊಡಿ" ಎಂದ ರಾವಣ. 
ಹನುಮ ಬಿಗಿಸಿದ ಮುಷ್ಟಿಯಿಂದ ರಾವಣನ ತಲೆಗೆ ಹೊಡೆದ. ರಾವನಿಗೆ ತಲೆ ತಿರುಗಿದಂತಾಗಿ, "ಯುದ್ಧ ಮಾಡಿದರೆ ನಿನ್ನಂತಹವನ ಜೊತೆ ಮಾಡಬೇಕು" ಎಂದ.
"ಛೀ ದುರಾತ್ಮ. ಇಷ್ಟು ದಿನಕ್ಕೆ ನನ್ನ ಕೈ ಮೇಲೆ ನನಗೆ ಅಸಹ್ಯವಾಗುತ್ತಿದೆ. ಅಷ್ಟು ಬಲವಾದ ಏಟು ಕೊಟ್ಟರೂ ನೀನು ಬದುಕಿದ್ದೀಯಾ ಎಂದರೆ ನನಗೆ ಆಶ್ಚರ್ಯವಾಗುತ್ತಿದೆ. ನೀನು ನನ್ನ ವಕ್ಷಸ್ಥಳದ ಮೇಲೆ ಹೊಡೆದು ನನ್ನ ಬಲವನ್ನು ನೋಡು. ಆಮೇಲೆ ನಾನು ಮತ್ತೆ ನಿನಗೆ ಹೊಡೆಯುತ್ತೇನೆ"
ರಾವಣ ತನ್ನ ಬಲಗೈ ಮುಷ್ಠಿ ಬಿಗಿಸಿ ಹನುಮನ ಎದೆಗೆ ಹೊಡೆದಾಗ ಹನುಮ ರಕ್ತ ಕಾರಿ ಕೆಳಗೆ ಬಿದ್ದ!

ರಾಮನ ಸರ್ವಸೈನ್ಯಾಧಿಕಾರಿಯಾದ ನೀಲ ಇರುವೆಯಷ್ಟು ಚಿಕ್ಕ ರೂಪವನ್ನು ಪಡೆದು ರಾವಣನನ್ನು ಹಿಂಸಿಸಿದ. ಅವನ ಬಾಣಗಳ ಮಧ್ಯೆಯಿಂದ ಹೋಗಿ, ಅವನ ಕಿರೀಟದ ಮೇಲೆ ಹತ್ತಿ, ರಾವಣನ ಕಿವಿ ಮೂಗುಗಳನ್ನು ಕಚ್ಚಿದ. ಅವನ ವಸ್ತ್ರದ ಒಳಗೂ ತೂರಿ ಕಿರಿಕಿರಿಯುಂಟುಮಾಡಿದ. ಕೋಪಗೊಂಡ ರಾವಣ ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿ ನೀಲನ ಮೇಲೆ ಬಿಟ್ಟ. ನೀಲ ಅಗ್ನಿಯ ಅಂಶದಿಂದ ಹುಟ್ಟಿದ್ದರಿಂದ ಅಗ್ನಿ ಅವನನ್ನು ಸುಡಲಿಲ್ಲವಾದರೂ ಪ್ರಜ್ಞೆ ತಪ್ಪಿ ಬಿದ್ದ. 

ಇನ್ನು ರಾವಣನನ್ನು ಉಪೇಕ್ಷಿಸಬಾರದೆಂದು ರಾಮ ಯುದ್ಧಕ್ಕೆ ಸಿದ್ಧನಾದಾಗ ಲಕ್ಷ್ಮಣ ಅವನನ್ನು ತಡೆದು, "ಅಣ್ಣ, ನೀನು ಹೋಗಬಾರದು. ನಾವೆಲ್ಲಾ ಇದ್ದರೂ ನೀನು ಯುದ್ಧಕ್ಕೆ ಹೋಗುವುದು ಸರಿಯಲ್ಲ. ನಾನು ಹೋಗುತ್ತೇನೆ. ಆಶೀರ್ವಾದ ಮಾಡು" ಎಂದ.
ರಾಮ, "ರಾವಣ ಸಾಮಾನ್ಯನಲ್ಲ. ಅವನು ಬಿಡುವ ಬಾಣಗಳನ್ನು ನಿಗ್ರಹಿಸುತ್ತ, ನಿನ್ನ ಬಾಣಗಳಿಂದ ಅವನಿಗೆ ಹೊಡೆಯುತ್ತ ರಾವಣನನ್ನು ನೋಯಿಸು. ಮಂತ್ರಗಳನ್ನು ನೆನಪಿಸಿಕೊಂಡು ಹೋಗು" ಎಂದು ಆಶೀರ್ವದಿಸಿ ಕಳಿಸಿದ.

"ನನ್ನ ಅತ್ತಿಗೆಯನ್ನು ಅಪಹರಿಸಿದ ದುಷ್ಟಾತ್ಮನಾದ ರಾವಣ. ಇಷ್ಟು ದಿನಕ್ಕೆ ಯುದ್ಧ ಭೂಮಿಯಲ್ಲಿ ಕಾಣಿಸಿದ್ದೀಯ. ಇನ್ನು ನೀನು ವಾಪಸ್ಸು ಮನೆಗೆ ಹೋಗುವುದಿಲ್ಲ" ಎಂದು ಹೇಳಿ ಲಕ್ಷ್ಮಣ ರಾವಣನ ಮೇಲೆ ಬಾಣಗಳನ್ನು ಪ್ರಯೋಗಿಸಿದ. ರಾವಣ ಆ ಬಾಣಗಳನ್ನು ಉಪಸಂಹರಿಸಿ ತಾನೂ ಬಾಣಗಳನ್ನು ಬಿಟ್ಟ. ಲಕ್ಷ್ಮಣ ಅವನ್ನು ನಿಗ್ರಹಿಸಿದ. ರಾವಣ ಇನ್ನು ಲಕ್ಷ್ಮಣನನ್ನು ಉಪೇಕ್ಷಿಸಬಾರದೆಂದು ಬ್ರಹ್ಮದೇವರು ಕೊಟ್ಟ 'ಶಕ್ತಿ' ಎಂಬ ಭಯಂಕರವಾದ ಅಸ್ತ್ರವನ್ನು ಬಿಟ್ಟ (ಇದನ್ನು ಯಾರ ಮೇಲಾದರೂ ಬಿಟ್ಟರೆ ಅವರು ಸಾಯುವುದು ಖಚಿತ). ಅದು ಲಕ್ಷ್ಮಣನ ಎದೆಯನ್ನು ಹೊಕ್ಕಿತು. ಲಕ್ಷ್ಮಣ, 'ನಾನು ವಿಷ್ಣುವಿನ ಅಂಶ' ಎಂದು ಹೇಳುತ್ತಾ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ. ಲಕ್ಷ್ಮಣನನ್ನು ರಾವಣ ಲಂಕೆಗೆ ತೆಗೆದುಕೊಂಡು ಹೋಗಬೇಕೆಂದು ತನ್ನ ೨೦ ಕೈಗಳಿಂದ ಎತ್ತಲು ಪ್ರಯತ್ನಿಸಿದ. ಆ ಕೈಗಳಿಂದ ಮಂದರ ಪರ್ವತವನ್ನೇ ಎತ್ತಿದ್ದ ಅವನಿಗೆ ಲಕ್ಷ್ಮಣನನ್ನು ಎತ್ತಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಹನುಮಂತನಿಗೆ ಪ್ರಜ್ಞೆ ಬಂದಿತ್ತು. 'ಈ ದುಷ್ಟ ಕೈಗಳಿಂದ ಲಕ್ಷ್ಮಣನನ್ನು ಮುಟ್ಟುತ್ತಿದ್ದಾನೆ' ಎಂದುಕೊಂಡು ಹನುಮ ಓಡಿ ಬಂದು ರಾವಣನ ಎದೆಯ ಮೇಲೆ ಜೋರಾಗಿ ಒಂದು ಗುದ್ದು ಗುದ್ದಿದ. ಆ ಏಟಿಗೆ ರಾವಣನ ನವರಂಧ್ರಗಳಿಂದ ರಕ್ತ ಬಂದು ಅವನು ಕೆಳಗೆ ಬಿದ್ದ. ತಕ್ಷಣವೇ ಚೇತರಿಸಿಕೊಂಡು ತನ್ನ ರಥದಲ್ಲಿ ಹೋಗಿ ಕುಳಿತ. ಹನುಮ ಲಕ್ಷ್ಮಣನನ್ನು ಭಕ್ತಿಯಿಂದ ಮುಟ್ಟಿ ಎಬ್ಬಿಸಿದಾಗ ಅವನು ಮೇಲಕ್ಕೆದ್ದ. ನಂತರ ಅವನನ್ನು ರಾಮನ ಬಳಿ ಕರೆದೊಯ್ದರು. "ಬ್ರಹ್ಮದೇವರ ಶಕ್ತಿ ಅಸ್ತ್ರವನ್ನು ರಾವಣ ನನ್ನ ಮೇಲೆ ಪ್ರಯೋಗಿಸಿದ. ನಾನು ವಿಷ್ಣು ಅಂಶವೆಂದು ಧ್ಯಾನಿಸಿದಾಗ ನನಗೆ ಏನೂ ಉಪದ್ರವವಾಗಲಿಲ್ಲ" ಎಂದು ಲಕ್ಷ್ಮಣ ಹೇಳಿದಾಗ ರಾಮನಿಗೆ ಕೋಪಬಂದು ರಾವಣನ ಮೇಲೆ ಯುದ್ಧಕ್ಕೆ ಹೊರಟ. 

"ಮಹಾವಿಷ್ಣು ಗರುಕ್ಮಂತನ ಮೇಲೆ ಕೂತಂತೆ ನೀವು ನನ್ನ ಮೇಲೆ ಕುಳಿತು ಯುದ್ಧ ಮಾಡಿ. ಆ ರಾವಣ ರಥದಲ್ಲಿ ಯುದ್ಧ ಮಾಡಿದರೆ ನೀವು ಕೆಳಗೆ ನಿಲ್ಲುವುದು ಚೆನ್ನಾಗಿರುವುದಿಲ್ಲ" ಎಂದು ಹೇಳಿ ಹನುಮ ರಾಮನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡ.

ರಾಮ, "ದುರಾತ್ಮ, ದುಷ್ಟ. ಪರಸ್ತ್ರೀಯರನ್ನು ಅಪಹರಿಸುವವನೇ! ಇಂದು ನೀನು ನಿನ್ನ ಅಂತಃಪುರಕ್ಕೆ ಹೋಗುವುದಿಲ್ಲ. ನಿನ್ನ ಹತ್ತು ತಲೆಗಳನ್ನೂ ಹೊಡೆಯುತ್ತೇನೆ" ಎನ್ನುತ್ತಿದ್ದಾಗ ರಾವಣ ಹನುಮನ ಮೇಲೆ ಅನೇಕ ಬಾಣಗಳನ್ನು ಬಿಟ್ಟ. ಹನುಮನ ಮೈಯಿಂದ ರಕ್ತ ಹರಿಯಿತು. ಅದನ್ನು ನೋಡಿ ರಾಮನಿಗೆ ಕೋಪ ಬಂದು ಅರ್ಧಚಂದ್ರಾಕಾರ ಬಾಣಗಳು, ಕಬ್ಬಿಣದ ಬಾಣಗಳು, ಚೂಪಾದ ಬಾಣಗಳನ್ನು ಬಿಟ್ಟ. ಅವು ಬಾಣಗಳೋ ಮಿಂಚುಗಳೋ ಎಂದು ರಾವಣ ಆಶ್ಚರ್ಯ ಪಡುವಷ್ಟರಲ್ಲಿ ಆ ಬಾಣಗಳು ಅವನ ಕುದುರೆ, ಸಾರಥಿ, ಧ್ವಜ, ರಥಚಕ್ರಗಳನ್ನು ಬೀಳಿಸಿದ್ದವು. ರಾವಣ ತನ್ನ ಬಿಲ್ಲು, ಖಡ್ಗಗಳನ್ನು ಹಿಡಿದು ಭೂಮಿಯ ಮೇಲೆ ನಿಂತಿದ್ದ. ರಾಮ ಅವನ ಭುಜಕ್ಕೆ ಬಾಣ ಬಿಟ್ಟು, ಅವನ ಬಿಲ್ಲು ಮತ್ತು ಖಡ್ಗಗಳನ್ನು ಮುರಿದ. ನಂತರ ಅನೇಕ ಬಾಣಗಳಿಂದ ರಾವಣನ ಮರ್ಮಸ್ಥಾನಗಳಿಗೆ ಹೊಡೆದ. ರಾವಣನ ಮೈಯಿಂದ ರಕ್ತ ಹರಿಯಿತು. ಕೊನೆಗೆ ರಾಮ ಒಂದು ಬಾಣದಿಂದ ರಾವಣನ ಕಿರೀಟವನ್ನು ಬೀಳಿಸಿದ.
(ಇದನ್ನು ಮುಕುಟ ಭಂಗ ಸರ್ಗವೆನ್ನುತ್ತಾರೆ)


"ರಾವಣಾ, ಭಯಂಕರವಾದ ಯುದ್ಧವನ್ನೇ ಮಾಡಿದೆ. ನಿನ್ನ ಬಾಣ, ಖಡ್ಗಗಳು ಮುರಿದಿವೆ. ನಿನ್ನ ಕುದುರೆ, ಸಾರಥಿಗಳು ಸತ್ತಿದ್ದಾರೆ. ನಿನ್ನ ಕಿರೀಟ ಬಿದ್ದಿದೆ. ನೀನು ಈಗ ನಿರಾಯುಧಿ. ಇಲ್ಲಿಯವರೆಗೂ ನಮ್ಮ ಕಡೆಯವರನ್ನು ಹೊಡೆದು ಆಯಾಸ ಪಟ್ಟಿದ್ದೀಯ. ನಿನ್ನ ಕಣ್ಣಲ್ಲಿ ಭಯ ಕಾಣಿಸುತ್ತಿದೆ. ಮೈಯೆಲ್ಲಾ ಬೆವರುತ್ತಿದೆ. ಈಗ ಬಿಟ್ಟುಬಿಡುತ್ತಿದ್ದೇನೆ. ಹೋಗಿ ವಿಶ್ರಾಂತಿ ತೆಗೆದುಕೊಂಡು ಉತ್ತಮ ರಥ ಸಾರಥಿಗಳ ಜೊತೆ ನಾಳೆ ಬಂದು ನಿನ್ನ ಪರಾಕ್ರಮವನ್ನು ತೋರಿಸು" ಎಂದು ಹೇಳಿ ರಾಮ ರಾವಣನನ್ನು ಕಳಿಸಿದ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ