೮೭. ಕುಂಭಕರ್ಣ
ರಾವಣ ಅಂತಃಪುರಕ್ಕೆ ಬಂದು ಮಂತ್ರಿಗಳ ಸಭೆ ಸೇರಿಸಿ ನಾಚಿಕೆಯಿಂದ ತಲೆ ತಗ್ಗಿಸಿ, "ಗರುಕ್ಮಂತ ಹಾವುಗಳನ್ನು ತಿಂದಂತೆ, ಸಿಂಹ ಆನೆಯನ್ನು ಸೋಲಿಸಿದಂತೆ ಇಂದು ರಾಮ ನನ್ನನ್ನು ಸೋಲಿಸಿದ. ಒಬ್ಬ ಮಾನವ ನನ್ನ ರಾಜ್ಯಕ್ಕೇ ಬಂದು, ನನ್ನನ್ನೇ ಹೊಡೆದು, ನನಗೇ ಜೀವದಾನ ಮಾಡಿದ್ದಾನೆ. ನಾಳೆ ಹೋಗಿ ನನ್ನ ಪರಾಕ್ರಮ ತೋರಿಸಬೇಕಂತೆ! ಒಂದು ಬಾರಿ ಬ್ರಹ್ಮದೇವರು, 'ನೀನು ಮನುಷ್ಯರಿಂದ ನಶಿಸುತ್ತೀಯ' ಎಂದಿದ್ದರು. ಅದು ಈಗ ನಿಜವಾಗುತ್ತಿದೆ. ನಾನು ದೇವ, ರಾಕ್ಷಸ, ಯಕ್ಷ, ಗಂಧರ್ವ, ಕಿನ್ನರರಿಂದ ಸಾವು ಬರಬಾರದೆಂದು ವರ ಕೇಳಿದ್ದೆ. ಆದರೆ ನರ ವಾನರರನ್ನು ಬಿಟ್ಟಿದ್ದೆ. ನನಗೆ ಈಗ ಜ್ಞಾಪಕ ಬರುತ್ತಿದೆ. ಇಕ್ಷ್ವಾಕು ವಂಶದಲ್ಲಿ ಅನರಣ್ಯನೆಂಬುವವನೊಬ್ಬನಿದ್ದ. ಅವನನ್ನು ನಾನೇ ಯುದ್ದದಲ್ಲಿ ಸಂಹರಿಸಿದ್ದೆ. ಸಾಯುವ ಮೊದಲು ಅವನು, ‘ರಾಕ್ಷಸ! ಇಕ್ಷ್ವಾಕು ವಂಶದಲ್ಲಿ ರಾಮನೆಂಬುವವನು ಹುಟ್ಟುತ್ತಾನೆ. ಅವನು ನಿನ್ನನ್ನು ಕೊಲ್ಲುತ್ತಾನೆ’ ಎಂದು ಶಪಿಸಿದ್ದ. ಬಹುಶಃ ಅವನೇ ರಾಮನಾಗಿ ಬಂದಿರಬಹುದು. ಒಂದು ಬಾರಿ ಪರ್ವತದ ಮೇಲೆ ತಪಸ್ಸು ಮಾಡುತ್ತಿದ್ದ ವೇದವತಿ ಎಂಬುವವಳನ್ನು ಬಲಾತ್ಕರಿಸಲು ಪ್ರಯತ್ನಿಸಿದ್ದೆ. ಅವಳು, ‘ಸ್ತ್ರೀ ಕಾರಣವಾಗಿ ನೀನು ನಶಿಸುತ್ತೀಯ’ ಎಂದಿದ್ದಳು. ಅವಳೇ ಸೀತೆಯಾಗಿ ಬಂದಿರಬಹುದು. ನಾನು ಸೀತೆಯನ್ನು ನನ್ನ ಮೃತ್ಯುವಿಗಾಗಿಯೇ ತಂದಂತಿದೆ. ನನಗೆ ಪಾರ್ವತೀದೇವಿಯ ಶಾಪವೂ ಇದೆ. ನಂದೀಶ್ವರನ ಶಾಪವೂ ಇದೆ. ನಲಕೂಭನ ಪತ್ನಿಯಾದ ರಂಭೆಯ ಶಾಪ ಫಲಿಸುತ್ತಿದೆ. ವರುಣನ ಮಗಳಾದ ಪುಂಜಿಕಸ್ಥಳೆಯ ಶಾಪ ಫಲಿಸುತ್ತಿದೆ. ಅದೇನೇ ಇರಲಿ. ನಾನು ದೇವದಾನವರನ್ನು ಸೋಲಿಸಿದ್ದೇನೆ. ನನಗೆ ಯಾರ ಭಯವೂ ಇಲ್ಲ. ಸೀತೆಯನ್ನು ಮಾತ್ರ ಕೊಡುವುದಿಲ್ಲ. ನೀವೆಲ್ಲ ಹುಷಾರಾಗಿ ಕೋಟೆಗಳನ್ನು ಕಾಪಾಡಿ. ನಾನು ಯಾವಾಗ ಯಾರನ್ನು ಕರೆದರೆ ಅವರು ಬರಬೇಕು. ನನ್ನ ತಮ್ಮ ಕುಂಭಕರ್ಣ ಇಂದ್ರನನ್ನೇ ಸೋಲಿಸಿದ್ದಾನೆ. ಅವನನ್ನು ನಿದ್ದೆಯಿಂದ ಎಬ್ಬಿಸುವುದೇ ಕಷ್ಟ. ಅವನು ಎದ್ದರೆ ರಾಮ ಎಷ್ಟರವನು? ನೀವು ಹೋಗಿ ಅವನನ್ನು ಎಬ್ಬಿಸಿ“ ಎಂದ.
ನಿದ್ದೆ ಹೋಗುತ್ತಿದ್ದ ಕುಂಭಕರ್ಣನನ್ನು ಎಬ್ಬಿಸಲು ನೂರಾರು ಸೈನಿಕರು ಬಂದರು. ಕುಂಭಕರ್ಣ ತನ್ನ ಶಯನಾಗಾರದಲ್ಲಿ ವಿಂಧ್ಯ ಪರ್ವತದಂತೆ ನಿದ್ದೆಹೋಗುತ್ತಿದ್ದ. ಅವನ ಮೂಗಿನ ಹೊಳ್ಳೆಗಳು ಗುಹೆಗಳಂತಿದ್ದವು. ಅವನು ಉಸಿರು ತೆಗೆದುಕೊಂಡಾಗ ಕೆಲವು ಸೈನಿಕರು ಅದರೊಳಕ್ಕೆ ಹೋಗಿ, ಉಸಿರು ಬಿಟ್ಟಾಗ ಹೊರಗೆ ಬಂದರು! ಅವನನ್ನು ಹೇಗೆ ಎಬ್ಬಿಸುವುದು ಎಂದು ಯೋಚಿಸುತ್ತಾ, ‘ಇವನಿಗೆ ಊಟವೆಂದರೆ ತುಂಬ ಇಷ್ಟ. ಇವನಿಗೆ ಇಷ್ಟವಾದ ಪದಾರ್ಥಗಳನ್ನು ತಂದಿಡೋಣ. ಅವುಗಳ ವಾಸನೆಗೆ ಎದ್ದೇಳುತ್ತಾನೆ’ ಎಂದುಕೊಂಡು ಅವನಿಗೆ ಇಷ್ಟವಾದ ಎಮ್ಮೆ, ಜಿಂಕೆಗಳ ಮಾಂಸವನ್ನು ದೊಡ್ಡ ದೊಡ್ಡ ಪಾತ್ರೆಗಳಲ್ಲಿ ತಂದಿಟ್ಟರು. ಗಡಿಗೆಗಳಲ್ಲಿ ಮದ್ಯವನ್ನು ತಂದರು. ಆದರೂ ಕುಂಭಕರ್ಣನಿಗೆ ಎಚ್ಚರವಾಗಲಿಲ್ಲ. ನಂತರ ಶಂಖ, ಭೇರಿಗಳನ್ನು ಮೊಳಗಿಸಿದರು. ದೊಡ್ಡ, ದೊಡ್ಡ ಶೂಲ, ಪರಿಘಗಳನ್ನು ತಂದು ಚುಚ್ಚಿದರು. ಕೈಗಳನ್ನು ಎತ್ತಿ ಕೆಳಗೆ ಬೀಳಿಸಿದರು. ಆನೆ, ಕತ್ತೆ, ಎತ್ತು, ಒಂಟೆಗಳನ್ನು ಅವನ ಮೇಲೆ ಬಿಟ್ಟರು. ಅವು ಒಂದು ಕಡೆಯಿಂದ ಅವನ ಮೇಲೆ ಹತ್ತಿ ಇನ್ನೊಂದು ಕಡೆಯಿಂದ ಇಳಿಯುತ್ತಿದ್ದವು. ಆನೆಗಳು ತನ್ನ ಶರೀರದ ಮೇಲೆ ನಡೆಯುತ್ತಿದ್ದಾಗ ಕುಂಭಕರ್ಣನಿಗೆ ಸ್ವಲ್ಪ ಎಚ್ಚರಿಕೆಯಾಯಿತು. ಅವನು ಮತ್ತೆ ಮಲಗಬಾರದೆಂದು ಸೈನಿಕರು ಶಂಖ, ಮೃದಂಗ, ಭೇರಿಗಳನ್ನು ಬಾರಿಸಿ, ಜೊರಾಗಿ ಕೇಕೆ ಹಾಕತೊಡಗಿದರು. ಕಟ್ಟಿಗೆ, ಶೂಲಗಳಿಂದ ತಿವಿದರು. ಆಗ ಕುಂಭಕರ್ಣ ಕಣ್ಣು ತೆಗೆದು, ಕೈಗಳನ್ನು ಜೋಡಿಸಿ ಜೋರಾಗಿ ಆಕಳಿಸಿದ. ಎದ್ದ ತಕ್ಷಣ ಅಲ್ಲಿದ್ದ ಮಾಂಸವನ್ನೆಲ್ಲ ತಿಂದು, ಮದ್ಯವನ್ನು ಕುಡಿದ. ಎಲ್ಲ ಮುಗಿದ ಮೇಲೆ ರಾಕ್ಷಸರು, “ಕುಂಭಕರ್ಣ, ಇಂದು ಲಂಕೆಗೆ ಎಂದೂ ಇಲ್ಲದಿದ್ದ ತೊಂದರೆ ಬಂದಿದೆ. ನರನಾದ ರಾಮ ವಾನರರ ಸೈನ್ಯದ ಜೊತೆ ಸಮುದ್ರವನ್ನು ದಾಟಿ ಲಂಕೆಗೆ ಬಂದು ಭಯಂಕರವಾದ ಯುದ್ಧ ಮಾಡುತ್ತಿದ್ದಾನೆ. ನಮ್ಮ ಎಷ್ಟೋ ಅತಿರಥ, ಮಹಾರಥರಾದ ರಾಕ್ಷಸರು ಸತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಅಣ್ಣ ನಿಮ್ಮನ್ನು ಎಬ್ಬಿಸಲು ಹೇಳಿದರು. ನಾವು ಎಬ್ಬಿಸಿದ್ದೇವೆ” ಎಂದರು.
ಕುಂಭಕರ್ಣ, “ಇದಕ್ಕೆ ಅಣ್ಣನ ಬಳಿಯೇಕೆ? ಇಲ್ಲಿಂದಲೇ ಯುದ್ಧಭೂಮಿಗೆ ಹೋಗುತ್ತೇನೆ. ನಾನು ಹೋದಾಗ ಯಮ, ಇಂದ್ರರೇ ಸೈಸ್ಯದ ಜೊತೆ ಓಡಿಹೋದರು. ಇನ್ನು ರಾಮಲಕ್ಷ್ಮರು ಒಂದು ಲೆಕ್ಕವೇ? ನನಗೆ ಹಸಿವಾಗಿದೆ. ಎಲ್ಲರೂ ಯುದ್ಧಭೂಮಿಗೆ ಯುದ್ಧ ಮಾಡಲು ಹೋದರೆ ನಾನು ತಿನ್ನುವುದಕ್ಕೆ ಹೋಗುತ್ತೇನೆ. ಆ ವಾನರರು, ಭಲ್ಲೂಕಗಳು ನನಗೆ ಆಹಾರವಾಗುತ್ತಾರೆ” ಎಂದು ಹೇಳಿ ಹೊರಡಲು ಸಿದ್ದನಾದ.
“ನಿಮ್ಮ ಅಣ್ಣ ನಿಮ್ಮನ್ನು ಎದುರು ನೋಡುತ್ತಿದ್ದಾರೆ. ಅವರ ಜೊತೆ ಮಾತಾಡಿ, ಅವರು ನಿರ್ಧರಿಸಿದಂತೆ ಮಾಡಿ”
“ಇವೆಲ್ಲ ತಿಂದು ಸ್ನಾನ ಮಾಡಿ ಹೋಗುತ್ತೇನೆ” ಎಂದು ಹೇಳಿ ಕುಂಭಕರ್ಣ ಸ್ನಾನ ಮಾಡಿ, ಬಾಯಾರಿಕೆ ತೀರಿಸಿಕೊಳ್ಳಲು ಸಾವಿರ ಗಡಿಗೆಗಳ ಮದ್ಯ ಕುಡಿದು, ರಾವಣನ ಅಂತಃಪುರದ ಕಡೆ ಹೊರಟ.
ಕುಂಭಕರ್ಣನದು ದೊಡ್ದ ಶರೀರ. ಅವನು ರಾವಣನ ಅಂತಃಪುರದ ಕಡೆ ನಡೆಯುತ್ತಿದ್ದರೆ ಯುದ್ಧಭೂಮಿಯಲ್ಲಿದ್ದ ವಾನರರು ಅವನನ್ನು ನೋಡಿ ಭಯಪಟ್ಟು ಓಡಿಹೋದರು. ಕೆಲವರು ಮರ ಹತ್ತಿದರೆ, ಕೆಲವರು ಗುಹೆಯೊಳಗೆ ಅಡಗಿಕೊಂಡರು. ಅದನ್ನೆಲ್ಲ ನೋಡಿದ ಸುಗ್ರೀವ ಅಂಗದನನ್ನು ವಿಷಯವೇನೆಂದು ಕೇಳಿದಾಗ, ವಿಭೀಷಣ, “ನನ್ನ ಅಣ್ಣ ಕುಂಭಕರ್ಣ ಅಂತಃಪುರಕ್ಕೆ ಹೋಗುತ್ತಿದ್ದಾನೆ. ಅವನು ರಾವಣನ ತಮ್ಮ. ಅವನು ರಾಕ್ಷಸನೆಂದು ವಾನರರಿಗೆ ಹೇಳಬೇಡಿ. ಅವರು ಭಯಪಡುತ್ತಾರೆ. ಅದು ಕೇವಲ ಒಂದು ಯಂತ್ರವೆಂದು ಹೇಳಿ” ಎಂದ. ಸುಗ್ರೀವ ಕುಂಭಕರ್ಣನನ್ನು ಒಂದು ಯಂತ್ರವೆಂದು ಪ್ರಕಟಿಸಿದ. ಓಡಿಹೋಗಿದ್ದ ವಾನರರು ಹಿಂತಿರುಗಿ ಬಂದರು.
ರಾಮ ವಿಭೀಷಣನಿಗೆ, “ವಿಭೀಷಣ, ಇದೇನು ನಿನ್ನ ಅಣ್ಣ ಹೀಗಿದ್ದಾನೆ?” ಎಂದು ಕೇಳಿದ.
“ಕೆಲವು ರಾಕ್ಷಸರು ಹುಟ್ಟಿದ ಮೇಲೆ ತಪಸ್ಸುಗಳನ್ನು ಮಾಡಿ ಬಲವನ್ನು ಸಂಪಾದಿಸುತ್ತಾರೆ. ಆದರೆ ಇವನು ಹುಟ್ಟುವಾಗಲೇ ಹೀಗೆ ಹುಟ್ಟಿದ್ದ. ಆಗಿನಿಂದಲೂ ಹಸಿವು, ಹಸಿವು ಎಂದು ಸಿಕ್ಕ ಸಿಕ್ಕ ಮಾನವ, ರಾಕ್ಷಸ, ಪ್ರಾಣಿಗಳನ್ನು ತಿನ್ನುತ್ತಿದ್ದ. ಗಂಟೆಗೆ ನೂರಾರು ಜನರನ್ನು ತಿನ್ನುತ್ತಿದ್ದ. ಅವನನ್ನು ನೋಡಿ ಲೋಕವೆಲ್ಲ ತಲ್ಲಣಿಸಿ, ಎಲ್ಲರೂ ಇಂದ್ರನ ಮೊರೆ ಹೋದರು. ಇಂದ್ರ ಐರಾವತದ ಮೇಲೆ ಬಂದು ಕುಂಭಕರ್ಣನಿಗೆ, ‘ನಿನಗೆ ಬುದ್ಧಿ ಇದೆಯೋ ಇಲ್ಲವೋ? ನೀನು ಹೀಗೇ ಮಾಡಿದರೆ ಇನ್ನು ಕೆಲವು ದಿನಗಳಲ್ಲಿ ಈ ಪ್ರಪಂಚದಲ್ಲಿ ಯಾವ ಪ್ರಾಣಿಯೂ ಇರುವುದಿಲ್ಲ’ ಎಂದ. ಕುಂಭಕರ್ಣ ಕೋಪದಿಂದ, ನೀನು ಯಾರು ನನ್ನನ್ನು ಪ್ರಶ್ನಿಸಲು?’ ಎಂದು ಹೇಳಿ ಇಂದ್ರನ ಐರಾವತವನ್ನು ತಳ್ಳಿಬಿಟ್ಟ. ಅದು ಕೆಳಗೆ ಬಿದ್ದುಹೋಯಿತು. ನಂತರ ಐರಾವತದ ದಂತವನ್ನು ಕಿತ್ತು ಅದರಿಂದ ಇಂದ್ರನನ್ನು ಹೊಡೆದ. ಇಂದ್ರ ಭಯದಿಂದ ಬ್ರಹ್ಮದೇವರ ಬಳಿ ಓಡಿದ. ಬ್ರಹ್ಮದೇವರು, ‘ಸೃಷ್ಠಿಯಲ್ಲಿ ಇಂತಹವನೂ ಬಂದನೇ! ಅವನನ್ನು ನನ್ನ ಬಳಿ ಕರೆದುಕೊಂಡು ಬನ್ನಿ’ ಎಂದರು. ಕುಂಭಕರ್ಣನನ್ನು ನೋಡಿದ ತಕ್ಷಣ ಬ್ರಹ್ಮದೇವರು ಆಶ್ಚರ್ಯದಿಂದ, ‘ನೀನು ಭೂಮಿಯ ಮೇಲೆ ಸತ್ತಂತೆ ಬಿದ್ದು ನಿದ್ದೆಹೋಗು’ ಎಂದು ಶಪಿಸಿದರು. ಕುಂಭಕರ್ಣ ನಿದ್ದೆಹೋಗುತ್ತಿದ್ದಾಗ ಲೋಕವೆಲ್ಲ ಸಂತೋಷಪಟ್ಟಿತು. ಆದರೆ ರಾವಣನಿಗೆ ದುಃಖವಾಗಿ ಬ್ರಹ್ಮದೇವರ ಬಳಿ ಹೋಗಿ, ‘ತಾತ, ನೀನು ಹೀಗೆ ಶಪಿಸಿದರೆ ಹೇಗೆ? ಅವನು ನಿನ್ನ ಮೊಮ್ಮಗ. ಯಾವಾಗಲೂ ನಿದ್ದೆ ಹೋಗುತ್ತಿದ್ದರೆ ಹೇಗೆ? ಸ್ವಲ್ಪದಿನವಾದರೂ ಎದ್ದಿರುವಂತೆ ಮಾಡು’ ಎಂದು ಕೇಳಿಕೊಂಡ. ಬ್ರಹ್ಮದೇವರು ‘ಕುಂಭಕರ್ಣ ೬ ತಿಂಗಳು ನಿದ್ದೆ ಹೋಗಲಿ. ಒಂದು ದಿನವೆದ್ದು, ಆ ದಿನದಲ್ಲಿ ೬ ತಿಂಗಳ ಊಟವನ್ನು ಮಾಡಿ ಮತ್ತೆ ನಿದ್ದೆ ಹೋಗಲಿ’ ಎಂದರು. ಆದ್ದರಿಂದ ಅವನು ಯಾವಾಗಲೂ ನಿದ್ದೆ ಹೋಗುತ್ತಿರುತ್ತಾನೆ. ಯುದ್ದಕ್ಕಾಗಿ ಇವನನ್ನು ನಿದ್ದೆಯಿಂದ ಎಬ್ಬಿಸಿದ್ದಾರೆ. ಇವನ ಜೊತೆ ಯುದ್ಧ ಸಾಮಾನ್ಯವಲ್ಲ ರಾಮ.”
ಕುಂಭಕರ್ಣ ರಾವಣನ ಅಂತಃಪುರಕ್ಕೆ ಬಂದ. ರಾವಣ ತನ್ನ ದುಃಖವನ್ನೆಲ್ಲ ತೋಡಿಕೊಂಡು ಕುಂಭಕರ್ಣನನ್ನು ಯುದ್ಧಕ್ಕೆ ಹೋಗಲು ಹೇಳಿದ. ಕುಂಭಕರ್ಣ, “ಅಣ್ಣ ಏನಾದರೂ ಮಾಡುವ ಮೊದಲು ಆಲೋಚಿಸಿ ಮಾಡಬೇಕು. ಸೀತೆಯನ್ನು ಅಪಹರಿಸುವ ಮುಂಚೆ ಯಾರನ್ನಾದರೂ ಕೇಳಿದೆಯಾ? ಒಬ್ಬನೇ ಹೋಗಿ ಅವಳನ್ನು ಎತ್ತಿಕೊಂಡು ಬಂದೆ. ಈಗ ಇಷ್ಟು ಉಪದ್ರವವಾಗುತ್ತಿದೆ. ನಿನಗೆ ಹೇಳುವಷ್ಟು ಅರ್ಹತೆಯಿಲ್ಲ. ಆದರೂ ಹೇಳುತ್ತಿದ್ದೇನೆ. ಪಕ್ಕದವನಿಗೆ ನಿನಗಿಂತಲೂ ಹೆಚ್ಚು ಶಕ್ತಿಯಿದ್ದರೆ ಅವನ ಜೊತೆ ಸಂಧಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮಾತ್ರ ಯುದ್ಧ ಮಾಡಬೇಕು. ವಿಭೀಷಣ ಇದನ್ನು ಹೇಳಿದಾಗ ಅವನನ್ನು ನೀನು ರಾಜ್ಯದಿಂದ ಹೊರಹಾಕಿದೆ. ಈಗ ಎಲ್ಲರೂ ಸತ್ತ ನಂತರ ನನ್ನನ್ನು ಎಬ್ಬಿಸುತ್ತಿರುವೆ. ನಿನ್ನ ಮಂತ್ರಿಗಳು ನಿನಗೆ ಬುದ್ಧಿ ಹೇಳುತ್ತಿದ್ದಾರಾ ಅಥವಾ ನಿನ್ನನ್ನು ಮೆಚ್ಚಿಸಲು ಮಾತಾಡುತ್ತಿದ್ದಾರಾ? ಬರುವ ಉಪದ್ರವಗಳನ್ನು ಪತ್ತೆಹಚ್ಚಿ ನಿನಗೆ ಹೇಳುವ ಮಂತ್ರಿಗಳು ನಿನ್ನ ಬಳಿ ಇಲ್ಲವೇ? ಏನು ರಾಜ್ಯ ಪಾಲನೆ ಮಾಡುತ್ತಿದ್ದೀಯ ಅಣ್ಣ ನೀನು?“ ಎಂದ.
ರಾವಣನಿಗೆ ಕೋಪ ಬಂದು, “ನಾನು ತಪ್ಪು ಮಾಡಿದೆನೆಂದೇ ತಿಳಿ. ನಾನು ನಿನ್ನನ್ನು ಎಬ್ಬಿಸಿದ್ದು ನನ್ನ ತಪ್ಪನ್ನು ಎತ್ತಿ ತೋರಿಸುವುದಕ್ಕಲ್ಲ. ನಿನಗೆ ಉಪಕಾರ ಮಾಡುವುದಕ್ಕಾದರೆ ರಾಮಲಕ್ಷ್ಮಣರನ್ನು ಕೊಂದು ಬಾ. ಇಲ್ಲದಿದ್ದರೆ ಹೋಗಿ ಮಲಗು. ಇಂದಿನಿಂದ ನನ್ನ ನಿನ್ನ ಸಂಬಂಧ ಮುಗಿಯುತ್ತದೆ” ಎಂದ.
“ಅಣ್ಣ, ಅಷ್ಟು ಚಿಂತಿಸಬೇಡ. ನಾನು ಇದ್ದೂ ನಿನಗೆ ಉಪಕಾರ ಮಾಡದಿದ್ದರೆ ನನಗೆ ಯಾವ ಪ್ರಯೋಜನವೂ ಇಲ್ಲ. ಯುದ್ಧಕ್ಕೆ ಹೋಗಿ ಆ ರಾಮನನ್ನು ಕೊಂದು ಬರುತ್ತೇನೆ.”
Comments
Post a Comment