೮೮. ಕುಂಭಕರ್ಣನ ವಧೆ
ರಾವಣ ಕುಂಭಕರ್ಣರು ಮಾತಾಡುತ್ತಿದ್ದಾಗ ಅಲ್ಲಿಗೆ ಬಂದ ಮಹೋದರನೆಂಬ ರಾಕ್ಷಸ, “ಕುಂಭಕರ್ಣ, ರಾಮ ಬಲವಂತನೆಂದು ಹೇಳುತ್ತಲೇ ಯುದ್ಧಕ್ಕೆ ಹೋಗುತ್ತೇನೆಂದು ಹೇಳುತ್ತಿದ್ದೀಯಲ್ಲ? ಇಂತಹ ಸಮಯದಲ್ಲಿ ಯುದ್ಧ ಮಾಡಬಾರದು. ಮೋಸ ಮಾಡಬೇಕು. ನಾವು ಐದು ಜನ ಯುದ್ಧಕ್ಕೆ ಹೋಗಿ ರಾಮನ ಮೇಲೆ ಯುದ್ಧ ಮಾಡುತ್ತೇವೆ. ಅವನನ್ನು ನಿಗ್ರಹಿಸಲಾದರೆ ಸರಿ. ಇಲ್ಲದಿದ್ದರೆ ಅವನು ಬಿಡುವ ಬಾಣಗಳು ನಮ್ಮ ಶರೀರದಲ್ಲಿ ಚುಚ್ಚಿಕೊಳ್ಳುತ್ತವೆ. ಆಗ ನಾವು ಅಲ್ಲಿಂದ ಓಡಿ ರಾವಣನ ಬಳಿ ಬಂದುಬಿಡುತ್ತೇವೆ. ರಾವಣ ನಾವು ಐದು ಜನ ರಾಮನನ್ನು ಕೊಂದೆವೆಂದು ಎಲ್ಲರಿಗೂ ಹೇಳಿ, ಸೀತೆಯಿರುವ ಜಾಗದಲ್ಲಿ ಸಭೆ ಸೇರಿಸಿ ನಮಗೆ ಹಣ, ಬಂಗಾರ, ವಾಹನ ಮುಂತಾದ ಉಡುಗೊರೆಗಳನ್ನು ಕೊಡಲಿ. ಆಗ ಸೀತೆ ರಾಮ ಸತ್ತನೆಂದು ನಂಬುತ್ತಾಳೆ. ತುಂಬಾ ದಿನದಿಂದ ಸುಖಕ್ಕೆ ದೂರವಾದ ಸ್ತ್ರೀಯಾದ್ದರಿಂದ ರಾವಣನನ್ನು ಸೇರುತ್ತಾಳೆ” ಎಂದ.
ರಾವಣ ಕುಂಭಕರ್ಣನಿಗೆ, “ಈ ಮಹೋದರನಿಗೆ ರಾಮನೆಂದರೆ ಭಯ. ಆದ್ದರಿಂದ ಹೀಗೆ ನಾಟಕವಾಡುತ್ತಿದ್ದಾನೆ. ನೀನು ಹೊರಡು” ಎಂದ.
ಕುಂಭಕರ್ಣ, “ನೀವು ಯಾರೂ ನನ್ನ ಜೊತೆ ಬರುವ ಅವಶ್ಯಕತೆಯಿಲ್ಲ ನಾನೊಬ್ಬನೇ ಹೋಗುತ್ತೇನೆ” ಎಂದ.
“ಒಬ್ಬನೇ ಹೋಗಬೇಡ. ಸೈನ್ಯ ತೆಗೆದುಕೊಂಡು ಹೋಗು” ಎಂದು ಹೇಳಿ ರಾವಣ ಕುಂಭಕರ್ಣನ ಕತ್ತಿಗೆ ಹಾರ ಹಾಕಿದ. ಕುಂಭಕರ್ಣ ಒಂದು ಒಳ್ಳೆಯ ಪಂಚೆಯುಟ್ಟು, ಉತ್ತರೀಯನ್ನು ಹೊದ್ದುಕೊಂಡು ಯುದ್ಧಭೂಮಿಯ ಕಡೆ ಹೊರಟ. ಅವನ ಹಿಂದೆ ಸೈನ್ಯವೂ ಹೊರಟಿತು.
ಯುದ್ಧಕ್ಕೆ ಬಂದ ಕುಂಭಕರ್ಣನನ್ನು ನೋಡಿದ ವಾನರರು ಅವನನ್ನು ಯಂತ್ರವೆಂದೇ ಭಾವಿಸಿದರು. ಆದರೆ ಹನುಮ, ಸುಷೇಣ, ನೀಲ, ಮೈಂದ ಮೊದಲಾದ ವಾನರ ನಾಯಕರಿಗೆ ಅವನು ಯಂತ್ರವಲ್ಲವೆಂದು ತಿಳಿದಿತ್ತು. ಆದ್ದರಿಂದ ಅವರು ದೊಡ್ಡ ದೊಡ್ಡ ಕಲ್ಲು, ಮರಗಳನ್ನು ತಗೆದುಕೊಂಡು ಅವನನ್ನು ಹೊಡೆದರು. ಆದರೆ ಕುಂಭಕರ್ಣ ತನ್ನ ಶೂಲವನ್ನು ಆಡಿಸುತ್ತಾ ಅವನ್ನು ಪುಡಿಮಾಡಿದ. ಅವನು ಕೈಯಿಂದ ಹೊಡೆದರೆ ಒಂದೇ ಬಾರಿಗೆ ಸಾವಿರಾರು ವಾನರರು ಸಾಯುತ್ತಿದ್ದರು. ಸತ್ತ ವಾನರರನ್ನು, ಓಡುತ್ತಿದ್ದ ವಾನರರನ್ನು ಅವನು ತನ್ನ ಬಾಯಿಗೆ ಹಾಕಿಕೊಳ್ಳುತ್ತಿದ್ದ. ಅವನ ಬಾಯಿಗೆ ಹೋದ ವಾನರರಲ್ಲಿ ಕೆಲವರು ಕಿವಿ, ಮೂಗುಗಳಿಂದ ತಪ್ಪಿಸಿಕೊಂಡು ಹೊರಬರುತ್ತಿದ್ದರು. ಅವರನ್ನೂ ಕುಂಭಕರ್ಣ ಹಿಡಿದು ತಿಂದುಬಿಡುತ್ತಿದ್ದ. ಹಲವಾರು ದೊಡ್ಡ ಭಲ್ಲೂಕಗಳೂ ಅವನ ಬಾಯಿಗೆ ಹೋದವು.
ಅಷ್ಟರಲ್ಲಿ ವಾನರರಿಗೆ ಅವನು ಯಂತ್ರವಲ್ಲ, ರಾಕ್ಷಸನೆಂದು ತಿಳಿದುಹೋಯಿತು. ತಕ್ಷಣ ಅವರು ಒಡಿಹೋಗಿ ಮರ, ಗುಹೆಗಳಲ್ಲಿ ಹೋಗಿ ಅಡಗಿಕೊಂಡರು. ಕೆಲವರು ಸಮುದ್ರದಲ್ಲಿ ಧುಮುಕಿದರು. ಕೆಲವರು ಸೇತುವೆಯ ಮೇಲೆ ಹತ್ತಿ ಓಡಿಹೋದರು. ಅಂಗದ ಓಡುತ್ತಿದ್ದ ವಾನರರನ್ನು, “ನೀವೆಲ್ಲ ಈಗ ಓಡಿಹೋದರೆ ನಾಳೆ ನಿಮ್ಮ ಪತ್ನಿಯರು ಕೇಳಿದಾಗ ಯುದ್ಧ ಭೂಮಿಯಲ್ಲಿ ಹೆದರಿ ಓಡಿ ಬಂದೆವೆಂದು ಹೇಳುತ್ತೀರಾ? ನಿಮ್ಮ ಪೌರುಷವೆಲ್ಲ ಏನಾಯಿತು” ಎಂದು ಹೇಳಿ ವಾಪಸ್ಸು ಕರೆದುಕೊಂಡು ಬಂದ. ಅಷ್ಟರಲ್ಲಿ ನೀಲ, ಋಷಭ, ಗಂಧಮಾದನ, ಸುಗ್ರೀವ ಮೊದಲಾದವರು ಕುಂಭಕರ್ಣನ ಹತ್ತಿರ ಹೋಗಿ ಬಂಡೆಗಳಿಂದ ಹೊಡೆದರು. ಕುಂಭಕರ್ಣ ಅವರಲ್ಲಿ ಇಬ್ಬರನ್ನು ಕೈಯಲ್ಲಿ ಹಿಡಿದು ಕಿವುಚಿದಾಗ ಅವರ ಕಿವಿ, ಮೂಗುಗಳಿಂದ ರಕ್ತ ಬಂದಿತು. ಅವರನ್ನು ಪಕ್ಕಕ್ಕೆ ಎಸೆದ. ವಾನರ ನಾಯಕರು ಬಲಾಢ್ಯರಾದ್ದರಿಂದ ಅವರು ಸಾಯಲಿಲ್ಲ. ಕೇವಲ ಮೂರ್ಛೆಹೋದರು. ಸುಗ್ರೀವ ಒಂದು ದೊಡ್ಡ ಪರ್ವತ ಶಿಖರವನ್ನು ತಂದು ಕುಂಭಕರ್ಣನ ಮೇಲೆ ಎಸೆದ. ಪರ್ವತವೇ ನುಚ್ಚುನೂರಾಯಿತು. ಕುಂಭಕರ್ಣ ತನ್ನ ಶೂಲದಿಂದ ಸುಗ್ರೀವನ್ನು ಹೊಡೆದಾಗ ಸುಗ್ರೀವ ಪ್ರಜ್ಞೆತಪ್ಪಿ ಬಿದ್ದ. ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡು ಮೇಲಕ್ಕೇಳುತ್ತಿದ್ದಾಗ ಕುಂಭಕರ್ಣ, “ಸುಗ್ರೀವ, ನಿನ್ನ ಜನ್ಮ ವೃತ್ತಾಂತ ಜ್ಞಾಪಕವಿದೆಯಾ? ನೀನು ಋಕ್ಷರಜಸ್ಸುವಿನ ಮಗ. ನಿನ್ನ ಅಪ್ಪ ಶಾಪವಿದ್ದ ಸರೋವರದಲ್ಲಿ ಸ್ನಾನ ಮಾಡಿದಾಗ ಅಪ್ಸರ ಸ್ತ್ರೀಯಾಗಿ ಬದಲಾದ. ಆ ಅಪ್ಸರೆಯಲ್ಲಿ ಸೂರ್ಯ ಮತ್ತು ಇಂದ್ರನ ಅಂಶದಿಂದ ಹುಟ್ಟಿದವರೇ ನೀನು ಮತ್ತು ನಿನ್ನ ಅಣ್ಣ ವಾಲಿ (ಬ್ರಹ್ಮದೇವರು ಆ ಅಪ್ಸರೆಯನ್ನು ಮತ್ತೊಂದು ಸರಸ್ಸಿನಲ್ಲಿ ಸ್ನಾನ ಮಾಡಿಸಿದಾಗ ಋಕ್ಷರಜಸ್ಸು ತನ್ನ ಮೊದಲ ರೂಪವನ್ನು ಪಡೆದ). ನಾನು ನಿನ್ನನ್ನು ಬಿಡುವುದಿಲ್ಲ” ಎಂದು ಮೂದಲಿಸಿ ತನ್ನ ಶೂಲದಿಂದ ಹೊಡೆದ. ಸುಗ್ರೀವ ರಕ್ತ ಕಕ್ಕುತ್ತಾ ಬಿದ್ದುಬಿಟ್ಟ. ಹನುಮ ಅದನ್ನು ನೋಡಿ ಕುಂಭಕರ್ಣನ ಶೂಲವನ್ನು ಕಿತ್ತುಕೊಂಡು ಅದನ್ನು ಮುರಿದುಬಿಟ್ಟ. ಕೋಪಗೊಂಡ ಕುಂಭಕರ್ಣ ಹನುಮನಿಗೆ ಒಂದು ಏಟು ಕೊಟ್ಟಾಗ ಹನುಮ ರಕ್ತಕಾರುತ್ತಾ ಬಿದ್ದ. ನಂತರ ಕುಂಭಕರ್ಣ ಸುಗ್ರೀವನನ್ನು ಹೆಗಲ ಮೇಲೆ ಹಾಕಿಕೊಂಡು ಲಂಕೆಯ ಕಡೆ ಹೊರಟ. ಹನುಮ ಚೇತರಿಸಿಕೊಂಡು ಅದನ್ನು ನೋಡಿ, ‘ನನ್ನ ಪ್ರಭುವನ್ನು ಶತೃ ಅಪಹರಿಸುತ್ತಿದ್ದರೆ ಸೇವಕನಾದ ನಾನು ರಕ್ಷಿಸಬಾರದು. ಅದು ಪ್ರಭುವಿಗೇ ಅವಮಾನ. ಸುಗ್ರೀವನಿಗೆ ಪ್ರಜ್ಞೆ ಬರುತ್ತದೆ. ಇನ್ನೂ ಸ್ವಲ್ಪಹೊತ್ತು ಕಾಯುತ್ತೇನೆ’ ಎಂದುಕೊಂಡ.
ಸುಗ್ರೀವನನ್ನು ಲಂಕೆಗೆ ತರುತ್ತಿದ್ದ ಕುಂಭಕರ್ಣನನ್ನು ನೋಡಿ ರಾಕ್ಷಸ ಸ್ತ್ರೀಯರು ತುಂಬಾ ಸಂತೋಷಪಟ್ಟರು. ಅಂತಃಪುರದ ಮಹಡಿ, ಗೋಪುರಗಳನ್ನು ಹತ್ತಿ ಕುಂಭಕರ್ಣನ ಮೇಲೆ ಚಂದನ ದ್ರವ್ಯಗಳನ್ನು ಸುರಿಸಿದರು. ಸುವಾಸನೆಯುಕ್ತ ದ್ರವ್ಯಗಳ ವಾಸನೆ ಮೂಗಿನ ಮೇಲೆ ಬಿದ್ದಾಗ ಸುಗ್ರೀವನಿಗೆ ಪ್ರಜ್ಞೆ ಬಂದು ಕುಂಭಕರ್ಣನ ಮೂಗು, ಕಿವಿಗಳನ್ನು ಕಚ್ಚಿದ. ಉಗುರುಗಳಿಂದ ಪರಚಿದ. ನೋವಿನಿಂದ ಕುಂಭಕರ್ಣ ಸುಗ್ರೀವನನ್ನು ಬಿಟ್ಟುಬಿಟ್ಟ. ತಕ್ಷಣ ಸುಗ್ರೀವ ಆಕಾಶಕ್ಕೆ ಎಗರಿ ಹಾರಿಹೋದ.
ಕುಂಭಕರ್ಣ ಮತ್ತೆ ಯುದ್ಧಕ್ಕೆ ಬಂದ. ಮೊದಲಿಗಿಂತ ಹೆಚ್ಚಿನ ಕೋಪದಿಂದ ವಾನರ, ಭಲ್ಲೂಕಗಳ ಜೊತೆ ರಾಕ್ಷಸರನ್ನೂ ತಿನ್ನತೊಡಗಿದ. ಲಕ್ಷ್ಮಣ ಕುಂಭಕರ್ಣನ ಮೇಲೆ ಬಾಣ ಪ್ರಯೋಗ ಮಾಡಿದ. ಎಷ್ಟು ಬಾಣಗಳನ್ನು ಬಿಟ್ಟರೂ ಅವು ಕುಂಭಕರ್ಣನ ಮೈಯನ್ನು ತಗುಲಿ ಕೆಳಗೆ ಬೀಳುತ್ತಿದ್ದವು. ಅವನು ಲಕ್ಷ್ಮಣನಿಗೆ, “ಚೆನ್ನಾಗಿಯೇ ಯುದ್ಧ ಮಾಡುತ್ತಿದ್ದೀಯ. ಆದರೆ ನಿನ್ನನ್ನು ಕೊಂದರೆ ಏನು ಲಾಭ. ರಾಮನನ್ನು ಕೊಂದು ಹೋಗುತ್ತೇನೆ. ಅವನೆಲ್ಲಿ?” ಎಂದು ಕೇಳಿದ. ಬಾಣಗಳ ಪ್ರಭಾವದಿಂದ ಕುಂಭಕರ್ಣನ ಮೈಯಿಂದ ರಕ್ತ ಬರುತ್ತಿತ್ತು. ಲಕ್ಷ್ಮಣ, “ಇವನು ನಡೆಯುತ್ತಿದ್ದಷ್ಟು ಕಾಲ ಎಲ್ಲರನ್ನೂ ಕೊಲ್ಲುತ್ತಾನೆ. ವಾನರರೆಲ್ಲ ಹೋಗಿ ಇವನ ಮೇಲೆ ಕುಳಿತುಬಿಡಿ. ಇವನು ಕೆಳಗೆ ಬಿದ್ದರೆ ಏನು ಮಾಡಲಿಕ್ಕಾಗುವುದಿಲ್ಲ” ಎಂದ. ಎಷ್ಟೋ ವಾನರರು ಕುಂಭಕರ್ಣನ ಮೇಲೆ ಕುಳಿತರು. ಆದರೆ ಅವನು ಒಂದು ಬಾರಿ ಮೈಯನ್ನು ಕೊಡವಿದಾಗ ಎಲ್ಲರೂ ದೂರ ಹೋಗಿ ಬಿದ್ದರು. ವಾನರರೆಲ್ಲ ರಾಮನ ಬಳಿ ಹೋಗಿ, “ರಾಮ, ಈ ಕುಂಭಕರ್ಣನನ್ನು ನಿನ್ನನ್ನು ಬಿಟ್ಟು ಯಾರೂ ನಿಗ್ರಹಿಸಲಾರರು. ನೀನೇ ಬಂದು ಅವನನ್ನು ಸಂಹರಿಸು” ಎಂದರು.
ರಾಮನನ್ನು ನೋಡಿದ ಕುಂಭಕರ್ಣ ಒಂದು ದೊಡ್ಡ ಬೆಟ್ಟವನ್ನು ತೆಗೆದುಕೊಂದು ಬಂದಾಗ ರಾಮ ಅವನ ಎದೆಯ ಮೇಲೆ ಬಾಣಗಳಿಂದ ಹೊಡೆದ. ರಕ್ತ ಹರಿಯಿತು. ಕುಂಭಕರ್ಣ ಇನ್ನೂ ವ್ಯಗ್ರನಾಗಿ ರಾಮನ ಮೇಲೆ ಬಂದ. ಅವನನ್ನು ನಿಗ್ರಹಿಸುವುದು ಕಷ್ಟವೆಂದು ರಾಮ ಮುಳ್ಳುಗಳಿರುವ ಬಾಣಗಳಿಂದ ಹೊಡೆದು ಕುಂಭಕರ್ಣನ ಆಯುಧಗಳನ್ನು ಕೆಳಗೆ ಬೀಳಿಸಿದ. ನಂತರ ರಾಮ ವಾಯವ್ಯಾಸ್ತ್ರದಿಂದ ಕುಂಭಕರ್ಣನ ಬಲಗೈ ಮುರಿದ. ಕುಂಭಕರ್ಣ ಎಡಗೈಯಲ್ಲಿ ಮರ ತೆಗೆದುಕೊಂಡು ಬಂದ. ರಾಮ ಆಗ್ನೇಯಾಸ್ತ್ರದಿಂದ ಅವನ ಎಡಗೈಯನ್ನೂ ಮುರಿದ. ಕೈಗಳಿಲ್ಲದಿದ್ದರೂ ಕುಂಭಕರ್ಣ ಕಾಲುಗಳಿಂದ ವಾನರರನ್ನು ತುಳಿಯುತ್ತಿದ್ದ. ಕೊನೆಗೆ ರಾಮ ಅರ್ಧಚಂದ್ರಾಕಾರ ಬಾಣಗಳಿಂದ ಅವನ ತೊಡೆಗಳನ್ನು ನಂತರ ಅವನ ತಲೆಯನ್ನೂ ಕತ್ತರಿಸಿದ. ಕುಂಭಕರ್ಣನ ಅರ್ಧ ಶರೀರ ಸಮುದ್ರದಲ್ಲಿ ಇನ್ನರ್ಧ ಭಾಗ ಲಂಕೆಯ ಮುಖ್ಯದ್ವಾರದವರೆಗೂ ಬಿತ್ತು! ಕುಂಭಕರ್ಣ ಸತ್ತಿದ್ದ.
ಕುಂಭಕರ್ಣ ವಧೆಯ ವಾರ್ತೆಯನ್ನು ಕೇಳಿದ ರಾವಣ ಅಳುತ್ತಾ, “ನಿದ್ದೆ ಹೋಗುತ್ತಿದ್ದವನನ್ನು ಎಬ್ಬಿಸಿ ಯುದ್ಧಕ್ಕೆ ಕಳಿಸಿದೆ. ಯಮ, ಇಂದ್ರರನ್ನು ಸೋಲಿಸಿದವನು ಇಂದು ರಾಮನ ಕೈಯಲ್ಲಿ ಹತನಾದ. ಅವನನ್ನು ಕಳಿಸದಿದ್ದರೆ ಚನ್ನಾಗಿರುತ್ತಿತ್ತು. ರಾಮನ ಮುಂದೆ ಕುಂಭಕರ್ಣ, ಮಹೋದರ, ಮಹಾಪಾರ್ಷ, ಪ್ರಹಸ್ತ ಯಾರೂ ನಿಲ್ಲರು ಎಂದು ವಿಭೀಷಣ ಹೇಳಿದ್ದ. ಧರ್ಮಾತ್ಮನಾದ ಅವನನ್ನು ಅವಮಾನಿಸಿ ಕಳಿಸಿದೆ. ಇಂದು ಕುಂಭಕರ್ಣ ಸತ್ತಿದ್ದಾನೆ. ನನ್ನ ಬಲಭುಜವೇ ಬಿದ್ದಿದೆ” ಎಂದು ಪ್ರಲಾಪಿಸುತ್ತಿದ್ದಾಗ ರಾವಣ, ಕುಂಭಕರ್ಣರ ಮಕ್ಕಳು ಅಲ್ಲಿಗೆ ಬಂದರು.
“ಅಪ್ಪ ನೀವು ದುಃಖಿಸಬೇಡಿ. ನಾವು ಯುದ್ಧಕ್ಕೆ ಹೋಗಿ ರಾಮಲಕ್ಷ್ಮಣರನ್ನು ನಿಗ್ರಹಿಸುತ್ತೇವೆ” ಎಂದರು.
“ಹಾಗೆಯೇ ಆಗಲಿ. ಹೋಗಿ ವಿಜಯಿಗಳಾಗಿ ಬನ್ನಿ”
Comments
Post a Comment