೮೯. ಇಂದ್ರಜಿತ್ತನ ಅಟ್ಟಹಾಸ
ಮೊದಲಿಗೆ ರಾವಣನ ಮಗನಾದ ನರಾಂತಕ ಬಂದು ಘೋರವಾದ ಯುದ್ಧ ಮಾಡಿದ. ಅಂಗದ ಅವನನ್ನು ತಲೆಯ ಮೇಲೆ ಜೋರಾದ ಏಟು ಕೊಟ್ಟು ಮುಗಿಸಿದ. ಮಹೋದರನನ್ನು ನೀಲ, ದೇವಾಂತಕ, ತ್ರಿಶಿರರನ್ನು (ಮೂರು ತಲೆಯುಳ್ಳವನು) ಹನುಮ ಕೊಂದರು. ಉನ್ಮತ್ತನನ್ನು ಗವಾಕ್ಷ ಕೊಂದ.
ರಾವಣನ ಐದು ಮಕ್ಕಳು ಸತ್ತ ಮೇಲೆ ಅತಿಕಾಯ ಯುದ್ಧಕ್ಕೆ ಬಂದ. ಹೆಸರಿಗೆ ತಕ್ಕಂತೆ ಅವನದು ದೊಡ್ಡ ಶರೀರ. ರಾಮ ಅವನ ಬಗ್ಗೆ ವಿಚಾರಿಸಿದಾಗ ವಿಭೀಷಣ, “ಇವನು ಸಾಮಾನ್ಯನಲ್ಲ. ಅವನು ವೇದಗಳನ್ನು ಓದಿದ್ದಾನೆ. ಬ್ರಹ್ಮದೇವರಿಂದ ವರ ಪಡೆದಿದ್ದಾನೆ. ಎಂತಹ ಬಾಣದಿಂದ ಹೊಡೆದರೂ ಅವನ ಕವಚ ಮುರಿಯುವುದಿಲ್ಲ. ಅವನನ್ನು ಕೊಲ್ಲುವುದು ಕಷ್ಟ” ಎಂದ.
ಅತಿಕಾಯ ಯುದ್ಧರಂಗದಲ್ಲಿ ರಕ್ತ ಹರಿಸಿದ. ಎಷ್ಟೋ ಜನರನ್ನು ನಿಗ್ರಹಿಸಿದ. ಲಕ್ಷ್ಮಣ ಅವನನ್ನು ಎದುರಿಸಿದಾಗ ಅತಿಕಾಯ, “ಲಕ್ಷ್ಮಣ ನೀನಿನ್ನೂ ಚಿಕ್ಕವನು. ನಾನು ಅತಿಕಾಯ. ನಿನ್ನಂತಹ ಚಿಕ್ಕ ಚಿಕ್ಕವರ ಜೊತೆ ನಾನು ಯುದ್ಧ ಮಾಡುವುದಿಲ್ಲ. ನನ್ನನ್ನು ಎದುರಿಸಿ ಯುದ್ಧ ಮಾಡುವವರು ನಿನ್ನ ಸೈನ್ಯದಲ್ಲಿ ಯಾರಾದರೂ ಇದ್ದಾರಾ?” ಎಂದು ಕೇಳಿದ.
“ಇಷ್ಟು ನಾಟಕ ಬೇಡ. ನನ್ನ ಜೊತೆ ಯುದ್ಧ ಮಾಡು” - ಎಂದ ಲಕ್ಷ್ಮಣ.
“ನೀನು ಚಿಕ್ಕವನು. ಅಗ್ನಿಹೋತ್ರವನ್ನು ಮೇಲಕ್ಕೆ ಎಬ್ಬಿಸಬೇಡ. ನಿದ್ದೆ ಮಾಡುತ್ತಿರುವ ಸಿಂಹವನ್ನು ಕೆಣಕಬೇಡ. ನಿನ್ನ ಶರೀರ ಬಿದ್ದ ಮೇಲೆ ತುಂಬಾ ದುಃಖಪಡುತ್ತೀಯ. ಹೋಗಿ ರಾಮನನ್ನು ಕರಿ.”
“ನಿನಗೆ ರಾಮನೇಕೆ? ನಾನೇ ಸಾಕು” ಎಂದು ಲಕ್ಷ್ಮಣ ಅರ್ಧಚಂದ್ರಾಕಾರ ಬಾಣವನ್ನು ಪ್ರಯೋಗಿಸಿದ. ಅದನ್ನು ಗಮನಿಸಿದ ಅತಿಕಾಯ, “ನಿನ್ನ ಜೊತೆ ಯುದ್ಧ ಮಾಡಬೇಕಾಗಿದ್ದೇ“ ಎಂದು ಐಂದ್ರಾಸ್ತ್ರ, ವಾಯವ್ಯಾಸ್ತ್ರಗಳನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸಿದ. ಲಕ್ಷ್ಮಣ ಅವನ್ನು ಉಪಸಂಹರಿಸಿ ತಾನೂ ಅನೇಕ ಬಾಣಗಳನ್ನು ಹೊಡೆದ. ಎಷ್ಟು ಹೊಡೆದರೂ ಅವು ಅತಿಕಾಯನ ಕವಚಕ್ಕೆ ತಗುಲಿ ಕೆಳಗೆ ಬೀಳುತ್ತಿದ್ದವು. ಅದೇ ಸಮಯದಲ್ಲಿ ಅಲ್ಲಿಗೆ ಬಂದ ವಾಯುದೇವ ಲಕ್ಷ್ಮಣನಿಗೆ, “ಅವನಿಗೆ ಬ್ರಹ್ಮದೇವರ ವರವಿದೆ. ಆ ಕವಚ ಇರುವವರೆಗೂ ಅವನನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಸ್ತ್ರದಿಂದ ಮಾತ್ರ ಅದನ್ನು ಒಡೆಯಬಹುದು” ಎಂದು ಹೇಳಿದಾಗ ಲಕ್ಷ್ಮಣ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಅತಿಕಾಯನನ್ನು ಸಂಹರಿಸಿದ.
ಅತಿಕಾಯ ಸತ್ತ ವಿಷಯವನ್ನು ಕೇಳಿ ರಾವಣ ಕ್ರುದ್ಧನಾಗಿ, ‘ಸಾಮಾನ್ಯರನ್ನು ಕಳಿಸಿದರೆ ಸಾಧ್ಯವಿಲ್ಲ’ ಎಂದುಕೊಂಡು ಮತ್ತೆ ಇಂದ್ರಜಿತ್ತನನ್ನು ಕರೆದು, “ನೀನು ಯುದ್ಧಕ್ಕೆ ಹೋಗುವ ಸಮಯ ಬಂದಿದೆ” ಎಂದು ಹೇಳಿ ಕಳಿಸಿದ.
ಇಂದ್ರಜಿತ್ತ ನಾಲ್ಕು ಕುದುರೆಗಳನ್ನು ಕಟ್ಟಿದ್ದ ರಥವನ್ನು ಹತ್ತಿ ಹೊರಟ. ಅವನ ಸುತ್ತ ಸೈನ್ಯ ಸೇರಿತು. ಸೈನ್ಯದ ಮಧ್ಯೆ ಸಮಿತ್ತು, ಪುಷ್ಪಹಾರಗಳು, ಕೆಂಪು ವಸ್ತ್ರಗಳಿಂದ ಅಗ್ನಿಹೋತ್ರದಲ್ಲಿ ಹೋಮ ಮಾಡಿದ. ಹೋಮದ ಕೊನೆಯಲ್ಲಿ ಅಗ್ನಿ ಕಿಡಿಗಳನ್ನು ಕಾರುತ್ತಾ ಮೇಲಕ್ಕೆದ್ದವು. ಇಂದ್ರಜಿತ್ತ ಒಂದು ಕಪ್ಪು ಆಡನ್ನು ತಂದು ಅದರ ಕತ್ತನ್ನು ತನ್ನ ಹಲ್ಲುಗಳಿಂದ ಕಚ್ಚಿ ಕೊಂದು, ಅದರ ಮಾಂಸವನ್ನು ಹೋಮಾಗ್ನಿಗೆ ಹಾಕಿದ (ಇದನ್ನು ಅಭಿಚಾರಿಕ ಹೋಮ ಎನ್ನುತ್ತಾರೆ). ಹೋಮದ ಕೊನೆಯಲ್ಲಿ ಬ್ರಹ್ಮದೇವರನ್ನು ಧ್ಯಾನಿಸಿ ಬ್ರಹ್ಮಾಸ್ತ್ರವನ್ನು ಆವಾಹಿಸಿಕೊಂಡ. ನಂತರ ಹೂ, ಅಕ್ಷತೆಗಳನ್ನು ತನ್ನ ಆಯುಧಗಳ ಮೇಲೆ ಹಾಕಿ, ಕೆಂಪು ವಸ್ತ್ರಗಳನ್ನು ಹೊದ್ದು ರಥ ಹತ್ತಿ ಮಾಯವಾದ. ಅವನ ಕುದರೆಗಳ ಸಪ್ಪಳಗಳಾಗಲಿ, ಅವನ ಧನಸ್ಸಿನ ಶಬ್ದವಾಗಲಿ, ಬಾಣಪ್ರಯೋಗವಾಗಲಿ ಯಾರಿಗೂ ಕೇಳಿಸುತ್ತಿರಲಿಲ್ಲ, ಕಾಣಿಸುತ್ತಿರಲಿಲ್ಲ. ವಿಭೀಷಣನಿಗೆ ಮಾತ್ರ ತನ್ನ ಮಾಯಬಲದಿಂದ ಇಂದ್ರಜಿತ್ತನನ್ನು ನೋಡುವ ಸಾಮರ್ಥ್ಯವಿತ್ತು.
ಯಾರಿಗೂ ಕಾಣದಂತೆ ಆಕಾಶಕ್ಕೆ ಹಾರಿದ ಇಂದ್ರಜಿತ್ತ ಎಲ್ಲ ದಿಕ್ಕುಗಳನ್ನೂ ಮಂಜಿನಿಂದ ಮಬ್ಬುಮಾಡಿ ನಿಶ್ಶಬ್ದವಾಗಿ ಸಾವಿರಾರು ಬಾಣಗಳನ್ನು ಪ್ರಯೋಗಿಸಿ ಹನುಮ, ಸುಗ್ರೀವ, ದ್ವಿವಿದ, ಮೈಂದ, ಅಂಗದ, ನೀಲ, ಕೇಸರಿ, ಗವಾಕ್ಷ, ಜಾಂಬವಂತ ಮುಂತಾದ ವಾನರ ವೀರರನ್ನು ಬೀಳಿಸಿದ. ಕೋಟ್ಯಾನುಕೋಟಿ ವಾನರ ಸೈನ್ಯವನ್ನು ಬ್ರಹ್ಮಾಸ್ತ್ರದಿಂದ ಕಟ್ಟಿಹಾಕಿದ. ಮೇಲಿನಿಂದಲೇ ಒಂದು ಕಿರುನಗೆಯನ್ನು ಬೀರಿ ರಾಮಲಕ್ಷ್ಮಣರಿಗೆ, “ಅಂದು ನಾಗಾಸ್ತ್ರದಿಂದ ಹೊಡೆದಾಗ ಬಿಡಿಸಿಕೊಂಡಿರಿ. ಇಂದು ಬ್ರಹ್ಮಾಸ್ತ್ರದಿಂದ ಹೊಡೆಯುತ್ತೇನೆ. ಇಂದಿಗೆ ಯುದ್ಧ ಮುಗಿಯುತ್ತದೆ” ಎಂದ.
ಆಗ ರಾಮ ಲಕ್ಷ್ಮಣನಿಗೆ, “ಲಕ್ಷ್ಮಣ ನಮಗೆ ಬೇರೆ ದಾರಿಯಿಲ್ಲ. ಅವನು ಬ್ರಹ್ಮಾಸ್ತ್ರದಿಂದ ಹೊಡೆಯುತ್ತಿದ್ದಾನೆ. ನಮ್ಮ ವಾನರ ಸೈನ್ಯವೆಲ್ಲ ಸಂಪೂರ್ಣವಾಗಿ ಕೆಳಗೆ ಬಿದ್ದಿದೆ. ಎದುರಿಗೆ ಬಂದರೆ ಯುದ್ಧ ಮಾಡಬಹುದು. ಆದರೆ ಅವನು ಯಾರಿಗೂ ಕಾಣದಂತೆ ಮಾಯಾಯುದ್ಧ ಮಾಡುತ್ತಿದ್ದಾನೆ. ಅವನ ಬಾಣಪರಂಪರೆಯನ್ನು ಸಾಧ್ಯವಾಗುವ ಮಟ್ಟಿಗೆ ಎದುರಿಸಿ ನಂತರ ಪ್ರಜ್ಞೆತಪ್ಪಿದಂತೆ ಬಿದ್ದುಹೋಗೋಣ. ಅವನು ಎಷ್ಟು ಬೇಕೋ ಅಷ್ಟು ಹೊಡೆಯಲಿ. ಕೊನೆಯಲ್ಲಿ ಶತೃ ಸತ್ತಿದ್ದಾನೆಂದುಕೊಂಡು ಹೋಗಿಬಿಡುತ್ತಾನೆ. ಅನಂತರ ಬದುಕಿದ್ದರೆ ನೋಡೋಣ” ಎಂದ.
ಇಂದ್ರಜಿತ್ತ ರಾಮಲಕ್ಷ್ಮಣರನ್ನು ಬಾಣಗಳಿಂದ ಹೊಡೆದಾಗ ಅವರು ಮೈಯೆಲ್ಲ ರಕ್ತವಾಗಿ ಕೆಳಗೆ ಬಿದ್ದರು. ಇಂದ್ರಜಿತ್ತ ವಿಕಟ್ಟಾಹಾಸದಿಂದ ನಗುತ್ತಾ ಕೆಳಗೆ ನೋಡಿದಾಗ ಯುದ್ಧಭೂಮಿಯಲ್ಲಿ ಎಲ್ಲರೂ ಕೆಳಗೆ ಬಿದ್ದಿದ್ದರು. ೬೭ ಕೋಟಿ ವಾನರ ಸೈನ್ಯವನ್ನು ಇಂದ್ರಜಿತ್ತನೊಬ್ಬನೇ ನಿಗ್ರಹಿಸಿದ್ದ. ನಂತರ ರಾವಣನ ಅಂತಃಪುರಕ್ಕೆ ಹೋಗಿ ರಾವಣನಿಗೆ, “ಅಪ್ಪ! ರಾಮಲಕ್ಷ್ಮಣರನ್ನು ಬ್ರಹ್ಮಾಸ್ತ್ರದಿಂದ ಬಂಧಿಸಿದ್ದೇನೆ. ಅವರು ಕೆಳಗೆ ಬಿದ್ದುಹೋದರು” ಎಂದ.
ಇಂದ್ರಜಿತ್ತ ಯುದ್ಧ ಮಾಡುವಾಗ ವಿಭೀಷಣ ಓಡಿಹೋಗಿದ್ದ. ಹನುಮಂತನನ್ನು ಯಾವ ಅಸ್ತ್ರವೂ ಬಂಧಿಸಿರಲಿಲ್ಲ. ಅವರಿಬ್ಬರೂ ತಮ್ಮ ಸೈನ್ಯದಲ್ಲಿ ಯಾರಾದರೂ ಬದುಕಿದ್ದಾರೇನೋ ಎಂದು ಹುಡುಕುತ್ತಿದ್ದಾಗ ಅವರಿಗೆ ನಿಧಾನವಾಗಿ ಕಣ್ಣುರೆಪ್ಪೆಯಾಡಿಸುತ್ತಿದ್ದ ಜಾಂಬವಂತ ಕಾಣಿಸಿದ. ವಿಭೀಷಣ ಅವನನ್ನು ತಟ್ಟಿ ಎಬ್ಬಿಸಿ, “ಜಾಂಬವಂತ ನಿನಗೆ ಪ್ರಜ್ಞೆ ಇದೆಯಾ? ನಾನು ಮಾತಾಡುತ್ತಿರುವುದು ನಿನಗೆ ಕೇಳಿಸುತ್ತಿದೆಯಾ?” ಎಂದು ಕೇಳಿದ.
ಜಾಂಬವಂತ ನಿಧಾನವಾಗಿ ಕಣ್ಣುಬಿಡುತ್ತಾ, “ನಿನ್ನ ಕಂಠವನ್ನು ಗುರುತಿಸಿದೆ. ನೀನು ವಿಭೀಷಣನಲ್ಲವೇ? ಹನುಮ ಬದುಕಿದ್ದಾನಾ?” ಎಂದು ಕೇಳಿದ.
“ನೀನು ದೊಡ್ಡವನು. ವಾನರರಿಗೆ ತಾತನಂತಹವನು. ರಾಮಲಕ್ಷ್ಮರು ಬದುಕಿದ್ದಾರಾ ಎಂದು ಕೇಳುವ ಬದಲು ಹನುಮನನ್ನು ಕೇಳುತ್ತಿರುವೆಯಲ್ಲ!”
“ವಾನರ ಸೈನ್ಯವೆಲ್ಲ ಸತ್ತರೂ ಹನುಮ ಒಬ್ಬ ಬದುಕಿದ್ದರೆ ಅವರೂ ಬದುಕುತ್ತಾರೆ. ಎಲ್ಲರೂ ಇದ್ದು ಹನುಮನಿಲ್ಲದಿದ್ದರೆ ಅವರು ಬದುಕಿದ್ದೂ ಸತ್ತಂತೆಯೇ! ಅವನ ಶಕ್ತಿ ನನಗೆ ಗೊತ್ತು. ಅವನಿದ್ದಾನಾ?”
ಹನುಮ ಜಾಂಬವಂತನ ಪಾದಗಳನ್ನು ಹಿಡಿದು, “ತಾತಾ, ಹನುಮ ನಿನಗೆ ನಮಸ್ಕರಿಸುತ್ತಿದ್ದಾನೆ” ಎಂದ.
“ಈಗ ಎಲ್ಲರನ್ನೂ ನೀನು ಮಾತ್ರ ರಕ್ಷಿಸಲು ಸಾಧ್ಯ. ತಡ ಮಾಡದೆ ತಕ್ಷಣ ಹೊರಟು ಹಿಮಾಲಯಕ್ಕೆ ಹೋಗು. ಅಲ್ಲಿ ಕೈಲಾಸ ಪರ್ವತದ ಪಕ್ಕ ಓಷಧಿ ಪರ್ವತವೊಂದಿದೆ. ಅದರಲ್ಲಿರುವ ಮೃತಸಂಜೀವಿನಿ (ಸತ್ತವರನ್ನು ಬದುಕಿಸುತ್ತದೆ), ವಿಶಲ್ಯಕರಣಿ (ಶರೀರದಲ್ಲಿರುವ ಬಾಣಗಳನ್ನು ಕೆಳಗೆ ಬೀಳಿಸುತ್ತದೆ), ಸಂಧಾನಕರಣಿ (ಮುರಿದ ಮೂಳೆಗಳನ್ನು ಸರಿ ಮಾಡುತ್ತದೆ), ಸೌವರ್ಣಕರಣಿ (ಮೂರ್ಛೆ ಹೋದವರನ್ನು ಎಬ್ಬಿಸುತ್ತದೆ) ಎಂಬ ನಾಲ್ಕು ಔಷಧಿಗಳನ್ನು ತೆಗೆದುಕೊಂಡು ಬಾ.”
ತಕ್ಷಣ ಹನುಮ ಒಂದು ಬೆಟ್ಟವನ್ನು ಹತ್ತಿ ಅದರ ಮೇಲಿನಿಂದ ಮಿಂಚಿನಂತೆ ಆಕಾಶಕ್ಕೆ ಹಾರಿದ. ವೇಗವಾಗಿ ಹಿಮಾಲಯವನ್ನು ಸೇರಿ ಓಷಧಿ ಪರ್ವತವನ್ನು ಹುಡುಕುತ್ತಿದ್ದಾಗ ಹನುಮನಿಗೆ ಬ್ರಹ್ಮದೇವರ ಮನೆ ಕಾಣಿಸಿತು. ಶಿವ ತನ್ನ ಧನಸ್ಸನ್ನಿಡುವ ಜಾಗ ಕಾಣಿಸಿತು. ಹಯಗ್ರೀವ ಆರಾಧನೆ ಮಾಡುವ ಪ್ರದೇಶ, ಇಂದ್ರ, ಕುಬೇರರ ಮನೆಗಳು, ವಿಶ್ವಕರ್ಮ ಸೂರ್ಯನಿಗಾಗಿ ನಿರ್ಮಿಸಿದ ವೇದಿಕೆ ಕಾಣಿಸಿದವು. ಹನುಮ ಓಷಧಿ ಪರ್ವತನ್ನು ಹುಡುಕುತ್ತಿದ್ದರೆ ಓಷಧಿ ಪರ್ವತದ ಔಷಧಿಗಳು ತಮ್ಮನ್ನು ಯಾರೋ ಹುಡುಕುತ್ತಿದ್ದಾರೆಂದು ತಿಳಿದು ಒಳಗೆ ಅಡಗಿಕೊಂಡವು. ಅದನ್ನು ಗಮನಿಸಿದ ಹನುಮ, “ನನಗೇ ಕಾಣಿಸದಂತೆ ಅಡಗಿಕೊಳ್ಳುತ್ತೀರಾ? ರಾಮಕಾರ್ಯಕ್ಕೆ ಸಹಾಯ ಮಾಡುವುದಿಲ್ಲವೇ?” ಎಂದು ಕೇಳಿ ಆ ಶಿಖರವನ್ನೇ ಕಿತ್ತು ವಾಯು ವೇಗದಿಂದ ಆಕಾಶಕ್ಕೆ ಹಾರಿ, ಆ ಶಿಖರವನ್ನು ಯುದ್ಧ ಭೂಮಿಯಲ್ಲಿ ತಂದಿಟ್ಟ. ಶಿಖರದ ಮೇಲಿದ್ದ ಔಷಧಿಗಳ ವಾಸನೆಯಿಂದ ಕೊಟ್ಯಾನುಕೊಟಿ ವಾನರರು, ರಾಮಲಕ್ಷ್ಮಣರು ಮೇಲಕ್ಕೆದ್ದರು! ನಂತರ ಹನುಮ ಆ ಪರ್ವತವನ್ನು ಮತ್ತೆ ಹಿಮಾಲಯದಲ್ಲಿ ಇಳಿಸಿ ಬಂದ.
Comments
Post a Comment