೯೦. ಇಂದ್ರಜಿತ್ತನ ಮರಣ

ಸುಗ್ರೀವ ವಾನರರಿಗೆ, “ನಮ್ಮನ್ನು ಬ್ರಹ್ಮಾಸ್ತ್ರದಿಂದ ಬಂಧಿಸಿದ ಇಂದ್ರಜಿತ್ತನಿಗೆ ಬುದ್ಧಿಕಲಿಸಬೇಕು. ನೀವೆಲ್ಲ ಕೋಟೆ ಹಾರಿ ಲಂಕೆಯನ್ನು ಸುಟ್ಟುಬಿಡಿ” ಎಂದು ಆದೇಶಿಸಿದ. ತಕ್ಷಣ ವಾನರರೆಲ್ಲ ಲಂಕೆಯ ಅಂತಃಪುರಗಳ ಮೇಲೆ ಬಿದ್ದು, ರಾವಣನ ಅಂತಃಪುರದ ಸಮೇತ ಎಲ್ಲ ಮನೆಗಳನ್ನೂ ಸುಟ್ಟರು. ಅವುಗಳಲ್ಲಿದ್ದ, ಬಟ್ಟೆಗಳು, ಬೆಳ್ಳಿ, ಬಂಗಾರ, ಮುತ್ತು, ರತ್ನಗಳು ಅಗ್ನಿಗೆ ಆಹುತಿಯಾದವು. ಬಾಲ, ವೃದ್ಧರನ್ನು ಬಿಟ್ಟು ಲಂಕೆಯ ಮೂಲಬಲದ ಅನೇಕ ರಾಕ್ಷಸರು ಸುಟ್ಟುಹೋದರು. ಅದೇ ಸಮಯದಲ್ಲಿ ರಾಮ ಕ್ರುದ್ಧನಾಗಿ ಲಂಕೆಯ ಮೇಲೆ ಬಾಣಗಳ ಮಳೆಗರೆದ. ಎಲ್ಲಿ ನೋಡಿದರೂ ಕಿರುಚಾಟಗಳಿಂದ ಲಂಕೆಯ ಪರಿಸ್ಥಿತಿ ಘೋರವಾಯಿತು.

ರಾವಣ ಕುಂಭಕರ್ಣನ ಮಕ್ಕಳಾದ ಕುಂಭ, ನಿಕುಂಭರ ಜೊತೆ ಪ್ರಜಂಘ, ಮಕರಾಕ್ಷರೆಂಬ ತನ್ನ ಇಬ್ಬರು ಮಕ್ಕಳನ್ನು ಯುದ್ಧಕ್ಕೆ ಕಳಿಸಿದ. ಸುಗ್ರೀವ ಕುಂಭನನ್ನು, ಹನುಮ ನಿಕುಂಭನನ್ನು, ಅಂಗದ ಪ್ರಜಂಘನನ್ನು ಮತ್ತು ರಾಮ ಮಕರಾಕ್ಷನನ್ನು ಕೊಂದರು. ರಾವಣ ಮತ್ತೆ ಇಂದ್ರಜಿತ್ತನನ್ನು ಯುದ್ಧಕ್ಕೆ ಕಳಿಸಿದ.

ಇಂದ್ರಜಿತ್ತ ಮತ್ತೆ ಅದೃಶ್ಯನಾಗಿ ಬಾಣಗಳನ್ನು ಬಿಡತೊಡಗಿದ. ಆಗ ಲಕ್ಷ್ಮಣ ರಾಮನನ್ನು, “ಆಣ್ಣಾ, ಇವನು ಮತ್ತೆ ಯುದ್ಧಕ್ಕೆ ಬಂದಿದ್ದಾನೆ. ನೀನು ನನಗೆ ಅನುಮತಿ ಕೊಡು. ಸಮಸ್ತ ರಾಕ್ಷಸ ಜಾತಿಯೇ ನಾಶವಾಗಲಿ ಎಂದು ಸಂಕಲ್ಪಿಸಿ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ಇವನ ಮೇಲೆ ಬಿಡುತ್ತೇನೆ“ ಎಂದು ಕೇಳಿದ.
ಆದರೆ ರಾಮ, “ಓಡಿಹೋಗುತ್ತಿರುವನನ್ನು, ಅಮಲಿನಲ್ಲಿರುವವನನ್ನು, ಶರಣಾದವನನ್ನು, ಮಾಯಾಯುದ್ಧ ಮಾಡುವವನನ್ನು, ಬೆನ್ನು ತೋರಿಸಿ ಓಡಿಹೋಗುವವನನ್ನು ಹೊಡೆಯಬಾರದು. ಮೇಲಾಗಿ ಬ್ರಹ್ಮಾಸ್ತ್ರವನ್ನು ಬಿಟ್ಟರೆ ಭೂಮಂಡಲವೇ ಕ್ಷೋಭಿಸುತ್ತದೆ. ಆದ್ದರಿಂದ ಕೇವಲ ಒಬ್ಬನಿಗಾಗಿ ಅದನ್ನು ಪ್ರಯೋಗಿಸಬಾರದು. ಅವನು ಎಲ್ಲಿ ತಿರುಗುತ್ತಿದ್ದಾನೋ, ಬಾಣಗಳು ಎಲ್ಲಿಂದ ಬರುತ್ತಿವೆಯೋ ಎಂಬುದನ್ನು ಹುಷಾರಾಗಿ ಗಮನಿಸು. ಇಂದು ಅವನು ಸಿಕ್ಕೇ ಸಿಗುತ್ತಾನೆ. ಆಗ ವೇಗವಾದ ಬಾಣಗಳನ್ನು ಬಿಟ್ಟು ಅವನನ್ನು ಬೀಳಿಸುತ್ತೇನೆ. ಇದೇ ನನ್ನ ಪ್ರತಿಜ್ಞೆ” ಎಂದು ಹೇಳಿ ಲಕ್ಷ್ಮಣನನ್ನು ತಡೆದ.

ಇವರ ಸಂಭಾಷಣೆಯನ್ನು ಕೇಳಿದ ಇಂದ್ರಜಿತ್ತ, ‘ಇವರು ನನ್ನನ್ನು ಹುಡುಕಲು ಸಿದ್ದರಾಗುತ್ತಿದ್ದಾರೆ. ಏನೋ ಒಂದು ಮೋಸ ಮಾಡಿ ರಾಮಲಕ್ಷ್ಮಣರ ದೃಷ್ಠಿಯನ್ನು ಬೇರೆ ಕಡೆ ತಿರುಗಿಸಬೇಕು’ ಎಂದುಕೊಂಡು ಮಾಯೆಯಿಂದ ಸೀತೆಯನ್ನು ಸೃಷ್ಠಿಸಿ ತನ್ನ ರಥದಲ್ಲಿ ಕೂರಿಸಿಕೊಂಡ. ಇಂದ್ರಜಿತ್ತನನ್ನು ಕಂಡ ಹನುಮ ಅವನ ಮೇಲೆ ಒಂದು ದೊಡ್ಡ ಪರ್ವತವನ್ನು ಎಸೆಯಲು ಬಂದಾಗ ಅವನು ಮಾಯಾ ಸೀತೆಯ ಕೆನ್ನೆಗೆ ಜೋರಾಗಿ ಹೊಡೆದ. ಮಾಯಾಸೀತೆ, ‘ರಾಮಾ, ರಾಮಾ’ ಎಂದು ಕಿರುಚಿದಳು. ಅವಳನ್ನು ನೋಡಿದ ಹನುಮ ಪರ್ವತವನ್ನು ಕೆಳಗೆ ಬಿಸಾಡಿ, “ದುರಾತ್ಮ, ಸೀತೆ ಪತಿವ್ರತೆ. ರಾಮನ ಪತ್ನಿ. ಅವಳನ್ನು ಹೊಡೆದರೆ ನೀನು ನಾಶವಾಗುತ್ತೀಯ. ನಾನು, ಸುಗ್ರೀವ ನಿನ್ನನ್ನು ಬಿಡುವುದಿಲ್ಲ. ನಿನ್ನ ಕತ್ತನ್ನು ಕಡಿಯುತ್ತೇವೆ. ಮೊದಲು ಅವಳನ್ನು ಬಿಡು” ಎಂದ.
ಇಂದ್ರಜಿತ್ತ, “ಅವಳು ಸ್ತ್ರೀಯಾಗಲಿ, ಯಾರಾದರೂ ಆಗಲಿ. ನಮಗೆ ದುಃಖ ಕೊಟ್ಟಿದ್ದಾಳೆ. ಇವಳನ್ನು ಮಾತ್ರ ಬಿಡುವುದಿಲ್ಲ” ಎಂದು ಹೇಳಿ ಖಡ್ಗದಿಂದ ಮಾಯಾಸೀತೆಯ ಕತ್ತನ್ನು ಕಡಿದುಬಿಟ್ಟ. ಅವಳು ಮರಣಿಸಿ ರಥದಿಂದ ಕೆಳಗೆ ಬಿದ್ದಳು. ಇಂದ್ರಜಿತ್ತ ರಥದಲ್ಲಿ ಹೊರಟುಹೋದ.

ಸೀತೆ ಸತ್ತದ್ದನ್ನು ನೋಡಿ ಹನುಮ ಯುದ್ಧವನ್ನು ಬಿಟ್ಟು ಜೋರಾಗಿ ಕೂಗುತ್ತಾ, “ಇನ್ನು ಯುದ್ಧವೇಕೆ? ಯಾರನ್ನು ರಕ್ಷಿಸಲು ನಾವು ಯುದ್ಧ ಮಾಡುತ್ತಿದ್ದೇವೋ ಆ ತಾಯಿಯನ್ನೇ ಇಂದ್ರಜಿತ್ತ ಕೊಂದಿದ್ದಾನೆ. ಇನ್ನು ನಾನು ಯುದ್ಧ ಮಾಡುವುದಿಲ್ಲ” ಎಂದು ಅಳುತ್ತಾ ರಾಮನ ಬಳಿ ಬಂದು, “ವಾನರರೆಲ್ಲ ನೋಡುತ್ತಿದ್ದಂತೆಯೇ ಇಂದ್ರಜಿತ್ತ ಸೀತೆಯನ್ನು ತಂದು ಅವಳನ್ನು ಕೊಂದುಬಿಟ್ಟ. ಇನ್ನು ನಮಗೆ ಸೀತೆ ಇಲ್ಲ” ಎಂದ. ಆ ಮಾತು ಕೇಳಿದ ರಾಮ ಮೂರ್ಛೆ ಹೋದ. ನಂತರ ರಾಮನ ಮುಖದ ಮೇಲೆ ನೀರನ್ನು ತಟ್ಟಿ ಅವನನ್ನು ಎಬ್ಬಿಸಿದರು.

ರಾಮ ಎದ್ದ ಮೇಲೆ ಲಕ್ಷ್ಮಣ ಹೇಳಿದ: “ಆಣ್ಣ, ನೀನು ಧರ್ಮ, ಧರ್ಮ ಎಂದು ಇಷ್ಟು ದಿನ ಆ ಧರ್ಮವನ್ನು ಪಾಲಿಸಿದ್ದಕ್ಕೆ ಇಂದು ಬಂದ ಫಲಿತಾಂಶ ನೋಡು. ನಿನ್ನ ಧರ್ಮದಿಂದ ರಾಜ್ಯಭ್ರಷ್ಟನಾದೆ, ನಿನ್ನ ಧರ್ಮದಿಂದಲೇ ನಮ್ಮ ತಂದೆ ಮರಣಿಸಿದರು, ಸೀತೆ ಅಪಹರಿಸಲ್ಪಟ್ಟಳು, ಜಟಾಯು ಸತ್ತ. ನೀನು ಹಿಡಿದ ಧರ್ಮದಿಂದಲೇ ೧೪ ವರ್ಷಗಳಿಂದ ಅರಣ್ಯವಾಸ ಮಾಡುತ್ತಿದ್ದೀಯ. ಧರ್ಮವನ್ನು ಬಿಟ್ಟ ರಾವಣ ಆರಾಮವಾಗಿ ಅಂತಃಪುರದಲ್ಲಿ ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾನೆ. ಧರ್ಮವನ್ನು ಹಿಡಿದು ನೀನು ಇಷ್ಟು ಕಷ್ಟಪಡುತ್ತಿದ್ದೀಯ. ಇನ್ನೂ ಆ ಧರ್ಮದ ಹಿಂದೇಕೆ ಹೋಗುತ್ತಿದ್ದೀಯ ಅಣ್ಣ? ಅದನ್ನು ಬಿಡು. ನಾವೂ ಅಧರ್ಮವನ್ನೇ ಸ್ವೀಕರಿಸೋಣ.”
ಅಷ್ಟರಲ್ಲಿ ಅಲ್ಲಿಗೆ ಬಂದ ವಿಭೀಷಣ, “ಏನು ಹೇಳುತ್ತಿದ್ದೀಯ ಲಕ್ಷ್ಮಣ! ಸೀತೆಯನ್ನು ಇಂದ್ರಜಿತ್ತ ಕೊಂದರೆ ರಾವಣ ಸುಮ್ಮನಿರುತ್ತಾನಾ? ಇಂದ್ರಜಿತ್ತ ಮಾಯಾವಿ. ನೀವು ಅವನ ಮಾಯೆಯನ್ನು ಮರೆತು ಮಾತಾಡುತ್ತಿದ್ದೀರ. ಅವನು ಕೊಂದಿದ್ದು ಮಾಯಾಸೀತೆಯನ್ನು. ಲಂಕೆಯಲ್ಲಿ ಒಂದು ಹಳೆಯ ಆಲದ ಮರವಿದೆ. ಯಾವಾಗಲೂ ಅಲ್ಲಿ ಕತ್ತಲಾಗೇ ಇರುತ್ತದೆ. ಈಗ ಇಂದ್ರಜಿತ್ತ ಅಲ್ಲಿ ನಿಕುಂಭಿ ಹೋಮವನ್ನು ಮಾಡುತ್ತಿರುತ್ತಾನೆ. ಹೋಮದ ನಂತರ ಹೂ, ಅಕ್ಷತೆಗಳನ್ನು ಅವನ ಕುದುರೆ, ಆಯುಧಗಳ ಮೇಲೆ ಚೆಲ್ಲಿ ಯುದ್ಧಕ್ಕೆ ಬರುತ್ತಾನೆ. ಆಮೇಲೆ ಅವನನ್ನು ಇಂದ್ರನೂ ನೋಲಿಸಲಾರ. ರಾಮ ನೀನು ಅನುಗ್ರಹಿಸಿ ನನ್ನ ಜೊತೆ ಲಕ್ಷ್ಮಣನನ್ನು ಕಳಿಸು. ಇಂದ್ರಜಿತ್ತ ಹೋಮವನ್ನು ಮುಗಿಸುವುದರೊಳಗಾಗಿ ಅವನನ್ನು ಮುಗಿಸುತ್ತೇವೆ” ಎಂದ.
ರಾಮ ಲಕ್ಷ್ಮಣನನ್ನು ಆಶೀರ್ವದಿಸಿ ಹನುಮ ಮೊದಲಾದವರನ್ನು ಅವನ ಸಹಾಯಕ್ಕಾಗಿ ಕಳಿಸಿದ.

ವಿಭೀಷಣ ಲಕ್ಷ್ಮಣನನ್ನು ಇಂದ್ರಜಿತ್ತ ಹೋಮ ಮಾಡುವ ಬಳಿ ಕರೆದುಕೊಂಡು ಹೋದ. ಇಂದ್ರಜಿತ್ತ ಹೋಮಕ್ಕೆ ಸಿದ್ಧನಾಗುತ್ತಿದ್ದ. ಹೋಮಕ್ಕೆ ಯಾರೂ ತೊಂದರೆ ಮಾಡದಂತೆ ಸುತ್ತಲೂ ತನ್ನ ಸೈನ್ಯವನ್ನು ನಿಲ್ಲಿಸಿದ್ದ. ವಿಭೀಷಣ ಲಕ್ಷ್ಮಣನಿಗೆ, “ಲಕ್ಷ್ಮಣ, ಒಂದು ಕಡೆಯಿಂದ ನೀನು ಈ ಸೈನ್ಯವನ್ನು ಚದುರಿಸು. ಇನ್ನೊಂದು ಕಡೆಯಿಂದ ಹನುಮ ರಾಕ್ಷಸರನ್ನು ಮಟ್ಟಹಾಕಲಿ. ರಾಕ್ಷಸರು ಓಡಿಹೋಗುವಾಗ ಇವನು ಇಲ್ಲಿ ಕುಳಿತು ಹೋಮ ಮಾಡಲಾರ. ಯುದ್ಧಕ್ಕೆ ಬರುತ್ತಾನೆ. ಆಗ ಅವನನ್ನು ಸಂಹರಿಸು” ಎಂದ.

ತಕ್ಷಣ ಲಕ್ಷಣ ಇಂದ್ರಜಿತ್ತನ ಸೈನ್ಯವನ್ನು ಬಾಣಗಳಿಂದ ಹೊಡೆದು ಚದುರಿಸಿದ. ಅವನಿಗೆ ಆಲದ ಮರ ಕಾಣಿಸಿತು. ಹನುಮ ಭಯಂಕರನಾಗಿ ರಾಕ್ಷಸರನ್ನು ಕೊಲ್ಲುತ್ತಾ ಬಂದ. ಹನುಮನ ಪ್ರತಾಪವನ್ನು ನೋಡಿ ಇಂದ್ರಜಿತ್ತ ಹೋಮ ಮಾಡಲಾರದೆ, ‘ಇವನನ್ನು ಮೊದಲು ಕೊಂದು ನಂತರ ಹೋಮ ಮಾಡುತ್ತೇನೆ’ ಎಂದುಕೊಂಡು ರಥ ಹತ್ತಿದ. ಒಂದು ಬ್ರಹ್ಮಾಂಡವಾದ ಬಾಣವನ್ನು ಹನುಮನ ಮೇಲೆ ಪ್ರಯೋಗಿಸಲು ಇಂದ್ರಜಿತ್ತ ಸಿದ್ಧನಾದಾಗ ಲಕ್ಷ್ಮಣ ತನ್ನ ಬಿಲ್ಲಿನ ಝೇಂಕಾರ ಮಾಡಿದ. ಆ ಶಬ್ದವನ್ನು ಕೇಳಿ ಇಂದ್ರಜಿತ್ತ ಲಕ್ಷ್ಮಣನ ಕಡೆ ನೋಡಿದಾಗ ಲಕ್ಷ್ಮಣ ಹೇಳಿದ: “ದುರಾತ್ಮ ಹನುಮನ ಮೇಲೇಕೆ? ನನ್ನ ಮೇಲೆ ಯುದ್ಧ ಮಾಡು” ಎಂದ.
“ಇದಕ್ಕೆ ಮುಂಚೆ ಎರೆಡು ಬಾರಿ ನಿನ್ನನ್ನ ಹೊಡೆದಿದ್ದೇನೆ. ಆದರೂ ನಿನಗೆ ಬುದ್ಧಿ ಬಂದಿಲ್ಲ. ಇಂದು ನಿನಗೆ ನನ್ನ ಯುದ್ದವನ್ನು ತೋರಿಸುತ್ತೇನೆ” ಎಂದು ಹೇಳಿ ಇಂದ್ರಜಿತ್ತ ಲಕ್ಷ್ಮಣನ ಪಕ್ಕದಲ್ಲೇ ಇದ್ದ ವಿಭೀಷಣನಿಗೆ, “ನೀನು ನನ್ನ ತಂದೆಯ ತಮ್ಮ. ನನಗೆ ಚಿಕ್ಕಪ್ಪ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಶತೃವಿಗೆ ಸಹಾಯಮಾಡಲು ನಿನಗೆ ನಾಚಿಯಾಗುವುದಿಲ್ಲವೇ? ಶತೃಗಳ ಜೊತೆ ಸೇರಿ ಯುದ್ಧ ಮಾಡುವವನು ಕೊನೆಗೆ ಆ ಶತೃವಿನ ಕೈಯಲ್ಲೇ ಸಾಯುತ್ತಾನೆ” ಎಂದ.
“ನೀನು, ನಿನ್ನ ತಂದೆ ಪಾಪಿಗಳು. ಆದ್ದರಿಂದಲೇ ನಾನು ರಾಮನ ಕಡೆ ಸೇರಿಕೊಂಡಿದ್ದೇನೆ” -  ವಿಭೀಷಣ ಸಮರ್ಥಿಸಿಕೊಂಡ.

ಲಕ್ಷ್ಮಣ ಇಂದ್ರಜಿತ್ತರಿಗ ಘೋರವಾದ ಯುದ್ಧ ನಡೆಯುತು. ಇಬ್ಬರೂ ಸಿಂಹಗಳಂತೆ ಯುದ್ಧ ಮಾಡಿದರು. ಒಬ್ಬೊರನ್ನೊಬ್ಬರು ಬಾಣಗಳಿಂದ ಹೊಡೆದುಕೊಂಡರು. ಲಕ್ಷ್ಣಣ ಇಂದ್ರಜಿತ್ತನ ಬಾಣವನ್ನು ಮುರಿದ. ಇಂದ್ರಜಿತ್ತ ಲಕ್ಷ್ಮಣನ ಕವಚವನ್ನು ಮುರಿದ. ಇಂದ್ರಜಿತ್ತ ಮತ್ತು ಲಕ್ಷ್ಮಣರಿಗೆ ಮೂರು ದಿನಗಳ ಕಾಲ ಭಯಂಕರವಾದ ಯುದ್ಧ ನಡೆಯಿತು. ಕೊನೆಗೆ ಲಕ್ಷ್ಮಣ ಇಂದ್ರಜಿತ್ತನ ಸಾರಥಿಯನ್ನು ಹೊಡೆದ. ಇಂದ್ರಜಿತ್ತ ಒಂದು ಕೈಯಲ್ಲಿ ಸಾರಥ್ಯವನ್ನು ಮಾಡುತ್ತಾ ಇನ್ನೊಂದು ಕೈಯಲ್ಲಿ ಯುದ್ಧ ಮಾಡುತ್ತಿದ್ದ. ನಾಲ್ವರು ವಾನರ ವೀರರು ಅವನ ರಥದ ಕುದುರೆಗಳನ್ನು ಬೀಳಿಸಿ ರಥವನ್ನು ನಾಶಗೊಳಿಸಿದರು. ಆದರೂ ಲಕ್ಷ್ಮಣನ ಅಸ್ತ್ರಗಳು ಇಂದ್ರಜಿತ್ತನನ್ನು ಕೊಲ್ಲದಿದ್ದಾಗ ವಿಭೀಷಣ, “ಇಂದ್ರಜಿತ್ತನ ಪೌರುಷ ಹೆಚ್ಚಾಗುತ್ತಿದೆ. ಏನಾದರೂ ಮಾಡಿ ಅವನನ್ನು ಕೊಲ್ಲು” ಎಂದ.
ಲಕ್ಷ್ಮಣ ಒಂದು ಬಾಣವನ್ನು ತೆಗೆದು ಬಿಲ್ಲಿಗೆ ಹೆದೆಯೇರಿಸಿ, 
“ಧರ್ಮಾತ್ಮಾ ಸತ್ಯ ಸಂಧಶ್ಚ ರಾಮೋ ದಾಶರಥಿರ್ಯದಿ
ಪೌರುಷೇ ಚಾ ಅಪ್ರತಿದ್ವಂದ್ವಃ ತದೈನಂ ಜಹಿ ರಾವಣೀಮ್

ನನ್ನ ಆಣ್ಣ ಧರ್ಮಾತ್ಮನೇ ಆದರೆ, ಸತ್ಯವಂತನೇ ಆದರೆ, ದಶರಥನ ಮಗನೇ ಆದರೆ ಈ ಬಾಣ ನನ್ನೆದುರಿಗಿರುವ ಇಂದ್ರಜಿತ್ತನನ್ನು ಕೊಲ್ಲಲಿ“ ಎಂದು ಹೇಳಿ ಬಿಟ್ಟ. ಅದು ಇಂದ್ರಜಿತ್ತನ ಕತ್ತನ್ನು ತಗುಲಿದ ತಕ್ಷಣ ಅವನ ತಲೆ ಶರೀರಗಳು ಬೇರೆಬೇರೆಯಾದವು. ಇಂದ್ರಜಿತ್ತ ಸತ್ತು ಬಿದ್ದಿದ್ದ!

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ