೯೧. ಮತ್ತೆ ಯುದ್ಧರಂಗಕ್ಕೆ ರಾವಣ

ಇಂದ್ರಜಿತ್ತ ಸತ್ತ ವಾರ್ತೆಯನ್ನು ಕೇಳಿ ರಾವಣ ಕೂತಲ್ಲೇ ಕುಸಿದ. "ನನ್ನ ಮಗ ಇಂದ್ರಜಿತ್ತ ಯಾರ ಕೈಯಲ್ಲೂ ಸಾಯದವನು ಇಂದು ದಾರುಣವಾಗಿ ಸತ್ತಿದ್ದಾನೆ. ಇನ್ನು ನಾನು ಬದುಕಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಇಷ್ಟಕ್ಕೆಲ್ಲ ಕಾರಣವಾದ ಆ ಸೀತೆಯನ್ನು ಮೊದಲು ಕೊಲ್ಲುತ್ತೇನೆ" ಎಂದು ಒಂದು ಖಡ್ಗವನ್ನು ಹಿಡಿದು ಅಶೋಕವನದ ಕಡೆ ಹೊರಟ. ಅವನನ್ನು ನೋಡಿದ ಸೀತೆ ಭಯದಿಂದ ಬೆದರಿದಳು. ಇನ್ನೇನು ರಾವಣ ಸೀತೆಯನ್ನು ಕೊಲ್ಲಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಬಂದ ಮಹಾಪಾರ್ಷ ಅವನನ್ನು ತಡೆದು, "ಇಷ್ಟು ದಿನ ಧೈರ್ಯದಿಂದ ಬದುಕಿ, ವೇದ ಪಾರಂಗತನಾಗಿ, ಎಲ್ಲರನ್ನೂ ಜಯಿಸಿ ಕೊನೆಗೆ ರಾವಣ ಒಂದು ಹೆಣ್ಣನ್ನು ಕೊಂದನೆಂಬ ಅಪವಾದ ನಿನಗೆ ಬರುವುದು ಬೇಡ. ಪೌರುಷದಿಂದ ಯುದ್ಧ ಮಾಡಿ ರಾಮನನ್ನು ಕೊಲ್ಲು. ಸೀತೆಯ ಮೇಲೆ ನಿನ್ನ ಪ್ರತಾಪ ತೋರಿಸಬೇಡ" ಎಂದ.
ರಾವಣ ಸರಿಯೆಂದುಕೊಂಡು, "ನಾಳೆ ಅಮಾವಾಸ್ಯೆ. ನಾಳೆ ನಾನೇ ಯುದ್ಧಕ್ಕೆ ಹೋಗುತ್ತೇನೆ" ಎಂದು ಹೇಳಿ ತನ್ನ ಅಂತಃಪುರಕ್ಕೆ ಬಂದುಬಿಟ್ಟ.

ಮರುದಿನ ರಾವಣ ಮಹಾಪಾರ್ಷ, ಮಹೋದರ, ವಿರೂಪಾಕ್ಷರ ಜೊತೆ ಯುದ್ಧಕ್ಕೆ ಬಂದ. ವಿರೂಪಾಕ್ಷ ಮತ್ತು ಮಹೋದರರು ಸುಗ್ರೀವನ ಕೈಲಿ ಸತ್ತರು. ಅಂಗದ ಮಹಾಪಾರ್ಷನನ್ನು ಕೊಂದ. ರಾಮ ಮಂಡಲಾಕಾರವಾದ ತನ್ನ ಧನಸ್ಸನ್ನು ಹಿಡಿದು ಬಾಣಗಳನ್ನು ಬಿಡುತ್ತಿದ್ದರೆ ಆನೆಗಳ ಸೊಂಡಿಲುಗಳು, ಕುದುರೆಗಳು, ಅನೇಕ ರಾಕ್ಷಸರು ಸತ್ತು ಬೀಳುತ್ತಿದ್ದರು; ಬಾಣಗಳು ಮಾತ್ರ ಕಾಣಿಸುತ್ತಿರಲಿಲ್ಲ. 

ರಾವಣ 'ನನ್ನ ಗುಟ್ಟುಗಳನ್ನೆಲ್ಲ ರಾಮನಿಗೆ ಹೇಳಿ ನನ್ನವರ ಸಾವಿಗೆ ಕಾರಣನಾದವನು ಈ ವಿಭೀಷಣ. ಇವನನ್ನು ಮೊದಲು ಕೊಲ್ಲಬೇಕು' ಎಂದುಕೊಂಡು ವಿಭೀಷಣನಿಗೆ ಶಕ್ತಿ ಎಂಬ ಅಸ್ತ್ರವನ್ನು ಗುರಿಯಿಡುತ್ತಿದ್ದಾಗ, ಅದನ್ನು ನೋಡಿದ ಲಕ್ಷ್ಮಣ ರಾವಣನ ಕೈಗೆ ಬಾಣ ಹೊಡೆದ. ಕೋಪಗೊಂಡ ರಾವಣ ಅದೇ ಅಸ್ತ್ರವನ್ನು ಲಕ್ಷ್ಮಣ ಎದೆಗೆ ಹೊಡೆದ. ಬಾಣ ಎದೆಗೆ ಚುಚ್ಚಿಕೊಂಡು ಲಕ್ಷ್ಮಣ ಮೂರ್ಛೆ ಹೋದ. ತಕ್ಷಣ ಹನುಮ ಅವನನ್ನು ರಾಮನ ಬಳಿ ಕರೆದುಕೊಂಡು ಬಂದ. ಕೆಳಗೆ ಬಿದ್ದ ಲಕ್ಷ್ಮಣನನ್ನು ನೋಡಿ ರಾಮನಿಗೆ ಆಘಾತವಾಯಿತು. "ನನ್ನ ಬಾಣ ಕೆಳಗೆ ಬೀಳುತ್ತಿದೆ. ಮಂತ್ರಗಳು ಮರೆತುಹೋಗುತ್ತಿವೆ. ಪತ್ನಿ ಎಲ್ಲಾದರೂ ಸಿಗುತ್ತಾಳೆ. ಆದರೆ ಒಡಹುಟ್ಟಿದವನು ಮಾತ್ರ ಸಿಗುವುದಿಲ್ಲ. ನನಗೆ ದಿಕ್ಕು ತೋಚದಂತಾಗುತ್ತಿದೆ" ಎಂದು ರಾಮ ಆಳುತ್ತಿದ್ದಾಗ ಹನುಮ, "ಭಯಪಡಬೇಡ ರಾಮ, ಲಕ್ಷ್ಮಣನನ್ನು ಬದುಕಿಸಿಕೊಳ್ಳುವ ಮಾರ್ಗ ನನಗೆ ತಿಳಿದಿದೆ" ಎಂದು ಹೇಳಿ ಆಕಾಶಕ್ಕೆ ಹಾರಿ ಹಿಮಾಲಯಕ್ಕೆ ಹೋಗಿ ಓಷಧಿ ಪರ್ವತವನ್ನು ತಂದ. ಸುಷೇಣ ಔಷಧಿಗಳನ್ನು ಹುಡುಕಿ ಅದನ್ನು ಲಕ್ಷ್ಮಣನ ಮೂಗಿನಲ್ಲಿ ಹಿಂಡಿದಾಗ ಲಕ್ಷ್ಮಣ ಚೇತರಿಸಿಕೊಂಡ. 

ಯುದ್ಧ ಮುಂದುವರೆಯಿತು. 'ದುಷ್ಟನಾದ ರಾವಣ ರಥದ ಮೇಲೆ ಯುದ್ಧ ಮಾಡುತ್ತಿದ್ದರೆ ರಾಮ ಕೆಳಗೆ ನಿಂತಿದ್ದಾನೆ' ಎಂದು ದೇವರಾಜನಾದ ಇಂದ್ರ ತನ್ನ ಸಾರಥಿ ಮಾತಲಿಯನ್ನು ರಥದೊಂದಿಗೆ ರಾಮನ ಸಹಾಯಕ್ಕಾಗಿ ಕಳಿಸಿದ. ರಾಮನ ಬಳಿ ಬಂದ ಮಾತಲಿ ರಾಮನಿಗೆ, "ರಾಮ, ಈ ರಥವನ್ನು ಇಂದ್ರ ಕಳಿಸಿದ್ದಾನೆ. ಸಂಪೂರ್ಣವಾಗಿ ಬಂಗಾರದಿಂದ ಮಾಡಲ್ಪಟ್ಟಿರುವ ಇದಕ್ಕೆ ಹಸಿರು ಕುದುರೆಗಳನ್ನು ಕಟ್ಟಲಾಗಿದೆ. ಇದರಲ್ಲಿ ಅಕ್ಷಯ ತೂಣೀರವಿದೆ. ಅದರಲ್ಲಿ ಶಕ್ತಿ ಎಂಬ ಅಸ್ತ್ರವೂ ಇದೆ. ಇಂದ್ರನ ಬಿಲ್ಲಿದೆ. ನೀವು ಇದನ್ನು ಸ್ವೀಕರಿಸಿ. ಮಹಾವಿಷ್ಣುವಿಗೆ ಗರುಡ ಸಾರಥಿಯಾದಂತೆ ನಾನು ನಿಮಗೆ ಸಾರಥಿಯಾಗುತ್ತೇನೆ" ಎಂದ. ರಾಮ ನಮಸ್ಕರಿಸಿ ರಥವನ್ನು ಹತ್ತಿದ. 

ರಾಮ ರಾವಣರ ನಡುವೆ ಭಯಂಕರವಾದ ಯುದ್ಧ ಆರಂಭವಾಯಿತು. ರಾಮನ ಬಾಣಗಳ ವೇಗವನ್ನು ತಡೆದುಕೊಳ್ಳಲಾರದೆ ರಾವಣ ಹಿಂದೆ ಸರಿದ. ಅವರಿಬ್ಬರ ಬಾಣ ಪರಂಪರೆಗೆ ಹಗಲಲ್ಲೂ ಕತ್ತಲಾಯಿತು. ರಾಮ ತನ್ನವರಿಗೆ, "ಇನ್ನು ನೀವು ಯುದ್ಧ ಮಾಡಬೇಡಿ. ಒಂದು ಕಡೆ ನಿಂತು ನಮ್ಮ ಯುದ್ಧ ನೋಡಿ" ಎಂದ. 

ಒಂದು ಕಡೆ ವಾನರ ಸೈನ್ಯ, ಇನ್ನೊಂದು ಕಡೆ ರಾಕ್ಷಸ ಸೈನ್ಯ ನಿಂತು ರಾಮ ರಾವಣರ ಯುದ್ಧವನ್ನು ನೋಡುತ್ತಿತ್ತು. ರಾವಣ ತನ್ನ ೨೦ ಕೈಗಳಿಂದಲೂ ಆಯುಧಗಳನ್ನು ಎಸೆಯುತ್ತಾ ಶಕ್ತಿ ಅಸ್ತ್ರವನ್ನು ರಾಮನ ಮೇಲೆ ಬಿಟ್ಟ. 'ಲಕ್ಷ್ಮಣ ಚೇತರಿಸಿಕೊಂಡ ಮೇಲೆ, ಈ ರಥವನ್ನು ಹತ್ತಿದ ಮೇಲೆ ನನಗೆ ಮರುಜೀವ ಬಂದಂತಾಗಿದೆ. ಎಲ್ಲ ಅಸ್ತ್ರ ಶಸ್ತ್ರಗಳೂ ಜ್ಞಾಪಕ ಬರುತ್ತಿವೆ' ಎಂದುಕೊಂಡು ರಾಮನೂ ಇಂದ್ರ ಕೊಟ್ಟ ಶಕ್ತಿ ಅಸ್ತ್ರವನ್ನು ಪ್ರಯೋಗಿಸಿದ. ಅವೆರೆಡೂ ಆಕಾಶದಲ್ಲಿ ಸಂಧಿಸಿ ಕೆಳಗೆ ಬಿದ್ದವು. ಕ್ರಮೇಣ ರಾವಣನಿಗೆ ರಾಮನ ಬಾಣಗಳನ್ನು ತಡೆದುಕೊಳ್ಳಲಾಗಲಿಲ್ಲ. ಆ ಸಮಯದಲ್ಲಿ ರಾವಣನ ಸಾರಥಿ ರಥವನ್ನು ದೂರಕ್ಕೆ ತೆಗೆದುಕೊಂಡು ಹೋದ. ಕೋಪಗೊಂಡ ರಾವಣ, "ನೀಚ. ನನ್ನ ಜೀವನದಲ್ಲೇ ನಾನು ಇಂತಹ ಅವಮಾನವನ್ನು ಅನುಭವಿಸಿಲ್ಲ. ಯುದ್ಧದಲ್ಲಿ ನನ್ನ ತಲೆ ಬಿದ್ದರೂ ಸರಿ ನಾನು ಮಾತ್ರ ಹಿಂದೆ ಓಡುವುದಿಲ್ಲ. ಶತ್ರುವಿನಿಂದ ಎಷ್ಟು ಲಂಚ ತೆಗೆದುಕೊಂಡಿದ್ದೀಯ. ನಿಜ ಹೇಳು?" ಎಂದು ಗದರಿಸಿದ.
ಆಗ ಸಾರಥಿ ಹೇಳಿದ: "ಸ್ವಾಮಿ, ನಿಮ್ಮ ಬಳಿ ಇಷ್ಟು ದಿನದಿಂದ ಕೆಲಸ ಮಾಡಿದ್ದೇನೆ. ಶತ್ರುವಿನ ಬಳಿ ಲಂಚ ತೆಗೆದುಕೊಂಡು ನಿಮಗೆ ಅವಮಾನ ಮಾಡುವುದು ನನ್ನ ಉದ್ದೇಶವಲ್ಲ. ನಾನು ಕೃತಘ್ನನಲ್ಲ. ನನಗೂ ಶಾಸ್ತ್ರ, ಮರ್ಯಾದೆಗಳು ತಿಳಿದಿವೆ. ರಥಿಕ ರಥದಲ್ಲಿದ್ದಾಗ ರಥ ನಡೆಸುವ ವಿಧಾನ ನನಗೆ ಗೊತ್ತು. ದ್ವಂದ್ವ ಯುದ್ಧದಲ್ಲಿ ಸಮಯಾನುಸಾರವಾಗಿ ರಥವನ್ನು ನಡೆಸಬೇಕು. ಕುದುರೆ ಮತ್ತು ರಥಿಕರ ಪರಿಸ್ಥಿತಿಯನ್ನು ನೋಡಿಕೊಳ್ಳಬೇಕು. ರಾಮನ ಬಾಣಗಳಿಂದ ಕುದುರೆಗಳು ದಣಿದಿವೆ. ನೀವೂ ತಿರುಗಿ ಬಾಣ ಪ್ರಯೋಗಿಸುವ ಪರಿಸ್ಥಿತಿಯಲ್ಲಿಲ್ಲ. ನಿಮ್ಮನ್ನು ರಕ್ಷಿಸಿಕೊಳ್ಳುವ ಭಾರ ನನ್ನದು. ಆದ್ದರಿಂದಲೇ ರಥವನ್ನು ಹಿಂದಕ್ಕೆ ನಡೆಸಿದೆ. ನನಗೆ ಮೋಸ ಮಾಡುವ ಉದ್ದೇಶವಿಲ್ಲ. ನಿಮ್ಮ ಸೇವೆಯಲ್ಲೇ ಧನ್ಯನಾಗಬೇಕೆಂದು ನೀತಿಗೆ ಕಟ್ಟುಬಿದ್ದ ಸಾರಥಿ ನಾನು."

ಅವನ ಮಾತಿಗೆ ಸಂತೋಷಗೊಂಡ ರಾವಣ ತನ್ನ ಸ್ವರ್ಣ ಕಂಕಣವನ್ನು ತೆಗೆದು ಕೊಟ್ಟ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೬೧. ವಾಲಿಯ ಮರಣ