೯೨. ಅಗಸ್ತ್ಯರ ಆಗಮನ
ಲಂಕೆಯ ಪ್ರಜೆಗಳು ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರು: "ಆ ಶೂರ್ಪಣಖಿಯ ತಲೆ ಕೂದಲೆಲ್ಲ ಬೆಳ್ಳಗಾಗಿದೆ. ಚರ್ಮವೆಲ್ಲ ಸುಕ್ಕು ಹಿಡಿದು ವಿಕೃತ ರೂಪದಿಂದಿದ್ದಾಳೆ. ಜಾರಿರುವ ಹೊಟ್ಟೆ, ಕರ್ಕಶ ಕಂಠದವಳಾದ ಅವಳು ಮನ್ಮಥನಂತಿರುವ ರಾಮನನ್ನು ಯಾವ ಮುಖವಿಟ್ಟುಕೊಂಡು ಕಾಮಿಸಿದಳು? ಅಂತಹ ಧಾರ್ಮಿಕ ಇವಳನ್ನು ಒಪ್ಪಿಕೊಳ್ಳುತ್ತಾನೆಂದು ಹೇಗೆ ಭಾವಿಸಿದಳು? ಅವನು ನಿರಾಕರಿಸಿದಾಗ, ದ್ವೇಷ ಸಾಧಿಸಿ, ಸೀತೆಯನ್ನು ಅಪಹರಿಸುವಷ್ಟು ಈ ರಾವಣನ ಮನಸ್ಸು ವ್ಯಗ್ರವಾಗುವಂತೆ ಹೇಗೆ ಮಾತಾಡಲು ಸಾಧ್ಯವಾಯಿತು? ಈ ರಾವಣನೂ ಮೂರ್ಖನೇ. ಖರ-ದೂಷಣರನ್ನು ಸೇರಿ ೧೪೦೦೦ ರಾಕ್ಷಸರನ್ನು ಕೊಂದ ರಾಮನ ಜೊತೆ ಸಂಧಿ ಮಾಡಿಕೊಳ್ಳುವ ಬದಲು ಶೂರ್ಪಣಖಿಯ ಮಾತಿಗೆ ಮಣಿದು ಸೀತೆಯನ್ನು ಅಪಹರಿಸಿದ್ದಾನೆ. ಆಗ ಇವನಿಗೆ ರಾಮನ ಪರಾಕ್ರಮ ತಿಳಿದಿಲ್ಲವೆಂದೇ ಇಟ್ಟುಕೊಳ್ಳೋಣ. ಆದರೆ ಆ ವಾಲಿಯನ್ನು ಒಂದೇ ಬಾಣದಿಂದ ಕೊಂದಾಗಲಾದರೂ ತಿಳಿಯಬೇಕಾಗಿತ್ತು. ವಿಭೀಷಣನೂ ಬುದ್ದಿ ಹೇಳಿದ. ಆಗಲೇ ಅವನ ಮಾತು ಕೇಳಿದ್ದರೆ ಇಂದು ಲಂಕೆಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕುಂಭಕರ್ಣ ಸತ್ತಿದ್ದಾನೆ. ರಾವಣನ ಮಕ್ಕಳೇ ಆದ ನರಾಂತಕ, ಅತಿಕಾಯ, ಮಹಾಪಾರ್ಷ ಮೊದಲಾದವರೂ ಸತ್ತಿದ್ದಾರೆ. ಇಂದ್ರಜಿತ್ತನೂ ಸತ್ತಿದ್ದಾನೆ. ಈಗಲಾದರೂ ಬಂದವನು ಸಾಮಾನ್ಯ ನರನಲ್ಲ ಎಂಬ ಆಲೋಚನೆ ಈ ರಾವಣನಿಗೆ ಬರುತ್ತಿಲ್ಲವಲ್ಲ? ಒಂದು ಬಾರಿ ದೇವತೆಗಳು ಇವನ ಕಾಟ ತಡೆದುಕೊಳ್ಳಲಾರದೆ ಬ್ರಹ್ಮದೇವರ ಬಳಿ ಹೋದರಂತೆ. ಇವನು ಸೂರ್ಯ, ಚಂದ್ರ, ದಿಕ್ಪಾಲಕರನ್ನೂ ಆಳುವ ಸ್ಥಿತಿಯಲ್ಲಿದ್ದಾನೆ ಎಂದು ಹೇಳಿದರಂತೆ. ಬ್ರಹ್ಮದೇವರು, 'ಇಂದಿನಿಂದ ಈ ರಾಕ್ಷಸರು ಒಂದೇ ಕಡೆಯಿರದಂತೆ ಮೂರು ಲೋಕಗಳಲ್ಲಿ ಸಂಚರಿಸುವಂತಾಗಲಿ. ಇದರಿಂದ ನಿಮಗೆ ಸ್ವಲ್ಪ ನೆಮ್ಮದಿಯಾಗುತ್ತದೆ' ಎಂದು ಹೇಳಿದರಂತೆ. ಆದರೆ ದೇವತೆಗಳು ಶಿವನ ಕುರಿತು ಧ್ಯಾನ ಮಾಡಿದರಂತೆ. ಶಿವ ಅವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗಿ, 'ಈ ರಾವಣ ಸಾಯುವುದಕ್ಕೆ ಕಾರಣವಾಗಲು ಪಾರ್ವತಿ ದೇವಿಯೇ ಸೀತೆ ಎನ್ನುವ ಹೆಸರಿನಿಂದ ಭೂಮಿಯ ಮೇಲೆ ಹುಟ್ಟುತ್ತಾಳೆ' ಎಂದು ವರ ಕೊಟ್ಟರಂತೆ. ಆ ದೇವಿಯೇ ಮೈಥಿಲಿಯ ರೂಪದಲ್ಲಿ ಈ ರಾವಣನನ್ನು, ಲಂಕೆಯನ್ನು ಸರ್ವನಾಶಮಾಡಲು ಬಂದಿದ್ದಾಳೆ."
ಇತ್ತ ರಾಮನಿಗೂ ಸುಸ್ತಾಗಿತ್ತು. 'ಈ ರಾವಣನನ್ನು ಕೊಲ್ಲುವುದು ಹೇಗೆ' ಎಂದು ಯೋಚಿಸುತ್ತಿದ್ದಾಗ ದೇವ, ಯಕ್ಷ, ಗಂಧರ್ವ, ಕಿನ್ನರರು, ಋಷಿಗಳು ಆಕಾಶದಲ್ಲಿ ಬಂದು ನಿಂತರು. ಅವರಲ್ಲಿದ್ದ ಅಗಸ್ತ್ಯರು ರಾಮನ ಬಳಿ ಬಂದು,
“ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ
ರಾಮ, ಈಗ ನಾನು ನಿನಗೆ ಆದಿತ್ಯ ಹೃದಯವನ್ನು ಉಪದೇಶಿಸುತ್ತೇನೆ. ಸ್ವೀಕರಿಸು. ಇದನ್ನು ಪಡೆದ ಮೇಲೆ ನಿನಗೆ ಆಲಸ್ಯವಾಗುವುದಿಲ್ಲ. ಇದನ್ನು ನಿನಗೆ ಭಯವಾದಾಗ, ಅರಣ್ಯದಲ್ಲಿದ್ದಾಗ ಪಠಿಸು. ಇದು ನಿನಗೆ ರಕ್ಷಣೆಯನ್ನು ಕೊಡುತ್ತದೆ" ಎಂದು ಹೇಳಿ ಆದಿತ್ಯ ಹೃದಯವನ್ನು ಬೋಧಿಸಲು ಆರಂಭಿಸಿದರು.
(ಆದಿತ್ಯ ಹೃದಯಕ್ಕೆ ಮಹಾಭಾರತದ ಭಗವದ್ಗೀತೆಯಷ್ಟೇ ಪ್ರಾತಿನಿಧ್ಯವಿದೆ. ಈ ಶ್ಲೋಕಗಳಿಂದ ಅಗಸ್ತ್ಯರು ರಾಮನಿಗೆ ಧೈರ್ಯವನ್ನು ತುಂಬಿ ರಾವಣನನ್ನು ಸಂಹರಿಸಲು ಸಿದ್ದಮಾಡಿದರು. ಸೂರ್ಯನ ದೃಷ್ಟಾಂತದಿಂದ ರಾಮನಿಗೆ ಪರಬ್ರಹ್ಮ ತತ್ವವನ್ನು ಬೋಧಿಸಿದರು. ಇವು ರಾಮಾಯಣದ ಮುಖ್ಯ ಶ್ಲೋಕಗಳು ಎಂದು ಬಲ್ಲವರು ಹೇಳುತ್ತಾರೆ.)
Comments
Post a Comment