೫೪. ಲಂಕೆಯಲ್ಲಿ ಸೀತೆ
ತ್ವಯಾ ಏವ ಸೂನಂ ದುಷ್ಟಾತ್ಮನ್ ಭೀರುಣಾಹರ್ತುಂ ಇಚ್ಛತಾ
ಮಮ ಅಪವಾಹಿತೋ ಭರ್ತಾ ಮೃಗ ರೂಪೇಣ ಮಾಯಯಾ
ವಿಮಾನದಲ್ಲಿ ಹೋಗುತ್ತಿದ್ದಾಗ ಸೀತೆ ರಾವಣನಿಗೆ, "ನೀನು ಮಾಯಾಮೃಗವನ್ನು ಸೃಷ್ಟಿಸಿ, ನನ್ನ ಗಂಡನನ್ನು ದೂರ ಹೋಗುವಂತೆ ಮಾಡಿ ಒಬ್ಬಳೇ ಇದ್ದ ನನ್ನನ್ನು ಅಪಹರಿಸಿರುವೆ. ಇದು ಯಾವ ಮಹಾ ಕೆಲಸ? ಇದು ಆಕಸ್ಮಿಕವೂ ಅಲ್ಲ. ನಿನ್ನ ಪೂರ್ವ ನಿಯೋಜಿತ ಸಂಚು. ನಿನ್ನ ಈ ಕೆಲಸ ನಿನ್ನ ಪರಾಕ್ರಮಕ್ಕೆ, ನಿನ್ನ ತಪಸ್ಸಿಗೆ, ನಿನ್ನ ಜೀವನಕ್ಕೆ ಒಂದು ನಿದರ್ಶನವಾಗಿ ನಿಲ್ಲುತ್ತದೆ. ಒಬ್ಬ ಪರಸ್ತ್ರೀಯನ್ನು ಹೊತ್ತುಕೊಂಡು ಬರುವುದಕ್ಕೆ ನಿನಗೆ ನಾಚಿಕೆಯಾಗುವುದಿಲ್ಲವೇ? ನೀನು ನಿಜವಾಗಿಯೂ ಪರಾಕ್ರಮಿಯೇ ಆದರೆ ರಾಮನಿದ್ದಾಗ ಬರುತ್ತಿದ್ದೆ. ನೀನು ಮಾಡಿದ ಕೆಲಸವನ್ನು ಹಿರಿಯರು, ವೀರರು ಅಂಗೀಕರಿಸರು. ನನ್ನನ್ನು ಅನುಭವಿಸುವುದು ನಿನಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ. ನೀನು ಸತ್ತ ಮೇಲೆ ನಿನ್ನನ್ನು ನರಕಕ್ಕೆ ಕರೆದೊಯ್ದು ಕೀವು ರಕ್ತದಿಂದ ಕೊಡಿದ ಅಸೀಪತ್ರವನದಲ್ಲಿ ಹಾಕುತ್ತಾರೆ. ಘೋರ ವೈತರಣೀ ನದಿಯಲ್ಲಿ ಬಿಸಾಡುತ್ತಾರೆ. ಇಂದು ನನ್ನನ್ನು ಹಿಡಿದೆಯೆಂದು ಸಂತೋಷಪಡಬಹುದು. ಆದರೆ ನಾಳೆ ನಿನ್ನನ್ನು ಮೈಯೆಲ್ಲಾ ಶೂಲಗಳಿಂದಿರುವ ಶಾಲ್ಮಲೀ ವೃಕ್ಷವನ್ನು ತಬ್ಬಿಕೊಳ್ಳುವಂತೆ ಮಾಡುತ್ತಾರೆ. ಕಾಲ ನಿನ್ನನ್ನು ಪಾಶಗಳಿಂದ ಹಿಡಿದಿಡುತ್ತದೆ. ಯಾವಾಗ ನೀನು ರಾಮನ ವೈರ ಕಟ್ಟಿಕೊಂಡೆಯೋ ಆಗಲೇ ನಿನ್ನ ಸಾವು ನಿಶ್ಚಿತವಾಯಿತು" ಎಂದಳು.
ಸೀತೆಯ ಮಾತುಗಳನ್ನು ರಾವಣ ಹಿಡಿಸಿಕೊಳ್ಳಲಿಲ್ಲ. ಸಮುದ್ರವನ್ನು ದಾಟಿ ಮಯನಿರ್ಮಿತ ಗಂಧರ್ವ ನಗರದಂತಿದ್ದ ಲಂಕಾಪುರವನ್ನು ಸೇರಿ ತನ್ನ ಅಂತಃಪುರದ ಬಳಿ ಇಳಿದ.
ಅಬ್ರವೀತ್ ಚ ದಶಗ್ರೀವಃ ಪಿಶಾಚೀಃ ಘೋರ ದರ್ಶನಾಃ
ಯಥಾ ನ ಏನಾಂ ಪುಮಾನ್ ಸ್ತ್ರೀ ವಾ ಸೀತಾಂ ಪಶ್ಯತಿ ಅಸಮ್ಮತಃ
ನಂತರ ಭಯಂಕರ ಮುಖಗಳಿದ್ದ ಪಿಶಾಚ ಸ್ತ್ರೀಯರನ್ನು ಕರೆದು, "ಈ ಸೀತೆ ಈ ಅಂತಃಪುರದಲ್ಲೇ ಇರಬೇಕು. ನನ್ನ ಅನುಮತಿಯಿಲ್ಲದೆ ಯಾವ ಸ್ತ್ರೀಯೇ ಆಗಲಿ ಪುರುಷನೇ ಆಗಲಿ ಇವಳ ಜೊತೆ ಮಾತಾಡುವಂತಿಲ್ಲ. ಹೇಗೆ ಕೇಳಿದ ತಕ್ಷಣ ನನಗೆ ರತ್ನಾಭರಣಗಳನ್ನು ಯಾರ ಅನುಮತಿಯೂ ಇಲ್ಲದೆ ತಂದುಕೊಡುತ್ತೀರೋ ಹಾಗೆಯೇ ಇವಳಿಗೂ ಕೇಳಿದ ತಕ್ಷಣ ತಂದು ಕೊಡಿ. ಆದರೆ ಇವಳು ಯಾರ ಜೊತೆಯೂ ಮಾತಾಡಬಾರದು. ಯಾರಾದರೂ ಮಾತಾಡುವಾಗ ತಿಳಿದೋ, ತಿಳಿಯದೆಯೋ ಈ ಸೀತೆಯ ಮನಸ್ಸಿಗೇನಾದರೂ ನೋವಾದರೆ ಅವರ ಕಥೆ ಮುಗಿದಂತೆ" ಎಂದು ಆಜ್ಞೆ ಮಾಡಿ ಅಂತಃಪುರದಿಂದ ಹೊರಗೆ ಬಂದು ನರಮಾಂಸಭಕ್ಷಕರಾದ ಕೆಲವು ರಾಕ್ಷಸರನ್ನು ಕರೆದು, "ನಾನು ಹೇಳುವ ಮಾತುಗಳನ್ನು ಗಮನವಿಟ್ಟು ಕೇಳಿ. ಜನಸ್ಥಾನದಲ್ಲಿ ಖರದೂಷಣರ ನಾಯಕತ್ವದಲ್ಲಿ ೧೪೦೦೦ ಸಾವಿರ ರಾಕ್ಷಸರಿದ್ದರು. ಅವರನ್ನು ರಾಮನೆಂಬುವವನು ಕೊಂದಿದ್ದಾನೆ. ಈಗ ಅಲ್ಲಿ ಯಾರೂ ಇಲ್ಲ. ಆಗಿನಿಂದ ನನ್ನ ಹೊಟ್ಟೆ ಉರಿಯುತ್ತಿದೆ. ಆ ರಾಮನನ್ನು ಕೊಲ್ಲುವವರೆಗೂ ನನಗೆ ನಿದ್ದೆ ಬರುವುದಿಲ್ಲ. ನೀವು ತಕ್ಷಣವೇ ಅಲ್ಲಿಗೆ ಹೋಗಿ ಅಲ್ಲಿ ಏನು ನಡೆದರೂ ನನಗೆ ವರದಿ ಮಾಡಿ" ಎಂದ. ಆ ರಾಕ್ಷಸರು ಜನಸ್ಥಾನಕ್ಕೆ ಹೊರಟು ಹೋದರು.
ರಾವಣ ಅಂತಃಪುರಕ್ಕೆ ಬಂದ. ಅವನಿಗೆ ಸೀತೆಯನ್ನು ಅಪಹರಿಸಿದ ವಿಷಯದಲ್ಲಿ ತುಂಬಾ ಸಂತೋಷವಾಗಿತ್ತು.
ಅಶ್ರುಪೂರ್ಣ ಮುಖೀಂ ದೀನಾಂ ಶೋಕ ಭಾರ ಅವಪೀಡಿತಾಂ
ವಾಯು ವೇಗೈಃ ಇವ ಆಕ್ರಾಂತಾಂ ಮಜ್ಜಂತೀಂ ನಾವಂ ಅರ್ಣವೇ
ಸೀತೆ ಅಳುತ್ತಿದ್ದಳು. ಕೆನ್ನೆಯ ಮೇಲೆಲ್ಲಾ ಕಣೀರು ಧಾರಾಕಾರವಾಗಿ ಹರಿದು, ಅತ್ಯಂತ ದೀನಳಾಗಿ ಕಾಣಿಸುತ್ತಿದ್ದಳು. ಚಂಡಮಾರುತಕ್ಕೆ ಸಿಕ್ಕ ನೌಕೆಯಲ್ಲಿರುವವರು ದಿಗ್ಭ್ರಾಂತಿಗೊಂಡಂತೆ ದಿಗ್ಭ್ರಾಂತಳಾಗಿದ್ದಳು. ಬೇಟೆನಾಯಿಗಳ ಮಧ್ಯೆ ಸಿಕ್ಕಿಕೊಂಡ ಮರಿ ಜಿಂಕೆಯಂತೆ ಭಯಗೊಂಡಿದ್ದಳು. ಆ ಪರಿಸ್ಥಿತಿಯಲ್ಲಿದ್ದ ಸೀತೆಯನ್ನು ರಾವಣ ಬಂದು ರೆಟ್ಟೆ ಹಿಡಿದು ಎಳೆದುಕೊಂಡು ಹೋಗಿ ತನ್ನ ಅಂತಃಪುರವನ್ನು, ವಜ್ರದಿಂದ ನಿರ್ಮಿಸಿದ ಗವಾಕ್ಷಿಗಳನ್ನು, ದೊಡ್ಡ ಬಾಗಿಲುಗಳನ್ನು, ಸರೋವರಗಳನ್ನು, ತನ್ನ ಪುಷ್ಪಕ ವಿಮಾನವನ್ನು, ಬಂಗಾರದಿಂದ ಮಾಡಿದ ಕಂಬಗಳನ್ನು, ಆಸನ, ಶಯನಾಲಯ ಮುಂತಾದವುಗಳನ್ನು ತೋರಿಸಿದ. ನಂತರ, "ಈ ಲಂಕೆಯಲ್ಲಿರುವ ಬಾಲ, ವೃದ್ಧರನ್ನು ಹೊರತುಪಡಿಸಿ ೩೨ ಕೋಟಿ ರಾಕ್ಷಸರು ನನ್ನ ಅಧೀನದಲ್ಲಿದ್ದಾರೆ. ನಾನು ಎದ್ದರೆ ನನ್ನ ಹಿಂದೆ ೧೦೦೦ ಮಂದಿ ಬರುತ್ತಾರೆ. ನನಗೆ ನೂರಾರು ಪತ್ನಿಯರಿದ್ದಾರೆ. ಅವರೆಲ್ಲ ನನ್ನನ್ನು ಬಯಸಿ ಬಂದವರೇ! ಪ್ರಿಯೆ! ನಿನಗೆ ಅವರೆಲ್ಲರಿಗೂ ನಾಯಕಿಯಾಗುವಂತೆ ವರ ಕೊಡತ್ತೇನೆ! ನನ್ನಲ್ಲಿ ಮನಸ್ಸಿಡು. ಸಮುದ್ರಕ್ಕೆ ೧೦೦ ಯೋಜನಗಳ ದೂರದಲ್ಲಿ ನಿರ್ಮಿಸಿರುವ ಪಟ್ಟಣ ಈ ಕಾಂಚನ ಲಂಕೆ. ಇದನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ದಾನವರಾಗಲೀ, ನಾಗರಾಗಲೀ, ಯಕ್ಷರಾಗಲೀ, ಪಕ್ಷಿಗಳಾಗಲೀ ಕಣ್ಣೆತ್ತಿಯೂ ನೋಡರು. ಇಲ್ಲಿಗೆ ಬಂದ ಮೇಲೆ ನಿನ್ನನ್ನು ಯಾರು ಕರೆದುಕೊಂಡು ಹೋಗುತ್ತಾರೆ?
ರಾಜ್ಯ ಭ್ರಷ್ಟೇನ ದೀನೇನ ತಾಪಸೇನ ಪದಾತಿನಾ
ಕಿಂ ಕರಿಷ್ಯಸಿ ರಾಮೇಣ ಮಾನುಷೇಣ ಅಲ್ಪ ತೇಜಸಾ
ಇನ್ನೂ ರಾಮ ರಾಮ ಎಂದು ಏಕೆ ಕನವರಿಸುತ್ತೀಯಾ? ಅವನು ಅಲ್ಪಾಯುಷಿ. ರಾಜ್ಯಭ್ರಷ್ಠ, ದೀನ, ಅರಣ್ಯದಲ್ಲಿ ತಿರುಗುವವನು. ಅವನು ಕೇವಲ ಮಾನವ. ಅವನಿಂದ ನಿನಗೇನಾಗಬೇಕು? ನಿನಗೆ ಸರಿಯಾದವನು ನಾನು. ನನ್ನನ್ನು ಗಂಡನನ್ನಾಗಿ ಸ್ವೀಕರಿಸಿ ಸಂತೋಷವಾಗಿರು. ಸಿಂಹಾಸನದ ಮೇಲೆ ಕುಳಿತುಕೋ. ಮತ್ತೆ ಪಟ್ಟಾಭಿಷೇಕ ಮಾಡಿಕೊಳ್ಳೋಣ. ನೀನು ಯಾವಾಗಲೋ ಯಾವುದೋ ಪಾಪ ಮಾಡಿರಬೇಕು. ಆದ್ದರಿಂದಲೇ ಇಷ್ಟು ವರ್ಷ ವನವಾಸ ಮಾಡಿದ್ದೀಯ. ನೀನು ಮಾಡಿದ ಪುಣ್ಯದಿಂದ ನನ್ನ ಹತ್ತಿರ ಬಂದಿದ್ದೀಯ. ಅಂದವಾದ ಈ ಹಾರಗಳನ್ನು ಹಾಕಿಕೊಂಡು ಚೆನ್ನಾಗಿ ಅಲಂಕರಿಸಿಕೊಂಡು ಬಾ. ಪುಷ್ಪಕ ವಿಮಾನದಲ್ಲಿ ವಿಹರಿಸಿಕೊಂಡು ಬರೋಣ" ಎಂದ.
ಯಾವ ಮುಖವನ್ನು ನೋಡಿ ರಾವಣ ಆ ರೀತಿ ಮಾತಾಡುತ್ತಿದ್ದಾನೋ, ಆ ಮುಖವನ್ನು ಸೀತೆ ಉತ್ತರೀಯದಿಂದ ಮುಚ್ಚಿಕೊಂಡು ಜೋರಾಗಿ ಅತ್ತಳು.
ಏತೌ ಪಾದೌ ಮಯಾ ಸ್ನಿಗ್ಧೌ ಶಿರೋಭಿಃ ಪರಿಪೀಡಿತೌ
ಪ್ರಸಾದಂ ಕುರು ಮೇ ಕ್ಷಿಪ್ರಂ ಪಶ್ಯೋ ದಾಸೋ ಅಹಂ ಅಸ್ಮಿ ತೇ
ಅಳುತ್ತಿದ್ದ ಸೀತೆಯನ್ನು ರಾವಣ, "ಸೀತಾ ನಿನ್ನ ಕಾಲು ಹಿಡಿದುಕೊಳ್ಳುತ್ತೇನೆ. ನನ್ನ ಆಸೆ ತೀರಿಸು" ಎಂದ. (ತಿಳಿದೋ ಮಾಡಿದನೋ, ತಿಳಿಯದೆ ಮಾಡಿದನೋ, ರಾವಣನ ಶಿರಸ್ಸು ಸೀತೆಯ ಕಾಲನ್ನು ತಾಗಿದ್ದರಿಂದ ಅವನು ಸ್ವಲ್ಪ ಕಾಲವಾದರೂ ಬದುಕಿದ)
"ರಾಮ ಧರ್ಮಾತ್ಮ. ಅವನೇ ನನ್ನ ಪತಿ, ನನ್ನ ದೈವ. ಇಕ್ಷ್ವಾಕು ವಂಶದ, ಲಕ್ಷ್ಮಣನ ಅಣ್ಣನಾದ ರಾಮನ ಕೈಯಲ್ಲಿ ನಿನ್ನ ಸಾವು ಖಂಡಿತ. ಸಿದ್ಧನಾಗಿರು. ರಾಮ ಸನ್ನಿಧಿಯಲ್ಲೇನಾದರೂ ನೀನು ನನ್ನನ್ನು ಹೀಗೆ ಅವಮಾನಿಸಿದ್ದಾರೆ, ಇಷ್ಟು ಹೊತ್ತಿಗೆ ಸತ್ತು ಬೀಳುತ್ತಿದ್ದೆ. ನಿನ್ನ ಆಯಸ್ಸು, ಐಶ್ವರ್ಯ, ತಾಳ್ಮೆ, ಇಂದ್ರಿಯಗಳು ನಾಶವಾಗುವ ಸಮಯ ಸನ್ನಿಹಿತವಾಗಿದೆ. ಈ ಲಂಕಾ ಪಟ್ಟಣ ವಿಧವೆಯಾಗಲು ಸಿದ್ಧವಾಗಿದೆ. ನೀರಿನಲ್ಲಿರುವ ಹುಳಗಳನ್ನು ತಿನ್ನುವ ಕಾಗೆಯನ್ನು ರಾಜಹಂಸ ಎಂದಿಗೂ ನೋಡುವುದಿಲ್ಲ. ಪಾಪಿ! ರಾಮನನ್ನು ನೋಡಿದ ಕಣ್ಣುಗಳಿಂದ ನಿನ್ನನ್ನು ನೋಡೆನು" ಎಂದು ಸೀತೆ ರಾವಣನ ಮಾತುಗಳನ್ನು ಸ್ವಲ್ಪವೂ ಲೆಕ್ಕಿಸಲಿಲ್ಲ.
ಸೀತೆಯ ಮಾತುಗಳನ್ನು ಕೇಳಿ ಕೋಪಗೊಂಡ ರಾವಣ, "ನಿನಗೆ ೧೨ ತಿಂಗಳ ಸಮಯ ಕೊಡುತ್ತೇನೆ. ಅಷ್ಟರಲ್ಲಿ ನಿನ್ನ ಮನಸ್ಸು ಬದಲಾಯಿಸಿಕೊಂಡರೆ ಬದುಕುತ್ತೀಯ. ಇಲ್ಲವಾದರೆ ೧೨ ತಿಂಗಳ ನಂತರ ನಿನ್ನನ್ನು ನನಗೆ ಅಲ್ಪಾಹಾರವಾಗಿ ಕೊಡುತ್ತಾರೆ" ಎಂದು ಹೇಳಿ, ಅಲ್ಲಿಯೇ ಇದ್ದ ರಾಕ್ಷಸ ಸ್ತ್ರೀಯರನ್ನು ಕರೆದು, "ಇವಳನ್ನು ಅಶೋಕ ವನಕ್ಕೆ ಕರೆದುಕೊಂಡು ಹೋಗಿ. ಪ್ರಾಣದಿಂದಿರಲು ಬೇಕಾದಷ್ಟು ಆಹಾರ, ನೀರನ್ನು ಕೊಡಿ. ಚುಚ್ಚು ಮಾತುಗಳಿಂದ ಭಯಗೊಳಿಸಿ ನನ್ನ ದಾರಿಗೆ ತನ್ನಿ" ಎಂದು ಹೇಳಿ ಹೊರಟುಹೋದ. ವಿಕೃತ ರಾಕ್ಷಸ ಸ್ತ್ರೀಯರ ಚುಚ್ಚುಮಾತುಗಳಿಂದ ಸೀತೆ ಅಳುತ್ತಾ ಅಶೋಕ ವನದಲ್ಲಿ ಕಾಲ ಕಳೆದಳು.
Comments
Post a Comment